ಸೋಮವಾರ, ಜನವರಿ 20, 2020
17 °C
ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ

ಪಾಲಕರಿಂದ ಶಿಕ್ಷಕನಿಗೆ ಥಳಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖಾನಾಪುರ: ತಾಲ್ಲೂಕಿನ ಲೋಂಡಾ ಗ್ರಾಮದ ಸರಕಾರಿ ಶಾಲೆಯ ಶಿಕ್ಷಕನಬ್ಬ ತಾನು ವಿದ್ಯೆ ಕಲಿಸುತ್ತಿರುವ 5, 6, 7 ಹಾಗೂ 8ನೇ ತರಗತಿಯ ವಿದ್ಯಾರ್ಥಿ­ನಿಯರ ಜೊತೆಗೆ ಅಸಭ್ಯವಾಗಿ ವರ್ತಿ­ಸಿದ ಘಟನೆ ಕಳೆದ ಎರಡು-ಮೂರು ದಿನಗಳಿಂದ ನಡೆಯುತ್ತಿದ್ದು, ಇದನ್ನು ಖಂಡಿಸಿದ ವಿದ್ಯಾರ್ಥಿನಿಯರ ಪಾಲ­ಕರು ಹಾಗೂ ಸಾರ್ವಜನಿಕರು ಈ ಕೃತ್ಯ ಎಸಗಿದ ಶಿಕ್ಷಕನಿಗೆ ಧರ್ಮದೇಟು ನೀಡಿದ ಘಟನೆ ಶುಕ್ರವಾರ ಮುಂಜಾನೆ ಲೋಂಡಾ ಗ್ರಾಮದ ಸರಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದಿದೆ.ಘಟನೆಯ ಹಿನ್ನೆಲೆ:  ಲೋಂಡಾ ಗ್ರಾಮದ ಸರಕಾರಿ ಉರ್ದು ಶಾಲೆಯ ಎಸ್.ಬಿ ಸುತಗಟ್ಟಿ ಎಂಬ ಶಿಕ್ಷಕ ವಾರದಲ್ಲಿ ಮೂರು ದಿನ ಉರ್ದು ಹಾಗೂ ಮೂರು ದಿನ ಮರಾಠಿ ಪ್ರಾಥಮಿಕ ಶಾಲೆಯಲ್ಲಿ ಕಾರ್ಯ­ನಿರ್ವಹಿಸುತ್ತಿದ್ದು, ಕಳೆದ ಹಲವು ದಿನಗಳಿಂದ ಮರಾಠಿ ಶಾಲೆಯ ವಿದ್ಯಾರ್ಥಿನಿಯರ ಜೊತೆಗೆ ಅಸಭ್ಯ­ವಾಗಿ ವರ್ತಿಸುತ್ತಿದ್ದ.ಈ ವಿಷಯವನ್ನು ವಿದ್ಯಾರ್ಥಿನಿಯರು ತಮ್ಮ ಪಾಲಕರಿಗೆ ತಿಳಿಸಿದ್ದರು. ಪಾಲಕರು ಶುಕ್ರವಾರ ಬೆಳಗ್ಗೆ ಗುಂಪಾಗಿ ಶಾಲೆಗೆ ಬಂದು ಶಿಕ್ಷಕನನ್ನು ಈ ಕುರಿತು ವಿಚಾರಣೆ ನಡೆಸಿದ್ದಾರೆ. ನಂತರ ವರ್ಗ ಕೋಣೆಯಲ್ಲೇ ವಿದ್ಯಾರ್ಥಿಗಳ ಎದುರಿಗೆ ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸುದ್ದಿ ತಿಳಿದ ಲೋಂಡಾ ಪೊಲೀಸ್ ಹೊರ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದು ಶಿಕ್ಷಕನನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಪಾಲಕರು ನಿರಾಕರಿಸಿದ್ದು, ಕೂಡಲೇ ಈ ಶಿಕ್ಷಕನನ್ನು ಲೋಂಡಾ ಗ್ರಾಮದಿಂದ ವರ್ಗಾವಣೆ ಮಾಡಬೇಕು ಮತ್ತು ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ಬಿಇಒ ವಿನೋದ ನಾಯ್ಕ ಅವರಲ್ಲಿ ವಿನಂತಿಸಿಕೊಂಡಿದ್ದಾರೆ.ಲೋಂಡಾ ಗ್ರಾಮಸ್ಥರು ಹಾಗೂ ಶಾಲೆಯ ಪಾಲಕರ ಮನವಿಗೆ ಸ್ಪಂದಿ­ಸಿದ ಬಿಇಒ ನಾಯ್ಕ ಅವರು ಕೂಡಲೇ ಬಿಆರ್ಸಿ ಸಮನ್ವಯ ಅಧಿಕಾರಿ ಆರ್.ಕೆ. ಆಂಜನೇಯ ಮತ್ತು ಹಿರಿಯ ಶಿಕ್ಷಣ ಸಂಯೋಜಕ ಬಿ.ಎಫ್. ಬ್ಯಾಟಗೇರಿ ಅವರ ನೇತೃತ್ವದಲ್ಲಿ ಘಟನೆಯ ವಿವರವಾದ ತನಿಖೆಯನ್ನು ಕೈಗೊಂಡು ಶಿಕ್ಷಕ ಸುತಗಟ್ಟಿ ಅವರನ್ನು ತಕ್ಷಣ ಲೋಂಡಾದಿಂದ ಬೇರೆ ಶಾಲೆಗೆ ವರ್ಗ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)