ಭಾನುವಾರ, ಜನವರಿ 26, 2020
25 °C
ಯದುವಂಶ ಸಾಲುದೀಪ

ಪೂರ್ಣಯ್ಯ ನಾಲೆಯಿಂದ 100 ವರ್ಷ ಯಾತನೆ

ಈಚನೂರು ಕುಮಾರ್‌ Updated:

ಅಕ್ಷರ ಗಾತ್ರ : | |

ಮುಮ್ಮಡಿಯವರು 31 ವರ್ಷ ಕಾಲ ರಾಜಮಹಾರಾಜರಾಗಿಯೇ ರಾಜ್ಯದ ಆಡಳಿತವನ್ನು ಸ್ವಯಂ ಮುನ್ನಡೆಸಿದರು. ಇವರ ಸುತ್ತಮುತ್ತಲಿದ್ದ ಕೆಲವು ಅಧಿಕಾರಿಗಳು ಆರ್ಥಿಕ ಶಿಸ್ತು ಕಾಯ್ದುಕೊಳ್ಳಲಿಲ್ಲ. ಹೀಗಾಗಿ ಆರ್ಥಿಕ ತುರ್ತು ಪರಿಸ್ಥಿತಿ ಉಂಟಾದುದರಿಂದ ರಾಜಪ್ರತಿನಿಧಿಯನ್ನು ನೇಮಿಸಿ ಕಮಿಷನರ್ ಆಳ್ವಿಕೆ ಜಾರಿಗೊಳಿಸಲಾಯಿತು.ಮುಮ್ಮಡಿ ಬಾಲಕರಾಗಿದ್ದಾಗ ದಿವಾನ್‌ರಾಗಿ ಪೂರ್ಣಯ್ಯ ರಾಜ್ಯವನ್ನು ಚೆನ್ನಾಗಿಯೇ ನೋಡಿಕೊಂಡರು. ರೈತರಿಗೆ ಯಾವುದೇ ತೊಂದರೆಗಳನ್ನು ಕೊಡಲಿಲ್ಲ. ಇದೇ ಅವಧಿಯಲ್ಲಿ ಹಿಂದಿನ ಅರಮನೆ ಜೀರ್ಣವಾಗಿದ್ದುದರಿಂದ ಹೊಸ ಮರದ ಅರಮನೆಯನ್ನು ಕಟ್ಟಿಸಿದರು.ಮೈಸೂರು ಪಟ್ಟಣಕ್ಕೆ ಕಾವೇರಿ ನೀರು ತರಬೇಕೆಂದು ಪೂರ್ಣಯ್ಯನವರು ಭಾರಿ ವೆಚ್ಚದಲ್ಲಿ ಈಸ್ಟ್‌ ಇಂಡಿಯಾ ಕಂಪೆನಿ ಅನುಮತಿ ಪಡೆದು ನಾಲೆಯೊಂದನ್ನು ತಂದರು. ಅದು ಈಗಿನ ಸಯ್ಯಾಜಿರಾವ್‌ ರಸ್ತೆ ಮಾರ್ಗವಾಗಿ ಜಯರಾಮ–ಬಲರಾಮದ ದ್ವಾರದ ಬಳಿಗೆ ನಾಲೆ ಬಂದು ನಿಂತು ಭಾರಿ ಬಂಡೆಯೊಂದು ಸಿಕ್ಕಿದುದರಿಂದ ಕಾಮಗಾರಿ ಸ್ಥಗಿತಗೊಳಿಸಲಾಯಿತು.ಪೂರ್ಣಯ್ಯ ನಾಲೆ ನಿರ್ಮಾಣವಾಗುವವರೆಗೆ ಸುಮಾರು 10 ವರ್ಷ ಕಾಲ ತೊಂದರೆ ಅನುಭವಿಸಿದರು. ಹೇಗೋ ಹರಿದು ಬಂದ ನೀರನ್ನು ಸುಮಾರು 50 ವರ್ಷ ಕಾಲ ಮೈಸೂರಿಗರು ಬಳಸಿರಬಹುದು. ನಂತರ ಈ ಭಾರಿ ನಾಲೆಯನ್ನು ಮುಚ್ಚಲೇಬೇಕೆಂದು ತೀರ್ಮಾನಕ್ಕೆ ಬಂದುದರಿಂದ ಸುಮಾರು 100 ವರ್ಷ ಕಾಲ ಜನರು ನಾಲೆಯ ದುರ್ನಾತ –ದುಸ್ಥಿತಿಯಿಂದ ಯಾತನೆ ಅನುಭವಿಸಿದ್ದಾರೆ.ಮಾರ್ಗೋಪಾಯ ಕಂಡುಕೊಳ್ಳಲಿದ್ದ ಪೂರ್ಣಯ್ಯನವರು 1812ರಲ್ಲಿ ನಿಧನ ಹೊಂದಿದರು. ಅತ್ತ ಯುವರಾಜರ ಅಂದರೆ ಚಾಮರಾಜೇಂದ್ರ ಒಡೆಯರ್‌ ವಿದ್ಯಾಭ್ಯಾಸ ಇಂಗ್ಲಿಷರಿಂದಲೇ ಚೆನ್ನಾಗಿ ಆಯಿತು. ಆಗಿನ್ನೂ ಬ್ರಿಟಿಷ್ ಕಮಿಷನರ್‌ಗಳು ಆಳ್ವಿಕೆ ನಡೆಸಿದರು.ಮಹಾರಾಜ 3ನೇ ಕೃಷ್ಣರಾಜ ಒಡೆಯರ್‌ ಮೈಸೂರನ್ನು ರಾಜಧಾನಿಯನ್ನಾಗಿ ಮಾಡಿಕೊಂಡ ಮೇಲೆ ಪೂರ್ಣಯ್ಯನವರು ‘ಆಡಳಿತ ರತ್ನ’ವಾಗಿಯೇ ಸಿಕ್ಕಿದರು. ಅದೇ ರೀತಿ ಕಮಿಷನರ್ ಆಳ್ವಿಕೆ ಅಂತ್ಯಗೊಂಡಾಗ ದಿವಾನರಾಗಿ ಸಿ. ರಂಗಾಚಾರ್ಲು ಬಂದರು. ಇವರಾದರೋ ಅರಮನೆಯಲ್ಲಿ ಹಣಕಾಸು ಶಿಸ್ತು ತಂದರು. ನಿಜವಾದ ಸಾಲವನ್ನು ತೀರಿಸಿದರು. ಪ್ರಜಾಪ್ರತಿನಿಧಿಗಳ ವ್ಯವಸ್ಥೆಯನ್ನು ಚಾಮರಾಜರೊಂದಿಗೆ ಸಮಾಲೋಚಿಸಿ ಅಸ್ತಿತ್ವಕ್ಕೆ ತಂದರು.ಮುಂದಿನ ರಾಜಮಹಾರಾಜರು–ದಿವಾನರುಗಳು ಇಂಗ್ಲಿಷರೊಂದಿಗೆ ವಿಧೇಯರಾಗಿ ನಡೆಯಲು ಹಿಂದಿನ ಶ್ರೀರಂಗಪಟ್ಟಣ ಮತ್ತು ಮೈಸೂರಿನ ಕರಾರು ಕಾರಣ. ಈ ಕರಾರಿಗೆ ಮೈಸೂರಿನ ರಾಜರು ಸ್ವಾತಂತ್ರ್ಯ ಬರುವವರೆಗೂ ವಂಚನೆ ಮಾಡಲೇ ಇಲ್ಲ. ಇದು ಕೊಟ್ಟ ಮಾತು, ಹಿಂದೆ ಇಡದ ಹೆಜ್ಜೆ. ಸರ್‌ ಮಾರ್ಕ್ ಕಬ್ಬನ್, ಲೆವಿನ್‌ ಬೌರಿಂಗ್, ರಿಚರ್ಡ್ ಮೀಡೆ, ದಿವಾನ್‌ರಾದ ರಂಗಾಚಾರ್ಲು, ಕೆ. ಶೇಷಾದಿ ಅಯ್ಯರ್, ಪಿ.ಎನ್‌. ಕೃಷ್ಣಮೂರ್ತಿ, ವಿ.ಪಿ. ಮಾಧವರಾವ್‌, ಟಿ. ಆನಂದರಾವ್‌, ಸರ್‌ ಎಂ. ವಿಶ್ವೇಶ್ವರಯ್ಯ, ಸರ್ದಾರ್ ಎಂ. ಕಾಂತರಾಜ ಅರಸ್‌, ಆಲ್ಬಿಯನ್‌ ಬ್ಯಾನರ್ಜಿ, ಸರ್‌ ಮಿರ್ಜಾ ಇಸ್ಮಾಯಿಲ್, ನ್ಯಾಪತಿ ಮಾಧವರಾವ್, ಆರ್ಕಾಟ್‌ ರಾಮಸ್ವಾಮಿ ಮುದಲಿಯಾರ್ ಅವರಂತಹ ಒಳ್ಳೆಯ ‘ಆಡಳಿತ ರತ್ನ’ಗಳು ದೊರಕಿ ಮಹಾರಾಜರಿಗೆ ಗೌರವ ತಂದುಕೊಟ್ಟರು. ನಾಡನ್ನು ಸುಧಾರಿಸಿದರು. ಆಧುನಿಗೊಳಿಸಿದರು.ದತ್ತುಪುತ್ರರಾದ ಚಾಮರಾಜೇಂದ್ರರು ಗುರು–ಹಿರಿಯರನ್ನು ಗೌರವಿಸಿದರು. ಭೀಕರ ಬರಗಾಲದಲ್ಲಿ ಕೂಲಿಗಾರಿ ಕಾಳು ಯೋಜನೆ ಜಾರಿಗೆ ತಂದು ಮೈಸೂರು–ಬೆಂಗಳೂರು ರೈಲು ಮಾರ್ಗ ಸ್ಥಾಪಿಸಿದರು. ಮಹಿಳೆಯರಿಗೆ ಶಿಕ್ಷಣ ಕಲ್ಪಿಸಿದರು. ಪ್ರಜಾಪ್ರಭುತ್ವದ ಬೀಜ ನೆಟ್ಟರು. ಆಗ ತಾನೆ ಉದಯಿಸಿದ ಭಾರತ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷಕ್ಕೆ ಒಂದು ಸಾವಿರ ರೂಪಾಯಿ ದೇಣಿಗೆ ನೀಡಿದರು. ಅರಮನೆಯಲ್ಲಿ ಭೈರವಿ ಕೆಂಪೇಗೌಡರ ಸಂಗೀತ ಕಛೇರಿ ನಡೆಸಿದರು. ಅದೇ ಸಮಯದಲ್ಲಿ ಸ್ವಾಮಿ ವಿವೇಕಾನಂದರನ್ನು ಬರಮಾಡಿಕೊಂಡರು. ಸ್ವಾಮೀಜಿಯವರಿಗೂ ಸಂಗೀತ ಆಲಿಸಿದ್ದುದು ವಿಶೇಷ.ರಾಜ ಚಾಮರಾಜೇಂದ್ರ ಒಡೆಯರ್‌ ಕೊಲ್ಕತ್ತಾಕ್ಕೆ ಹೋಗಿದ್ದಾಗ ಅಲ್ಲಿಯೇ ನಿಧನ ಹೊಂದಿದರು. ಅಲ್ಲಿಯೇ ರಾಜರ ಸಮಾಧಿಯನ್ನು ವಿಶೇಷವಾಗಿ ನಿರ್ಮಿಸಲಾಯಿತು. ಅದಕ್ಕೆಲ್ಲ ಅರಮೆನೆಯೂ ಹೆಚ್ಚಾಗಿ ವೆಚ್ಚ ಮಾಡಿದೆ. ಮುಂದೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಬಂದರು. ರಾಜ್ಯದ ಮಾದರಿ ಸಂಸ್ಥಾನಕ್ಕೆ ಆಧುನಿಕ–ವಿಶಾಲ, ಬೃಹನ್ ಮೈಸೂರಿಗೆ ಹೆಬ್ಬಾಗಿಲು ತೆರೆದರು. ಕೈಗಾರಿಕೆ, ನೀರಾವರಿ, ಶಿಕ್ಷಣ, ಆರೋಗ್ಯ, ಆಡಳಿತಕ್ಕೆ ಸಾಕಷ್ಟು ಕೊಡುಗೆ ನೀಡಿದರು.ಸಾರ್ವಜನಿಕ ಕಾರ್ಯಕ್ರಮಗಳಿಗೆ ಇವರು ಹಣ ಕೊಟ್ಟಿರುವುದು ಒಂದು ದಾಖಲೆ. ಮೊದಲನೇ ಮಹಾಯುದ್ಧಕ್ಕೆ ಸಹಾಯ ಮಾಡಿದ ಸಂಸ್ಥಾನದ ರಾಜರುಗಳಲ್ಲೇ ಮೊದಲಿಗರು. ಜಗತ್‌ಪ್ರಸಿದ್ಧರೂ ಆದರು. ಮೈಸೂರಿಗೆ ಹೆಸರು ತಂದುಕೊಟ್ಟರು.ನಾಲ್ಕನೇ ಕೃಷ್ಣರಾಜ ಒಡೆಯರ್‌ ವಿಶ್ವದ ಪತ್ರಿಕೆಗಳಲ್ಲಿ ಮೈಸೂರು ಅಭಿವೃದ್ಧಿ, ಅರಮನೆ ವಿಷಯಗಳು ಪ್ರಕಟವಾಗಿದ್ದುದನ್ನು ವ್ಯವಸ್ಥಿತವಾಗಿ 40 ವರ್ಷ ಜೋಡಿಸಿದ್ದು ಅಧ್ಯಯನ ಮಾಡಿದ ಇಂಟರ್‌ನ್ಯಾಷನಲ್ ನ್ಯೂಸ್‌ ಪೇಪರ್‌ ಕಟಿಂಗ್ಸ್ ಅಸೋಸಿಯೇಶನ್ ಚೇರ್ಮನ್‌ರೂ ಆಗಿದ್ದರು. ಇದು ಅವರ ಅಧ್ಯಯನ ಬಲದ ಮೇಲೆ ರಾಜ್ಯದ ಅಭಿವೃದ್ಧಿಯನ್ನು ಸಾಧನೆ ಮಾಡಿದ ವಿಶೇಷ ಕಾರ್ಯ.

ಪ್ರತಿಕ್ರಿಯಿಸಿ (+)