ಗುರುವಾರ , ಮೇ 26, 2022
23 °C

ಪೊಲೀಸರಿಂದ ಇಬ್ಬರು ಮಹಿಳೆಯರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಿವೇಶನ ಮಾರಾಟ ಮಾಡುವುದಾಗಿ ಇಂಟರ್‌ನೆಟ್‌ನಲ್ಲಿ ಜಾಹೀರಾತು ನೀಡಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದ ಇಬ್ಬರು ಮಹಿಳೆಯರನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.ವಿಜಯನಗರದ ಎಂ.ಸಿ.ಲೇಔಟ್ ಒಂದನೇ ಮುಖ್ಯರಸ್ತೆ ನಿವಾಸಿ ಮಂಜುಳಾ (50) ಮತ್ತು ಅವರ ಮಗಳು ಎಸ್.ನೇತ್ರಾವತಿ ಉರುಫ್ ಚೈತ್ರಾ (29) ಬಂಧಿತರು. ಆರೋಪಿಗಳಿಂದ ರೂ 1.20 ಲಕ್ಷ ಹಣ ಪೊಲೀಸರು ವಶಪಡಿಸಿಕೊಂಡಿದ್ದಾರೆ.ಯಲಹಂಕ ಸಮೀಪದ ನ್ಯಾಯಾಂಗ ಬಡಾವಣೆಯಲ್ಲಿ ರಾಜ್ಯ ನ್ಯಾಯಾಂಗ ನೌಕರರ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಸೇರಿದ ಜಮೀನಿದೆ. ಮಂಜುಳಾ ಅವರ ಪತಿ ಸುರೇಶ್‌ಕುಮಾರ್ ಅವರು ಆ ಸಂಘದ ಕಾರ್ಯದರ್ಶಿಯಾಗಿದ್ದಾರೆ. ಸುರೇಶ್‌ಕುಮಾರ್ ಅವರು ಅಳಿಯ ಸೋಮೇಶ್ ಜತೆ ಸೇರಿಕೊಂಡು ಸಂಘದ ಜಮೀನಿನ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ 10 ನಿವೇಶನಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಿ ವಂಚಿಸಿದ್ದರು.ಅಲ್ಲದೇ ಅವರು 11 ನಿವೇಶನಗಳನ್ನು ಅಳಿಯ ಮತ್ತು ಮಗಳ ಹೆಸರಿಗೆ ನೋಂದಣಿ ಮಾಡಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ವಂಚನೆ ಆರೋಪದಡಿ ಸುರೇಶ್‌ಕುಮಾರ್ ಮತ್ತು ಸೋಮೇಶ್ ಅವರನ್ನು 2006ರಲ್ಲಿ ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಆ ನಂತರ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.ಈ ಪ್ರಕರಣದ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರೆದಿದೆ. ಈ ನಡುವೆ ನೇತ್ರಾವತಿ ಅವರು ನಿವೇಶನಗಳನ್ನು ತಾಯಿ ಮಂಜುಳಾ ಅವರ ಹೆಸರಿಗೆ ಜಿಪಿಎ (ಜನರಲ್ ಪವರ್ ಆಫ್ ಅಟಾರ್ನಿ) ಮಾಡಿಕೊಟ್ಟಂತೆ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿದ್ದರು.ಆ ದಾಖಲೆ ಪತ್ರಗಳನ್ನು ಆಧರಿಸಿ ಆರೋಪಿಗಳು ಶಿವಮೊಗ್ಗದ ವಿಶ್ವನಾಥ್ ಎಂಬುವರಿಗೆ ನಿವೇಶನ ಮಾರಾಟ ಮಾಡುವುದಾಗಿ ನಂಬಿಸಿ ಸೆಪ್ಟೆಂಬರ್‌ನಲ್ಲಿ ಆರು ಲಕ್ಷ ರೂಪಾಯಿ ಮುಂಗಡ ಹಣ ಪಡೆದು ವಂಚಿಸಿದ್ದರು. ಈ ಸಂಬಂಧ ವಿಶ್ವನಾಥ್ ಅವರು ನೀಡಿದ ದೂರನ್ನು ಆಧರಿಸಿ ಅವರಿಬ್ಬರನ್ನು ಬಂಧಿಸಲಾಯಿತು. ಸೋಮೇಶ್ ಸಹ ಈ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಆತ ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರೆದಿದೆ. ಕಾನೂನು ಪದವೀಧರೆಯಾದ ನೇತ್ರಾವತಿ ಅವರು ವಕೀಲರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಈಶಾನ್ಯ ವಿಭಾಗ ಡಿಸಿಪಿ ಬಿ.ಆರ್.ರವಿಕಾಂತೇಗೌಡ ಮತ್ತು ಯಲಹಂಕ ಉಪ ವಿಭಾಗದ ಎಸಿಪಿ ಜಿ.ಆರ್.ದೇಸಾಯಿ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಕೆಂಚೇಗೌಡ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.