ಶುಕ್ರವಾರ, ಏಪ್ರಿಲ್ 16, 2021
31 °C

ಪುಸ್ತಕ ಸಂಸ್ಕೃತಿ ಬೆಳೆಸುವ ಗ್ರಂಥಾಲಯಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಸ್ತಕೋದ್ಯಮವನ್ನು ಒಂದು ಸಮಾಜದ ಶಿಕ್ಷಣದ ಜೊತೆ ತಳಕು ಹಾಕಿಯೇ ನೋಡಬೇಕಾಗುತ್ತದೆ. ಯಾಕೆಂದರೆ ಶಿಕ್ಷಣದ ಒಟ್ಟು ಸಾಧ್ಯತೆಗಳನ್ನು ನಾವು ನೋಡಬೇಕಾಗಿರುವುದು ಪುಸ್ತಕ ಸಂಸ್ಕೃತಿಯ ಮೂಲಕ, ಈ ದೃಷ್ಟಿಯಿಂದ ಗ್ರಂಥಾಲಯಗಳು ಶಿಕ್ಷಣ ಸಂಸ್ಥೆಗಳಷ್ಟೇ ಮುಖ್ಯವಾದಂಥವು.ಇಂದು ಗ್ರಂಥಾಲಯ ಇಲಾಖೆ ಬೃಹತ್ ಪ್ರಮಾಣದಲ್ಲಿ ಬೆಳೆಯುತ್ತಿದ್ದು ನಿಜವಾದ ಜ್ಞಾನ ಕೇಂದ್ರಗಳಾಗಿ ಆಕಾರ ಪಡೆಯುತ್ತಿದೆ. ಗ್ರಂಥಾಲಯಗಳನ್ನು ತೆರೆಯಲು ನಗರಗಳಲ್ಲಿ ಮಾತ್ರವಲ್ಲ. ಗ್ರಾಮಾಂತರ ಪ್ರದೇಶಗಳಲ್ಲಿಯೂ ಹೆಚ್ಚಿನ ಬೇಡಿಕೆ ಬರುತ್ತಿದೆ. ಇದನ್ನು ಪೂರೈಸಲು ಇಲಾಖೆ ರಚನಾತ್ಮಕ ಯೋಜನೆಗಳನ್ನು ರೂಪಿಸಿಕೊಳ್ಳಲೇಬೇಕಾಗುತ್ತದೆ.ಪ್ರತಿ ದಿವಸ ಗ್ರಂಥಾಲಯಗಳಲ್ಲಿ ಪುಸ್ತಕಗಳನ್ನು ಬಿಟ್ಟು ಲಕ್ಷಾಂತರ ಮಂದಿ ಓದುಗರು ವೃತ್ತಪತ್ರಿಕೆ ಮತ್ತು ನಿಯತಕಾಲಿಕೆಗಳ ಉಪಯೋಗವನ್ನು ಪಡೆಯುತ್ತಿದ್ದಾರೆ. ಅಷ್ಟರಮಟ್ಟಿಗೆ ಓದುವ ಸಂಸ್ಕೃತಿಯು ಜೀವಂತಿಕೆಯನ್ನು ಪಡೆದಿದೆ ಎಂದು ಭಾವಿಸಬೇಕು. ಇದನ್ನೆಲ್ಲಾ ನಾನಾ ರೀತಿಯ ಏರುಪೇರುಗಳ ನಡುವೆ ಪೂರೈಸುತ್ತಿರುವುದು ಗ್ರಂಥಾಲಯಗಳು. ಹಾಗೆ ನೋಡಿದರೆ ನಮ್ಮ ಕಾಲೇಜು ಗ್ರಂಥಾಲಯಗಳು ಬಹು ಮಟ್ಟಿಗೆ ಜೀವಂತವಾಗೇನೂ ಇಲ್ಲ. ಅಲ್ಲಿಯ ವಿದ್ಯಾರ್ಥಿಗಳು ಸ್ವಾಭಾವಿಕವಾಗಿಯೇ ಸಾರ್ವಜನಿಕ ಗ್ರಂಥಾಲಯಗಳ ಉಪಯೋಗವನ್ನು ಪಡೆಯುತ್ತಿದ್ದಾರೆ.ಮತ್ತು ಉಪಯೋಗದ ವಿವಿಧ ಬೇಡಿಕೆಗಳನ್ನು ಮುಂದಿಡುತ್ತಿದ್ದಾರೆ. ಇದು ನಿಜವಾಗಿಯೂ ಆರೋಗ್ಯಕರ ಲಕ್ಷಣ. ಕಳೆದ ಮೂರು ನಾಲ್ಕು ದಶಕಗಳಿಂದ ಸಾರ್ವಜನಿಕ ಗ್ರಂಥಾಲಯಗಳನ್ನು ತುಂಬ ಹತ್ತಿರದಿಂದ ನೋಡುತ್ತಿರುವುದರಿಂದ ಈ ಅಭಿಪ್ರಾಯವನ್ನು ಇಲ್ಲಿ ದಾಖಲಿಸುತ್ತಿರುವೆ.ಸೃಜನಶೀಲತೆಯ ವಿವಿಧ ಆಯಾಮಗಳನ್ನು ಜೀರ್ಣಿಸಿಕೊಂಡು ಪುಸ್ತಕೋದ್ಯಮ ಸ್ಪರ್ಧಾತ್ಮಕ ಸ್ವರೂಪವನ್ನು ಪಡೆಯುತ್ತಿದೆ. ಆಕಾರ ಮತ್ತು ವಿಚಾರದಲ್ಲಿಯೂ ಕೆಲವು ಮೂಲಭೂತ ಗುಣಗಳಿಗೆ ಮುಖಾಮುಖಿಯಾಗುತ್ತಿದೆ. ಇಲ್ಲಿ ಸಾಹಿತ್ಯ, ಸಂಗೀತ, ಕಲೆ, ವಿಜ್ಞಾನ, ರಾಜಕೀಯ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದಂತೆ ಎಂಥ ಅಮೂಲ್ಯ ಕೃತಿಗಳು ಬರುತ್ತಿವೆ.ಇದರ ಮಧ್ಯೆ ಸಣ್ಣ ಪ್ರಮಾಣದಲ್ಲಿ ಕಳಪೆ ಪುಸ್ತಕಗಳು ಬರುತ್ತಿರಬಹುದು. ಅದು ಸ್ವಾಭಾವಿಕವೂ ಕೂಡ. ಒಂದು ಬೆಳೆಯುತ್ತಿರುವ ದೊಡ್ಡ ಸಮಾಜದಲ್ಲಿ ಇವುಗಳನ್ನೆಲ್ಲ ಒಪ್ಪಿಕೊಂಡೇ ಮುಂದೆ ಸಾಗಬೇಕಾಗುತ್ತದೆ. ಇದನ್ನು ಒಪ್ಪಿಕೊಂಡು ಒಟ್ಟು ಬೆಳೆಯುತ್ತಿರುವ ವಾತಾವರಣವನ್ನು ಗಮನಿಸದಿದ್ದರೆ ನಾವು ಸಿನಿಕರಾಗಿಬಿಡುತ್ತೇವೆ.ಎಲ್ಲದರ ಬಗ್ಗೆಯೂ ಗುಮಾನಿಪಡುತ್ತ ಹೋದರೆ ಕೊನೆಯೇ ಇರುವುದಿಲ್ಲ. ಬದಲಾವಣೆಯ ನಿಯಮಬದ್ಧ ಕ್ರಮಗಳು ಸಾಪೇಕ್ಷತೆಯನ್ನು ಪಡೆಯುವುದಿಲ್ಲ. ಬೆಳೆಸುವಲ್ಲಿ ನಮ್ಮ ಪ್ರತಿಕ್ರಿಯೆಗಳು ಅರ್ಥಪೂರ್ಣವಾಗಿರಬೇಕು. ನಿಧಾನವಾಗಿ ಭ್ರಷ್ಟಾಚಾರವನ್ನು ಕುಗ್ಗಿಸುತ್ತ ಪ್ರಾಮಾಣಿಕ ಅಧಿಕಾರಿಗಳಿಗೆ ಜೀವ ತುಂಬುವಂತಿರಬೇಕು.ಇಂದು ಗ್ರಂಥಾಲಯ ಇಲಾಖೆ ಪುಸ್ತಕ ಸಂಸ್ಕೃತಿಯ ದೃಷ್ಟಿಯಿಂದ ಒಂದು ಚಳವಳಿಯಾಗಿಯೇ ಬೆಳೆಯುತ್ತಿದೆ. ರಂಗನಾಥನ್ ಮತ್ತು ಎನ್.ಡಿ. ಬಗರಿಯಂಥ ಮಹನೀಯರಿಂದ ಉತ್ತಮ ನೆಲೆಯನ್ನು ಕಂಡುಕೊಂಡಿರುವಂಥದ್ದು. ಪ್ರತಿಯೊಂದು ಸಮಾಜವೂ ಕೊನೆಗೂ ಆರೋಗ್ಯಪೂರ್ಣವಾಗಿ ಉಳಿಯುವಂಥದ್ದು ಓದಿನ ಅಭಿರುಚಿಯ ಮೂಲಕ.ಇದು ಎಲ್ಲರಿಗೂ ಗೊತ್ತಿರುವ ವಿಷಯವಾದರೂ ನಾವು ಮತ್ತೆ ಮತ್ತೆ ಸಾರ್ವಜನಿಕ ಹಿತಾಸಕ್ತಿಯ ಕಾರಣಗಳಿಗಾಗಿ ಹೇಳುತ್ತಲೇ ಹೊರಬೇಕಾಗುತ್ತದೆ. ಇದನ್ನು ಅರಿತು ಪ್ರಜ್ಞಾವಂತ ಸಮುದಾಯ ಭಾಗವಹಿಸುವುದೂ ಮುಖ್ಯ. ಇಲ್ಲಿ ಉದ್ಯೋಗದ ಸಾಧ್ಯತೆಗಳ ಜೊತೆಗೆ, ಪುಸ್ತಕೋದ್ಯಮ ವಿವಿಧ ಆಯಾಮಗಳನ್ನು ಕಂಡುಕೊಳ್ಳುತ್ತಿದೆ.ಇಂದು ಎಷ್ಟೊಂದು ರೀತಿಯ ಹೊಸ ಹೊಸ ಲೇಖಕರು ಸೃಷ್ಟಿಯಾಗುತ್ತಿದ್ದಾರೆ; ಇವರೆಲ್ಲ ನಾನಾ ರೀತಿಯ ಜನಸಮುದಾಯಗಳಿಂದ ಬರುತ್ತಿರುವಂಥವರು. ಹೊಸ ಅನುಭವ ಲೋಕಕ್ಕೆ ತಮ್ಮನ್ನು ತೆರೆದುಕೊಳ್ಳುವಂಥವರು. ಇದು ಎಲ್ಲ ಭಾರತೀಯ ಭಾಷೆಗಳಲ್ಲಿ ಎದ್ದು ಕಾಣುತ್ತಿರುವಂಥದ್ದು. ಹಾಗೆಯೇ ತೃತೀಯ ಜಗತ್ತಿನ ಜನಸಮುದಾಯದ ವೈವಿಧ್ಯಮಯವಾದ ಅನುಭವ ನಮಗೆ ಸಿಗುತ್ತಿದೆ. ಹಿಂದೆ ಇದು ಸಾಧ್ಯವಿರಲಿಲ್ಲ. ಇಲ್ಲಿ ಸೃಜನಶೀಲ ಅನುವಾದ ಪ್ರಕ್ರಿಯೆಯೂ ಕ್ರಿಯಾಶೀಲವಾಗಿದೆ.ಇಲ್ಲಿ ಲೇಖಕ, ಪ್ರಕಾಶಕ, ಓದುಗ ಮತ್ತು ಗ್ರಂಥಾಲಯ ಇಲಾಖೆಯ ಮಧ್ಯೆ ಆರೋಗ್ಯಪೂರ್ಣ ಒಡಂಬಡಿಕೆ ಯಾವಾಗಲೂ ಇರಬೇಕಾಗುತ್ತದೆ. ಆಗ ಮಾತ್ರ ಹೆಚ್ಚು ಪ್ರಮಾಣದ ಪುಸ್ತಕಗಳು ಜನಸಮುದಾಯದ ನಡುವೆ ಕಾಣಿಸಿಕೊಳ್ಳಲು ಸಾಧ್ಯ. ಇದರಿಂದ ಒಟ್ಟು ಸಂಸ್ಕೃತಿಯ ಜೊತೆಗೆ ಅನನ್ಯತೆ ಬೆಳೆಯುತ್ತ ಹೋಗುತ್ತದೆ.ಒಂದು ಕಾಲದಲ್ಲಿ ಲೇಖಕನೊಬ್ಬ ಇನ್ನೂರೈವತ್ತು ಅಥವಾ ಐನೂರು ಪುಸ್ತಕಗಳನ್ನು ಮುದ್ರಿಸಿ; ಅವುಗಳನ್ನು ವಿತರಣೆ ಮಾಡಲು ಎಷ್ಟು ಒದ್ದಾಡುತ್ತಿದ್ದ. ಇದೆಲ್ಲವನ್ನು ನೋಡಿ, ನಿರಂತರ ಹೋರಾಟದಿಂದ ಸಗಟು ಖರೀದಿ ಎಂಬ ಪ್ರಕ್ರಿಯೆ ಜಾರಿಗೆ ಬರಲು ಸಾಧ್ಯವಾಯಿತು. ಒಂದು ಸಾವಿರ ಪ್ರತಿಗಳಾದರೂ ವಿವಿಧ ರೂಪದಲ್ಲಿ ಓದುಗರ ಮುಂದೆ ಹೋಗಲು ಅವಕಾಶ ಸಿಕ್ಕಿತು.ನಾನಾ ರೀತಿಯ ಪ್ರಕಾಶಕರು ಬೆಳಕು ಕಾಣುವಂತಾಯಿತು. ಪುಸ್ತಕೋದ್ಯಮಕ್ಕೆ ಒಂದು ವೃತ್ತಿಪರ ಆಕಾರ ಬರತೊಡಗಿತು. ಇದು ನಿಜವಾಗಿಯೂ ಸ್ಮರಣೀಯವಾದದ್ದು. ಇದರಿಂದ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಗ್ರಂಥಾಲಯ ಚಳವಳಿಗೆ ಬೆಂಬಲ ಸಿಗುತ್ತ ಹೋಗುತ್ತದೆ.

ಯಾವ್ಯಾವುದೋ ಕಾರಣಗಳಿಗಾಗಿ ಒಂದಷ್ಟು ವರ್ಷ ಸಗಟು ಖರೀದಿಯನ್ನೇ ನಿಲ್ಲಿಸಬೇಕು ಎಂದು ಕೂಗುವುದು ತಪ್ಪಾಗುತ್ತದೆ. ಸಗಟು ಖರೀದಿಯ ಕಾರಣಕ್ಕಾಗಿಯೇ ಹೆಚ್ಚು ಪುಸ್ತಕಗಳು ಮುದ್ರಣವಾಗುತ್ತಿವೆ ಎಂಬುದನ್ನು ಒಪ್ಪಿಕೊಂಡು ಈ ವ್ಯವಸ್ಥೆಯನ್ನು ಮತ್ತಷ್ಟು ಜೀವಂತವಾಗಿಡಬೇಕಾಗುತ್ತದೆ.ಕರ್ನಾಟಕದಲ್ಲಿ ನಗರ ಕೇಂದ್ರಿತ ಗ್ರಂಥಾಲಯಗಳನ್ನು ಬಿಟ್ಟು; ಗ್ರಾಮಪಂಚಾಯಿತಿ ಗ್ರಂಥಾಲಯಗಳೇ ಐದು ಸಾವಿರಕ್ಕೂ ಮೇಲ್ಪಟ್ಟಿವೆ. ಇವು ಮುಂದಿನ ದಿನಗಳಲ್ಲಿ ದ್ವಿಗುಣಗೊಳ್ಳುವ ಯೋಜನೆಗಳು ರೂಪುಗೊಳ್ಳುತ್ತಿವೆ.

 

ಇದು ಸಾಂಸ್ಕೃತಿಕವಾಗಿ ಹೆಚ್ಚುಗಾರಿಕೆಯ ವಿಷಯ. ಹಾಗೆಯೇ ಇಂಥ ಗ್ರಾಮಾಂತರ ಪ್ರದೇಶದ ಗ್ರಂಥಾಲಯಗಳಿಗೆ; ಕೊನೆಯ ಪಕ್ಷ ನಮ್ಮ ಉತ್ತಮ ಲೇಖಕರ ಒಂದೊಂದು ಪ್ರತಿ ತಲುಪಿದರೂ ಎಷ್ಟು ಚೆನ್ನಾಗಿರುತ್ತದೆ. ಮೂಲಭೂತವಾಗಿ ತಲುಪಲೇಬೇಕು. ಅಂಥ ವ್ಯವಸ್ಥೆಗೆ ಕೈಜೋಡಿಸಬೇಕು.ಇತ್ತೀಚೆಗೆ ಪುಸ್ತಕಗಳ ಆಯ್ಕೆಯ ಸಂದರ್ಭದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿಗಳಾದ ಅಗ್ರಹಾರ ಕೃಷ್ಣಮೂರ್ತಿಯವರು ಕೆಲವು ಅಮೂಲ್ಯ ಸಲಹೆಗಳನ್ನು ನೀಡುವುದರ ಜೊತೆಗೆ; ಪಶ್ಚಿಮ ಬಂಗಾಳ, ತಮಿಳುನಾಡು ಮುಂತಾದ ರಾಜ್ಯಗಳಲ್ಲಿ ಸರ್ಕಾರ ಸಗಟು ಖರೀದಿಯ ನೆಪದಲ್ಲಿ ಎರಡು ಮೂರು ಸಾವಿರ ಪ್ರತಿಗಳನ್ನು ಖರೀದಿಸುವ ವಿಷಯವನ್ನು ತಿಳಿಸಿದರು. ಇದನ್ನು ಹಿನ್ನೆಲೆಯಾಗಿಟ್ಟು ಆಯ್ಕೆ ಸಮಿತಿಯ ಅಧ್ಯಕ್ಷರು ಮತ್ತು ಸಮಿತಿಯ ಸದಸ್ಯರೆಲ್ಲ ಸೇರಿ, ನಿರ್ದೇಶಕರ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲು ಯೋಚಿಸಿತು.ಹಾಗೆಯೇ ಆಯ್ಕೆಯಲ್ಲಿ ಆಗುವ ದೋಷಗಳನ್ನು ಸರಿಪಡಿಸಲು ವರ್ಷದಲ್ಲಿ ಆಯಾ ವರ್ಷದ ಕೃತಿಗಳನ್ನು ನಾಲ್ಕು ಕಂತುಗಳಲ್ಲಿ ಆಯ್ಕೆ ಮಾಡಲು ನಿರ್ದೇಶಕರು ಯೋಜನೆಯನ್ನು ರೂಪಿಸುತ್ತಿದ್ದಾರೆ. ಇದರಿಂದ ಕೃತಿಗಳು ಮತ್ತಷ್ಟು ಚೆನ್ನಾಗಿ ಬರುವುದರ ಜೊತೆಗೆ ಮುದ್ರಣ ದೋಷಗಳು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲು ಸಾಧ್ಯ. ಮತ್ತು ಇಲಾಖೆಯ  ಮೇಲೆಯೂ ಒತ್ತಡ ಕಡಿಮೆಯಾಗಿ ಹೆಚ್ಚು ಆರಾಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಆಯ್ಕೆ ಮಾಡುವಾಗ ಸರಿಯಾಗಿ ಕೃತಿಗಳನ್ನು ನೋಡಲಾಗುವುದಿಲ್ಲ ಎಂಬ ಆರೋಪವನ್ನು ಗಮನಿಸಿದಂತಾಗುತ್ತದೆ.ಹಿಂದೆ ಆಯ್ಕೆಯಾದ ಪುಸ್ತಕಗಳನ್ನು ಪ್ರಕಾಶಕರು ಅಥವಾ ಲೇಖಕರು ಎಲ್ಲಾ ಕಡೆ ಸುತ್ತಾಡಿ ಪುಸ್ತಕಗಳನ್ನು ಸರಬರಾಜು ಮಾಡಿ ಚೆಕ್ ಪಡೆಯಬೇಕಾಗಿತ್ತು. ಈಗ ಆ ವ್ಯವಸ್ಥೆಯನ್ನು ತಪ್ಪಿಸಿ ಒಂದೇ ಕಡೆ ಸರಬರಾಜು ಮಾಡಿ ಚೆಕ್ ಪಡೆಯುವ ವ್ಯವಸ್ಥೆ ಅತ್ಯಂತ ರಚನಾತ್ಮಕವಾದದ್ದು. ಇದರಲ್ಲೂ ಇದ್ದ ಕೆಲವು ಭ್ರಷ್ಟ ಕೃತ್ಯಗಳನ್ನು ತಪ್ಪಿಸಿ ಬಾರ್‌ಕೋಡ್ ವ್ಯವಸ್ಥೆ ಮಾಡಿರುವುದು ನಿಜವಾಗಿಯೂ ಶ್ಲಾಘನೀಯವಾದದ್ದು.ಇದರಿಂದ ಯಾರ‌್ಯಾರು ಎಷ್ಟೆಷ್ಟು ಪುಸ್ತಕಗಳನ್ನು ಸರಬರಾಜು ಮಾಡಿದ್ದಾರೆ ಎನ್ನುವುದರ ಜೊತೆಗೆ; ರಾಜ್ಯದ ಎಲ್ಲ ಕಡೆ ಹೇಗೆ ತಲುಪಿದೆ ಎಂಬುದು ನಿಖರವಾಗಿ ತಿಳಿಯಲು ಅನುಕೂಲವಾಗಿದೆ. ಇದರಿಂದ ಅಡ್ಡದಾರಿಗಳಿಗೆ ಅವಕಾಶವಿಲ್ಲದಂತಾಗಿದೆ.ಮತ್ತೊಂದು ಚಾರಿತ್ರಿಕವಾಗಿ ನೆನಪಿಡಬಹುದಾದ ವಿಷಯವೆಂದರೆ, ಒಟ್ಟು ಕರ್ನಾಟಕದ ಉದ್ದಗಲಕ್ಕೂ ಎಲ್ಲ ಗ್ರಂಥಾಲಯದ ಕಟ್ಟಡಗಳು ವಾಸ್ತುಶಿಲ್ಪದ ದೃಷ್ಟಿಯಿಂದ, ಬೆಂಗಳೂರಿನ ಕಬ್ಬನ್‌ಪಾರ್ಕಿನಲ್ಲಿರುವ ಶೇಷಾದ್ರಿ ಅಯ್ಯರ್ ಸ್ಮಾರಕ ಭವನದಂತಿರಬೇಕು ಎಂಬುದು. ಕೇವಲ ಎರ‌್ರಾಬಿರ‌್ರಿಯಾಗಿ ಬೆಂಕಿಪೊಟ್ಟಣದ ರೀತಿಯಲ್ಲಿ ಯಾವ ಕಟ್ಟಡವೂ ಇರಬಾರದು ಎಂದು ಗ್ರಂಥಾಲಯದ ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡದ್ದು.ಇದಕ್ಕೆ ಗ್ರಂಥಾಲಯ ಸಚಿವರು ಮತ್ತು ಸದಸ್ಯರು ಒಮ್ಮತದಿಂದ ಒಪ್ಪಿಗೆ ಸೂಚಿಸಿದರು. ಕೊನೆಗೂ ನಮ್ಮ ಗ್ರಂಥಾಲಯ ಚಳವಳಿಯನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದ ಜೊತೆಗೆ ಸಮೀಕರಿಸಿದಾಗ; ನಿಜವಾದ ಓದಿನ ಸಂಸ್ಕೃತಿಯು ಜೀವಂತಿಕೆಯನ್ನು ಪಡೆಯುತ್ತದೆ.ಅದಕ್ಕೆ ಎಂಥ ಕ್ರಿಯಾ ಯೋಜನೆಗಳು ಬಂದರೂ ಸ್ವಾಗತಿಸಬೇಕು. ಇದರ ಜೊತೆಗೆ ಗ್ರಂಥಾಲಯ ಇಲಾಖೆಯ ಜೊತೆಗೆ ವಿಶ್ವವಿದ್ಯಾಲಯಗಳ ಹಾಗೂ ಶಾಲಾ ಕಾಲೇಜುಗಳ ಗ್ರಂಥಾಲಯಗಳ ಜೊತೆಗೆ ಸಮನ್ವಯ ರೂಪುಗೊಳ್ಳಬೇಕು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.