ಸೋಮವಾರ, ಮೇ 17, 2021
21 °C

ಪಾವನಾ ಪ್ರಶಸ್ತಿಗೆ ಎಸ್.ಆರ್.ಹಿರೇಮಠ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ಪರಿಸರ ಸಂರಕ್ಷಣೆಯಲ್ಲಿ ಗಮನಾರ್ಹ ಕೆಲಸ ಮಾಡಿದವರಿಗೆ ನೀಡುವ ಇಲ್ಲಿನ ಪಾವನಾ ಟ್ರಸ್ಟ್ ನೀಡುವ ಪಾವನಾ ಪ್ರಶಸ್ತಿಗೆ ಈ ವರ್ಷ ಧಾರವಾಡದ ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಆಯ್ಕೆಯಾಗಿದ್ದಾರೆ.ಇದೇ 12ರಂದು ನಗರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿಶ್ರಾಂತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಪ್ರಶಸ್ತಿ ಪ್ರದಾನ ಮಾಡುವರು. ವಿಜ್ಞಾನ ಬರಹಗಾರ ನಾಗೇಶ ಹೆಗಡೆ ಅಧ್ಯಕ್ಷತೆ ವಹಿಸುವರು.  ಅರಣ್ಯನಾಶ, ಪರಿಸರ ಮಾಲಿನ್ಯ ಹಾಗೂ ಗ್ರಾಮೀಣ ಬದುಕಿನ ವಿಚ್ಛಿದ್ರತೆಯ ವಿರುದ್ಧ 25 ವರ್ಷಗಳಿಂದ ಹೋರಾಟ ನಡೆಸುತ್ತಿರುವ ಹಿರೇಮಠ ಕರ್ನಾಟಕದಲ್ಲಿ ವ್ಯಾಪಕವಾಗಿ ಹಬ್ಬಿದ್ದ ಅಕ್ರಮ ಗಣಿಗಾರಿಕೆ ತಡೆಗಟ್ಟುವಲ್ಲಿ ಗಣನೀಯ ಯಶಸ್ಸು ಸಾಧಿಸಿರುವುದನ್ನು ಗುರುತಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಪಾವನಾ ಟ್ರಸ್ಟ್ ವಕ್ತಾರ ಬಕ್ಕೆಮನೆ ಶ್ರೀಪಾದ ಹೆಗಡೆ ತಿಳಿಸಿದ್ದಾರೆ.`ಎಸ್.ಆರ್. ಹಿರೇಮಠ ಗಾಂಧೀಜಿಯ ಗ್ರಾಮೀಣ ಭಾರತದ ಕನಸನ್ನು ಸಾಕಾರಗೊಳಿಸಲೆಂದು ಅಮೆರಿಕಾದ ಪ್ರತಿಷ್ಠಿತ ಸಂಸ್ಥೆಯ ಉನ್ನತ ಹುದ್ದೆ ತ್ಯಜಿಸಿ ಸಮಾಜ ಪರಿವರ್ತನ ಸಮುದಾಯ ಸಂಘಟನೆ ಆರಂಭಿಸಿ ಬೆಳೆಸಿದವರು. ಡಾ. ಶಿವರಾಮ ಕಾರಂತ, ಕುಸುಮಾ ಸೊರಬ, ಮೇಧಾ ಪಾಟ್ಕರ್ ಬೆಂಬಲದೊಂದಿಗೆ  ಕಿತ್ತಿಕೊ-ಹಚ್ಚಿಕೊ, ಪಶ್ಚಿಮಘಟ್ಟ ಉಳಿಸಿ, ನರ್ಮದಾ ಬಚಾವೊ ಮತ್ತಿತರ ಆಂದೋಲನಗಳಲ್ಲಿ ಜನರನ್ನು ತೊಡಗಿಸಿ, ಹೊಸರಾಷ್ಟ್ರೀಯ ಅರಣ್ಯ ನೀತಿಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಸಂಗಯ್ಯ ಹಿರೇಮಠ. ನಾಲ್ಕು ವರ್ಷಗಳಿಂದ ಕರ್ನಾಟಕದ ಅಕ್ರಮ ಗಣಿಗಾರಿಕೆ ಮತ್ತು ಅದಿರು ಸಾಗಣೆಯ ಬಗ್ಗೆ ಸುಪ್ರೀಂಕೋರ್ಟ್‌ಗೆ ದಾಖಲೆ ಒದಗಿಸುತ್ತ, ಲೋಕಾಯುಕ್ತರ ಕೈ ಬಲಪಡಿಸುವಲ್ಲಿ ನಿರತಾಗಿರುವ ಅವರು ತಪ್ಪಿತಸ್ಥರಿಗೆ ಶಿಕ್ಷೆಯಾಗುವಲ್ಲಿ ತಮ್ಮ ಪಾತ್ರ ನಿರ್ವಹಿಸಿದ್ದಾರೆ.ಸ್ವಾತಂತ್ರ್ಯಯೋಧ ಬಕ್ಕೆಮನೆ ನಾರಾಯಣ ಹೆಗಡೆ ಹಾಗೂ ಪಾರ್ವತಿ ದಂಪತಿಯ ನೆನಪಿನಲ್ಲಿ ಪಾವನಾ ಪರಿಸರ ಪ್ರತಿಷ್ಠಾನ 15 ವರ್ಷಗಳಿಂದ ಪರಿಸರ ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡಿದ ವ್ಯಕ್ತಿ, ಸಂಘಟನೆಗಳನ್ನು ಗುರುತಿಸಿ ಪ್ರಶಸ್ತಿ ನೀಡುತ್ತ ಬಂದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.