ಶುಕ್ರವಾರ, ಮೇ 20, 2022
20 °C

ಪೀಣ್ಯ ಡಿಪೊದಲ್ಲಿ ನಮ್ಮ ಮೆಟ್ರೊ ರೈಲು ಗಾಡಿ:ಇಂದು ಪರೀಕ್ಷಾರ್ಥ ಸಂಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪೀಣ್ಯ ಡಿಪೊದಲ್ಲಿ `ನಮ್ಮ ಮೆಟ್ರೊ~ ರೈಲು ಗಾಡಿಯ ಪರೀಕ್ಷಾರ್ಥ ಸಂಚಾರ ಬುಧವಾರ ಆರಂಭವಾಗಲಿದೆ.ಇದಕ್ಕಾಗಿ 1.2 ಕಿ.ಮೀ. ಉದ್ದದ ಪರೀಕ್ಷಾರ್ಥ ಹಳಿ (ಟೆಸ್ಟ್ ಟ್ರ್ಯಾಕ್) ಸಿದ್ಧಗೊಂಡಿದೆ. 2013ರ ಏಪ್ರಿಲ್ ವೇಳೆಗೆ ಈ ಡಿಪೊದಿಂದ ಯಶವಂತಪುರ ಮಾರ್ಗವಾಗಿ ಸ್ವಸ್ತಿಕ್‌ವರೆಗೆ ರೈಲು ಸಂಚಾರ ಆರಂಭಿಸುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮಂಗಳವಾರ ಇಲ್ಲಿ ತಿಳಿಸಿದರು.ವಿಧಾನಸೌಧದಲ್ಲಿ ನಡೆದ `ನಮ್ಮ ಮೆಟ್ರೊ~ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆ ನಂತರ ಅವರು ಸುದ್ದಿಗಾರರಿಗೆ ತಿಳಿಸಿದರು. ಡಿಪೊದ ಒಳಗೇ ಈ ಹಳಿ ಇದ್ದು, ಅಲ್ಲಿಯೇ ರೈಲುಗಳು ಪರೀಕ್ಷಾರ್ಥವಾಗಿ ಸಂಚರಿಸಲಿವೆ ಎಂದು ವಿವರಿಸಿದರು.ಮೆಜೆಸ್ಟಿಕ್‌ನಲ್ಲಿ ನೆಲಮಹಡಿಯ ಮೆಟ್ರೊ ನಿಲ್ದಾಣ ಕಾಮಗಾರಿ ಸ್ವಲ್ಪ ವಿಳಂಬವಾಗಲಿದ್ದು, 2014ರ ಮೇ ವೇಳೆಗೆ ಅದು ಪೂರ್ಣಗೊಳ್ಳುವ ವಿಶ್ವಾಸ ಇದೆ ಎಂದರು.ಕೆ.ಆರ್.ಮಾರ್ಕೆಟ್- ಪುಟ್ಟೇನಹಳ್ಳಿ ಕ್ರಾಸ್ ಹಾಗೂ ಮಾಗಡಿ ರಸ್ತೆ- ಮೈಸೂರು ರಸ್ತೆ ನಡುವಿನ ಮೆಟ್ರೊ ಕಾಮಗಾರಿ 2013ರ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.ವಿಧಾನಸೌಧ ಮತ್ತು ಹೈಕೋರ್ಟ್ ಮಧ್ಯೆ ಇರುವ ಮೆಟ್ರೊ ಸುರಂಗ ನಿಲ್ದಾಣದ ಕಾಮಗಾರಿಗೆ ಅಂಬೇಡ್ಕರ್ ಪ್ರತಿಮೆ ಅಡ್ಡಿಯಾಗಿದ್ದು, ಅದನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸುವ ಕುರಿತು ಒಂದೆರಡು ದಿನದಲ್ಲಿ ತೀರ್ಮಾನಕ್ಕೆ ಬರಲಾಗುವುದು. ಸಮಾಜ ಕಲ್ಯಾಣ ಸಚಿವ ಎ.ನಾರಾಯಣಸ್ವಾಮಿ ಅವರ ಜತೆ ಚರ್ಚೆ ನಡೆಸಿ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.