ಶನಿವಾರ, ಮೇ 21, 2022
27 °C
ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 5 ಕೋಟಿ ಹಗರಣ

ಪ್ರಕರಣ ಭೇದಿಸಿದ ಪೊಲೀಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ 5 ಕೋಟಿ ರೂಪಾಯಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು, ಸೋಮವಾರ ರಾತ್ರಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ಮುಡಾ ಆಯುಕ್ತ ಡಾ.ಎಚ್.ಎಸ್. ಶಿವರಾಂ, ಕಾಂಗ್ರೆಸ್ ಮುಖಂಡ ಕೆಬ್ಬಳ್ಳಿ ಆನಂದ್ ಹಾಗೂ ನಾಗಲಿಂಗ ಸ್ವಾಮಿ ಎಂಬುವವರನ್ನು ಮಂಗಳವಾರ ನ್ಯಾಯಾಲಯದ ಮುಂದೆ ಹಾಜರು ಪಡಿಸಿದರು. ನ್ಯಾಯಾಧೀಶರು, ಮೂವರೂ ಆರೋಪಿಗಳನ್ನು ವಿಚಾರಣೆಗಾಗಿ ಐದು ದಿನ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಭೂಷಣ ಬೊರಸೆ ತಿಳಿಸಿದರು.ಪ್ರಕರಣದ ವಿವರವನ್ನು ನೀಡಿದ ಅವರು, ಪ್ರಮುಖ ಆರೋಪಿಗಳಾದ ಆನಂದ್ ಹಾಗೂ ನಾಗಲಿಂಗಸ್ವಾಮಿ ಅವರು ಮುಡಾದ 5 ಕೋಟಿ ರೂಪಾಯಿ ಹಣವನ್ನು ಖಾಸಗಿ ಕಾರ್ಯಕ್ಕಾಗಿ ಬಳಸಿಕೊಳ್ಳಲು ಯೋಜನೆ ರೂಪಿಸುತ್ತಾರೆ.ಮೂರು ತಿಂಗಳ ನಂತರ ಬಡ್ಡಿ ಸಮೇತ ನಿಮಗೆ ಹಣ ನೀಡುತ್ತೇವೆ. ಅದಕ್ಕಾಗಿ 10 ಲಕ್ಷ ರೂಪಾಯಿ ನಿಮಗೆ ನೀಡುವುದಾಗಿ ಆಮಿಷ ತೋರಿಸಿ ಆಯುಕ್ತರನ್ನೂ ಒಪ್ಪಿಸುತ್ತಾರೆ.ಒಪ್ಪಂದದಂತೆ ಆಯುಕ್ತರು ಚೆಕ್ ಬರೆದುಕೊಡುತ್ತಾರೆ. ಅದನ್ನು ಆರೋಪಿಗಳು ಚಂದ್ರಶೇಖರ್ ಎನ್ನುವವರ ಖಾತೆಯ ಮೂಲಕ ಪಡೆದುಕೊಂಡು ಬಳಸಿದ್ದಾರೆ. ಮೂರು ತಿಂಗಳ ನಂತರ ಆಯುಕ್ತರು ಹಣ ಕೇಳಿದಾಗ ಆರೋಪಿಗಳು ನೀಡುವುದಿಲ್ಲ. ಎರಡು ತಿಂಗಳ ಕಾಲ ಕಾದ ಆಯುಕ್ತರು, ಕೊನೆಗೆ ಇಂಡಿಯನ್ ಬ್ಯಾಂಕಿನವರ ಮೇಲೆಯೇ ದೂರು ನೀಡುವ ಮೂಲಕ ಪ್ರಕರಣದ ದಿಕ್ಕು ತಪ್ಪಿಸಲು ಮುಂದಾಗುತ್ತಾರೆ ಎಂದರು.ಠೇವಣಿ ಇಟ್ಟ ಹಣದ ಬಾಂಡ್ ಪ್ರಿಂಟೆಡ್ ಇಲ್ಲದಿರುವುದು. ಒಂದೇ ಸಂಖ್ಯೆಯಲ್ಲಿ ಎರಡೆರಡು ಠೇವಣಿ ಪತ್ರ ನೀಡಿರುವುದು. ಬಾಂಡ್ ಪೇಪರ್ ಕಲರ್ ಬೇರೆ ಇರುವುದು. ಠೇವಣಿ ಪತ್ರವನ್ನು ಭಾನುವಾರ ನೀಡಲಾಗಿರುವುದು ತನಿಖೆಯ ಕಾಲಕ್ಕೆ ಬೆಳಕಿಗೆ ಬಂದವು. ಬ್ಯಾಂಕ್ ಅಧಿಕಾರಿಗಳನ್ನು ವಿಚಾರಣೆ ಮಾಡಿದಾಗ ಅವರ ಪಾತ್ರ ಇಲ್ಲ ಎನ್ನುವುದು ಗೊತ್ತಾಯಿತು. ಆನಂದ್ ಅವರ ಖಾತೆಗೆ ಹಣ ಹೋಗಿರುವುದರ ಆಧಾರದ ಮೇಲೆ ವಿಚಾರಣೆ ಮಾಡಿದಾಗ ಈ ಎಲ್ಲ ವಿವರ ತಿಳಿದು ಬಂದಿದೆ ಎಂದರು.ನಕಲಿ ಠೇವಣಿ ಬಾಂಡ್ ಅನ್ನು ಆರೋಪಿ ಆನಂದ್ ಅವರೇ ಬರೆದಿದ್ದು, ಹೆಚ್ಚಿನ ತನಿಖೆಗಾಗಿ ಕೈ ಬರಹ ತಜ್ಞರಿಗೆ ಕಳುಹಿಸಿಕೊಡಲಾಗಿದೆ. ನಕಲಿ ಮುದ್ರೆ ಮಾಡಿದವರನ್ನೂ ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದರು.ಆನಂದ್ ಹಾಗೂ ನಾಗಲಿಂಗಸ್ವಾಮಿ ಅವರ ಖಾತೆಯಿಂದ ಹಣ ಎಲ್ಲಿಗೆ ಹೋಗಿದೆ ಎಂಬ ಪ್ರಶ್ನೆಗೆ, ಆ ಬಗ್ಗೆ ಇನ್ನಷ್ಟೇ ತನಿಖೆ ಆರಂಭಿಸಲಾಗುವುದು. ಆರೋಪಿಗಳ ವಿರುದ್ಧ ಕಲಂ 420, 409, 468, 471 ಹಾಗೂ 120 ರಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.ಡಿವೈಎಸ್‌ಪಿ ಶೋಭಾರಾಣಿ, ಸಿಪಿಐಗಳಾದ ಕೆ.ಎಂ. ಹರೀಶ್‌ಬಾಬು, ಶ್ರೀನಿವಾಸ್, ಡಿಸಿಐಬಿ ಚಂದ್ರಶೇಖರ್, ಸೂರ್ಯನಾರಾಯಣರಾವ್, ನಾಗೇಗೌಡ, ಕೆ.ಎಸ್. ನಿರಂಜನ್, ಕೆ.ಎಂ. ಶಿವಣ್ಣ, ನಾರಾಯಣ, ಲಿಂಗರಾಜು, ನಿಂಗಣ್ಣ, ನಟರಾಜು, ಪುಟ್ಟಸ್ವಾಮಿ, ಇರ್ಫಾನ್ ಪಾಷಾ ತನಿಖಾ ತಂಡದಲ್ಲಿದ್ದರು.ಜು.5 ರಂದು ಮುಡಾ ಆಯುಕ್ತ ಡಾ.ಶಿವರಾಂ ಅವರು, ಮುಡಾ ವತಿಯಿಂದ ಇಂಡಿಯನ್ ಬ್ಯಾಂಕಿನಲ್ಲಿ 5 ಕೋಟಿ ರೂಪಾಯಿ ಠೇವಣಿ ಇಡಲಾಗಿತ್ತು.ಅದನ್ನು ಬೇರೆಯವರ ಖಾತೆಗೆ ವರ್ಗಾಯಿಸಿದ್ದಾರೆ ಎಂದು ಬ್ಯಾಂಕಿನವರ ವಿರುದ್ಧ ದೂರು ದಾಖಲಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.