ಮಂಗಳವಾರ, ಏಪ್ರಿಲ್ 20, 2021
29 °C

ಪ್ರಕೃತಿಯತ್ತ ತುಡಿಯುವ ಬಯಕೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಾವಿದನ ಮನಸ್ಸು ಒಂದಿಲ್ಲೊಂದು ವಿಷಯದತ್ತ ಸದಾ ಹಾತೊರೆಯುತ್ತಲೇ ಇರುತ್ತದೆ. ಗ್ರಹಿಸಿದ ವಿಷಯವನ್ನು ಸುಮ್ಮನೇ ಹರಿಯ ಬಿಡದೆ ಅದನ್ನು ಚೌಕಟ್ಟಿನಲ್ಲಿ ಬಂಧಿಸಿಡಲು ಪ್ರಯತ್ನಿಸುತ್ತಾರೆ.ತನ್ನ ಭಾವವೊಂದು ಬಣ್ಣ ತಳೆದಾಗ ತುಟಿಯಂಚಿನಲ್ಲಿ ಸಣ್ಣ ನಗೆ ತೇಲಿಸಿ ಕಲಾವಿದ ನಿರುಮ್ಮಳಗೊಳ್ಳುತ್ತಾನೆ. ಆದರೆ ಅಲ್ಲಿಗೆ ಆ ಪಯಣ ಮುಗಿಯುವುದಿಲ್ಲ. ಮತ್ತೊಂದು ಚಿತ್ರಕ್ಕೆ ರೂಪ ನೀಡಲು ಕುಂಚ ಕೈಗೆತ್ತಿಗೊಳ್ಳುತ್ತಾನೆ.ಪ್ರಕೃತಿ ಮತ್ತು ಕಲಾವಿದನ ಮಧ್ಯೆ ಒಂದು ಅವಿನಾಭಾವ ಸಂಬಂಧವಿದೆ. ಪ್ರಕೃತಿಯೆಡೆಗೆ ತುಡಿಯುವ ಕಲಾವಿದರೇ ಜಾಸ್ತಿ. ಕಲಾವಿದೆ ಊರ್ಮಿಳಾ ವಿ.ಜಿ. ಅವರದ್ದು ಇದೇ ಮನಸ್ಥಿತಿ. ಅಂದಹಾಗೆ, ಗಿಡ ಬೆಳೆಸಿ, ನಿಸರ್ಗ ಉಳಿಸಿ ಎನ್ನುವ ಸಂದೇಶ ಸಾರುವ ಸರಣಿ ಚಿತ್ರಗಳನ್ನು ರಚಿಸಿದ್ದಾರೆ ಊರ್ಮಿಳಾ. ಪ್ರದರ್ಶನದ ಹೆಸರು `ಹ್ಯಾವ್ ಸ್ಪೇಸ್; ವಿಲ್ ಗ್ರೋ~.ನಿಸರ್ಗದ ನಡುವೆ ಕುಳಿತಾಗ ಅಲ್ಲಿ ನಾನು ಮತ್ತು ನಿಶ್ಯಬ್ಧ ವಾತಾವರಣ ಮಾತ್ರ ಇರುತ್ತದೆ. ಕುಂಚ ಹಿಡಿಯುವ ಮೊದಲು ನನ್ನೊಳಗೊಂದು ತಯಾರಿ ಬೇಕಾಗುತ್ತದೆ.ಹರಿವ ನೀರಿನ ಶಬ್ಧ, ಬೀಸುವ ಗಾಳಿಗೆ ಬಳುಕುವ ಬಳ್ಳಿ, ಹಕ್ಕಿಗಳ ಕಲರವ ಇವನ್ನೆಲ್ಲಾ ನನ್ನ ಭಾವನೆಗಳ ಬಣ್ಣದಲ್ಲಿ ಅದ್ದಿ ಕುಂಚ ಹಿಡಿದು ಕ್ಯಾನ್ವಾಸ್ ಮೇಲೆ ಮೂಡಿಸುವ ಆಸೆ. ಕಲ್ಪನೆ, ವಾಸ್ತವವನ್ನು ಸೇರಿಸಿ ಒಂದು ಕಲಾಕೃತಿ ಮೂಡಬೇಕು. ಹೀಗೆ ನನ್ನೆದೆಯ ಭಾವ ಕಾಮನಬಿಲ್ಲಿನ ರಂಗು ಪಡೆದುಕೊಳ್ಳಬೇಕು ಎಂಬ ಆಸೆ ವ್ಯಕ್ತಪಡಿಸುತ್ತಾರೆ ಅವರು.ಒಂದು ಕಲಾಕೃತಿ ಮೊದಲು ನನಗೆ ತೃಪ್ತಿ ಕೊಡಬೇಕು. ನನಗೆ ಅದು ಏನು ಎಂಬುದು ಅರ್ಥವಾಗದಿದ್ದರೆ ನೋಡುಗರು ಹೇಗೆ ತಾನೇ ಅರ್ಥಮಾಡಿಕೊಳ್ಳುತ್ತಾರೆ ಎಂಬುದು ಕಲಾವಿದೆ ಊರ್ಮಿಳಾ ಅವರ ಪ್ರಶ್ನೆ.ಸೂಕ್ಷ್ಮ ಮನಸ್ಸಿನ ಈ ಕಲಾವಿದೆ ಪ್ರಕೃತಿಯ ವಿಚಾರ ಬಂದಾಗ ಭಾವುಕರಾಗುತ್ತಾರೆ. ಇವರ ಎಲ್ಲ ಕಲಾಕೃತಿಗಳಲ್ಲಿ ಪರಿಸರ ಕಾಳಜಿ ಎದ್ದು ಕಾಣುತ್ತದೆ. ಚಿಕ್ಕ ಚಿಕ್ಕ ಗಿಡಕ್ಕೆ ಜಾಗ ಕೊಡಿ. ಅದು ನಮ್ಮಲ್ಲಿ ಏನೋ ಹೇಳ ಬಯಸುತ್ತೆ. ಮರ ಗಿಡಗಳ ಮಾತಿಗೆ ಕಿವಿಗೋಡಿ ಎಂದು ಭಾವುಕರಾಗಿ ನುಡಿಯುತ್ತಾರೆ ಊರ್ಮಿಳಾ.ನಿಮ್ಮ ಮನೆಯಂಗಳದ ಒಂದು ಮೂಲೆಯಲ್ಲೋ ಅಥವಾ ಕಾಂಪೌಂಡಿನ ಒಂದು ಸಂಧಿಯಲ್ಲೋ ಪುಟ್ಟ ಗಿಡಗಳನ್ನು ನೆಟ್ಟು ನೋಡಿ. ನಂತರ ಗಿಡ ಬೆಳೆಯುವುದನ್ನು ನೋಡುವುದೇ ಕಣ್ಣಿಗೆ ಸೊಗಸು ಎಂಬುದು ಈ ಕಲಾವಿದೆಯ ಮಾತು. ಇವರ ಕಲಾಕೃತಿಯಲ್ಲಿ ಪುಟ್ಟ ಪುಟ್ಟ ಗಿಡಗಳನ್ನು ಕಣ್ತುಂಬಿಕೊಳ್ಳಬಹುದು.ಇವರು ಕಲಾಕೃತಿಗೆ ಮಾತ್ರ ತೆರೆದುಕೊಳ್ಳದೆ ಸ್ವತಃ ಅನೇಕ ಪ್ರಯೋಗವನ್ನು ಮಾಡಿದ್ದಾರೆ. ಶೊನಲ್ಲಿ ಗಿಡ ಬೆಳೆಸಿದ್ದಾರೆ. ಪ್ರಕೃತಿಯಿಂದ ಕಲ್ಪನಾಶಕ್ತಿಯನ್ನು ಪಡೆದುಕೊಂಡೆ. ಹಾಗೆ ನಿಸರ್ಗಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬುವುದು ಈ ಕಲಾವಿದೆಯ ಆಸೆ, ಕನಸು. `ವುಡ್ ಕಟ್ ಪ್ರಿಂಟ್ಸ್~, ಪ್ರಕೃತಿಗೆ ಸಂಬಂಧಪಟ್ಟ ಛಾಯಾಚಿತ್ರಗಳು ಇವರ ಪ್ರದರ್ಶನದ ವಸ್ತುಗಳು.`ಕಲಾವಿದೆಯಾಗುತ್ತೇನೆ ಎಂದಾಗ ಎಲ್ಲರ ಮನೆಯವರ ಹಾಗೇ ನಮ್ಮ ಮನೆಯ್ಲ್ಲಲೂ ಸಣ್ಣದೊಂದು ವಿರೋಧ ವ್ಯಕ್ತವಾಗಿತ್ತು. ಆದರೆ ಕೊನೆಗೆ ಅದು ಬೆಂಬಲವಾಗಿ ಪರಿವರ್ತನೆಯಾಯಿತು. ಯುವ ಕಲಾವಿದರು ಪ್ರಕೃತಿಯೆಡೆಗೆ ತೆರಳಬೇಕು.ನಿಸರ್ಗವೇ ದೊಡ್ಡ ಚಿತ್ರಶಾಲೆ ಇದ್ದಂತೆ. ಮನಸ್ಸಿಟ್ಟು ಚಿಕ್ಕ ವಸ್ತುವನ್ನು ಗಮನಿಸಿದರೂ ಸಾಕು ಅಲ್ಲಿ ಜ್ಞಾನಭಂಡಾರ ವಿಸ್ತಾರವಾಗುತ್ತದೆ~ ಎಂದು ಯುವ ಪೀಳಿಗೆಗೆ ಕಿವಿಮಾತು ಹೇಳುತ್ತಾರೆ.ಇವರ ಕಲಾಕೃತಿ, ಛಾಯಾಚಿತ್ರಗಳನ್ನು ಕಣ್ತುಂಬಿಸಿಕೊಳ್ಳ ಬಯಸುವವರು ಇಂದಿರಾನಗರದ 2ನೇ ಹಂತದಲ್ಲಿರುವ `ಗ್ಯಾಲರಿ 545~ಗೆ ಭೇಟಿ ನೀಡಬಹುದು. ಸಮಯ ಬೆಳಿಗ್ಗೆ 11ರಿಂದ ಸಂಜೆ 6.30. ಸಂಪರ್ಕಕ್ಕೆ: 99801 11291

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.