ಗುರುವಾರ , ಜನವರಿ 23, 2020
28 °C
ವಿವಿಧೆಡೆ ಸಂಭ್ರಮದ ಪುತ್ತರಿ ಹಬ್ಬ ಆಚರಣೆ

ಪೊಲಿ ಪೊಲಿ ದೇವಾ... ಪೊಲಿಯೇ ಬಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಪೋಕ್ಲು: ಕೊಡಗಿನ ಪ್ರಮುಖ ಹಬ್ಬವಾದ ಪುತ್ತರಿಯನ್ನು ನಾಪೋಕ್ಲು ವ್ಯಾಪ್ತಿಯಲ್ಲಿ ಭಾನುವಾರ ಸಂಭ್ರಮದಿಂದ ಆಚರಿಸಲಾಯಿತು.ಇಲ್ಲಿನ ಸುತ್ತಮುತ್ತಲ ಊರುಗಳಲ್ಲಿನ ಐನ್‌ಮನೆ, ಊರ ದೇವಾಲಯಗಳಲ್ಲಿ ಕುಟುಂಬಸ್ಥರು ಹಾಗೂ ಬಂಧು ಬಳಗದವರು ಒಗ್ಗೂಡಿ ಅತ್ಯುತ್ಸಾಹದಿಂದ ಹುತ್ತರಿ ಆಚರಿಸಿದರು. ರಾತ್ರಿಯಿಡೀ ಬಿರುಸು, ಬಾಣ, ಪಟಾಕಿ, ಸಿಡಿಮದ್ದುಗಳಿಂದ ಪುತ್ತರಿ ಬೆಳಕಿನ ಹಬ್ಬವಾಗಿ ರಂಜಿಸಿತು. ಮನೆಮಂದಿಯೆಲ್ಲಾ ಒಗ್ಗೂಡಿ ಧಾನ್ಯಲಕ್ಷ್ಮಿಯನ್ನು ಬರಮಾಡಿಕೊಳ್ಳುವ ಹಬ್ಬಕ್ಕೆ ಸಾಂಸ್ಕೃತಿಕ ಮೆರುಗನ್ನು ನೀಡಿ ವೈವಿಧ್ಯಮಯವಾಗಿ ಆಚರಿಸಿದರು.ಕದಿರು ಕೊಯ್ಯುವ ಮುಹೂರ್ತಕ್ಕೆ ಮುನ್ನ ಐನ್‌ಮನೆಯಲ್ಲಿ ಎಲ್ಲರೂ ಒಟ್ಟುಗೂಡಿ ಬಿದಿರಿನ ಕುಕ್ಕೆ, ಕುತ್ತಿ ಇತ್ಯಾದಿಗಳನ್ನು ಇರಿಸಿಕೊಂಡು ಗದ್ದೆಗೆ ತೆರಳಲು ಸಿದ್ಧತೆ ನಡೆಸಿದರು. ಮಾವು, ಅಶ್ವತ್ಥ ಮತ್ತಿತರ ಹಾಲು ಬರುವ ಜಾತಿಯ ಎಲೆಗಳು, ನಿಗದಿತ ಬಳ್ಳಿಗಳನ್ನು ಒಟ್ಟುಗೂಡಿಸಿ ನೆರೆಕಟ್ಟಿದ ನಂತರ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ನಿಗದಿ ಪಡಿಸಿದ ಮುಹೂರ್ತಕ್ಕೆ ಸರಿಯಾಗಿ ಭತ್ತದ ತೆನೆಗಳಿಗೆ ಪೂಜೆ ಸಲ್ಲಿಸಿ ಗಾಳಿಯಲ್ಲಿ ಕುಶಾಲ ತೋಪು ಹಾರಿಸಿ ಕದಿರು ಕೊಯ್ದು ‘ಪೊಲಿ ಪೊಲಿದೇವಾ.. ಪೊಲಿಯೇ ಬಾ’ ಎನ್ನುವ ಘೋಷಣೆಗಳೊಂದಿಗೆ ಮನೆಗೆ ತೆರಳಲಾಯಿತು. ನೈವೇದ್ಯ ಮತ್ತಿತರ ಸಂಪ್ರದಾಯ ನೆರವೇರಿದ ಬಳಿಕ ಮೊದಲೇ ಸಿದ್ಧಪಡಿಸಿದ್ದ ನೆರೆಯ ಜತೆ ಕದಿರನ್ನು ಜೋಡಿಸಿ, ಮನೆ,ಭತ್ತದ ಕಣಜ ಹಾಗೂ ಪೂಜನೀಯ ಸ್ಥಳಗಳಲ್ಲಿ ಕಟ್ಟಿ ಧಾನ್ಯಕ್ಕೆ ವಂದಿಸಲಾಯಿತು. ಇದೇ ಕಾಲಕ್ಕೆ ಪಟಾಕಿ, ಸಿಡಿಮದ್ದುಗಳು ರಾತ್ರಿಯಿಡೀ ಮಾರ್ದನಿಸಿದವು.ಕಕ್ಕಬ್ಬೆಯ ಪಾಡಿ ಇಗ್ಗುತ್ತಪ್ಪ ದೇವಾಲಯಪೇರೂರಿನ ಇಗ್ಗುತ್ತಪ್ಪ ದೇವಾಲಯ, ನಾಪೋಕ್ಲುವಿನ ಮಕ್ಕಿಶಾಸ್ತಾವು ದೇವಾಲಯ, ಪಾಲೂರಿನ ಮಹಾಲಿಂಗೇಶ್ವರ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆಯೊಂದಿಗೆ ಪುತ್ತರಿ ಹಬ್ಬವನ್ನು ಶಾಸ್ತ್ರೋಕ್ತವಾಗಿ ಆಚರಿಸಲಾಯಿತು. ಬೇತು ಗ್ರಾಮದ ಮಕ್ಕಿ ಶಾಸ್ತಾವು ದೇವಾಲಯದಲ್ಲಿ ಶಾಸ್ತಾವು ದೇವರ ಉತ್ಸವದ ಅಂಗವಾಗಿ ಹರಕೆಯ ನಾಯಿಗಳನ್ನು ಸಲ್ಲಿಲಾಯಿತು.ಕಲಾಡ್ಚ ಹಬ್ಬವನ್ನು ಸಮೀಪದ ಕಕ್ಕಬ್ಬೆಯ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಆಚರಿಸಲಾಯಿತು. ಆರಂಭದಲ್ಲಿ ಭಕ್ತರು ದೇವಾಲಯಕ್ಕೆ ಪ್ರದಕ್ಷಿಣೆ ಬಂದು ಪ್ರಾರ್ಥನೆ ಸಲ್ಲಿಸಿದರು. ಪರದಂಡ ಹಾಗೂ ಪೇರಿಯಂಡ ಕುಟುಂಬಸ್ಥರು ಸೇರಿ ಎತ್ತುಪೋರಾಟ ಮತ್ತು ತುಲಾಭಾರ ಸೇವೆ ನಡೆಸಿದರು. ಅಪರಾಹ್ನದ ಅನ್ನಸಂತರ್ಪಣೆ ನಂತರ ದೇವರು ಹೊರಬಂದು ವಿವಿಧ ಪೂಜಾ ವಿಧಾನಗಳೊಂದಿಗೆ ದೇವರ ಆದಿಸ್ಥಾನವೆನ್ನಲಾದ ಮಲ್ಮಕ್ಕೆ ತೆರಳಿ ಹಬ್ಬದ ಕಟ್ಟು ಸಡಿಲಿಸಲಾಯಿತು.ಈ ಸಂದರ್ಭದಲ್ಲಿ ನೆಲಜಿ ಹಾಗೂ ಪೇರೂರು ದೇವಾಲಯಗಳ ತಕ್ಕ ಮುಖ್ಯಸ್ಥರು ಆಗಮಿಸಿದ್ದರು. ನಂತರ ದೇವರ ನೃತ್ಯಬಲಿ ತೀರ್ಥಪ್ರಸಾದ ವಿತರಣೆಯೊಂದಿಗೆ ಕಲಾಡ್ಚ ಹಬ್ಬ ಮುಕ್ತಾಯಗೊಂಡಿತು. ಪ್ರಧಾನ ಅರ್ಚಕ ಕುಶಭಟ್‌ ಹಾಗೂ ಸುಂದರಭಟ್‌ ಪೂಜಾಕಾರ್ಯಗಳನ್ನು ನೆರವೇರಿಸಿದರು. ತಕ್ಕಮುಖ್ಯಸ್ಥ ಪರದಂಡ ಕಾವೇರಪ್ಪ, ಬಕ್ತಜನಸಂಗದ ಉಪಾಧ್ಯಕ್ಷ ಪರದಂಡ ಡಾಲಿ,ಕಾರ್ಯದರ್ಶಿ ಲಲಿತಾ ನಂದಕುಮಾರ್‌,ಪಾಂಡಂಡ ನರೇಶ್‌ ಮತ್ತಿತರರು ಇದ್ದರು.ಹುತ್ತರಿ ಸುಗ್ಗಿ ಸಂಭ್ರಮ

ಸೋಮವಾರಪೇಟೆ: ಹುತ್ತರಿಯನ್ನು ಸೋಮವಾರಪೇಟೆ ವ್ಯಾಪ್ತಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಇಲ್ಲಿನ ಕೊಡವ ಸಮಾಜದ ವತಿಯಿಂದ ಭಾನುವಾರ ರಾತ್ರಿ 9.15ಕ್ಕೆ ನೆರೆಕಟ್ಟಿ, ಆಂಜನೇಯ ದೇವಾಲಯದ ಬಳಿಯಿರುವ ಗದ್ದೆಯಲ್ಲಿ ಸಾಂಪ್ರ ದಾಯಿಕ ಪೂಜೆ ಸಲ್ಲಿಸಿದ ನಂತರ 9.45 ಗಂಟೆಗೆ ಕದಿರು ತೆಗೆಯಲಾಯಿತು.‘ಪೊಲಿ ಪೊಲಿ ದೇವಾ’ ಎಂಬ ಉದ್ಘೋಷದೊಂದಿಗೆ ಭತ್ತದ ಕದಿರಿಗೆ ಪೂಜೆ ಸಲ್ಲಿಸಿದ ನಂತರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಕದಿರನ್ನು ತೆಗೆಯಲಾಯಿತು. ಈ ಸಂದರ್ಭ ಕೊಡವ ಸಮಾಜದ ಅಧ್ಯಕ್ಷ ಮಾಳೇಟಿರ ಅಭಿಮನ್ಯುಕುಮಾರ್, ಕಾರ್ಯದರ್ಶಿ ಮೇರಿಯಂಡ ಉತ್ತಪ್ಪ, ಉಪಾಧ್ಯಕ್ಷ ಬಾಚಿನಾಡಂಡ ಪೂಣಚ್ಚ, ಖಜಾಂಚಿ ಪಾಡಿಯಂಡ ಮುತ್ತಣ್ಣ, ಪದಾಧಿಕಾರಿಗಳಾದ ಪರುವಂಡ ರಾಮಪ್ಪ, ಕಲ್ಲೇಂಗಡ ಅಪ್ಪಚ್ಚು, ಕಾರ್ಯಪಂಡ ಮೈನಾ ಸುಭ್ರಮಣಿ, ಕಂಜಿತಂಡ ಕಿರಣ್ ಇದ್ದರು.ಸೋಮವಾರಪೇಟೆ ಅರೆಯೂರು, ಅಬ್ಬೂರುಕಟ್ಟೆ, ತಾಕೇರಿ, ಕಿರಗಂದೂರು, ಸೂರ್ಲಬ್ಬಿ, ಗರ್ವಾಲೆ ಸೇರಿದಂತೆ ಇನ್ನಿತರ ಗ್ರಾಮಗಳಲ್ಲೂ ಹುತ್ತರಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಪ್ರತಿಕ್ರಿಯಿಸಿ (+)