ಭಾನುವಾರ, ಏಪ್ರಿಲ್ 18, 2021
23 °C

ಪ್ರಕಾಶ್ ಸಮಿತಿ: ವರದಿಯಲ್ಲಿ ಏನೇನಿದೆ ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

*  2007ರ ಅಕ್ಟೋಬರ್ 5ರಂದು ನಿವೃತ್ತ ಐಎಎಸ್ ಅಧಿಕಾರಿ ಎಂ.ಪಿ. ಪ್ರಕಾಶ್ ನೇತೃತ್ವದಲ್ಲಿ ತಾಲ್ಲೂಕು ಪುನರ್ ರಚನಾ ಸಮಿತಿಯನ್ನು ರಾಜ್ಯ ಸರ್ಕಾರ ರಚಿಸಿತು. ಪರಿಣಾಮಕಾರಿಯಾದ, ಸಮರ್ಥ ಆಡಳಿತ ನೀಡುವುದು, ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ತಾಲ್ಲೂಕು ಪುನರ್ ರಚಿಸುವುದು ಇದರ ಉದ್ದೇಶ.* ರಾಜ್ಯದಲ್ಲಿ 176 ತಾಲ್ಲೂಕುಗಳು ಇವೆ. ಇನ್ನೂ 138 ಹೊಸ ತಾಲ್ಲೂಕುಗಳ ರಚನೆಗಾಗಿ ಮನವಿಗಳು ಬಂದಿವೆ. ಇವುಗಳ ಪರಿಶೀಲನೆ ನಂತರ 32 ಹೊಸ ತಾಲ್ಲೂಕು ಹಾಗೂ 11 ನಗರ ತಾಲ್ಲೂಕುಗಳ ರಚನೆಗೆ ಸಮಿತಿ ಶಿಫಾರಸು ಮಾಡಿತು.* ರಾಜ್ಯದಲ್ಲಿ ಪ್ರಸ್ತುತ 52 ಉಪ ವಿಭಾಗಗಳು ಇವೆ. ಜಿಲ್ಲೆಯ ವಿಸ್ತೀರ್ಣ, ಜನಸಂಖ್ಯೆ, ತಾಲ್ಲೂಕುಗಳ ಸಂಖ್ಯೆಯನ್ನು ಗಮನಿಸಿ ಹೆಚ್ಚುವರಿಯಾಗಿ ಎಂಟು ಉಪ ವಿಭಾಗಗಳನ್ನು ಸ್ಥಾಪಿಸುವುದಕ್ಕೂ ಸಮಿತಿ ಸಲಹೆ ಮಾಡಿದೆ.*  ಎಲ್ಲ ರಾಜ್ಯಗಳು, ಜಿಲ್ಲೆ ಮತ್ತು ತಾಲ್ಲೂಕುಗಳ ಪುನರ್‌ರಚನೆ ಮಾಡಿವೆ. ಕರ್ನಾಟಕ ತನ್ನ ಜಿಲ್ಲೆಗಳನ್ನು 19ರಿಂದ 29ಕ್ಕೆ ಪುನರ್‌ರಚಿಸಿದೆ. ಆದರೆ, ತಾಲ್ಲೂಕು ಪುನರ್‌ರಚನೆ ಮಾತ್ರ ಮಾಡಿಲ್ಲ.*  ಇದುವರೆಗೂ ನಾಲ್ಕು ಸಮಿತಿಗಳು ಈ ಕುರಿತು ಅಧ್ಯಯನ ನಡೆಸಿ, ವರದಿ ನೀಡಿವೆ. 1973ರಲ್ಲಿ ವಾಸುದೇವರಾವ್ ಆಯೋಗ; 1984ರಲ್ಲಿ ಟಿ.ಎಂ.ಹುಂಡೇಕರ್ ಸಮಿತಿ ಮತ್ತು 1986ರಲ್ಲಿ ಪಿ.ಸಿ.ಗದ್ದಿಗೌಡರ ಸಮಿತಿ ಹೊಸ ತಾಲ್ಲೂಕುಗಳ ರಚನೆಗೆ ಶಿಫಾರಸು ಮಾಡಿವೆ. ಈ ಸಮಿತಿಗಳು ಕ್ರಮವಾಗಿ 18, 27 ಮತ್ತು 30 ಹೊಸ ತಾಲ್ಲೂಕುಗಳನ್ನು ರಚಿಸಲು ಶಿಫಾರಸು ಮಾಡಿವೆ.*  ರಾಷ್ಟ್ರದ ತಾಲ್ಲೂಕುಗಳ ಸರಾಸರಿ ವಿಸ್ತೀರ್ಣ 603 ಚ.ಕಿ.ಮೀ ಹಾಗೂ ಜನಸಂಖ್ಯೆ 1.9 ಲಕ್ಷ. ಕರ್ನಾಟಕದ ತಾಲ್ಲೂಕುಗಳ ಸರಾಸರಿ ವಿಸ್ತೀರ್ಣ 1,090 ಚ.ಕಿ.ಮೀ ಮತ್ತು ಜನಸಂಖ್ಯೆ 3 ಲಕ್ಷ.*  ಹೊಸ ತಾಲ್ಲೂಕುಗಳ ರಚನೆ ನಂತರ ಅವುಗಳ ಸರಾಸರಿ ವಿಸ್ತೀರ್ಣ 886 ಚ.ಕಿ.ಮೀ ಮತ್ತು ಸರಾಸರಿ ಜನಸಂಖ್ಯೆ 2,41,327 ಆಗಲಿದೆ.*  ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ ರಾಜ್ಯಗಳಲ್ಲಿನ ತಾಲ್ಲೂಕುಗಳ ಸರಾಸರಿ ವಿಸ್ತೀರ್ಣ ಮತ್ತು ಜನಸಂಖ್ಯೆ ಕರ್ನಾಟಕಕ್ಕಿಂತ ಕಡಿಮೆ ಇದೆ.*  2005ರಲ್ಲಿ ರಾಜ್ಯ ಸರ್ಕಾರ ಹೊರ ತಂದ ಮಾನವ ಅಭಿವೃದ್ಧಿ ವರದಿಯಲ್ಲಿ ಹಿಂದುಳಿದಿದೆ ಎಂದು ಗುರುತಿಸಿರುವ ಬಹುತೇಕ ಜಿಲ್ಲೆಗಳಲ್ಲಿ ವಿಸ್ತಾರವಾದ ತಾಲ್ಲೂಕುಗಳು ಇವೆ. ಉದಾಹರಣೆಗೆ ಗುಲ್ಬರ್ಗ, ರಾಯಚೂರು, ಕೊಪ್ಪಳ ಮತ್ತು ವಿಜಾಪುರ ಜಿಲ್ಲೆಗಳು.*  ವಿಸ್ತಾರವಾದ ತಾಲ್ಲೂಕುಗಳು ಹಾಗೂ ಪರಿಶಿಷ್ಟ ಜಾತಿ, ಪಂಗಡದ ಜನಸಂಖ್ಯೆ ಜಾಸ್ತಿ ಇರುವ ತಾಲ್ಲೂಕುಗಳು, ಅಭಿವೃದ್ಧಿಯಲ್ಲಿ ಹಾಗೂ ಮಾನವ ಅಭಿವೃದ್ಧಿಯಲ್ಲಿ ಹಿಂದುಳಿದಿವೆ.*  ಸಾರಿಗೆ, ಗಣಕೀಕರಣ ವ್ಯವಸ್ಥೆ ಸಮರ್ಪಕವಾಗಿ ಇದ್ದರೂ ಎಲ್ಲ ಕಾರ್ಯಕ್ರಮಗಳನ್ನು ಆನ್‌ಲೈನ್ ಮೂಲಕ ನಿರ್ವಹಿಸಲು ಆಗುವುದಿಲ್ಲ. ತಾಲ್ಲೂಕು ಕಚೇರಿಗಳು, ಹೆಚ್ಚಿನ ಗ್ರಾಮಗಳಿಂದ 35- 40 ಚ.ಕಿ.ಮೀ ಒಳಗಡೆ ಇರಬೇಕು. ಬಹಳ ದೊಡ್ಡ ತಾಲ್ಲೂಕುಗಳಾದರೆ ಸಾರ್ವಜನಿಕರಿಗೆ ಹಾಗೂ ಅಧಿಕಾರಿಗಳಿಗೆ ಅನಾನುಕೂಲವಾಗುತ್ತದೆ.*  ಹೊಸ ತಾಲ್ಲೂಕು ರಚಿಸುವ ಕಡೆ ಕಡ್ಡಾಯವಾಗಿ ತಾಲ್ಲೂಕು ಪಂಚಾಯಿತಿ ವ್ಯವಸ್ಥೆ ಜಾರಿಯಾಗಬೇಕು. ಹಲವು ಇಲಾಖೆಗಳ ಕಚೇರಿಗಳನ್ನು ತೆರೆಯಬೇಕು.*  ರಾಜ್ಯದಲ್ಲಿ 26 ಸ್ಥಳಗಳಲ್ಲಿ ವಿಶೇಷ ತಹಶೀಲ್ದಾರರನ್ನು ನೇಮಿಸಲಾಗಿದೆ. ಇವುಗಳಲ್ಲಿ 14 ಸ್ಥಳಗಳಲ್ಲಿ ಹೊಸ ತಾಲ್ಲೂಕು ರಚಿಸಲು ಸಮಿತಿ ಶಿಫಾರಸು ಮಾಡಿದೆ. ಅಗತ್ಯ ಇರುವ ಕಡೆ ವಿಶೇಷ ತಹಶೀಲ್ದಾರ್ ಕಚೇರಿಯನ್ನು ಮುಂದುವರಿಸಬೇಕು. ಪ್ರಮುಖ ಇಲಾಖೆಗಳ ಉಪ ವಿಭಾಗದ ಕಚೇರಿಗಳನ್ನು ಪ್ರಾರಂಭಿಸುವುದು ಸೂಕ್ತ ಎಂದೂ ಸಮಿತಿ ಅಭಿಪ್ರಾಯಪಟ್ಟಿದೆ.*  ಬೆಳೆಯುತ್ತಿರುವ ಜಿಲ್ಲಾ ತಾಲ್ಲೂಕು ಕೇಂದ್ರಗಳಾದ ಶಿವಮೊಗ್ಗ, ರಾಯಚೂರು, ತುಮಕೂರಿಗೆ ಹೆಚ್ಚುವರಿ ತಹಶೀಲ್ದಾರರನ್ನು ನೇಮಿಸಬೇಕು. ನಿರ್ದಿಷ್ಟ ಅಧಿಕಾರಗಳನ್ನು ಈ ಅಧಿಕಾರಿಗೆ ನೀಡಬೇಕು ಎಂದೂ ವರದಿಯಲ್ಲಿ ಹೇಳಲಾಗಿದೆ.*  ಹೋಬಳಿಗಳ ವಿಸ್ತೀರ್ಣದಲ್ಲಿ ಅಗಾಧ ವ್ಯತ್ಯಾಸ ಇದೆ. ಸರಾಸರಿ ವಿಸ್ತೀರ್ಣ 247 ಚ.ಕಿ.ಮೀ. 400 ಚ.ಕಿ.ಮೀ ಮೀರಿದ ಹೋಬಳಿಗಳು 80. ಹಾಗೆಯೇ 200 ಚ.ಕಿ.ಮೀ ಗಿಂತ ಕಡಿಮೆ ಇರುವ ಹೋಬಳಿಗಳು 344 ಇವೆ. ಜನಸಂಖ್ಯೆಯಲ್ಲೂ ಸಹ ಅಪಾರ ವ್ಯತ್ಯಾಸ ಇದೆ. ಈ ಅಸಮತೋಲವನ್ನು ಸರಿಪಡಿಸುವ ಅಗತ್ಯ ಇದೆ. ವಿಭಾಗಾಧಿಕಾರಿಗಳಿಗೆ ಈ ಜವಾಬ್ದಾರಿಯನ್ನು ವಹಿಸುವುದು ಸೂಕ್ತ.*  ರಾಜ್ಯದಲ್ಲಿರುವ 329 ನಾಡ ಕಚೇರಿಗಳನ್ನು ರದ್ದುಪಡಿಸಬೇಕು ಎಂದು 2001ರಲ್ಲಿ ಆಡಳಿತ ಸುಧಾರಣಾ ಆಯೋಗ ಶಿಫಾರಸು ಮಾಡಿದೆ. ಆದರೆ, ಜಿಲ್ಲಾಧಿಕಾರಿಗಳು ಸಮಿತಿಗೆ ತಿಳಿಸಿರುವ ಪ್ರಕಾರ ನಾಡ ಕಚೇರಿಗಳು ಜನಸಾಮಾನ್ಯರಿಗೆ ಅನುಕೂಲಕರ. ಹೀಗಾಗಿ ಅವುಗಳನ್ನು ರದ್ದುಪಡಿಸುವುದು ಬೇಡ. ಬದಲಿಗೆ ಅವುಗಳನ್ನು ಬಲಪಡಿಸಬೇಕು ಎಂದೂ ವರದಿಯಲ್ಲಿ ತಿಳಿಸಲಾಗಿದೆ. ಹೊಸ ತಾಲ್ಲೂಕು/ವಿಶೇಷ ತಹಶೀಲ್ದಾರರ ಹುದ್ದೆ ಇರುವ ಸ್ಥಳಗಳಲ್ಲಿ ನಾಡ ಕಚೇರಿಯನ್ನು ರದ್ದುಪಡಿಸಬೇಕು.
 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.