ಮಂಗಳವಾರ, ಮೇ 11, 2021
19 °C

ಪಿಯುಸಿ ಮೌಲ್ಯಮಾಪನ ಬಹಿಷ್ಕಾರ: ಸರ್ಕಾರ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಬೆಂಗಳೂರು: ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಬಹಿಷ್ಕಾರವನ್ನು ಕೈಬಿಟ್ಟು, ಭಾನುವಾರ ಕರ್ತವ್ಯಕ್ಕೆ ಹಾಜರಾಗದಿದ್ದರೆ ಉಪನ್ಯಾಸಕರು, ಪ್ರಾಂಶುಪಾಲರ ವಿರುದ್ಧ ಕಠಿಣ ಕ್ರಮಕೈಗೊಳ್ಳ ಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.ಮೌಲ್ಯಮಾಪನ ಬಹಿಷ್ಕಾರ ಬಹುತೇಕ ಎರಡನೇ ದಿನವೂ ಮುಂದುವರಿದ ಹಿನ್ನೆಲೆಯಲ್ಲಿ ಶನಿವಾರ ಸಂಜೆ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಕಾರ್ಯದರ್ಶಿ ಜಿ.ಕುಮಾರ ನಾಯಕ, ಭಾನುವಾರವೂ ಮುಷ್ಕರ ಮುಂದುವರಿದರೆ ಶಿಸ್ತುಕ್ರಮಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.`ಮುಷ್ಕರನಿರತ ಉಪನ್ಯಾಸಕರು, ಪ್ರಾಂಶುಪಾಲರನ್ನು ಅಮಾನತು ಮಾಡುವುದು, ಸೇವೆಯಿಂದ ವಜಾ ಮಾಡುವುದು ಎರಡು ನಿಮಿಷದ ಕೆಲಸ. ಅದಕ್ಕೆ ಅವಕಾಶ ಮಾಡಿಕೊಡಬಾರದು~ ಎಂದು ಮನವಿ ಮಾಡಿದರು. ಆದರೆ ಇದಕ್ಕೆ ಸ್ಪಂದಿಸದ ಉಪನ್ಯಾಸಕರು, `ವೇತನ ತಾರತಮ್ಯ ಸಮಸ್ಯೆ ಇತ್ಯರ್ಥವಾಗುವವರೆಗೂ ಅನಿರ್ದಿಷ್ಟ ಬಹಿಷ್ಕಾರ ಮುಂದುವರಿಯಲಿದೆ~ ಎಂದು ಸ್ಪಷ್ಟಪಡಿಸಿದ್ದಾರೆ.`ಮುಖ್ಯಮಂತ್ರಿಗಳು ಅಥವಾ ಶಿಕ್ಷಣ ಸಚಿವರು ಮಾತುಕತೆಗೆ ಆಹ್ವಾನಿಸಿ, ವೇತನ ತಾರತಮ್ಯ ಸರಿಪಡಿಸುವುದಾಗಿ ಲಿಖಿತ ಭರವಸೆ ನೀಡಿದರೆ ಮಾತ್ರ ಬಹಿಷ್ಕಾರ ಕೈಬಿಡುತ್ತೇವೆ. ಇಲ್ಲದಿದ್ದರೆ ಮುಷ್ಕರ ಮುಂದುವರಿಯಲಿದೆ~ ಎಂದು ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಕೆ.ಟಿ.ಶ್ರೀಕಂಠೇಗೌಡ ತಿಳಿಸಿದರು.`ಸೋಮವಾರ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿಗಳ ಮುಂದೆ ಹಾಗೂ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಉಪನ್ಯಾಸಕರು ಪ್ರತಿಭಟನೆ ನಡೆಸ ಲಿದ್ದಾರೆ. ಬೇಡಿಕೆ ಈಡೇರುವವರೆಗೂ ಬಹಿಷ್ಕಾರವನ್ನು ಹಿಂತೆಗೆದುಕೊಳ್ಳುವುದಿಲ್ಲ~ ಎಂದು ತಿಳಿಸಿದರು.ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು `ಬ್ಲಾಕ್‌ಮೇಲ್~ ಮಾಡುವುದು, ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಬಹಿಷ್ಕರಿಸಿ ಸುಮಾರು ಆರು ಲಕ್ಷ  ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುವುದು ಸರಿಯಲ್ಲ ಎಂದು ಕುಮಾರ ನಾಯಕ ತಿಳಿಸಿದರು. ಉಪನ್ಯಾಸಕರು ಮತ್ತು ಪ್ರಾಂಶುಪಾಲರ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಸಹಾನುಭೂತಿ ಇದೆ. ಆದರೆ ಹೋರಾಟಕ್ಕೆ ಆಯ್ಕೆ ಮಾಡಿಕೊಂಡಿರುವ ಸಂದರ್ಭ, ಮೌಲ್ಯಮಾಪನ ಬಹಿಷ್ಕಾರದ ಹಾದಿ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ರಾಜ್ಯದಲ್ಲಿನ ಒಟ್ಟು 37 ಕೇಂದ್ರಗಳ ಪೈಕಿ ನಗರದ ಎಂಟು ಕೇಂದ್ರಗಳು ಸೇರಿದಂತೆ 12 ಕೇಂದ್ರಗಳಲ್ಲಿ ಶನಿವಾರ ಮೌಲ್ಯಮಾಪನ ಕಾರ್ಯ ನಡೆದಿದೆ. ಭಾನುವಾರ ಉಳಿದ ಕೇಂದ್ರಗಳಲ್ಲೂ ಉಪನ್ಯಾಸಕರು ಮೌಲ್ಯಮಾಪನಕ್ಕೆ ಹಾಜರಾಗುವ ವಿಶ್ವಾಸವಿದೆ ಎಂದರು. ಶನಿವಾರ ಮೌಲ್ಯಮಾಪನಕ್ಕೆ ಹಾಜರಾಗಿದ್ದವರಲ್ಲಿ ಅನುದಾನರಹಿತ ಕಾಲೇಜುಗಳ ಉಪನ್ಯಾಸಕರು ಹಾಗೂ ಅರೆಕಾಲಿಕ ಉಪನ್ಯಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೆಂದು ಮೂಲಗಳು ತಿಳಿಸಿವೆ.ಹಲವು ಉಪನ್ಯಾಸಕರು ಶನಿವಾರ ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸಲು ಕೇಂದ್ರಗಳಿಗೆ ಆಗಮಿಸಿದ್ದರು. ಆದರೆ ಉಪನ್ಯಾಸಕರ ಸಂಘಟನೆಯ ಕೆಲವರು ಅದಕ್ಕೆ ಅಡ್ಡಿಯನ್ನುಂಟು ಮಾಡಿ ಒತ್ತಾಯ ಪೂರ್ವಕವಾಗಿ ಹೊರಗೆ ಕಳುಹಿಸುತ್ತಿದ್ದರು. ಆದರೆ ಕೇಂದ್ರದ ಮುಖ್ಯಸ್ಥರು ಮೌಲ್ಯಮಾಪನ ಬಹಿಷ್ಕರಿಸದಂತೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ನಾಯಕ ಅವರು ತಿಳಿಸಿದರು.ಕೆಲವು ಕೇಂದ್ರಗಳಲ್ಲಿ ಉಪ ಮುಖ್ಯ ಪರೀಕ್ಷಕರು ಗೈರು ಹಾಜರಾಗಿದ್ದ ಕಾರಣ, ಉಪನ್ಯಾಸಕರು ಹಾಜರಾಗಿದ್ದರೂ ಮೌಲ್ಯಮಾಪನ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಅಂತಹ ಕಡೆ ಉಪ ಮುಖ್ಯ ಪರೀಕ್ಷಕರು, ಕೇಂದ್ರದ ಮುಖ್ಯಸ್ಥರನ್ನು ಬದಲಾಯಿಸಲು ವೀಕ್ಷಕರಿಗೆ ಸೂಚಿಸಲಾಗಿದೆ ಎಂದರು.`ಪೋಷಕರು, ವಿದ್ಯಾರ್ಥಿಗಳು ಆತಂಕಪಡುವ ಅಗತ್ಯವಿಲ್ಲ. ಸಂಘಟನೆಯ ಪದಾಧಿಕಾರಿಗಳ ನಿಲುವಿಗೆ ಉಪನ್ಯಾಸಕರು, ಪ್ರಾಂಶುಪಾಲರ ಸಮ್ಮತಿ ಇಲ್ಲ. ಹೀಗಾಗಿ ಭಾನುವಾರದಿಂದ ಮೌಲ್ಯಮಾಪನ ಕಾರ್ಯ ಸುಗಮವಾಗಿ ನಡೆಯುವ ವಿಶ್ವಾಸವಿದೆ~ ಎಂದು ನುಡಿದರು. ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವುದರಿಂದ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ವಿವಿಧ ಜಿಲ್ಲೆಗಳ ಪ್ರವಾಸ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಯಾವಕಾಶ ನೋಡಿಕೊಂಡು ಇದೇ 19ರಂದು ಮುಖ್ಯಮಂತ್ರಿಗಳು ಉಪನ್ಯಾಸಕರ ಸಂಘದ ಸಭೆ ಕರೆದಿದ್ದಾರೆ ಎಂದರು.ಈ ಹಿನ್ನೆಲೆಯಲ್ಲಿ ಸಮಯಾವಕಾಶ ನೋಡಿಕೊಂಡು ಇದೇ 19ರಂದು ಮುಖ್ಯಮಂತ್ರಿಗಳು ಉಪನ್ಯಾಸಕರ ಸಂಘದ ಸಭೆ ಕರೆದಿದ್ದಾರೆ ಎಂದರು.ಕಳೆದ ವರ್ಷ ಇದೇ ರೀತಿ ಮುಷ್ಕರ ನಡೆಸಿದಾಗ ವೇತನ ತಾರತಮ್ಯದ ಬಗ್ಗೆ ಚರ್ಚಿಸಲು ಸಮಿತಿಯೊಂದನ್ನು ರಚಿಸಲಾಗಿತ್ತು. ಆ ಸಮಿತಿ ನೀಡಿದ್ದ ವರದಿಯನ್ನು ಅಧಿಕಾರಿಗಳ ವೇತನ ಸಮಿತಿಗೆ ನೀಡಲಾಗಿತ್ತು. ಅದನ್ನು ಆಧರಿಸಿ ವೇತನ ಪರಿಷ್ಕರಣೆಯಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿನ ಪಿಯು ಉಪನ್ಯಾಸಕರ ವೇತನ ಉತ್ತಮವಾಗಿದ್ದು, ಹೊಸಬರಿಗೆ ಮಾಸಿಕ 30 ಸಾವಿರ ರೂಪಾಯಿ ವೇತನ ದೊರೆಯಲಿದೆ.ಇದಲ್ಲದೆ 500 ರೂಪಾಯಿ ವಿಶೇಷ ವೇತನ ನೀಡಲಾಗುತ್ತಿದೆ. ಆದರೂ ಅವರಿಗೆ ಸಮಾಧಾನ ಆಗಿಲ್ಲ. ಹೀಗಾಗಿ ಅವರು ಮತ್ತೆ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಇದಕ್ಕೆ ಯಾರ ಅಭ್ಯಂತರವಿಲ್ಲ. ಆದರೆ ಈಗಲೇ ಎಲ್ಲವೂ ಇತ್ಯರ್ಥ ಆಗಬೇಕು ಎಂದು ಪಟ್ಟು ಹಿಡಿದು ಮೌಲ್ಯಮಾಪನ ಬಹಿಷ್ಕರಿಸುವುದನ್ನು ಒಪ್ಪುವುದಿಲ್ಲ ಎಂದರು.ಭಾನುವಾರದಿಂದ ಮೌಲ್ಯಮಾಪನ ಕಾರ್ಯ ಸುಗಮವಾಗಿ ನಡೆದರೆ ಈ ತಿಂಗಳ ಅಂತ್ಯದಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಒಟ್ಟು 32 ಲಕ್ಷ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯಬೇಕಿದೆ. ಮುಷ್ಕರದಿಂದಾಗಿ ನಿತ್ಯ 1.02 ಕೋಟಿ ರೂಪಾಯಿ ನಷ್ಟವಾಗುತ್ತಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಆಯುಕ್ತೆ ವಿ.ರಶ್ಮಿ ತಿಳಿಸಿದರು.ಉಪನ್ಯಾಸಕರ ಬೇಡಿಕೆ: ಸರ್ಕಾರವೇ ರಚಿಸಿದ್ದ ಜಿ.ಕುಮಾರ ನಾಯಕ ಅಧ್ಯಕ್ಷತೆಯ ಸಮಿತಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರಿಗೆ 12,650ರಿಂದ 25,250 ಹಾಗೂ ಪ್ರಾಂಶುಪಾಲರಿಗೆ 16,400ರಿಂದ 26,650ರ ವೇತನ ಶ್ರೇಣಿ ನಿಗದಿಪಡಿಸುವಂತೆ ಶಿಫಾರಸು ಮಾಡಿದೆ. ಈ ಪ್ರಕಾರ ವೇತನ ನಿಗದಿಪಡಿಸಿದರೆ ಭಾನುವಾರದಿಂದಲೇ ಮೌಲ್ಯಮಾಪನಕ್ಕೆ ಹಾಜರಾಗುವುದಾಗಿ ಶ್ರೀಕಂಠೇಗೌಡ ಹೇಳಿದರು.`ಅಧಿಕಾರಿಗಳ ವೇತನ ಸಮಿತಿ ಪ್ರಕಾರ ವೇತನ ನಿಗದಿ ಮಾಡಿರುವುದು ಸರಿಯಲ್ಲ. ಇದರಿಂದ ವೇತನ ತಾರತಮ್ಯ ನಿವಾರಣೆಯಾಗುವುದಿಲ್ಲ~ ಎಂದೂ ಅವರು ಹೇಳಿದ್ದಾರೆ.ರಾಜ್ಯ ಸರ್ಕಾರ ಪಿಯು ಉಪನ್ಯಾಸಕರಿಗೆ 29,600 ರೂಪಾಯಿ ವೇತನ ನೀಡುತ್ತಿದೆ ಎಂದು ಸರ್ಕಾರ ಜಾಹೀರಾತು ನೀಡಿದೆ. ಇದು ಬೆಂಗಳೂರು ನಗರದ ಉಪನ್ಯಾಸಕರಿಗೆ ಸಿಗುವ ವೇತನ. ಎಲ್ಲ ಉಪನ್ಯಾಸಕರಿಗೂ 29,600 ರೂಪಾಯಿ ವೇತನ ನೀಡಿದರೆ ಮುಷ್ಕರ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.

 

ಫಲಿತಾಂಶ ವಿಳಂಬ ಸಂಭವ...

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇದೇ 26ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಬೇಕಿತ್ತು. ಆದರೆ ಬಹಿಷ್ಕಾರದ ಹಿನ್ನೆಲೆಯಲ್ಲಿ ತಡವಾಗುವ ಸಾಧ್ಯತೆ ಇದೆ.

ಭಾನುವಾರದಿಂದ ಮೌಲ್ಯಮಾಪನ ಕಾರ್ಯ ಸುಸೂತ್ರವಾಗಿ ನಡೆದರೆ ಈ ತಿಂಗಳ ಅಂತ್ಯದಲ್ಲಿ ಫಲಿತಾಂಶ ಪ್ರಕಟಿಸಬಹುದು. ಒಂದು ವೇಳೆ ಭಾನುವಾರವೂ ಬಹಿಷ್ಕಾರ ಮುಂದುವರಿದರೆ ಸಿಇಟಿ ಪರೀಕ್ಷೆ ನಂತರ, ಅಂದರೆ ಮೇ ತಿಂಗಳ ಮೊದಲ ವಾರದಲ್ಲಿ ಫಲಿತಾಂಶ ಪ್ರಕಟವಾಗುವ ಸಂಭವವಿದೆ.

ಫಲಿತಾಂಶ ಪ್ರಕಟವಾಗುವುದು ತಡವಾದಷ್ಟು ಪಿಯುಸಿ ನಂತರ ಬೇರೆ ಬೇರೆ ಕೋರ್ಸ್‌ಗಳಿಗೆ ಸೇರ್ಪಡೆಯಾಗುವ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಯಾವುದೇ ಕೋರ್ಸ್‌ಗೆ ಸೇರಬೇಕಾದರೆ ಮೂಲ ಅಂಕಪಟ್ಟಿ ಅನಿವಾರ್ಯ. ಕೆಲವೊಮ್ಮೆ ಮರು ಎಣಿಕೆ, ಮರು ಮೌಲ್ಯಮಾಪನಕ್ಕೂ ವಿದ್ಯಾರ್ಥಿಗಳು ಅರ್ಜಿ ಹಾಕುತ್ತಾರೆ. ಅಂತಹ ವಿದ್ಯಾರ್ಥಿಗಳಿಗೆ ಫಲಿತಾಂಶ ಬರುವುದು ವಿಳಂಬವಾದಷ್ಟು ತೊಂದರೆಯಾಗುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.