ಸೋಮವಾರ, ಏಪ್ರಿಲ್ 19, 2021
31 °C

ಪಾಲಿಕೆಗೆ ಕೋಟ್ಯಂತರ ಪಂಗನಾಮ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಲಿಕೆಗೆ ಕೋಟ್ಯಂತರ ಪಂಗನಾಮ!

ದಾವಣಗೆರೆ: ನಗರದ ವಿವಿಧ ಬಡಾವಣೆಗಳಲ್ಲಿನ ನಿವೇಶನಗಳಿಗೆ ’ನಕಲಿ ನಂಬರ್’ ನೀಡಿ ಮಹಾನಗರ ಪಾಲಿಕೆಗೆ ಕೊಟ್ಯಂತರ ರೂ ವಂಚಿಸಿ ರುವ ಪ್ರಕರಣ ದೃಢಪಟ್ಟಿದೆ.ಯಾವುದೇ ಬಡಾವಣೆಯನ್ನು ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ ಜಮೀನನ್ನು ನಿವೇಶನದ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಿದಾಗ, ಆ ಜಮೀನಿನಲ್ಲಿ ಸೃಷ್ಟಿಯಾಗುವ ಪ್ರತಿ ನಿವೇಶನಕ್ಕೆ ಸ್ಥಳೀಯ ಸಂಸ್ಥೆಗಳು ನೀಡುವ ಅಧಿಕೃತ ಸಂಖ್ಯೆಯನ್ನು ಡೋರ್ ನಂಬರ್ ಎಂದು ಕರೆಯಲಾಗುತ್ತದೆ. ಆ ಡೋರ್ ನಂಬರ್ ನೀಡಿದ ನಂತರವಷ್ಟೇ ನಿವೇಶನವನ್ನು ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಬಹುದು.

ನಗರ ಪಾಲಿಕೆ ವ್ಯಾಪ್ತಿಯ ನಿಟ್ಟುವಳ್ಳಿ, ಜಯನಗರ, ಸರಸ್ವತಿ ಬಡಾವಣೆ, ಆವರಗೆರೆ, ಕುಂದುವಾಡ, ಬೈಪಾಸ್, ಬಸಾಪುರ ಕೈಗಾರಿಕಾ ಪ್ರದೇಶ ಸೇರಿದಂತೆ ವಿವಿಧೆಡೆ ಅಭಿವೃದ್ಧಿ ಪಡಿಸದೇ ಇರುವ ಭೂಪರಿವರ್ತಿತ ಜಮೀನುಗಳಿಗೆ ನಿಯಮಬಾಹಿರವಾಗಿ 5 ಸಾವಿರಕ್ಕೂ ಹೆಚ್ಚು ಡೋರ್‌ನಂಬರ್ ನೀಡಲಾಗಿದೆ. ಇದರಿಂದಾಗಿ ಪಾಲಿಕೆಗೆ ಬರಬೇಕಾದ ಸುಮಾರು 15 ಕೋಟಿ ರೂಪಾಯಿ ವರಮಾನ ಖೋತಾ ಆಗಿದೆ.ಪಾಲಿಕೆ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ 1996-2010ರವರೆಗೆ ನಿರ್ಮಾಣಗೊಂಡ ಬಡಾವಣೆಗಳಲ್ಲಿ ಡೋರ್‌ನಂಬರ್ ನೀಡುವಾಗ ನಿಯಮಗಳನ್ನು ಉಲ್ಲಂಘಿ ಸಲಾಗಿದೆ. ಇದರಲ್ಲಿ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗಿಯಾಗಿದ್ದಾರೆ ಎಂದು ಎರಡು ತಿಂಗಳ ಹಿಂದೆ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪಕ್ಷಭೇದ ಮರೆತು ಧ್ವನಿ ಎತ್ತಿದ್ದರು.ಪ್ರಕರಣವನ್ನು ಉಪ ಸಮಿತಿಯಿಂದ ತನಿಖೆಗೆ ಒಳಪಡಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣಕ್ರಮ ಕೈಗೊಳ್ಳಬೇಕು. ಪಾಲಿಕೆಗೆ ಖೋತಾ ಆಗಿರುವ ವರಮಾನವನ್ನು ಮರಳಿ ಪಡೆಯಲು ಪ್ರಯತ್ನಿಸಬೇಕು ಎಂದು ಆಗ್ರಹಿಸಿದ್ದರು. ಸದಸ್ಯರ ಬೇಡಿಕೆಗೆ ಸ್ಪಂದಿಸಿದ ಸಭೆ, ಮೇಯರ್ ಅಧಕ್ಷತೆಯಲ್ಲಿ ಆರು ಸದಸ್ಯರನ್ನು ಒಳಗೊಂಡ ಉಪ ಸಮಿತಿ ರಚಿಸಿತ್ತು.ಮೂರು ವಿಧದಲ್ಲಿ ನಿಯಮ ಉಲ್ಲಂಘನೆ ಆಗಿರುವುದನ್ನು ಸಮಿತಿ ಪತ್ತೆ ಹಚ್ಚಿದೆ. ನಿವೇಶನಕ್ಕಾಗಿ ಭೂಪರಿವರ್ತನೆಗೊಂಡ ಜಮೀನಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳದೇ ನೇರವಾಗಿ ಡೋರ್‌ನಂಬರ್ ನೀಡಿರುವುದು. ಎರಡನೇ ಪ್ರಕರಣದಲ್ಲಿ ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರ (ದೂಡಾ)ದ ಪ್ರಾಥಮಿಕ ಅನುಮತಿ ಪಡೆದ ನಂತರ ಅಂತಿಮ ಅನುಮತಿ ಪಡೆಯದೇ ಡೋರ್‌ನಂಬರ್ ನೀಡಿರುವುದು. ಮೂರನೇ ಪ್ರಕರಣದಲ್ಲಿ ಈಚೆಗೆ ಪಾಲಿಕೆ ವ್ಯಾಪ್ತಿಗೆ ಸೇರಿದ ಗ್ರಾಮಗಳಲ್ಲಿ ಕಣದ ಹೆಸರಲ್ಲಿ ಪಡೆದ ಡೋರ್‌ನಂಬರ್ ಇಟ್ಟುಕೊಂಡು ಉಪ ಡೋರ್ ನಂಬರ್ ಸೃಷ್ಟಿಸಿ, ಹಳೇ ಕಡತಗಳಿಗೆ ಜೋಡಿಸಿರುವುದು ಪತ್ತೆಯಾಗಿದೆ. ಕೆಲವು ಕಡೆ ಸ್ಮಶಾನಗಳಿಗೂ ಡೋರ್‌ನಂಬರ್ ನೀಡಲಾಗಿದೆ.

ನಿವೇಶನಕ್ಕಾಗಿ ಭೂ ಪರಿವರ್ತನೆಗೊಂಡ ಬಹುತೇಕ ಬಡಾವಣೆಗಳಲ್ಲಿ ನೀರು, ರಸ್ತೆ, ಚರಂಡಿ, ಒಳಚರಂಡಿ, ವಿದ್ಯುತ್ ಮತ್ತಿತರ ಯಾವುದೇ ಮೂಲಸೌಲಭ್ಯ ಒದಗಿಸಿಲ್ಲ. ಶಾಲೆ, ಮೈದಾನ, ಉದ್ಯಾನವನಗಳಿಗೆ ಜಾಗ ಬಿಟ್ಟಿಲ್ಲ. ಪಾಲಿಕೆಯ ಯೋಜನಾ ಮತ್ತು ಅಭಿವೃದ್ಧಿ ಸಮಿತಿ, ಕಂದಾಯ ಹಾಗೂ ಹಣಕಾಸಿನ ಸಮಿತಿಯ ಒಪ್ಪಿಗೆ ಪಡೆದಿಲ್ಲ.ಒಂದು ಬಡಾವಣೆ ನಿರ್ಮಿಸುವಾಗ ಪ್ರತಿ ಚದುರ ಅಡಿಗೆ ಪಾವತಿಸಬೇಕಿರುವ 38 ರೂ ಅಭಿವೃದ್ಧಿ ಶುಲ್ಕವನ್ನೂ ಪಾವತಿಸಿಲ್ಲ. ಇದರಿಂದ ಪಾಲಿಕೆಗೆ ಕನಿಷ್ಠ ರೂ 15 ಕೋಟಿ ವರಮಾನ ಖೋತಾ ಆಗಿದೆ’ ಎನ್ನುತ್ತಾರೆ ಉಪ ಸಮಿತಿಯ ಸದಸ್ಯರೊಬ್ಬರು.ಇನ್ನು ಕೆಲ ಬಡಾವಣೆಗಳಲ್ಲಿ ಜಮೀನನ್ನು ಗುಂಟೆ ಲೆಕ್ಕದಲ್ಲಿ ವಿಭಜಿಸಿ ಶಾಲೆ, ಉದ್ಯಾನವನಗಳಿಗೆ ಜಾಗ ಬಿಡುವ ನಿಯಮದಿಂದ ಜಮೀನಿನ ಮಾಲೀಕರು ತಪ್ಪಿಸಿಕೊಂಡಿದ್ದಾರೆ.’ನಕಲಿ ಡೋರ್‌ನಂಬರ್ ಪ್ರಕರಣದಲ್ಲಿ ಪಾಲಿಕೆಯ ಕೆಲ ಅಧಿಕಾರಿಗಳು ಶಾಮೀಲಾಗಿರುವುದು ಕಂಡು ಬಂದಿದೆ. ಉಪ ಸಮಿತಿಯ ವರದಿ ಸಲ್ಲಿಸಿದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ನಕಲಿ ಡೋರ್ ನಂಬರ್ ಪಡೆದ 1,850 ನಿವೇಶನದಾರರಿಗೆ ನೋಟಿಸ್ ನೀಡಲಾಗಿದೆ. ಅಧಿಕಾರಿಗಳ ಸಹಿ ನಕಲು ಮಾಡಿದ ಆರೋಪದ ಮೇಲೆ ಈಗಾಗಲೇ ಐದು ಮಂದಿ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ’ ಎನ್ನುತ್ತಾರೆ ಪಾಲಿಕೆ ಆಯುಕ್ತ ಪ್ರಸನ್ನಕುಮಾರ್.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.