ಗುರುವಾರ , ಫೆಬ್ರವರಿ 25, 2021
20 °C

ಪಾಲಿಹೌಸ್‌ ನಿರ್ಮಾಣಕ್ಕೆ ವಿಶೇಷ ಪ್ಯಾಕೇಜ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಲಿಹೌಸ್‌ ನಿರ್ಮಾಣಕ್ಕೆ ವಿಶೇಷ ಪ್ಯಾಕೇಜ್‌

ಕೋಲಾರ: ‘ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಹಸಿರುಮನೆ (ಪಾಲಿಹೌಸ್‌) ನಿರ್ಮಾಣಕ್ಕೆ ಡಿಸಿಸಿ ಬ್ಯಾಂಕ್‌ ಮೂಲಕ ಕಡಿಮೆ ಬಡ್ಡಿ ದರದಲ್ಲಿ ರೈತರಿಗೆ ಸಾಲ ನೀಡಲು ವಿಶೇಷ ಪ್ಯಾಕೇಜ್‌ ರೂಪಿಸಲಾಗುತ್ತದೆ’ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಘೋಷಿಸಿದರು.ತಾಲ್ಲೂಕಿನ ತೊಟ್ಲಿ ಗ್ರಾಮದಲ್ಲಿ ಮಂಗಳವಾರ ಕೃಷಿ ಅಭಿಯಾನ ಹಾಗೂ ಕೃಷಿ ಯಂತ್ರಧಾರೆ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ‘ಪಾಲಿಹೌಸ್‌ ನಿರ್ಮಾಣಕ್ಕೆ ಶೇ 3ರ ಬಡ್ಡಿ ದರದಲ್ಲಿ ಡಿಸಿಸಿ ಬ್ಯಾಂಕ್‌ ಮೂಲಕ ರೈತರಿಗೆ ಸಾಲ ನೀಡುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಚರ್ಚೆ ನಡೆಸಲಾಗಿದೆ’ ಎಂದರು.‘ಜಿಲ್ಲೆಯಲ್ಲಿ ಕೃಷಿಗೆ ನೀರಿನ ಸಮಸ್ಯೆ ಇದೆ. ಒಣ ಬೇಸಾಯ ಪದ್ಧತಿಯಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಕೃಷಿ ಭಾಗ್ಯ ಯೋಜನೆಯಡಿ ಪಾಲಿಹೌಸ್‌ ಮತ್ತು ಕೃಷಿ ಹೊಂಡ ನಿರ್ಮಾಣಕ್ಕೆ ಸಹಾಯಧನ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಈವರೆಗೆ ಸುಮಾರು 150 ಪಾಲಿಹೌಸ್‌ ನಿರ್ಮಾಣವಾಗಿವೆ. ಪಾಲಿಹೌಸ್ ಹಾಗೂ ಕೃಷಿ ಹೊಂಡಗಳನ್ನು ಆಧರಿಸಿ ಕೃಷಿ ಮಾಡಲು ಹೆಚ್ಚಿನ ನೀರು ಬೇಕಿಲ್ಲ. ಅಲ್ಲದೇ, ಇವುಗಳಿಂದ ಇಳುವರಿ ಹೆಚ್ಚುತ್ತದೆ. ಹೀಗಾಗಿ ಇವು ರೈತರಿಗೆ ವರದಾನವಾಗಿವೆ’ ಎಂದು ಹೇಳಿದರು.‘ಸತತ ನಾಲ್ಕು ವರ್ಷಗಳಿಂದ ಬರಕ್ಕೆ ತುತ್ತಾಗಿರುವ 23 ತಾಲ್ಲೂಕುಗಳಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಶೇ 75ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಮಾಲೂರು ತಾಲ್ಲೂಕು ಹೊರತುಪಡಿಸಿ ಜಿಲ್ಲೆಯ ಇತರೆ ನಾಲ್ಕು ತಾಲ್ಲೂಕುಗಳ ರೈತರಿಗೆ ಇದೇ ಪ್ರಮಾಣದಲ್ಲಿ ಸಬ್ಸಿಡಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೃಷಿ ಭಾಗ್ಯ ಯೋಜನೆಯ ಮಾನದಂಡದಲ್ಲಿ ಕೆಲ ಮಾರ್ಪಾಡು ಮಾಡಿ ಮಾಲೂರು ತಾಲ್ಲೂಕಿನಲ್ಲೂ ಕೃಷಿ ಹೊಂಡ ನಿರ್ಮಾಣಕ್ಕೆ ಶೇ 75ರಷ್ಟು ಸಹಾಯಧನ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ವಿವರಿಸಿದರು.ಆತಂಕಪಡಬೇಕಿಲ್ಲ: ‘ರೈತರು ಸ್ವಾವಲಂಬಿ ಜೀವನ ನಡೆಸಬೇಕು. ಆದರೆ, ದೇಶದಲ್ಲಿ ಕೃಷಿ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿದೆ. ರೈತರು ಸಾಕಷ್ಟು ಸವಾಲು ಹಾಗೂ ಸಂಕಷ್ಟ ಎದುರಿಸುತ್ತಿದ್ದಾರೆ. ಭವಿಷ್ಯದಲ್ಲಿ ಕೃಷಿ ನಿರ್ವಹಣೆ ಹೇಗೆ ಎಂಬ ಚಿಂತೆ ರೈತರನ್ನು ಕಾಡುತ್ತಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲೂ ರೈತರು ಆತಂಕಪಡಬೇಕಿಲ್ಲ. ಮನುಕುಲದ ಹುಟ್ಟಿನೊಂದಿಗೆ ಹುಟ್ಟಿದ ಉಪಕಸುಬು ವ್ಯವಸಾಯ. ಕೃಷಿ ಇಲ್ಲದೆ ಮನುಕುಲ ಬದುಕಲು ಸಾಧ್ಯವಿಲ್ಲ. ರೈತರು ಸಮಸ್ಯೆಗೆ ಧೃತಿಗೆಡದೆ ಪರಿಹಾರ ಕಂಡುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ಕರೆ ನೀಡಿದರು.ದೊಡ್ಡ ಕಂದಕ: ‘ಕೃಷಿ ಇಲಾಖೆ ಸಬ್ಸಿಡಿ ಹಾಗೂ ಸಹಾಯಧನ ವಿತರಣೆಗಷ್ಟೇ ಸೀಮಿತವಾಗಿವೆ. ಮತ್ತೊಂದೆಡೆ ಸಬ್ಸಿಡಿ ಹಣ ಸದ್ಭಳಕೆಯಾಗುತ್ತಿಲ್ಲ. ಅಧಿಕಾರಿಗಳು ಹಾಗೂ ರೈತರ ನಡುವೆ ಸಂಪರ್ಕ ಕಡಿದು ಹೋಗಿದ್ದು, ದೊಡ್ಡ ಕಂದಕ ನಿರ್ಮಾಣವಾಗಿದೆ. ಈ ಪರಿಸ್ಥಿತಿ ಬದಲಾಗಬೇಕು. ಅಧಿಕಾರಿಗಳು, ಕೃಷಿ ವಿಜ್ಞಾನಿಗಳು ರೈತರ ಮನೆ ಬಾಗಿಲಿಗೆ ಹೋಗಿ ಅವರ ಕಷ್ಟ ಸುಖಕ್ಕೆ ಸ್ಪಂದಿಸಿ ಪರಿಹಾರ ಸೂಚಿಸಬೇಕು. ಜತೆಗೆ ಕೃಷಿ ತಂತ್ರಜ್ಞಾನ ಹಾಗೂ ಬೆಳೆ ಬಗ್ಗೆ ಮಾಹಿತಿ ನೀಡಬೇಕು’ ಎಂದು ಸೂಚಿಸಿದರು.‘ರೈತರು ಮತ್ತು ಅಧಿಕಾರಿಗಳ ನಡುವಿನ ಕಂದಕ ನಿವಾರಣೆಯಾಗಬೇಕು. ಅಧಿಕಾರಿಗಳು ಕೃಷಿ ವಿಸ್ತರಣಾ ಚಟುವಟಿಕೆಗಳನ್ನು ನಿರ್ವಹಿಸಬೇಕು. ರೈತರು ಬಹು ಮುಖ್ಯವಾಗಿ ನೀರು, ಕೂಲಿ ಕಾರ್ಮಿಕರ ಅಭಾವ, ಬೆಲೆ ಕುಸಿತ, ಹೆಚ್ಚಿನ ಕೂಲಿ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ತಂತ್ರಜ್ಞಾನ. ರೈತರು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಯಂತ್ರೋಪಕರಣಗಳನ್ನು ಕೃಷಿಗೆ ಅಳವಡಿಸಿಕೊಳ್ಳಬೇಕು. ಇದರಿಂದ ಕೃಷಿ ವೆಚ್ಚ ಕಡಿಮೆಯಾಗಿ ಇಳುವರಿ ಮತ್ತು ಲಾಭಾಂಶ ಹೆಚ್ಚುತ್ತದೆ’ ಎಂದು ಅವರ ಸಲಹೆ ನೀಡಿದರು.ಯಂತ್ರಧಾರೆ ಕೇಂದ್ರ: ‘ರಾಜ್ಯದಲ್ಲಿ ಸಣ್ಣ ರೈತರ ಸಂಖ್ಯೆ ಹೆಚ್ಚಿದೆ. ಈ ರೈತರಿಗೆ ದುಬಾರಿ ಮೊತ್ತದ ಕೃಷಿ ಯಂತ್ರೋಪಕರಣ ಖರೀದಿಸುವುದು ಸಾಧ್ಯವಿಲ್ಲ. ಈ ಕಾರಣಕ್ಕಾಗಿ ಬಾಡಿಗೆಗೆ ಯಂತ್ರೋಪಕರಣ ಕೊಡಲು ಕೃಷಿ ಯಂತ್ರಧಾರೆ ಕೇಂದ್ರ ಆರಂಭಿಸಿದ್ದೇವೆ ಎಂದು ಹೇಳಿದರು.‘ರೈತರಿಗಾಗಿ ಈ ಅನುಕೂಲ ಮಾಡಿಕೊಡಲಾಗುತ್ತಿದೆ.  ಕಳೆದ ವರ್ಷ ರಾಜ್ಯದಲ್ಲಿ 175 ಹಾಗೂ ಜಿಲ್ಲೆಯಲ್ಲಿ 5 ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಆರಂಭಿಸಲಾಯಿತು’ ಎಂದರು‘ಒಂದು ಕೇಂದ್ರಕ್ಕೆ ಸುಮಾರು ₹ 75 ಲಕ್ಷ ವೆಚ್ಚವಾಗಲಿದೆ. ಜಿಲ್ಲೆಯಲ್ಲಿ ಪ್ರಸಕ್ತ ವರ್ಷದಲ್ಲಿ 16 ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.ಬರ ಪರಿಹಾರ: ‘ಜಿಲ್ಲೆಯಲ್ಲಿ ಸತತ ಐದು ವರ್ಷಗಳಿ ಬರ ಪರಿಸ್ಥಿತಿ ಇದೆ. ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಜಿಲ್ಲೆಗೆ 2011–12ನೇ ಸಾಲಿನಲ್ಲಿ ₹ 7.98 ಕೋಟಿ, 2012–13ರಲ್ಲಿ ₹ 9.18 ಕೋಟಿ, 2013–14ರಲ್ಲಿ ₹ 5.50 ಕೋಟಿ ಬರ ಪರಿಹಾರ ನೀಡಿದೆ. ಆದರೆ, ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2014–15ರಲ್ಲಿ ₹ 49.47 ಕೋಟಿ ಹಾಗೂ 2015–16ರಲ್ಲಿ ₹ 48.30 ಕೋಟಿ ಬರ ಪರಿಹಾರ ನೀಡಿದೆ.ಜಿಲ್ಲೆಯ ಇತಿಹಾಸದಲ್ಲೇ ಇಷ್ಟು ದೊಡ್ಡ ಪ್ರಮಾಣದಲ್ಲಿ ಪರಿಹಾರ ಮಂಜೂರು ಮಾಡಿದ ಉದಾಹರಣೆ ಇಲ್ಲ’ ಎಂದು ಅವರು ಸಮಾರಂಭದಲ್ಲಿ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.