ಬುಧವಾರ, ಮಾರ್ಚ್ 29, 2023
31 °C

ಪಾಲಿಕೆ ಟೆಂಡರ್ ನೀಡಿಕೆಯಲ್ಲಿ ಹಲವು ಅಧಿಕಾರಿಗಳ ಅಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಲಿಕೆ ಟೆಂಡರ್ ನೀಡಿಕೆಯಲ್ಲಿ ಹಲವು ಅಧಿಕಾರಿಗಳ ಅಕ್ರಮ

ಬೆಂಗಳೂರು: ಬಿಬಿಎಂಪಿಯ ಕಾರ್ಯನಿರ್ವಾಹಕ ಎಂಜಿನಿಯರ್ ಸೇರಿದಂತೆ ಹಲವು ಅಧಿಕಾರಿಗಳು ಟೆಂಡರ್ ನೀಡಿಕೆಯಲ್ಲಿ ಅಕ್ರಮ ಎಸಗಿದ್ದರಿಂದ ಪಾಲಿಕೆಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಪಾಲಿಕೆಯ ಲೆಕ್ಕಪತ್ರಗಳ ಸ್ಥಾಯಿ ಸಮಿತಿಗಳ ಅಧ್ಯಕ್ಷ ಗಂಗಭೈರಯ್ಯ ಆರೋಪಿಸಿದ್ದಾರೆ.ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪುಲಿಕೇಶಿನಗರದ ಕಾರ್ಯನಿರ್ವಾಹಕ ಎಂಜಿನಿಯರ್ ಒಬ್ಬರು ಕಾಮಗಾರಿ ಗುತ್ತಿಗೆ ನೀಡುವಾಗ ಇಬ್ಬರು ಗುತ್ತಿಗೆದಾರರಿಗೆ ಅಕ್ರಮವಾಗಿ ಸಹಾಯ ಮಾಡಿದ್ದಾರೆ. ಅವರು ಹಿರಿಯ ಅಧಿಕಾರಿಗಳಿಗೆ, ಅಕೌಂಟ್ಸ್ ಸೂಪರಿಟೆಂಡೆಂಟ್ ಅವರಿಗೆ ಮಾಹಿತಿ ನೀಡದೆ, ಟೆಂಡರ್ ಕರೆದಿದ್ದರು. ಇದು ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ’ ಎಂದರು.‘ಈ ಅಧಿಕಾರಿ ಕರ್ನಾಟಕ ರಾಜ್ಯ ಹಣಕಾಸು ನಿಗಮದಿಂದ (ಕೆಎಸ್‌ಎಫ್‌ಸಿ) ನಿಯೋಜನೆ ಮೇರೆಗೆ ಪಾಲಿಕೆಗೆ ಬಂದಿದ್ದಾರೆ. ಇವರು ಟೆಂಡರ್ ವಿತರಣೆ ತಮ್ಮ ವ್ಯಾಪ್ತಿಗೆ ಸೇರಿದ್ದು ಎಂದು ಹೇಳಿ ಟೆಂಡರ್ ಕರೆದಿದ್ದರು. ವಿಚಿತ್ರವೆಂದರೆ ಇದಕ್ಕೆ ಕೇವಲ ಇಬ್ಬರು ಗುತ್ತಿಗೆದಾರರು ಮಾತ್ರ ಪ್ರತಿಕ್ರಿಯಿಸಿದ್ದಾರೆ’ ಎಂದರು. ‘ಈ ಇಬ್ಬರು ಗುತ್ತಿಗೆದಾರರು ಭದ್ರತಾ ಠೇವಣಿ ಸಲ್ಲಿಸಲು ಪಡೆಯಲಾದ ಡಿ.ಡಿ ಗಳು ಒಂದೇ ಬ್ಯಾಂಕಿನಿಂದ ಮತ್ತು ಒಂದೇ ದಿನದಲ್ಲಿ ಪಡೆದಿರುವಂತಹದ್ದು ಹಾಗೂ ಇವುಗಳ ಸಂಖ್ಯೆ ಕೂಡ ಒಂದೇ ಸರಣಿಯಲ್ಲಿ ಇವೆ. ಇದೆಲ್ಲವನ್ನು  ನೋಡಿದರೆ ಇಲ್ಲಿ ಅಕ್ರಮ ನಡೆದಿರುವ ಸಾಧ್ಯತೆ ಇದೆ’ ಎಂದು ಅವರು ತಿಳಿಸಿದರು.‘ಟೆಂಡರ್‌ನ ಒಪ್ಪಂದ ಪತ್ರದಲ್ಲಿ ಸಹಾಯಕ ಎಂಜಿನಿಯರ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರ ಸಹಿ ಇಲ್ಲ. ಗುತ್ತಿಗೆದಾರರು ಕೊನೆಯ ಪುಟದಲ್ಲಿ ಮಾತ್ರ ಸಹಿ ಹಾಕಿದ್ದಾರೆ. ಇದೆಲ್ಲವನ್ನು ಗಮನಿಸಿದರೆ ಇಲ್ಲಿ ಗೋಲ್‌ಮಾಲ್ ನಡೆದಿರುವುದು ಸ್ಪಷ್ಟ’ ಎಂದು ಹೇಳಿದರು.‘ಇದಲ್ಲದೇ, ಇನ್ನೂ ಕೆಲವು ಅಧಿಕಾರಿಗಳು ಸುಮಾರು 69 ಡಿ.ಡಿಗಳನ್ನು ಬ್ಯಾಂಕ್‌ಗೆ ಸಲ್ಲಿಸದಿರುವುದರಿಂದ ಪಾಲಿಕೆಗೆ ರೂ 13.13 ಲಕ್ಷ ನಷ್ಟವಾಗಿದೆ. ಕೆಲವು ಜನ ಗುತ್ತಿಗೆದಾರರು ಡಿ.ಡಿಯ ಕಲರ್ ನಕಲುಪ್ರತಿ ಸಲ್ಲಿಸಿರುವುದು ಪತ್ತೆಯಾಗಿದೆ. ಇದರಲ್ಲಿ ಬಹಳಷ್ಟು ಅಧಿಕಾರಿಗಳು ಷಾಮೀಲಾಗಿರುವ ಸಾಧ್ಯತೆ ಇದೆ. ಇದರ ಬಗ್ಗೆ ಆಯುಕ್ತರು ತನಿಖೆ ನಡೆಸಬೇಕು’ ಎಂದು ಅವರು ಒತ್ತಾಯಿಸಿದರು.ತನಿಖೆಗೆ ಕ್ರಮ ಕೈಗೊಳ್ಳುತ್ತೇವೆ: ಗಂಗಭೈರಯ್ಯ ಅವರ ಆರೋಪಕ್ಕೆ ಕುರಿತಂತೆ ಪಾಲಿಕೆಯ ಆಯುಕ್ತ ಸಿದ್ದಯ್ಯ ಅವರನ್ನು ಸಂಪರ್ಕಿಸಿದಾಗ, ‘ಪ್ರಕರಣದ ಬಗ್ಗೆ ತನಿಖೆ ಕೈಗೊಳ್ಳಲು ಸದ್ಯದಲ್ಲಿಯೇ ಆದೇಶ ಹೊರಡಿಸಲಾಗುವುದು’ ಎಂದು ಹೇಳಿದರು. ‘ಪಾಲಿಕೆಗೆ ಆರ್ಥಿಕ ನಷ್ಟ ಉಂಟುಮಾಡಿದ ಯಾವುದೇ ಅಧಿಕಾರಿಗಳಾಗಿದ್ದರೂ ಅವರನ್ನು ಬೀಡುವುದಿಲ್ಲ. ಆರೋಪಿತ ಅಧಿಕಾರಿಯನ್ನು ಅವರ ಮಾತೃಸಂಸ್ಥೆಗೆ ಮರಳಿ  ಕಳುಹಿಸಲಾಗುವುದು, ಆ ನಂತರ ಅವರ ಮೇಲೆ ಕ್ರಮಕೈಗೊಳ್ಳುವಂತೆ ಸಲಹೆ ನೀಡಲಾಗುವುದು’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.