ಪಿಎಸಿ ಮುಂದೆ ಪ್ರಧಾನಿ; ಪ್ರಣವ್ ಆಕ್ಷೇಪ

7

ಪಿಎಸಿ ಮುಂದೆ ಪ್ರಧಾನಿ; ಪ್ರಣವ್ ಆಕ್ಷೇಪ

Published:
Updated:
ಪಿಎಸಿ ಮುಂದೆ ಪ್ರಧಾನಿ; ಪ್ರಣವ್ ಆಕ್ಷೇಪ

ಕೋಲ್ಕತ್ತ (ಪಿಟಿಐ): ಪ್ರಧಾನಿ ಅವರು ಯಾವುದೇ ಒಂದು ಸಮಿತಿಯ ಬದಲಿಗೆ ಇಡೀ ಲೋಕಸಭೆಗೇ ಉತ್ತರದಾಯಿತ್ವರಾದವರು. ಹೀಗಾಗಿ 2ಜಿ ತರಂ ಗಾಂತರ ಹಗರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ (ಪಿಎಸಿ) ಮುಂದೆ ಪ್ರಧಾನಿ ಅವರು ಹಾಜರಾಗುವುದಕ್ಕೆ ತಮ್ಮ ಸಮ್ಮತಿ ಇಲ್ಲ ಎಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ.ಈ ಮೂಲಕ ಪಿಎಸಿ ಮುಂದೆ ಹಾಜರಾಗುವ ಸಂಬಂಧ ಪ್ರಧಾನಿ ಮನಮೋಹನ್ ಸಿಂಗ್ ತೆಗೆದುಕೊಂಡಿರುವ   ನಿರ್ಧಾರಕ್ಕೆ ಕಾಂಗ್ರೆಸ್ ಒಳಗೆಯೇ ತೀವ್ರ ಆಕ್ಷೇಪ ಇರುವುದು ಬಹಿರಂಗವಾದಂತಾಗಿದೆ.‘ಪ್ರಧಾನಿ ನಮ್ಮೊಂದಿಗೆ ಸಮಾಲೋಚಿಸದೆಯೇ ಪಿಎಸಿ ಮುಂದೆ ಹಾಜರಾಗುವುದಾಗಿ ಹೇಳಿದ್ದಾರೆ. ಒಂದು ವೇಳೆ ಅವರು ಈ ವಿಚಾರದಲ್ಲಿ ನನ್ನೊಂದಿಗೆ ಚರ್ಚಿಸುತ್ತಿದ್ದರೆ ಪಿಎಸಿ ಮುಂದೆ ಹಾಜರಾಗುವುದಾಗಿ ಹೇಳಬೇಡಿ ಎಂದು ಅವರಿಗೆ ಸಲಹೆ ನೀಡುತ್ತಿದ್ದೆ’ ಎಂದು ಪ್ರಣವ್ ಭಾನುವಾರ ಇಲ್ಲಿ ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್ ಸಮಿತಿಯ ವಿಶೇಷ ಸಭೆಯಲ್ಲಿ ತಿಳಿಸಿದರು.‘ಸಂವಿಧಾನದ ಪ್ರಕಾರ ಪ್ರಧಾನಿ ಅವರು ಲೋಕಸಭೆಗೆ ಉತ್ತರದಾಯಿತ್ವರಾಗಿರುತ್ತಾರೆಯೇ ಹೊರತು ಯಾವುದೇ ಸಮಿತಿಗಲ್ಲ. ಇತರ ಸಚಿವರು ಸಹ ಸಮಿತಿಗೆ ಉತ್ತರದಾಯಿತ್ವರಾಗುವುದಿಲ್ಲ. ಅವ ರೆಲ್ಲ ಲೋಕಸಭೆಗೇ ಉತ್ತರ ಹೇಳಬೇಕಾಗುತ್ತದೆ. ಸಮಿತಿ ಸದನದ ಒಂದು ಭಾಗವೇ ಹೊರತು ಇಡೀ ಸದನವನ್ನು ಪ್ರತಿನಿಧಿಸುವುದಿಲ್ಲ’ ಎಂದರು.ಆದರೆ ಅವರ ಈ ಹೇಳಿಕೆ ಅವರಿಗೇತಿರುಗುಬಾಣವಾಯಿತು. ಕಾಂಗ್ರೆಸ್ ನಲ್ಲಿ ತೀವ್ರ ಸ್ವರೂಪದ ಭಿನ್ನಾಭಿಪ್ರಾಯ ನೆಲೆಸಿದೆ ಎಂಬ ಮಾಧ್ಯಮಗಳ ವರದಿಯಿಂದ ಅವರು ವಿಚಲಿತರಾದರು. ತಮ್ಮ ಮತ್ತು ಪ್ರಧಾನಿ ನಡುವೆ  ಭಿನ್ನಾಭಿಪ್ರಾಯ ಇಲ್ಲ, ತಾವಾಗಿದ್ದರೆ ಪಿಎಸಿ ಮುಂದೆ ಹಾಜರಾಗುವ ಮಾತನಾಡುತ್ತಿರಲಿಲ್ಲ ಎಂದಷ್ಟೇ ಹೇಳಿರುವುದಾಗಿ ಬಳಿಕ ಸ್ಪಷ್ಟಪಡಿಸಿದರು.ಆಗ್ರಹ:ಯುಪಿಎ ಸರ್ಕಾರ ಒಗ್ಗೂಡಿ ಮುನ್ನಡೆಯುತ್ತಿಲ್ಲ ಎಂಬುದು ಪ್ರಣವ್ ಹೇಳಿಕೆಯಿಂದ ಗೊತ್ತಾಗುತ್ತದೆ. ಪ್ರಧಾನಿ ಪಿಎಸಿ ಮುಂದೆ ಹಾಜರಾಗುವ ವಿಚಾರದಲ್ಲಿ ಕಾಂಗ್ರೆಸ್ ಸ್ಪಷ್ಟ ನಿಲುವು ಪ್ರಕಟಿಸಬೇಕು ಎಂದು ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಡಿ. ರಾಜಾ ನವದೆಹಲಿಯಲ್ಲಿ ಆಗ್ರಹಿಸಿದ್ದಾರೆ.ಶಂಕೆ:ಪಿಎಸಿ ಮುಂದೆ ಪ್ರಧಾನಿ ಹಾಜರಾಗುವುದಕ್ಕೆ ಪ್ರಣವ್ ಅವರ ಸಮ್ಮತಿ ಇಲ್ಲದಿರುವಾಗ 2ಜಿ ತರಂಗಾಂತರ ಹಗರಣದ ನಿಷ್ಪಕ್ಷಪಾತ ತನಿಖೆ ಹೇಗೆ ಸಾಧ್ಯ ಎಂದು ಬಿಜೆಪಿಯ ವಕ್ತಾರ ರವಿ    ಶಂಕರ್ ಪ್ರಸಾದ್ ಪ್ರಶ್ನಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry