ಸೋಮವಾರ, ಮೇ 23, 2022
20 °C
ಮಣಿಪಾಲ ಅತ್ಯಾಚಾರ ಪ್ರಕರಣ: ಇನ್ನಿಬ್ಬರ ಸೆರೆ

ಪೊಲೀಸರಿಗೆ ಹೇಳಿಕೆ ಕೊಟ್ಟ ಯುವತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಮಣಿಪಾಲ ವಿಶ್ವವಿದ್ಯಾಲಯದ ವೈದ್ಯಕೀಯ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣದ ತನಿಖೆಯಲ್ಲಿ ಪ್ರಗತಿ ಸಾಧಿಸಿರುವ ಉಡುಪಿ ಪೊಲೀಸರು, ಕೊನೆಗೂ ಆಕೆಯ ಹೇಳಿಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸಾಕ್ಷ್ಯನಾಶದ ಆರೋಪದ ಮೇಲೆ ಮತ್ತೆ ಇಬ್ಬರನ್ನು ಬಂಧಿಸಿದ್ದಾರೆ.`ಯುವತಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರಿಂದ ಮತ್ತು ಮನೆಯವರಿಂದ ನಮಗೆ ಅಗತ್ಯ ಸಹಕಾರ ಸಿಗುತ್ತಿದೆ. ವಿದ್ಯಾರ್ಥಿನಿಯ ಹೇಳಿಕೆಯನ್ನು ನಾವು ಈಗಾಗಲೇ ಪಡೆದುಕೊಂಡಿದ್ದೇವೆ. ಅಗತ್ಯ ಎನಿಸಿದರೆ ಅವರಿಂದ ಇನ್ನಷ್ಟು ಮಾಹಿತಿ ಪಡೆದುಕೊಳ್ಳುತ್ತೇವೆ. ಈಗ ಪಡೆದಿರುವ ಮಾಹಿತಿ ತನಿಖೆಯ ದೃಷ್ಟಿಯಿಂದ ಮಹತ್ವದ್ದಾಗಿದೆ' ಎಂದು ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಸಾಕ್ಷ್ಯಗಳನ್ನು ನಾಶಪಡಿಸಿದ ಆರೋಪದ ಮೇಲೆ ಪ್ರಕರಣದ ಪ್ರಮುಖ ಆರೋಪಿ ಯೋಗೀಶ್ ಎಂಬಾತನ ಸಹೋದರ ಅಂಜಾರು ಗ್ರಾಮದ ಟ್ಯಾಕ್ಸಿ ಚಾಲಕ ಬಾಲಚಂದ್ರ (40) ಮತ್ತು ಇನ್ನೊಬ್ಬ ಆರೋಪಿ ಹರಿಪ್ರಸಾದ್ ಸಹೋದರ ಬಡಗಬೆಟ್ಟು ಗ್ರಾಮದ ಆಟೊ ಚಾಲಕ ಹರೀಂದ್ರ (29) ಎಂಬವರನ್ನು ಮಂಗಳವಾರ ಬೆಳಿಗ್ಗೆ ಬಂಧಿಸಲಾಗಿದೆ ಎಂದರು.ಕೃತ್ಯಕ್ಕೆ ಬಳಸಿದ ಆಟೊ ಹರೀಂದ್ರ ಹೆಸರಿನಲ್ಲಿದೆ. ಈ ವಾಹನದಲ್ಲಿ ಹಲವು ಮಹತ್ವದ ಸಾಕ್ಷ್ಯಗಳಿದ್ದವು. ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರನ್ನು ಕರೆಯಿಸಿ ವಾಹನವನ್ನು ತಪಾಸಣೆ ನಡೆಸಲಾಯಿತು. ಕೆಲವು ಸಾಕ್ಷ್ಯಗಳು ಸಿಕ್ಕಿವೆ. ಆದರೆ ಕೆಲವನ್ನು ಆರೋಪಿಗಳು ನಾಶ ಮಾಡಿದ್ದಾರೆ ಎಂದು ಅವರು ಹೇಳಿದರು.ಕೃತ್ಯ ಎಸಗಿದ ನಂತರ ಆರೋಪಿಗಳು ಒಂದೆರಡು ದಿನ ತಲೆಮರೆಸಿಕೊಂಡಿದ್ದರು. ಈ ಸಂದರ್ಭದಲ್ಲಿ ಸಹೋದರರ ಸಂಪರ್ಕ ಸಾಧಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಕೆಲವು ವೈಜ್ಞಾನಿಕ ಸಾಕ್ಷ್ಯಗಳನ್ನು ನಾಶಪಡಿಸಿರುವ ಸಾಧ್ಯತೆ ಇದೆ ಎಂದರು.`ಸಾಮಾನ್ಯ ಪ್ರಕರಣಗಳಲ್ಲಿ ನಾವೇ ಸಾಕ್ಷ್ಯಗಳನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡುತ್ತೇವೆ. ಆದರೆ ಈ ಪ್ರಕರಣದಲ್ಲಿ ತಜ್ಞರು, ಅಧಿಕಾರಿಗಳನ್ನೇ ಇಲ್ಲಿಗೆ ಕರೆಯಿಸಿದ್ದೇವೆ. ಆರೋಪಿಗಳ ಡಿಎನ್‌ಎ ವರದಿ ಮತ್ತು ಇತರೆ ಎಲ್ಲ ವರದಿಗಳು ಕೈಸೇರಿದ 15 ದಿನಗಳ ಒಳಗೆ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸುವುದು ನಮ್ಮ ಉದ್ದೇಶ' ಎಂದು ಪ್ರತಾಪ್ ರೆಡ್ಡಿ ಹೇಳಿದರು.ಈಗ ವಶಕ್ಕೆ ಪಡೆದಿರುವ ಆರೋಪಿಗಳ ವಿಚಾರಣೆ ಬುಧವಾರ ಹೆಚ್ಚುಕಡಿಮೆ ಪೂರ್ಣಗೊಳ್ಳಲಿದೆ. ಇನ್ನೊಬ್ಬ ಆರೋಪಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಯೋಗೀಶ್ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ಅವರು ಮಾಹಿತಿ ನೀಡಿದರು.ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಂ.ಬಿ. ಬೋರಲಿಂಗಯ್ಯ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಕುಮಾರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.