ಮಂಗಳವಾರ, ಮೇ 11, 2021
19 °C

ಪೊಲೀಸ್ ಠಾಣೆ ಸ್ಥಳಾಂತರ: ಗೃಹ ಸಚಿವರ ವಿರುದ್ಧ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ಪಟ್ಟಣ ಪೊಲೀಸ್ ಠಾಣೆಯನ್ನು ಪಟ್ಟಣದ ಹೃದಯಭಾಗದಿಂದ ನಿರ್ಜನ ಪ್ರದೇಶಕ್ಕೆ ಸ್ಥಳಾಂತರಿಸಲಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ ರೈತಸಂಘ, ಬಿಜೆಪಿ, ಇತರ ಪಕ್ಷಗಳು ಹಾಗೂ ಸಾರ್ವಜನಿಕರು ಕಪ್ಪುಪಟ್ಟಿ ಪ್ರದರ್ಶಿಸಿ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ಸೋಮವಾರ ನಡೆಯಿತು.ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳು ಇರುವ ಕಡೆ ಪೊಲೀಸ್ ಠಾಣೆ ಇದ್ದು, ಜನರಿಗೆ ಅನುಕೂಲವಾಗಿತ್ತು. ನಾಗರಿಕರಿಗೆ ಮಾಹಿತಿ ನೀಡದೆ ಏಕಾಏಕಿ ಠಾಣೆಯನ್ನು ನಿರ್ಜನ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ದೂರು ಕೊಡಲು ಮಹಿಳೆಯರು, ವೃದ್ಧರು ಅಲ್ಲಿಗೆ ಹೋಗಲು ತ್ರಾಸ ಪಡಬೇಕಿದೆ. ಈ ಮೊದಲು ಇದ್ದ ಸ್ಥಳದಲ್ಲೇ ಪೊಲೀಸ್ ಠಾಣೆಯನ್ನು ಉಳಿಸಬೇಕು ಎಂದು ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರಕುಮಾರ್ ಅವರನ್ನು ಒತ್ತಾಯಿಸಿದರು.ನೂತನ ಕಟ್ಟಡದ ಬಳಿ ತೆರಳಿ, ಪೊಲೀಸ್ ಠಾಣೆ ಸ್ಥಳಾಂತರಕ್ಕೆ ಪಟ್ಟಣ ಹಾಗೂ ಗ್ರಾಮೀಣ ಭಾಗದ ಜನರ ವಿರೋಧವಿದೆ. ಮೊದಲಿದ್ದ ಸ್ಥಳದಲ್ಲೇ ಮುಂದುವರೆಸಿ ಎಂದು ದಕ್ಷಿಣ ವಲಯ ಐಜಿಪಿ ಎಎಸ್‌ಎನ್ ಮೂರ್ತಿ ಅವರಲ್ಲಿ ಮನವಿ ಮಾಡಿದರು.ಬಿಜೆಪಿ ಅಕ್ರೋಶ: ಪೊಲೀಸ್ ಠಾಣೆ ಸ್ಥಳಾಂತರ ಪ್ರಕ್ರಿಯೆ ರದ್ದು ಮಾಡುವಂತೆ ಗೃಹ ಸಚಿವ ಆರ್.ಅಶೋಕ್ ಅವರಿಗೆ ಮನವಿ ಮಾಡಿದ್ದೇವೆ. ಸಚಿವರು ಸ್ವಪಕ್ಷೀಯರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಅಹವಾಲು ಕೇಳುವ ಸೌಜನ್ಯ ತೋರುತ್ತಿಲ್ಲ. ಸಚಿವರ ವರ್ತನೆಯಿಂದ ನೋವಾಗಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಿ.ಉಮಾಶಂಕರ್, ಪುರಸಭೆ ಸದಸ್ಯ ಕೃಷ್ಣಪ್ಪ ಇತರರು ಅಸಹನೆ ವ್ಯಕ್ತಪಡಿಸಿದರು. ಮುನ್ಸೂಚನೆ ನೀಡದೆ ಪೊಲೀಸ್ ಠಾಣೆ ಸ್ಥಳಾಂತರ ಮಾಡಿರುವುದು ಸರಿಯಲ್ಲ ಎಂದು ಬಿಜೆಪಿ ಮುಖಂಡ ಕೆ.ಬಲರಾಂ ಎಸ್ಪಿ ಎದುರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಕೌಶಲೇಂದ್ರ ಕುಮಾರ್, ನೂತನ ಕಟ್ಟಡ ನಿರ್ಮಾಣದ ವೇಳೆ ಆಕ್ಷೇಪ ಬಾರದ ಕಾರಣ ಸ್ಥಳಾಂತರ ಮಾಡಿದ್ದೇವೆ. ಉನ್ನತ ಮಟ್ಟದಲ್ಲಿ ಪ್ರಯತ್ನ ನಡೆಸಿದರೆ ಮೊದಲಿದ್ದ ಸ್ಥಳದಲ್ಲೇ ಠಾಣೆಯನ್ನು ಉಳಿಸಿಕೊಳ್ಳಬಹುದು ಎಂದರು.

  ದಕ್ಷಿಣ ವಲಯ ಐಜಿಪಿ ಎಎಸ್‌ಎನ್ ಮೂರ್ತಿ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಮೊದಲು ಪೊಲೀಸ್ ಠಾಣೆ ಇದ್ದ ಸ್ಥಳದಲ್ಲಿ 10 ಮಂದಿ ಪೊಲೀಸರು ಹಾಗೂ ವಜ್ರ ವಾಹನವನ್ನು ಇರಿಸಲಾಗುತ್ತದೆ. ಸಾರ್ವಜನಿಕರು ಕುಂದು ಕೊರತೆಯನ್ನು ಅಲ್ಲೇ ಸಲ್ಲಿಸಬಹುದು ಎಂದು ಹೇಳಿದರು.

ತಾ.ಪಂ. ಅಧ್ಯಕ್ಷ ಟಿ.ಶ್ರೀಧರ್, ಪುರಸಭೆ ಅಧ್ಯಕ್ಷ ಶಿವಾಜಿರಾವ್, ಮಾಜಿ ಅಧ್ಯಕ್ಷ ಎಲ್.ನಾಗರಾಜು, ಕಮಲಮ್ಮ, ಪಿ.ಕೆಂಪೇಗೌಡ, ಬಿ.ಎಸ್.ರಮೇಶ್, ನಾಗೇಂದ್ರಸ್ವಾಮಿ, ಉಮೇಶ್‌ಕುಮಾರ್ ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.