ಶುಕ್ರವಾರ, ಮೇ 29, 2020
27 °C

ಪುಸ್ತಕ ಲೋಕದಲ್ಲೊಂದು ಸುತ್ತು...

ಬಲ್ಲೇನಹಳ್ಳಿ ಮಂಜುನಾಥ್ Updated:

ಅಕ್ಷರ ಗಾತ್ರ : | |

ಇದೊಂದು ಪುಸ್ತಕಗಳ ಮಹಲ್, `ಓಹ್ ವಾಟ್ ಎ ಗ್ರೇಟ್' ಎಂಬ ಉದ್ಗಾರವನ್ನು ಸಂದರ್ಶಕರ ಪುಸ್ತಕದಲ್ಲಿ ಓದಿದಾಗ ನಮ್ಮ ಬೆನ್ನನ್ನು ನಾವೇ ತಟ್ಟಿಕೊಂಡಂತಾಗುತ್ತದೆ. ನಮ್ಮ ನಡುವಿನ ಸಾಮಾನ್ಯ ವ್ಯಕ್ತಿಯೊಬ್ಬನ ಅಸಾಮಾನ್ಯವಾದ ಈ ಸಾಧನೆ ನಿಬ್ಬೆರಗಾಗಿಸುತ್ತದೆ. ಇವರೇ ಅಂಕೇಗೌಡರು. 40 ವರ್ಷಗಳಿಂದ ಪುಸ್ತಕ ಸಂಗ್ರಹವನ್ನೇ ಕಾಯಕವಾಗಿಸಿಕೊಂಡಿದ್ದಾರೆ ಇವರು.ಮಂಡ್ಯ ಜಿಲ್ಲೆಯ ಪಾಂಡನಪುರ ರೈಲು ನಿಲ್ದಾಣದಿಂದ ಪಾಂಡವಪುರ - ನಾಗಮಂಗಲಕ್ಕೆ ಹೋಗುವ ರಸ್ತೆಯಲ್ಲಿ 2 ಕಿ.ಮೀ ದೂರದಲ್ಲಿರುವ ಹರಳಹಳ್ಳಿ ಬಳಿ ಇದೆ ಈ `ಪುಸ್ತಕಾಲಯ'.ಸಾಮಾನ್ಯ ಬಡರೈತ ಕುಟುಂಬದಲ್ಲಿ ಜನಿಸಿ, ಕಷ್ಟಪಟ್ಟು ಪದವಿ ಗಳಿಸಿ, ಸಕ್ಕರೆ ಕಾರ್ಖಾನೆಯೊಂದರ ಟೈಮ್‌ಕೀಪರ್ ಆಗಿ ಕಾರ್ಯನಿರ್ವಹಿಸುತ್ತಿದ್ದರೂ ಪುಸ್ತಕ ಪ್ರೀತಿ ಅವರನ್ನು ಬಿಡಲಿಲ್ಲ. `ಎಲ್ಲರ ನೆನಪಿನಲ್ಲಿ ಉಳಿಯಬೇಕಾದರೆ, ಅತ್ಯುತ್ತಮ ಕೃತಿಯೊಂದನ್ನು ಬರೆ, ಇಲ್ಲವೇ ಬರೆದಂತಹ ಪುಸ್ತಕಗಳನ್ನು ಸಂಗ್ರಹಿಸು' ಎಂದಿದ್ದ ಲೇಖಕ ಬೆಂಜಮಿನ್ ಪ್ರಾಂಕ್ಲಿನ್ ಹೇಳಿಕೆಯಿಂದ ವಿದ್ಯಾರ್ಥಿ ದೆಸೆಯಲ್ಲಿಯೇ ಪ್ರಭಾವಿತರಾದವರು ಅಂಕೇಗೌಡರು. 35 ವರ್ಷಗಳಿಂದ ಅವರಲ್ಲಿ ಪುಸ್ತಕ ಸಂಗ್ರಹ ಸಂಖ್ಯೆ ಎರಡು ಲಕ್ಷಕ್ಕೂ ಮಿಕ್ಕಿದೆ, ಅಂದರೆ ಅವರೀಗ ಸುಮಾರು ಎರಡು ಕೋಟಿ ರೂಪಾಯಿ ಮೌಲ್ಯದ ಪುಸ್ತಕಗಳ ಒಡೆಯರು!ಇಲ್ಲಿದೆ ಜ್ಞಾನಾಲಯ

ಈ ಪುಸ್ತಕಾಲಯದಲ್ಲಿ ಜಗತ್ತಿನ ಎಲ್ಲಾ ಭಾಷೆಗಳ ಎಲ್ಲಾ ತರಹದ ಪುಸ್ತಕಗಳಿವೆ. ಕತ್ತಲಕೋಣೆಯಲ್ಲಿ ಬಿದ್ದಿದ್ದ ಈ ಸರಸ್ವತಿ ಭಂಡಾರವನ್ನು ಲೋಕಾರ್ಪಣೆಗೊಳಿಸಿದವರು ಉದ್ಯಮಿ ಹರಿಕೋಡೆಯವರು.ಲಕ್ಷಾಂತರ ಪುಸ್ತಕಗಳ ಸುರಕ್ಷತೆ ಹಾಗೂ ಪ್ರದರ್ಶನದ ಉದ್ದೇಶದಿಂದ ಚಿತ್ರಮಂದಿರವೊಂದನ್ನು ನಿರ್ಮಿಸಿ ಅಪೂರ್ಣವಾಗಿದ್ದ ನಿವೇಶನವನ್ನು ಖರೀದಿಸಿದ ಅವರು ಮುಂದೆ ನಿಂತು ಅದನ್ನು ಪುಸ್ತಕ ಭಂಡಾರದ ಕೇಂದ್ರವಾಗಿ ಪರಿವರ್ತಿಸಿ ಸಾರ್ವಜನಿಕ ಸೇವೆಗೆ ಅರ್ಪಿಸಲು ನೆರವಾದರು. ಇದರಿಂದ 2 ಲಕ್ಷ ಪುಸ್ತಕಗಳು ಇಂದು ವಿಶಾಲ ಕಟ್ಟಡದಲ್ಲಿ ಅಲಂಕರಣಗೊಂಡಿವೆ. ಜ್ಞಾನಾಕಾಂಕ್ಷಿಗಳಿಗೆ ಈಗ ಅದು ಜ್ಞಾನಭಂಡಾರವೇ ಆಗಿದೆ. ಏನಂಟು ಏನಿಲ್ಲ...?

ಇಲ್ಲಿ 1ರೂಪಾಯಿ ಬೆಲೆ ಬಾಳುವ ಹೊತ್ತಿಗೆಯಿಂದ ಹಿಡಿದು 10 ಲಕ್ಷ ಬೆಲೆಬಾಳುವ ಪ್ರಥಮ ಪ್ರಪಂಚ ಮಹಾಯುದ್ಧದ ಅಪೂರ್ವ ಛಾಯಾಚಿತ್ರಗಳನ್ನೊಳಗೊಂಡ ಪುಸ್ತಕ ಇವೆ. ಕತೆ, ಕಾದಂಬರಿ, ಕಾವ್ಯ, ಮಹಾಕಾವ್ಯ, ಜೀವನದರ್ಶನ, ನಿಘಂಟು - ಪ್ರವಾಸಿ ಪುಸ್ತಕ, ವಿದೇಶೀ ಪ್ರವಾಸಿಗರ ಪುಸ್ತಕ, ಮಹಾನ್ ವ್ಯಕ್ತಿಗಳ ಆತ್ಮಚರಿತ್ರೆ, ಜ್ಞಾನಪೀಠ, ಕೇಂದ್ರ ಸಾಹಿತ್ಯ ಅಕಾಡೆಮಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಹೊತ್ತಿಗೆಗಳು ಇಲ್ಲಿ ಲಭ್ಯ.ಸ್ಪರ್ಧಾತ್ಮಕ ಪರೀಕ್ಷೆಯ ಉಪಯುಕ್ತ ಕೃತಿಗಳು, ಸಂಶೋಧನೆಗೆ ಅಗತ್ಯವಾದ ಆಕರ ಕೃತಿಗಳು, ಜಿಲ್ಲೆಯ ಗೆಜೆಟಿಯರ್‌ಗಳು, ಎನ್‌ಸೈಕ್ಲೋಪಿಡಿಯ, ಕನ್ನಡ ವಿಶ್ವಕೋಶ, ಎಪಿಗ್ರಾಫಿಕ್ ಆಫ್ ಕರ್ನಾಟಕ ಆವೃತ್ತಿಗಳು, ಕನ್ನಡ ಭಾಷೆಯ ಆದಿಕವಿ ಪಂಪನಿಂದ ಇತ್ತೀಚಿನ ಮಹಾಕವಿ ಕುವೆಂಪುವರೆಗಿನ ಸಹಸ್ರಾರು ಕನ್ನಡ ಲೇಖಕರ ಕೃತಿಗಳು ಇಲ್ಲಿ ಕಾಣಸಿಗುತ್ತವೆ. ಭಾರತದ ಮಹಾಕಾವ್ಯ ರಾಮಾಯಣ, ಮಹಾಭಾರತಗಳ 10 ಸಾವಿರಕ್ಕೂ ಅಧಿಕ ಕೃತಿಗಳಿವೆ. ಹಾಗೆಯೇ ಭಗವದ್ಗೀತೆ, ಕುರಾನ್, ಬೈಬಲ್, ಜೆಂಡ್‌ಅವೆಸ್ಥಾ, ತ್ರಿಪಠಿಕಾ, ವಚನಸಾಹಿತ್ಯ, ದಾಸಸಾಹಿತ್ಯ, ಭಕ್ತಿಪಂಥಕ್ಕೆ ಸೇರಿದ ಸಾವಿರಾರು ಕೃತಿಗಳಿವೆ. ಇವುಗಳ ಜೊತೆ, ಖ್ಯಾತ ಚಿತ್ರಕಾರರಾದ ರಾಜ ರವಿವರ್ಮ, ಲಿಯೋನಾರ್ಡೋಡಾವಿನ್ಸಿ, ಪಿಕಾಸೋ, ಮೈಕಲ್ ಏಂಜೆಲೋ, ಪಿ. ಬಿ. ಸೆಲ್ಲಿ, ಈಲಿಯಟ್, ಮ್ಯಾಕ್ಸಿಂಗಾರ್ಕಿ ಮುಂತಾದವರ ಪ್ರಸಿದ್ಧ ಪೇಂಟಿಂಗ್ಸ್‌ಗಳಿವೆ. ಮಹಾನ್ ದಾರ್ಶನಿಕರ, ಜೀವನ ದರ್ಶನ ಮಾಡಿಸುವ ನೂರಾರು ಕೃತಿಗಳು ಇಲ್ಲಿವೆ. ಅಲ್ಲದೆ ವಿವಿಧ ರಾಷ್ಟ್ರಗಳ ಭೂಪಟಗಳು, ವಿವಿಧ ದೇಶದ ಕರೆನ್ಸಿಗಳು ಇಲ್ಲಿವೆ. ಇಡೀ ಪುಸ್ತಕಾಲಯವನ್ನು ಸುತ್ತಿಹಾಕಲು ಒಂದು ದಿನವಾದರೂ ಸಾಕಾಗುವುದಿಲ್ಲ.`ನನ್ನ ಓದುವ ಹವ್ಯಾಸ ಪುಸ್ತಕ ಕೊಳ್ಳಲು ನಾಂದಿಯಾಯಿತು. ಇದು ಮುಂದೆ ಪುಸ್ತಕ ಸಂಗ್ರಹಣೆಗೆ ನೆರವಾಯಿತು' ಎನ್ನುವ ಅಂಕೇಗೌಡರು ತಮ್ಮ ಸಂಬಳದ ಶೇ. 70 ಭಾಗವನ್ನು ಈ ಪುಸ್ತಕ ಕೊಳ್ಳಲಿಕ್ಕೆಂದೇ ವಿನಿಯೋಗಿಸಿದ್ದೇನೆ ಎನ್ನುವಾಗ ಅವರ ಕಣ್ಣುಗಳಲ್ಲಿ ಮಿಂಚು ಹೊರಡುತ್ತದೆ.ಅಂಕೇಗೌಡರ ಪುಸ್ತಕ ಪ್ರೀತಿ ಎಂಥದ್ದೆಂದರೆ, ಮೈಸೂರಿನಲ್ಲಿದ್ದ ಲಕ್ಷಾಂತರ ರೂಪಾಯಿ ಬೆಲೆಬಾಳುವ ನಿವೇಶನವನ್ನು ಮಾರಿ ಪುಸ್ತಕಗಳನ್ನು ಖರೀದಿಸಿ ಸಂಗ್ರಹಿಸಿದ್ದು. ಬೆಂಗಳೂರು, ಮೈಸೂರುಗಳಲ್ಲಿ ಪುಸ್ತಕ ಮಾರಾಟಗಾರರು ತಮ್ಮ ಬಳಿಗೆ ಬರುವ ಹಳೆಯ ಪುಸ್ತಕಗಳನ್ನು ಅಂಕೇಗೌಡರಿಗೆ ಮಾರುತ್ತಾರೆ. ಅಷ್ಟೆಲ್ಲ ದೂರ-ದೂರದ ವ್ಯಾಪಾರಸ್ಥರು ಪುಸ್ತಕಗಳನ್ನು ಇವರಿಗೆ ಕಳುಹಿಸಿ ಕೊಡುತ್ತಾರೆ.ಹೀಗಾಗಿ ಇವರ ಪುಸ್ತಕದ ಖಜಾನೆಯಲ್ಲಿ ಪುಸ್ತಕದ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇವರ ಈ ಕಾರ್ಯಕ್ಕೆ ಅವರ ಪತ್ನಿ ವಿಜಯಲಕ್ಷ್ಮೀ ಮತ್ತು ಮಗ ಜೊತೆ-ಜೊತೆಯಾಗಿ ಹೆಜ್ಜೆ ಇಡುತ್ತಿರುವುದರಿಂದ ಅಂಕೇಗೌಡರ ಪುಸ್ತಕ ಸಂಗ್ರಹ ಕಾರ್ಯ ಬೆಳೆಯುತ್ತಾ ಸಾಗಿದೆ.ಏಕವ್ಯಕ್ತಿಯ ಈ ಸಾಧನೆಗೆ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಸ್ಪಂದಿಸಿ, ಅವರ ಉತ್ಸಾಹಕ್ಕೆ ನೆರವಾಗಬೇಕಿದೆ. ಪುಸ್ತಕ ಲೋಕವನ್ನು ನೋಡಿಲ್ಲವೆಂದರೆ ಈಗಲೇ ಒಮ್ಮೆ ಭೇಟಿ ಕೊಟ್ಟು, ನಿಮ್ಮ ಅರಿವಿನ ವಿಸ್ತಾರವನ್ನು ಹೆಚ್ಚಿಸಿಕೊಳ್ಳಿ. 

               

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.