ಶುಕ್ರವಾರ, ಏಪ್ರಿಲ್ 16, 2021
31 °C

ಪ್ರಕರಣ ವಿಲೇವಾರಿಗೆ ರಾಜಿಸಂಧಾನ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿವಿಧ ನ್ಯಾಯಾಲಯಗಳಲ್ಲಿ ಇತ್ಯರ್ಥ ಆಗದೇ ಇರುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಲು ಇನ್ನಷ್ಟು ರಾಜಿಸಂಧಾನ ಕೇಂದ್ರಗಳನ್ನು ತೆರೆಯಲು ಸರ್ಕಾರ ಚಿಂತನೆ ನಡೆಸಿದೆ ಎಂದು ಕಾನೂನು ಸಚಿವ ಎಸ್.ಸುರೇಶ್‌ಕುಮಾರ್ ಇಲ್ಲಿ ಹೇಳಿದರು.ಭಾನುವಾರ ನಗರದಲ್ಲಿ ನಡೆದ ವಿವಿಧ ಜಿಲ್ಲೆಗಳ ಸರ್ಕಾರಿ ವಕೀಲರ ಪ್ರಥಮ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಕೋರ್ಟ್ ಮೆಟ್ಟಿಲೇರುತ್ತಿರುವ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರುತ್ತಿದೆ. ಅದಕ್ಕೆ ತಕ್ಕಂತೆ ಪ್ರಕರಣಗಳು ಇತ್ಯರ್ಥಗೊಳ್ಳುವ ಅವಶ್ಯಕತೆಯೂ ಇದೆ. ಬೆಂಗಳೂರಿನಲ್ಲಿ ಸದ್ಯ `ನ್ಯಾಯದೇಗುಲ~ದಲ್ಲಿ ರಾಜಿಸಂಧಾನ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಇಂತಹ ಕೇಂದ್ರಗಳ ಸಂಖ್ಯೆ ಹೆಚ್ಚಿಸಲು ಸರ್ಕಾರ ಯೋಚಿಸಿದೆ. ಇದರಿಂದ ಚಿಕ್ಕಪುಟ್ಟ ಪ್ರಕರಣಗಳನ್ನು ಶೀಘ್ರದಲ್ಲಿ ವಿಲೇ ಮಾಡಲು ಸಾಧ್ಯವಾಗುತ್ತದೆ~ ಎಂದು ಅವರು ಹೇಳಿದರು.ವಕೀಲಿ ವೃತ್ತಿಯ ಬಗ್ಗೆ ಮಾತನಾಡಿದ ಸಚಿವರು, `ಸಮಾಜಕ್ಕೆ ಕೆಡುಕು ಉಂಟಾಗುವ ಕೃತ್ಯಗಳಿಗೆ ವಕೀಲರು ಕುಮ್ಮಕ್ಕು ನೀಡದೆ, ವಕೀಲಿ ವೃತ್ತಿಯ ಘನತೆಯನ್ನು ಕಾಪಾಡಬೇಕು. ಈ ವೃತ್ತಿಗೆ ಅದರದ್ದೇ ಆದ ಗಾಂಭೀರ್ಯ ಇದೆ. ಅದನ್ನು ಉಳಿಸಬೇಕು~ ಎಂದರು.ಸರ್ಕಾರಿ ವಕೀಲರ ಸೇವಾ ಅವಧಿಯನ್ನು ಮೂರು ವರ್ಷಗಳಿಂದ ಐದು ವರ್ಷಕ್ಕೆ ಏರಿಸಬೇಕು ಎಂದು ಇದೇ ಸಂದರ್ಭದಲ್ಲಿ ವಕೀಲರು ಸಚಿವರಿಗೆ ಮನವಿ ಸಲ್ಲಿಸಿದರು. ತಮಗೆ ಸರ್ಕಾರದಿಂದ ಕಂಪ್ಯೂಟರ್ ಸೌಲಭ್ಯ ಹಾಗೂ ಇತರ ಸೌಕರ್ಯಗಳನ್ನು ನೀಡುವಂತೆಯೂ ಮನವಿ ಮಾಡಿಕೊಳ್ಳಲಾಯಿತು. ಈ ಮನವಿಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಹೈಕೋರ್ಟ್ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್, ಅಡ್ವೊಕೇಟ್ ಜನರಲ್ ಎಸ್.ವಿಜಯಶಂಕರ್ ಹಾಗೂ ಇತರರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.