ಶುಕ್ರವಾರ, ಮಾರ್ಚ್ 5, 2021
28 °C
ಸಚಿವ ವಿ.ಕೆ. ಸಿಂಗ್ ವಿರುದ್ಧ ಸೇನಾ ಮುಖ್ಯಸ್ಥ ದಲ್ಬೀರ್‌ ಸಿಂಗ್‌ ಆರೋಪ

ಪೂರ್ವಗ್ರಹದಿಂದ ಬಡ್ತಿ ತಡೆಗೆ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೂರ್ವಗ್ರಹದಿಂದ ಬಡ್ತಿ ತಡೆಗೆ ಯತ್ನ

ನವದೆಹಲಿ (ಪಿಟಿಐ): ತಮಗಿಂತ ಹಿಂದೆ ಸೇನಾ ಮುಖ್ಯಸ್ಥರಾಗಿದ್ದ ಮತ್ತು ಈಗ ಕೇಂದ್ರ ಸಚಿವರಾಗಿರುವ ವಿ.ಕೆ.ಸಿಂಗ್‌ ಅವರು ಸೇನಾ ಕಮಾಂಡರ್‌ ಆಗಿ ತಮಗೆ ಬಡ್ತಿ ದೊರೆಯುವುದನ್ನು ತಡೆಯಲು ಪ್ರಯತ್ನಿಸಿದ್ದಾರೆ ಎಂದು ಸೇನಾ ಮುಖ್ಯಸ್ಥ ಜನರಲ್‌ ದಲ್ಬೀರ್‌ ಸಿಂಗ್‌ ಸುಪ್ರೀಂ ಕೋರ್ಟ್‌ಗೆ ಹೇಳಿದ್ದಾರೆ.ಸೇನಾ ಮುಖ್ಯಸ್ಥರೊಬ್ಬರು ತಮಗಿಂತ ಹಿಂದೆ ಸೇನಾ ಮುಖ್ಯಸ್ಥರಾಗಿದ್ದವರ ಬಗ್ಗೆ ಬಹಿರಂಗವಾಗಿ ಇಂತಹ ಆರೋಪ ಮಾಡಿರುವುದು ಇದೇ ಮೊದಲು.ದಲ್ಬೀರ್‌ ಸಿಂಗ್‌ ಅವರನ್ನು ಸೇನಾ ಕಮಾಂಡರ್‌ ಹುದ್ದೆಗೆ ಆಯ್ಕೆ ಮಾಡುವ ಸಂದರ್ಭದಲ್ಲಿ ‘ಸ್ವಜನ ಪಕ್ಷಪಾತ’ ನಡೆಸಲಾಗಿದೆ ಎಂದು ಆರೋಪಿಸಿ ಲೆ. ಜ. (ನಿವೃತ್ತ) ರವಿ ದಸ್ತಾನೆ ಅವರು ದೂರು ನೀಡಿದ್ದಾರೆ. ಈ ದೂರಿಗೆ ಪ್ರತಿಕ್ರಿಯೆಯಾಗಿ ದಲ್ಬೀರ್‌ ಸಿಂಗ್‌ ಅವರು ಪ್ರಮಾಣಪತ್ರ ಸಲ್ಲಿಸಿದ್ದಾರೆ.ಈ ಪ್ರಮಾಣಪತ್ರದಲ್ಲಿ ‘ಆಗಿನ ಸೇನಾ ಮುಖ್ಯಸ್ಥರು ನನ್ನನ್ನು ಸೇನಾ ಕಮಾಂಡರ್‌ ಆಗಿ ನೇಮಿಸುವುದನ್ನು ತಡೆಯಲು ಪ್ರಯತ್ನಿಸಿದ್ದಾರೆ. ನನ್ನನ್ನು ಬಲಿಪಶು ಮಾಡುವುದಷ್ಟೇ ಅವರ ಉದ್ದೇಶವಾಗಿತ್ತು. ನನಗೆ ನೀಡಲಾದ ಶೋಕಾಸ್ ನೋಟಿಸ್‌ನಲ್ಲಿ (2012ರ ಮೇ 19) ನನ್ನಿಂದ ಲೋಪಗಳಾಗಿವೆ ಎಂದು ಸುಳ್ಳು, ಆಧಾರರಹಿತ ಮತ್ತು ಕಾಲ್ಪನಿಕ ಆರೋಪಗಳನ್ನು ಮಾಡಲಾಗಿತ್ತು’ ಎಂದು ದಲ್ಬೀರ್‌ ಹೇಳಿದ್ದಾರೆ. ‘ವಿಚಾರಣಾ ನ್ಯಾಯಾಲಯದಲ್ಲಿ ನನ್ನ ವಿರುದ್ಧ ಯಾವುದೇ ಸಾಕ್ಷ್ಯಗಳನ್ನು ಹಾಜರುಪಡಿಸಲಾಗಿಲ್ಲ. ದುರುದ್ದೇಶದಿಂದಲೇ ನನಗೆ ಶೋಕಾಸ್‌ ನೋಟಿಸ್‌ ನೀಡಲಾಗಿತ್ತು’ ಎಂದು ಪ್ರಮಾಣಪತ್ರದಲ್ಲಿ ಅವರು ವಿವರಿಸಿದ್ದಾರೆ.‘ನಾನು ಲೋಪ ಎಸಗಿದ್ದೇನೆ ಎಂದು ಹೇಳುವ ಸಂದರ್ಭದ ಬಗ್ಗೆ ಯಾವುದೇ ಪೂರಕ ದಾಖಲೆಗಳನ್ನು ಶೋಕಾಸ್‌ ನೋಟಿಸ್‌ ಜತೆ ನೀಡಲಾಗಿಲ್ಲ. ನೋಟಿಸ್‌ ಅಸ್ಪಷ್ಟವಾಗಿದ್ದುದು ಮಾತ್ರವಲ್ಲದೆ, ಪೂರ್ವಯೋಜಿತ ಮತ್ತು  ಸಹಜ ನ್ಯಾಯ ತತ್ವಕ್ಕೆ ವಿರುದ್ಧವಾಗಿತ್ತು’ ಎಂದು ಅವರು ಹೇಳಿದ್ದಾರೆ.ಗುಪ್ತಚರ ಮತ್ತು ನಿಗಾದ ಮೂರನೇ ಘಟಕ 2011ರ ಡಿಸೆಂಬರ್‌ 20–21ರ ರಾತ್ರಿ ಅಸ್ಸಾಂನ ಜೊರ್ಹತ್‌ನಲ್ಲಿ ನಡೆಸಿದ ಕಾರ್ಯಾಚರಣೆಯ ನೇತೃತ್ವ ಮತ್ತು ನಿಯಂತ್ರಣದಲ್ಲಿ ದಲ್ಬೀರ್‌ ಸಿಂಗ್‌ ಅವರು ವಿಫಲರಾಗಿದ್ದಾರೆ ಎಂದು ಆರೋಪಿಸಿ ವಿಚಾರಣೆಗೆ ಆದೇಶ ನೀಡಲಾಗಿತ್ತು. ನಂತರ 2012ರಲ್ಲಿ ಆಗ ಸೇನಾ ಮುಖ್ಯಸ್ಥರಾಗಿದ್ದ ಜನರಲ್‌ ವಿ.ಕೆ. ಸಿಂಗ್‌ ಅವರು ದಲ್ಬೀರ್‌ ಅವರ ವಿರುದ್ಧ ಶಿಸ್ತು ಉಲ್ಲಂಘನೆಗೆ ಸಂಬಂಧಿಸಿ ನಿಗಾ ಇರಿಸುವಂತೆ ಸೂಚಿಸಿದ್ದರು.  ತಮ್ಮ ವಿರುದ್ಧದ ಈ ಕ್ರಮ ‘ಕಾನೂನು ಬಾಹಿರ ಮತ್ತು ಪೂರ್ವಯೋಜಿತ’ ಎಂದು ದಲ್ಬೀರ್‌ ಆರೋಪಿಸಿದ್ದಾರೆ.‘ವಿಚಾರಣೆ ನಡೆದು ಒಂದು ತಿಂಗಳ ನಂತರ ನನ್ನ ವಿರುದ್ಧ ಆಡಳಿತಾತ್ಮಕ ಕ್ರಮಕ್ಕೆ ನಿರ್ದೇಶನ ನೀಡಲಾಯಿತು. ಈ ಕ್ರಮ ಪೂರ್ವಗ್ರಹ ಮತ್ತು ದುರುದ್ದೇಶದಿಂದ ಕೂಡಿತ್ತು ಎಂಬುದನ್ನು ಈ ವಿಳಂಬ ಸೂಚಿಸುತ್ತದೆ. ಆಗಿನ ಸೇನಾ ಮುಖ್ಯಸ್ಥರು ನನಗೆ ಶಿಕ್ಷೆಯಾಗಬೇಕು ಎಂದು ಯೋಜಿಸಿದ್ದರು’ ಎಂದು ದಲ್ಬೀರ್‌ ಹೇಳಿದ್ದಾರೆ.ಜೊರ್ಹತ್‌ ಕಾರ್ಯಾಚರಣೆ ಬಗ್ಗೆಯೂ ದಲ್ಬೀರ್‌ ಸ್ಪಷ್ಟನೆ ನೀಡಿದ್ದಾರೆ: ‘ಶೋಕಾಸ್‌ ನೋಟಿಸ್‌ನಲ್ಲಿ ಸೂಚಿಸಿದ ದಿನದಂದು ನಾನು ವಾರ್ಷಿಕ ರಜೆಯ ಮೇಲಿದ್ದೆ. 2011ರ ಡಿಸೆಂಬರ್‌ 26 ರಂದು ನಾನು ಕರ್ತವ್ಯಕ್ಕೆ ಮರಳಿ ಹಾಜ ರಾದೆ’ ಎಂದು ಅವರು ತಿಳಿಸಿದ್ದಾರೆ.ಪೂರ್ವ ಕಮಾಂಡ್‌ನ ಮುಖ್ಯಸ್ಥ ರಾಗಿ ದಲ್ಬೀರ್‌ ಅವರಿಗೆ 2012ರ ಜೂನ್‌ 15ರಂದು ಬಡ್ತಿ ನೀಡಲಾಗಿದೆ. ಆ ಸಂದರ್ಭದಲ್ಲಿ ಜನರಲ್‌ ವಿಕ್ರಮ್‌ ಸಿಂಗ್‌ ಅವರು ಸೇನಾ ಮುಖಸ್ಥರಾಗಿ ದ್ದರು. ದಲ್ಬೀರ್‌ ಅವರ ಮೇಲೆ ಹೇರಲಾಗಿದ್ದ ಶಿಸ್ತು ಮತ್ತು ನಿಗಾ ಸಂಬಂಧಿ ನಿಷೇಧವನ್ನು ಅವರು ವಾಪಸ್‌ ಪಡೆದರು. 2012ರ ಮೇ 31ರಂದು ವಿ.ಕೆ.ಸಿಂಗ್‌ ನಿವೃತ್ತರಾದರು.ಸ್ವಜನಪಕ್ಷಪಾತದ ಆರೋಪ: ಸೇನಾ ಕಮಾಂಡರ್‌ ಹುದ್ದೆಗೆ ತಮಗೆ ಅರ್ಹತೆ ಇತ್ತು. ಆದರೆ ಜನರಲ್‌ ವಿಕ್ರಮ್‌ ಸಿಂಗ್‌ ಅವರು ದಲ್ಬೀರ್‌ ಅವರ ಪರವಾಗಿದ್ದರು. ಆ ಸಂದರ್ಭದಲ್ಲಿ ದಲ್ಬೀರ್‌ ಅವರ ಮೇಲೆ ಶಿಸ್ತು  ಮತ್ತು ನಿಗಾ ಸಂಬಂಧಿ ನಿಷೇಧ ಇದ್ದರೂ ಅದನ್ನು ತೆರವು ಗೊಳಿಸಿ ಅವರಿಗೆ ಕಮಾಂಡರ್‌ ಹುದ್ದೆ ನೀಡಲಾಯಿತು ಎಂದು ದಸ್ತಾನೆ ಅವರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.ದಲ್ಬೀರ್‌ಗೆ ಸಚಿವಾಲಯದ ಬೆಂಬಲ: ರಕ್ಷಣಾ ಸಚಿವಾಲಯ ಈ ಹಿಂದೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿಯೂ ದಸ್ತಾನೆ ಅವರ ಆರೋಪಗಳನ್ನು ತಿರಸ್ಕರಿಸಲಾಗಿತ್ತು. ಅಲ್ಲದೆ, ದಲ್ಬೀರ್‌ ಸಿಂಗ್‌ ಅವರ ಮೇಲೆ ವಿ.ಕೆ. ಸಿಂಗ್‌ ಅವರು ಹೇರಿದ್ದ ನಿಷೇಧ ವನ್ನು ಖಂಡಿಸಲಾಗಿತ್ತು.ಮುಖ್ಯಾಂಶಗಳು

* ಬಡ್ತಿಯಲ್ಲಿ ಸ್ವಜನ ಪಕ್ಷಪಾತ ಆರೋಪಿಸಿ ಸಲ್ಲಿಸಲಾದ ದೂರು

* ಮಾಜಿ ಸೇನಾ ಮುಖ್ಯಸ್ಥರ ವಿರುದ್ಧ ಹಾಲಿ ಸೇನಾ ಮುಖ್ಯಸ್ಥರ ಬಹಿರಂಗ ಆರೋಪ ಇದೇ ಮೊದಲು

* ದುರುದ್ದೇಶದಿಂದ ವರ್ತಿಸಿದ್ದ ಸೇನಾ ಮುಖ್ಯಸ್ಥ: ದಲ್ಬೀರ್‌

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.