ಮಂಗಳವಾರ, ಜೂನ್ 15, 2021
21 °C

ಪಿಯುಸಿ ಪ್ರವೇಶ ಪತ್ರದಲ್ಲಿ ಜಾತಿ ನಮೂದಿಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರಪುರ: ಪಿಯುಸಿ ಪರೀಕ್ಷೆಯ ಪ್ರವೇಶ ಪತ್ರದಲ್ಲಿ ಜಾತಿ ನಮೂದಿಸಿ ವಿತರಣೆ ಮಾಡಿರುವುದನ್ನು ವಿರೋಧಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್.ಎಫ್.ಐ.) ನೇತೃತ್ವದಲ್ಲಿ ವಿದ್ಯಾರ್ಥಿಗಳು ಮಂಗಳವಾರ ಇಲ್ಲಿನ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.–ನೇತೃತ್ವ ವಹಿಸಿದ್ದ ಜಿಲ್ಲಾ ಸಮಿತಿಯ ಅಧ್ಯಕ್ಷ ಪ್ರಕಾಶ ಆಲಾಳ ಮಾತನಾಡಿ, ಸಂವೇದನಾಶೀಲ ವಿದ್ಯಾರ್ಥಿಗಳ ಮೇಲೆ ಜಾತಿಯ ವಿಷ ಬೀಜ ಬಿತ್ತುವ ಹುನ್ನಾರ ನಡೆಯುತ್ತಿದೆ. ವಿದ್ಯಾರ್ಥಿಗಳನ್ನು ಜಾತಿಯಿಂದ ಗುರುತಿಸುವುದು ಎಳೆಯ ಮನಸ್ಸುಗಳನ್ನು ಕೋಮುವಾದದೆಡೆಗೆ ಕೊಂಡೊಯ್ಯುವ ಕುತಂತ್ರವಾಗಿದೆ. ಇದರಿಂದ ಜಾತ್ಯತೀತ ಭಾವನೆಗೆ ಕುಂದು ಉಂಟಾಗುತ್ತದೆ. ಇದು ಕೇಸರಿಕರಣದ ಪರಮಾವಧಿ ಎಂದು ಆರೋಪಿಸಿದರು.ಪರಿವೀಕ್ಷಕರಾಗಿ ಬಂದವರು ತಮ್ಮ ಜಾತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ನಕಲು ಮಾಡಲು ಅವಕಾಶ ನೀಡಬಹುದು ಅಥವಾ ತಮ್ಮ ಜಾತಿಯವರಲ್ಲ ಎನ್ನುವ ಕಾರಣಕ್ಕೆ ನಕಲು ಮಾಡಿರುವ ಆರೋಪ ಹೊರಿಸಬಹುದು. ನಕಲು ಮಾಡಿ ಸಿಕ್ಕಿಕೊಂಡಾಗ ವಿದ್ಯಾರ್ಥಿಯನ್ನು ತಮ್ಮ ಜಾತಿಯವನಲ್ಲ ಎಂದು ನಿಂದಿಸಬಹುದು ಅಥವಾ ರಕ್ಷಿಸಬಹುದು ಎಂದು ತಾಲ್ಲೂಕು ಅಧ್ಯಕ್ಷ ರಾಮಯ್ಯ ಭೋವಿ ದೂರಿದರು.ಶಿಕ್ಷಣದಲ್ಲಿ ಕೋಮುವಾದಿ ಶಕ್ತಿಗಳು ಕೇಸರಿಕರಣ ಮಾಡುವುದನ್ನು ನಿಷೇಧಿಸಬೇಕು. ಪಿಯುಸಿ ಪರೀಕ್ಷಾ ಪ್ರವೇಶ ಪತ್ರದಲ್ಲಿ ಜಾತಿಯನ್ನು ನಮೂದಿಸಬಾರದು ಎಂದು ಆಗ್ರಹಿಸುವ ಮನವಿ ಪತ್ರವನ್ನು ಉಪತಹಸೀಲ್ದಾರ್ ಬಾಬರ್‌ಅಲಿ ಸ್ವೀಕರಿಸಿದರು.ಪ್ರಧಾನ ಕಾರ್ಯದರ್ಶಿ ಸೀತಾರಾಮ ರಾಠೋಡ, ಉಪಾಧ್ಯಕ್ಷ ಮಲ್ಲು ದೇಸಾಯಿ, ಅಶೋಕ ಹದನೂರ್, ರವಿ ಬಿಜಾಸಪುರ, ಸಿದ್ದು ನಡಕೂರ, ಬೀರಲಿಂಗ ಗೌಡಗೇರಾ, ತಿಮ್ಮಯ್ಯ ಟಿಳ್ಳೆ, ರಫೀಕ್ ಸುರಪುರ, ಭೀಮು ಹೂವಿನಳ್ಳಿ, ಯಲ್ಲಪ್ಪ ಆಲ್ಹಾಳ, ರಮೇಶ, ವೆಂಕೋಬ, ಪರಮಣ್ಣ ಮತ್ತಿತರರು ಪ್ರತಿಭಟನೆಯಲ್ಲಿದ್ದರು. ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ಮಾಳಪ್ಪ ಕಿರದಳ್ಳಿ ಪ್ರತಿಭಟನೆಗೆ ಬೆಂಬಲಿಸಿ ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.