ಮಂಗಳವಾರ, ಮೇ 18, 2021
22 °C

ಪುಟಾಣಿ ಅಧೀಶ್‌ನ ಹಾಡಿನ ಮೋಡಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪುಟ್ಟ ಕೈಗಳಲ್ಲಿ ಮೈಕ್ ಹಿಡಿದು ವೇದಿಕೆಯ ಎದುರು ನಿಂತ ಪೋರನಿಗೆ ಹಾಡಲು ಯಾವುದೇ ಅಳುಕಿರಲಿಲ್ಲ. ಆತನ ಕೈಯ ಅಳತೆಗೆ ಆ ಮೈಕ್‌ನ ಗಾತ್ರ ಹೆಚ್ಚೇ ಎನಿಸಿದರೂ ಪುಟ್ಟ ಕಂಠದಿಂದ ಹೊಮ್ಮುತ್ತಿದ್ದ ಹಾಡಿನ ಓಘ ಅಚ್ಚರಿ ಮೂಡಿಸುವಂತಿತ್ತು. ವೇದಿಕೆ ಏರಿ ಹಾಡಲಾರಂಭಿಸಿದ ಪುಟ್ಟನ ಗಾನಕ್ಕೆ ಸಭಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕ ಸಮೂಹದಿಂದ ಚಪ್ಪಾಳೆಯ ಸುರಿಮಳೆ.ಆದರ್ಶ ಸುಗಮ ಸಂಗೀತ ಅಕಾಡೆಮಿಯು ಸಾಯಿ ಗೋಲ್ಡ್ ಪ್ಯಾಲೇಸ್‌ನ ಸಹಯೋಗದಲ್ಲಿ ನಗರದ ಬಿಎಂಶ್ರೀ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ `ಪುಟಾಣಿ ಪೋರ ಸಂಗೀತ ಚತುರ' ಕಾರ್ಯಕ್ರಮದಲ್ಲಿ ಐದು ವರ್ಷದ ಅಧೀಶ್ ಸುಗಮ ಸಂಗೀತ ಗೀತೆಗಳನ್ನು ಪ್ರಸ್ತುತಪಡಿಸಿದ ರೀತಿ ಪ್ರೇಕ್ಷಕರನ್ನು ಮೋಡಿ ಮಾಡುವಂತಿತ್ತು.`ಮೊದಲಿಗೆ ನೆನೆವೆನು ಗಜಮುಖನ, ಗಣಪ್ಪನ್ನ' ಎಂದು ಹಾಡಲು ಮೊದಲು ಮಾಡಿದ ಅಧೀಶ್‌ನ ಗಾನ ಲಹರಿ ಒಂದು ಗಂಟೆಗೂ ಹೆಚ್ಚು ಕಾಲ ನಡೆಯಿತು. `ಕನ್ನಡವೆಂದರೆ ಬರಿ ನುಡಿಯಲ್ಲ ಹಿರಿದಿದೆ ಅದರರ್ಥ' ಎಂದು ಪುಟ್ಟ ಬಾಯಿಯಲ್ಲಿ ದೊಡ್ಡ ಅರ್ಥದ ಗೀತೆಯನ್ನು ಆತ ಹಾಡುವಾಗ ಹಾಲುಗಲ್ಲದ ಹುಡುಗನ ಲಯ - ತಾಳಗಳ ಮೇಲಿನ ಹಿಡಿತವನ್ನು ಕಂಡು ಪ್ರೇಕ್ಷಕರು ತಲೆದೂಗಿದರು.`ಉಳುವಾ ಯೋಗಿಯ ನೋಡಲ್ಲಿ' ಗೀತೆಯ ತಾರಕ ಸ್ವರಗಳನ್ನು ಆತ ಶ್ರುತಿ ತಪ್ಪದೆ ಪ್ರಸ್ತುತಪಡಿಸಿದಾಗ ಅಲ್ಲಿ ಸೇರಿದ್ದ ಹಿರಿಯ ಸುಗಮ ಸಂಗೀತ ಗಾಯಕರೂ ಅವಾಕ್ಕಾದರು.`ಚಿಕ್ಕ ವಯಸ್ಸಿನಲ್ಲೇ ನಾದೋಪಾಸನೆಯಲ್ಲಿ ತೊಡಗಿದ ಅಧೀಶ್‌ನ ಸಾಧನೆ ಅಚ್ಚರಿ ತರಿಸಿದೆ. ಪದಗಳ ಉಚ್ಚಾರವೇ ಕಷ್ಟವಾಗುವ ವಯಸ್ಸಿನಲ್ಲಿ ಈತನ ಹಾಡಿನ ಮೋಡಿ ಎಂಥವರನ್ನೂ ಬೆರಗುಗೊಳಿಸುವಂತಿದೆ. ಅಧೀಶ್‌ನ ಸಂಗೀತ ಸಾಧನೆಗೆ ಶುಭವಾಗಲಿ' ಎಂದು ಗಾಯಕ ಶ್ರೀನಿವಾಸ ಉಡುಪ ಹರಸಿದರು.`ಒಂದು ಗಂಟೆ ಸುಗಮ ಸಂಗೀತ ಗಾಯನ ಕಾರ್ಯಕ್ರಮ ನಡೆಸಿಕೊಡುವ ಮೂಲಕ ಅಧೀಶ್‌ನ ಸಾಧನೆ ಲಿಮ್ಕಾ ದಾಖಲೆಯಾಗಲಿದೆ' ಎಂದು ಆದರ್ಶ ಸುಗಮ ಸಂಗೀತ ಅಕಾಡೆಮಿಯ ಅಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ ಹೇಳಿದರು.ಕೊಳದಮಠದ ಶಾಂತವೀರ ಸ್ವಾಮೀಜಿ, ಸುಗಮ ಸಂಗೀತ ಗಾಯಕರಾದ ಶಿವಮೊಗ್ಗ ಸುಬ್ಬಣ್ಣ, ರತ್ನಮಾಲಾ ಪ್ರಕಾಶ್, ಕವಿಗಳಾದ ದೊಡ್ಡರಂಗೇಗೌಡ, ಬಿ.ಆರ್.ಲಕ್ಷ್ಮಣ್‌ರಾವ್, ಸಾಯಿ ಗೋಲ್ಡ್ ಪ್ಯಾಲೇಸ್‌ನ ಶರವಣ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.