ಶನಿವಾರ, ಮೇ 8, 2021
20 °C

ಪೀಠೋಪಕರಣ ಧ್ವಂಸ; ಆರೋಪಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಪನಹಳ್ಳಿ: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಿಬಿಐನಿಂದ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಜಿ. ಜನಾರ್ದನರೆಡ್ಡಿ ಅವರ ಬಂಧನ ವಿರೋಧಿಸಿ ಭಾರತೀಯ ಜನತಾಪಕ್ಷ ಹಾಗೂ ಜಿ. ಕರುಣಾಕರರೆಡ್ಡಿ ಅಭಿಮಾನಿಗಳ ಬಳಗದ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದ ಕೆಲವೇ ಕ್ಷಣಗಳ ನಂತರ ಗುಂಪೊಂದು ವಿವಿಧ ಇಲಾಖೆಗಳ ಕಚೇರಿಗೆ ನುಗ್ಗಿ ಕಂಪ್ಯೂಟರ್, ಕಿಟಕಿಯ ಗಾಜುಗಳನ್ನು ಧ್ವಂಸಗೊಳಿಸಿದೆ.ಆದರೆ, ಪ್ರತಿಭಟನೆ ಮುಗಿದು ಒಂದು ಗಂಟೆಯ ನಂತರ ಅಂದರೆ, 2.15ರ ಸಮಯದಲ್ಲಿ ಅಧಿಕಾರಿಗಳು ಊಟಕ್ಕೆ ಮನೆಗೆ ತೆರಳಿದ ನಂತರ ಕಚೇರಿಗೆ ನುಗ್ಗಿದ ಆಕ್ರೋಶ ಭರಿತ ಗುಂಪು ಕಚೇರಿಯಲ್ಲಿನ ವಿವಿಧ ಉಪಕರಣಗಳನ್ನು ಧ್ವಂಸಗೊಳಿಸಿದೆ. ಪಂಚಾಯತ್ ರಾಜ್  ಎಂಜಿನಿಯರಿಂಗ್ ವಿಭಾಗದ ಕಚೇರಿಗೆ ನುಗ್ಗಿದ ಗುಂಪು ಕಚೇರಿಯ ಜವಾನನ್ನು ಗದರಿಸಿ,ಮೂರು ಕಂಪ್ಯೂಟರ್‌ಗಳನ್ನು ಧ್ವಂಸಗೊಳಿಸಿದೆ.

ನಂತರ ಕಚೇರಿಯ ಎರಡು ಕಿಟಕಿ, ಸೂಚನಾ ಫಲಕದ ಅಳವಡಿಸಲಾಗಿದ್ದ ಗಾಜು ಹಾಗೂ ಕುಡಿಯುವ ನೀರಿಗೆ ಅಳವಡಿಸಲಾಗಿದ್ದ ಫಿಲ್ಟರ್ ಗಾಜುಗಳನ್ನು ಪುಡಿ ಮಾಡಲಾಗಿದೆ. ಜತೆಗೆ, ಕಚೇರಿಯಲ್ಲಿನ ಕುರ್ಚಿಗಳನ್ನು ಚೆಲ್ಲಾಪಿಲ್ಲಿಯಾಗಿ ಬಿಸಾಡಲಾಗಿದೆ.ನಂತರ ಲೋಕೋಪಯೋಗಿ, ಒಳನಾಡು ಹಾಗೂ ಬಂದರು ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿಯಲ್ಲಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿ, ಪಕ್ಕದಲ್ಲಿನ ಪಂಚಾಯ್ತಿರಾಜ್ ಎಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಚೇರಿಗೆ ಅಳವಡಿಸಲಾಗಿದ್ದ ಗಾಜುಗಳನ್ನು ಪುಡಿಮಾಡಿದೆ. ಆದರೆ, ಈ ಎರಡು ಇಲಾಖೆಗಳ ಕಚೇರಿಯ ಮುಖ್ಯಸ್ಥರು ನಮ್ಮ ಕಚೇರಿಯಲ್ಲಿ ಏನು ಸಂಭವಿಸಿಲ್ಲ ಎಂದು ಹಾರಿಕೆಯ ಉತ್ತರ ನೀಡುತ್ತಿದ್ದಾರೆ.ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗೀಯ ಕಚೇರಿಯಲ್ಲಿ ಕಂಪ್ಯೂಟರ್ ಸೇರಿದಂತೆ ವಿವಿಧ ಪೀಠೋಪಕರಣಗಳು, ಗಾಜುಗಳು ಪುಡಿಯಾಗಿದ್ದರೂ, ಇಲಾಖೆಯ ಮೇಲಧಿಕಾರಿಗಳು  ಘಟನೆಗೆ ಸಂಬಂಧಿಸಿದಂತೆ ಯಾವೊಬ್ಬ ಅಧಿಕಾರಿಗಳು ತುಟಿ ಬಿಚ್ಚುತ್ತಿಲ್ಲ.ಸಾಯಂಕಾಲದ ವೇಳೆಗೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗೀಯ ಕಚೇರಿಯ ಜವಾನ ಹಾಲಪ್ಪ ಎಂಬುವವರು ` ನಿಮ್ಮ ಸಾಹೇಬರು ಎಲ್ಲಿ ಹೋಗಿದ್ದಾರೆ. ನಾವು ನಿರ್ವಹಿಸಿದ ಕಾಮಗಾರಿಯ ಬಿಲ್ಲುಗಳನ್ನು ಮಾಡಿರುವುದಿಲ್ಲ ಎಂದು ಬೆದರಿಸಿ ಕಚೇರಿಯಲ್ಲಿನ ಕಂಪ್ಯೂಟರ್ ಸಹಿತ ಇತರೆ ವಸ್ತುಗಳನ್ನು ನಾಶಪಡಿಸಿದ್ದಾರೆ~ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ 143, 147, 148, 427 ರೆ/ವಿ 149 ಐಪಿಸಿ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಐವರು ಆರೋಪಿತರನ್ನು ಬಂಧಿಸಿದ್ದಾರೆ.ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ಅನಿತಾ ಬಿ. ಹದ್ದಣ್ಣವರ್, ಸಿಪಿಐ ಬಿ.ಎಸ್. ಬಸವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುಂಜಾಗ್ರತ ಕ್ರಮವಾಗಿ ಮೂರು ಕಚೇರಿಗಳು ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.