ಶನಿವಾರ, ಮೇ 28, 2022
26 °C

ಪೈಪ್‌ಲೈನ್ ಕಾಮಗಾರಿ ವಿರೋಧಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಡರಗಿ: ಗೇಲ್ ಇಂಡಿಯಾ ಕಂಪೆನಿಯು ಪೈಪ್‌ಲೈನ್ ಅಳವಡಿಸಲು ಆರಂಭಿಸಿರುವ ಕಾಮಗಾರಿಯಿಂದ ರೈತರ ಬೆಲೆ ಬಾಳುವ ಅಪಾರ ಪ್ರಮಾಣದ ಜಮೀನು ಮತ್ತು ಬೆಳೆ ಹಾನಿಯಾಗುತ್ತಿದೆ ಎಂದು ಆರೋಪಿಸಿ ತಾಲ್ಲೂಕಿನ ಬೂದಿಹಾಳ ಗ್ರಾಮದ ರೈತರು ಬುಧವಾರ ಸಂಜೆ ಪೈಪ್‌ಲೈನ್ ಕಾಮಗಾರಿಯನ್ನು ಸ್ಥಗಿತಗೊಳಿಸಿ ಬ್ರಹತ್ ಯಂತ್ರದ ಎದುರು ಪ್ರತಿಭಟನೆ ನಡೆಸಿದರು. ಗೇಲ್ ಇಂಡಿಯಾ ಕಂಪೆನಿಯು ಬೇಸಿಗೆ ಮುಗಿಯುವುದರೊಳಗಾಗಿ ಪೈಪ್‌ಲೈನ್ ಕಾಮಗಾರಿಯನ್ನು ಪೂರ್ಣಗೊಳಿಸಬೇಕಿತ್ತು. ಆದರೆ ಮಳೆಗಾಲದ ಮಧ್ಯಭಾಗದಲ್ಲಿ ಪೈಪ್‌ಲೈನ್ ಕಾಮಗಾರಿಯನ್ನು ಆರಂಭಿಸಿರುವುದರಿಂದ ಅಲ್ಪಸ್ವಲ್ಪ ಬೆಳೆದಿರುವ ರೈತರ ಬೆಳೆ ಕಾಮಗಾರಿಯ ನೆಪದಲ್ಲಿ ಸಂಪೂರ್ಣವಾಗಿ ನಾಶವಾಗುತ್ತಲಿದೆ ಎಂದು ಅವರು ಆರೋಪಿಸಿದ್ದಾರೆ. ಪೈಪ್‌ಲೈನ್‌ಗಾಗಿ ಕಂಪೆನಿಯು ರೈತರ ಫಲವತ್ತಾದ ಜಮೀನನ್ನು ವಶಪಡಿಸಿಕೊಂಡಿದ್ದು, ಕೆಲವು ಭಾಗಗಳಲ್ಲಿ ಸರ್ಕಾರ ಹಾಗೂ ರೈತರು ನಿಗದಿ ಪಡಿಸಿರುವ ಜಮೀನಿಗಿಂತ ಹೆಚ್ಚುವರಿ ಜಮೀನನನ್ನು ಪೈಪ್‌ಲೈನ್ ಕಾಮಗಾರಿಗಾಗಿ ಬಳಸಿಕೊಂಡಿದೆ. ರೈತರ ಫಲವತ್ತಾದ ಜಮೀನು ಮತ್ತು ಬೆಳೆಗಳಿಗೆ ಸರ್ಕಾರದ ನಿಯಮಾವಳಿಗಳಂತೆ ರೈತರಿಗೆ ನೀಡಬೇಕಾದ ಪರಿಹಾರದ ಮೊತ್ತವನ್ನು ಕೆಲವು ರೈತರಿಗೆ ಈವರೆಗೂ ತಲುಪಿಸಿಲ್ಲ ಎಂದು ಅವರು ದೂರಿದ್ದಾರೆ. ಪೈಪ್‌ಲೈನ್ ಕಾಮಗಾರಿಯಿಂದ ರೈತರ ಜಮೀನಿನ ಮಧ್ಯಭಾಗದಲ್ಲಿ ಭಾರಿ ಗಾತ್ರದ ಗುಂಡಿಗಳು ನಿರ್ಮಾಗೊಂಡಿದ್ದು, ಜೆಸಿಬಿಯಂತಹ ಭಾರಿ ಗಾತ್ರದ ವಾಹನಗಳು ಅಡ್ಡಾಡಿರುವುದರಿಂದ ಜಮೀನೆಲ್ಲ ನಾಶವಾಗಿದೆ. ರೈತರು ತಮ್ಮ ಜಮೀನಿನಲ್ಲಿ ಹಾಕಿದ್ದ ದೊಡ್ಡ ದೊಡ್ಡ ಬದುವುಗಳು, ತಿರುವು, ಕಟ್ಟೆಗಳು ಸಂಪೂರ್ಣವಾಗಿ ಹಾನಿಯಾಗಿದ್ದು, ಕಂಪನಿಯವರು ಅವುಗಳನ್ನು ಪುನಃ ನಿರ್ಮಿಸಿಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ತಾಲ್ಲೂಕು ಸಾರ್ವಜನಿಕ ಹೋರಾಟ ವೇದಿಕೆಯ ಸಂಚಾಲಕ ಬಸವರಾಜ ನವಲಗುಂದ, ಗ್ರಾಮದ ರೈತ ಮುಖಂಡರಾದ ಅಂದಾನಗೌಡ ಪಾಟೀಲ, ಶಿವಪುತ್ರಪ್ಪ ಲಿಂಗಶೆಟ್ಟರ, ಈರಣ್ಣ ಮೇಟಿ, ಪ್ರಭುರಾಜ ದೇಸಾಯಿ, ಮಲ್ಲಪ್ಪ ಕುಕನೂರ, ಶಂಕ್ರಪ್ಪ ಲಿಂಗಶೆಟ್ಟರ, ವಿರೂಪಾಕ್ಷಪ್ಪ ಕುಕನೂರ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.