ಸೋಮವಾರ, ಮೇ 23, 2022
22 °C

ಪಾಡ್ಯದ ನವ ಪರ್ವ

ಮಾನಸ Updated:

ಅಕ್ಷರ ಗಾತ್ರ : | |

ದೀ ಪಾವಳಿ ಬೆಳಕಿನ ಹಬ್ಬ. ಇಲ್ಲಿ ಬೆಳಕು ಅಂದರೆ ಬರೀ ಬೆಳಕಲ್ಲ. ಜ್ಞಾನ, ಸಿರಿ- ಸಂಪತ್ತು, ಕೀರ್ತಿ, ಮಾನಸಿಕ, ಕೌಟುಂಬಿಕ ಸುಖ ಸಂತೋಷ, ಅಂತರಾತ್ಮ ಬೆಳಗುವ ಆಧ್ಯಾತ್ಮಿಕ ಹೊಳಹು ಎಲ್ಲವೂ ಬೆಳಕೇ. ಇವುಗಳಿಗಾಗಿ ಹಂಬಲಿಸಿ ದೇವರನ್ನು ಪೂಜಿಸುವುದು ದೀವಳಿಗೆಯ ವಿಶೇಷ.ಅಜ್ಞಾನವೆಂಬ ಅಂಧಕಾರವನ್ನು ಓಡಿಸಿ ಜ್ಞಾನವನ್ನು ಬರಮಾಡಿಕೊಳ್ಳುವುದಷ್ಟೇ ಅಲ್ಲ. ಧನ, ಕನಕಗಳ ಚಿಂತನೆಯೂ ಇದರೊಂದಿಗೆ ಮೇಳೈಸಿದೆ. ಮೂರು ದಿನಗಳ ದೀಪಾವಳಿಯ ಕೊನೆಯ ದಿನ ಪಾಡ್ಯ. ಪಾಡ್ಯ ಅಂದರೆ ಹೊಸದರ ಆರಂಭ.ನರಕ ಚತುರ್ದಶಿಯ ದಿನ ಎಣ್ಣೆ ಸ್ನಾನ ಮಾಡಿ, ಮನೆ ಅಲಂಕರಿಸುವ ಜನ, ಅಮಾವಾಸ್ಯೆಯ ದಿನ ಲಕ್ಷ್ಮಿಯನ್ನು ಮನೆಗೆ ಸ್ವಾಗತಿಸುತ್ತಾರೆ. ಪಾಡ್ಯದಂದು ಹೊಸ ಪರ್ವ. ದಕ್ಷಿಣ ಭಾರತದಲ್ಲಿ ಅದು ಬಲಿ ಪಾಡ್ಯಮಿ ಎಂದೇ ಹೆಸರಾಗಿದೆ.ಐತಿಹ್ಯ: ರಾಕ್ಷಸ ರಾಜನಾದರೂ ದಾನ, ಧರ್ಮದಿಂದ ಬಹು ಜನಪ್ರಿಯನಾಗಿದ್ದ ಬಲಿ ಚಕ್ರವರ್ತಿಯನ್ನು ಮಣಿಸಲು ದೇವತೆಗಳು ಉಪಾಯ ಹೂಡುತ್ತಾರೆ. ಬಲಿಯನ್ನು ಮಣಿಸುವಂತೆ ಮಹಾವಿಷ್ಣುವಿನ ಮೊರೆ ಹೋಗುತ್ತಾರೆ. ಪುಟ್ಟ ಬಾಲಕನ ರೂಪದಲ್ಲಿ ಬರುವ ವಿಷ್ಣು ತನ್ನ ಮೂರು ಹೆಜ್ಜೆಯಷ್ಟು ಭೂಮಿ ಕೊಡುವಂತೆ ಬಲಿಯನ್ನು ಕೇಳುತ್ತಾನೆ.

 

ಇದೇನು ಬೇಡಿಕೆ ಎಂಬಂತೆ ಬಲಿ ಅದಕ್ಕೆ ಒಪ್ಪಿಕೊಳ್ಳುತ್ತಾನೆ. ವಾಮನ ರೂಪದಲ್ಲಿ ವಿಷ್ಣು ಇಡುವ ಮೊದಲ ಹೆಜ್ಜೆ ಭೂಮಿಯನ್ನು ಆವರಿಸುತ್ತದೆ. ಆತ ಇಡುವ ಎರಡನೇ ಹೆಜ್ಜೆ ಆಗಸವನ್ನೆಲ್ಲ ಆವರಿಸಿಕೊಳ್ಳುತ್ತದೆ. ಮೂರನೇ ಹೆಜ್ಜೆ ಎಲ್ಲಿಡಲಿ ಅಂದಾಗ ಬಲಿ ತನ್ನ ತಲೆಯ ಮೇಲೆ ಇಡು ಎನ್ನುತ್ತಾನೆ. ಆತನ ತಲೆಯ ಮೇಲೆ ವಿಷ್ಣು ಕಾಲನ್ನಿಟ್ಟಾಗ ಬಲಿ ಪಾತಾಳ ಸೇರುತ್ತಾನೆ.ದಾನವ-ದೇವ ಸಂರ್ಷ ಎನ್ನುವ ಚಿಂತನೆಯ ಮೂಲಕ ಮನುಷ್ಯನ ಅಹಂಭಾವವನ್ನು ತುಳಿದ ರೂಪಕ ಇಲ್ಲಿದೆ.ಬಲಿಯ ಪ್ರಾಮಾಣಿಕತೆಗೆ ಮೆಚ್ಚಿದ ವಿಷ್ಣು ಸೂರ್ಯ, ಚಂದ್ರರು ಇರುವ ತನಕ ಜನ ನಿನ್ನ ನೆನೆಸಿಕೊಳ್ಳುವಂತಾಗಲಿ; ನಿನ್ನ ನೆನಪಲ್ಲಿ ದೀಪಾವಳಿ ಆಚರಿಸಲಿ ಎಂದು ವರ ನೀಡುತ್ತಾನೆ. ಪಾಡ್ಯದಂದು ಬಲೀಂದ್ರ ಪ್ರತಿ ಮನೆಗೆ ಭೇಟಿ ನೀಡುತ್ತಾನೆ.ಅಂದು ಸಂಜೆ ಪಾತಾಳದ ನೆಲೆಯಿಂದ ಭೂಮಿಗೆ ಬಂದು ಪ್ರಜೆಗಳ ಬದುಕನ್ನು ವೀಕ್ಷಿಸುತ್ತಾನೆ. ತನ್ನ ಆಡಳಿತ ಕಾಲಕ್ಕೆ ತುಲನೆ ಮಾಡುತ್ತಾನೆ ಎಂಬ ನಂಬಿಕೆ ಜನಪದರಲ್ಲಿ ಅಡಗಿದೆ. ಅಂದಿನ ವೈಭವ ಇಂದೂ ಇದೆ ಎಂದು ತೋರಿಸಲು ಜನರು ತಮ್ಮಲ್ಲಿರುವ ನಗನಾಣ್ಯಕ್ಕೆ ಪೂಜೆ ಸಲ್ಲಿಸುತ್ತಾರೆ.ಗ್ರಾಮೀಣರಲ್ಲಿ ಇದು ಹಟ್ಟಿ ಹಬ್ಬ, ಗೋಪೂಜೆ. ಕೃಷಿಗೆ ನೆರವಾಗುವ, ಮನೆಯ ಮಕ್ಕಳಂತೆ ಇರುವ ಜಾನುವಾರುಗಳಿಗೆ ಪೂಜೆ ಸಲ್ಲಿಸಿ ಕೃತಜ್ಞತೆ ಸಲ್ಲಿಸುವ ದಿನ.ಉತ್ತರದ ಸಂಭ್ರಮ

ಐಶ್ವರ್ಯದ ಅಧಿದೇವತೆ ಲಕ್ಷ್ಮಿಯ ಕೃಪಾಕಟಾಕ್ಷ ಪಡೆಯಲು ವರ್ತಕರು, ಹಣಕಾಸು ವ್ಯವಹಾರಸ್ಥರು ಪಾಡ್ಯದ ದಿನವೂ ಲಕ್ಷ್ಮಿಪೂಜೆ ಮಾಡುತ್ತಾರೆ. ಪಾರಂಪರಿಕವಾಗಿ ಲೇವಾದೇವಿ ವ್ಯವಹಾರದಲ್ಲಿ ತೊಡಗಿಕೊಂಡಿರುವ ರಾಜಸ್ತಾನಿ, ಗುಜರಾತಿ ವರ್ತಕರಿಗೆ ಪಾಡ್ಯ ವಿಶೇಷ ದಿನ. ಹಾಗಾಗಿ ಬೆಂಗಳೂರಿನಲ್ಲಿ ಪಾಡ್ಯದ ಸಂಭ್ರಮ ಮಾರವಾರಿ ಸಮುದಾಯದ ಜನರು ಹೆಚ್ಚಿರುವ ನಗರದ ಚಿಕ್ಕಪೇಟೆ, ಬಳೇಪೇಟೆ, ಅವೆನ್ಯೂ ರಸ್ತೆಗಳಲ್ಲಿ ಹೆಚ್ಚಾಗಿ ಕಾಣುತ್ತದೆ.ದಕ್ಷಿಣ ಭಾರತೀಯ ವ್ಯಾಪಾರಸ್ಥರು ಲಕ್ಷ್ಮಿಪೂಜೆಯ ದಿನ ಹೊಸ ಲೆಕ್ಕದ ಖಾತೆ ತೆರೆದರೆ, ಉತ್ತರ ಭಾರತದ ವ್ಯಾಪಾರಸ್ಥರು ಪಾಡ್ಯದ ದಿನ ಶುಭ, ಲಾಭ ಎಂದು ಬರೆದು ಹೊಸ ಲೆಕ್ಕದ ಪುಸ್ತಕದ ಪುಟ ಆರಂಭಿಸುತ್ತಾರೆ.ಅಂದು ತಮ್ಮ ಅಂಗಡಿ, ಮನೆಗಳಲ್ಲಿ ಚಿನ್ನ ಮತ್ತು ಬೆಳ್ಳಿ ನಾಣ್ಯಗಳನ್ನು ತಟ್ಟೆಯಲ್ಲಿ ಇಟ್ಟು ನೀರಿನಿಂದ ತೊಳೆಯುತ್ತಾರೆ. ಅರಿಶಿನ ಮತ್ತು ಕುಂಕುಮಗಳನ್ನು ಲೇಪಿಸುತ್ತಾರೆ. ನಂತರ ಅದನ್ನು ಲಕ್ಷ್ಮಿ ಮೂರ್ತಿ, ಚಿತ್ರಪಟದ ಮುಂದೆ ಪೂಜೆಗೆ ಇಡುತ್ತಾರೆ.ಇದರೊಂದಿಗೆ ದೇವರ ಕಲಶ, ಪಕ್ಕದಲ್ಲಿ ಎರಡು ತಟ್ಟೆಯಲ್ಲಿ ಅಕ್ಕಿ ಮತ್ತು ಇನ್ನೊಂದಲ್ಲಿ ಧಾನ್ಯಗಳನ್ನು ಇಟ್ಟು ಪೂಜಿಸುತ್ತಾರೆ. ರಾತ್ರಿ ದೀಪದ ಬೆಳಕಲ್ಲಿ ಲಕ್ಷ್ಮಿ ಮನೆಗೆ ಬರುತ್ತಾಳೆ ಎಂಬ ನಂಬಿಕೆಯೂ ಇರುವುದರಿಂದ ಮನೆ, ಅಂಗಡಿಗಳನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ. ರಾತ್ರಿಯಿಡೀ ಅಂಗಡಿ ಬಾಗಿಲು ಹಾಕದೆ ಜಾಗರಣೆ ಮಾಡುವ ಪದ್ಧತಿಯೂ ಇದೆ.ಕಾರ್ತಿಕದ ಆರಂಭ

ಬಲಿಪಾಡ್ಯಮಿ ದಿನದಿಂದಲೇ ಕಾರ್ತಿಕ  ಮಾಸ ಶುರು. ಅತಿ ಹೆಚ್ಚು ಕತ್ತಲೆ ತುಂಬಿರುವ ಈ ಸಮಯದಲ್ಲಿ ದೀಪ ಹಚ್ಚಿದರೆ ಶ್ರೇಷ್ಠ ಎನ್ನುವುದು ಪಾರಂಪರಿಕ ನಂಬಿಕೆ. ಕಗ್ಗತ್ತಲ ರಾತ್ರಿಯಲ್ಲಿ ಸಾಲು ದೀಪಗಳು, ಸಿಡಿಮದ್ದಿನ ಚಿತ್ತಾರ ಇಂದ್ರನಗರಿಯ ವೈಭವವನ್ನು ಧರೆಗಿಳಿಸುತ್ತದೆ.ಹೇಗೆ ದೀಪವು ತನ್ನ ಸುತ್ತಲಿನ ಜನರಿಗೆ ಬೆಳಕನ್ನು ನೀಡುತ್ತದೆಯೋ, ಅದೇ ರೀತಿಯಲ್ಲಿ ಕೆಡುಕು ತೊಲಗಲಿ, ಬಡತನ ನಿವಾರಣೆಯಾಗಲಿ, ಅಷ್ಟೈಶ್ವರ್ಯ ಸಿದ್ಧಿಸಲಿ ಎಂಬ ಬೇಡಿಕೆಯೊಂದಿಗೆ ಆಚರಣೆ ನಡೆಯುತ್ತದೆ.

ಹೆಣ್ಮನಗಳ ಹಬ್ಬ

ದೀಪಾವಳಿ ಮನೆ ಮನಗಳನ್ನು ಹರ್ಷದ ಹೊನಲಲ್ಲಿ ಅರಳಿಸುತ್ತದೆ. ಯುವತಿಯರಿಗೆ ರಂಗುರಂಗಿನ ಉಡುಪುಗಳಲ್ಲಿ ಮಿಂಚುವ ಸಂಭ್ರಮವಾದರೆ, ಮಕ್ಕಳಲ್ಲಿ ಬಣ್ಣ ಬಣ್ಣದ ಪಟಾಕಿ ಹಚ್ಚುವ ಸಡಗರ.  ಮನೆ ಮುಂದೆ ದೀಪಗಳ ಸಾಲು; ಇದರೊಂದಿಗೆ ಪಟಾಕಿ, ಸಿಡಿಮದ್ದುಗಳ ಹಿಮ್ಮೇಳ ಸೇರಿದಾಗ ದೀಪಾವಳಿ ಅರ್ಥಪೂರ್ಣವಾಗುತ್ತದೆ. ಹೊಸ ಪರ್ವಕ್ಕೆ ನಾಂದಿಯಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.