ಜೋಸೆಫ್ ಮಲ್ಲೋರ್ಡ್ ವಿಲಿಯಮ್ ಟರ್ನರ್ ಎಂಬ ಕಲಾವಿದನ ಹೆಸರನ್ನು ಕೇಳಿರದ ಕಲಾ ವಿದ್ಯಾರ್ಥಿಯು ಬಹುಶಃ ಯಾವ ಕಲಾ ಶಾಲೆಯಲ್ಲೂ ಇಲ್ಲವೇನೋ. 23 ಏಪ್ರಿಲ್ 1775ರಲ್ಲಿ ಲಂಡನ್ನಲ್ಲಿ ಜನಿಸಿದ ಈ ಕಲಾವಿದ ಅತಿ ಚಿಕ್ಕ ವಯಸ್ಸಿನಲ್ಲಿ ರಾಯಲ್ ಅಕಾಡೆಮಿಯ ಬೇಸಿಗೆ ಚಿತ್ರ ಪ್ರದರ್ಶನದಲ್ಲಿ, ತನ್ನ ಜಲವರ್ಣ, `ಎ ವ್ಯೆ ಅಫ್ ದ ಆರ್ಚ್ ಬಿಷಪ್ಸ್ ಪ್ಯಾಲೇಸ್, ಲ್ಯಾಂಬೆತ್~ ಎನ್ನುವ ಚಿತ್ರವನ್ನು ಪ್ರದರ್ಶಿಸಿದ.

ಟರ್ನರ್ ತನ್ನ ಅಪರಿಮಿತ ಕುಶಲತೆಯನ್ನು ತನ್ನ ಅನೇಕ ವರ್ಣಚಿತ್ರಗಳಲ್ಲಿ ಪ್ರಯೋಗಿಸಿದ್ದರೂ ಅದಕ್ಕೆ ಮೂಲ ಅವನ ರೇಖಾಚಿತ್ರಗಳು.

ಲಂಡನ್ ಮತ್ತು ಇಂಗ್ಲೆಂಡಿನ ಬಹುಭಾಗವನ್ನು ಪದೇ ಪದೇ ಸುತ್ತಿ, ದಾಖಲಿಸಿಕೊಂಡ ಈ ರೇಖಾ ಚಿತ್ರಗಳನ್ನು ಅವನು ತನ್ನ ಸ್ಟುಡಿಯೋದಲ್ಲಿ ಪುನರ್ ಸಂಯೋಜಿಸುವ ಮೂಲಕ, ತನ್ನ ಅಭಿವ್ಯಕ್ತಿಗೆ ಜೀವ ತುಂಬಿಸುವ ಕೆಲಸವನ್ನು ಮಾಡಿದ್ದಾನೆ.

ಟರ್ನರ್ ಪ್ರಕೃತಿಯಲ್ಲಿ ಅಡಕವಾಗಿರುವ ಅಲೌಕಿಕ ಸೌಂದರ್ಯವನ್ನು ಮಾತ್ರವೇ ತನ್ನ ಕೃತಿಗಳಿಗೆ ಪ್ರೇರಣೆಯಾಗಿ ಭಾವಿಸಿದ್ದನೆಂದರೆ ತಪ್ಪಾದೀತೇನೋ. ಅಷ್ಟೇ ಮುಖ್ಯವಾಗಿ, ಮನುಷ್ಯನನ್ನು ಮೀರಿದ ಶಕ್ತಿಯನ್ನು ನಿಸರ್ಗದಲ್ಲಿ ಗುರುತಿಸುವ ಟರ್ನರ್, ತನ್ನ ಬಹುತೇಕ ಚಿತ್ರಗಳಲ್ಲಿ, ಮನುಷ್ಯರನ್ನು ಮುನ್ನೆಲೆಯಲ್ಲಿ ರಚಿಸಿದರೂ ಅವರು ಒಟ್ಟಾರೆ ಸಂಯೋಜನೆಯಲ್ಲಿ ಅಸಹಾಯಕರೆಂಬಂತೆಯೇ ಬಿಂಬಿಸುತ್ತಾನೆ.

ಮನುಷ್ಯ ಮತ್ತು ಪ್ರಕೃತಿಯ ನಡುವಣ ಸಂಘರ್ಷದಲ್ಲಿ ಗೆಲ್ಲುವುದು ಪ್ರಕೃತಿಯೇ ಎಂಬ ಅವನ ತೀರ್ಮಾನಕ್ಕೆ ಬದ್ಧವಾಗಿರುವಂತೆ ಅವನು ತನ್ನ ಚಿತ್ರಗಳ ವಸ್ತು ಮತ್ತು ನಿರೂಪಣೆಯ ರಚನಾ ಕ್ರಮವನ್ನು ಬಳಸಿಕೊಳ್ಳುತ್ತಾನೆ.

`ರೋಮಾಂಟಿಸಿಸಮ್~ ಎನ್ನುವ ಶೈಲಿಯಲ್ಲಿ (17-18ನೇ ಶತಮಾನ) ಕಲಾವಿದನೇ ಕೇಂದ್ರ. ಅವನು ಸಮಾಜದ ಚೌಕಟ್ಟುಗಳನ್ನು ಮೀರುತ್ತಾ ತನ್ನದೇ ಆದ ತೀರ್ಮಾನಗಳಲ್ಲಿ ಬದುಕಲು ಹೊರಡುತ್ತಾನೆ. ಕಲ್ಪನೆಯಲ್ಲಿ ಸಾಕಾರಗೊಂಡ ಅನುಭವ, ಅನನ್ಯತೆ ಮತ್ತು ಅನುಭೂತಿಗಳು ಈ ಕಲಾವಿದರ ಸಂಯೋಜನೆಗಳ ಮೂಲವಸ್ತುಗಳು.

ಟರ್ನರ್ ತನ್ನ, ಸಮಕಾಲೀನರಾದ, ಕ್ಯಾಸ್ಪರ್ ಡೇವಿಡ್ ಫ್ರೆಡ್ರಿಕ್, ಗೋಯಾ, ಯುಗೀನ್ ಡೆಲಾಕ್ರು ಮುಂತಾದ ಕಲಾವಿದರ ಸಿದ್ಧಾಂತಗಳನ್ನು ಒಪ್ಪಿಕೊಳ್ಳುತ್ತಲೇ, ತನ್ನ ಶೈಲಿ ಮತ್ತು ಚಿತ್ರ ರಚನೆಯ ಕ್ರಮ, ಮಾಧ್ಯಮವನ್ನು ಬಳಸಿಕೊಳ್ಳುವ ಬಗೆಯು ಅತ್ಯಂತ ಭಿನ್ನವೆಂದು ತೋರಿಸಿಕೊಡುತ್ತಾನೆ. ಟರ್ನರ್ನ ಮನಸ್ಸನ್ನು ಸೆಳೆದ ವಸ್ತುಗಳೆಂದರೆ, ಸಮುದ್ರದಲ್ಲಿನ ಬಿರುಗಾಳಿ, ಬೆಂಕಿ, ದುರಂತದಲ್ಲಿ ಸಿಲುಕಿದ ಹಡಗು, ವಿಶಾಲವಾದ ಬೆಳಕನ್ನು ಚೆಲ್ಲುವ ಆಗಸ, ವಿಚಿತ್ರವಾದ ಆಕಾರಗಳನ್ನು ಹೊಂದಿ ಇಡೀ ಆಕಾಶವನ್ನು ಆವರಿಸಿಕೊಳ್ಳುವ ಬಣ್ಣದ ಮೋಡಗಳ ಮೇಲೆ ನೆರಳು ಬೆಳಕಿನ ಲಾಸ್ಯ.

ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ ಮಾತ್ರ ಕಾಣುವ ಮನುಷ್ಯ ಆಕಾರಗಳು. ಉಳಿದಂತೆ ಬಂಗಾರದ ವರ್ಣವನ್ನು ಇಡೀ ಜಗತ್ತಿಗೇ ಎರಕ ಹೊಯ್ದಂತೆ ಹೊಳೆಯುವ ಹಳದಿ, ಕೇಸರಿಯ ಉಗ್ರ ವರ್ಣಗಳು (ಬೇಂದ್ರೆಯವರ, `ಮೂಡಲ ಮನೆಯ, ಮುತ್ತಿನ ನೀರಿನ ಎರಕಾವಾ ಹೊಯ್ದ...~ ಕವಿತೆಯನ್ನೊಮ್ಮೆ ನೆನಪಿಸಿಕೊಳ್ಳಿ). ಸೂರ್ಯನ ಬೆಳಕು, ದೇವರ ಅಸೀಮವಾದ ಶಕ್ತಿಯ ರೂಪವೆಂದೇ ಟರ್ನರ್ ನಂಬಿದ್ದ.

ಅಂತೆಯೇ ಅವನ ಎಲ್ಲ ಚಿತ್ರಗಳು ಬೆಳಕಿನ ಪರಿಣಾಮದಿಂದ ಉಂಟಾಗುವ ವರ್ಣಸಂಯೋಜನೆಯ ಎಲ್ಲಾ ಆಯಾಮಗಳನ್ನು ಹುಡುಕುವ ಪ್ರಯಾಣಗಳೇ ಆಗಿದ್ದವು. ಇದರಿಂದ ಅವನು, ಮುಂದಿನ ಇಂಪ್ರೆಷನಿಸ್ಟ್ ಕಲಾವಿದರಿಗೆ ಪ್ರೇರಣೆಯಾಗುವಂತೆ ಆಯಿತು.

ಟರ್ನರನ ಇಲ್ಲಿನ ಚಿತ್ರ, `ಮಳೆ, ಹಬೆ ಮತ್ತು ವೇಗ- ದ ಗ್ರೇಟ್ ವೆಸ್ಟ್ರನ್ ರೈಲ್ವೆ~ ಕೃತಿಯನ್ನು, ಥೇಮ್ಸ ನದಿಗೆ ಅಡ್ಡಲಾಗಿ ಕಟ್ಟಿದ, ಮೈಡನ್ ಹೆಡ್ ರೈಲ್ವೇ ಬ್ರಿಡ್ಜ್ನ ರೇಖಾಚಿತ್ರದ ರೂಪಾಂತರವೆಂದು ಭಾವಿಸಲಾಗಿದೆ. ಈ ಚಿತ್ರದಲ್ಲಿ, ಕೇಂದ್ರ ಭಾಗದಿಂದ ಹೊಮ್ಮುವ ಸೇತುವೆ, ಚಿತ್ರದ ಎಡ ಮೂಲೆಯ ಮೂಲಕ ಹೊರಹೋಗುತ್ತದೆ.

ಅಂತೆಯೇ ಆ ಬ್ರಿಡ್ಜಿನ ಮೇಲಿರುವ ಉಗಿ ಬಂಡಿ, ಕೆಳಗಿನ ಥೇಮ್ಸ ನದಿ, ಅದಕ್ಕೆ ಹೊಂದಿಕೊಂಡಂತೆ ಇರುವ ನಗರದ ಭೂ ಭಾಗ, ಮತ್ತು ಚಿತ್ರದ ಬಹುಪಾಲನ್ನು ಆವರಿಸಿರುವ ಆಕಾಶ- ಎಲ್ಲವೂ ಸೂರ್ಯನ ಹೊಂಗಿರಣಗಳಿಂದ ಹೊಳೆಯುತ್ತಿರುವಂತೆ ನಿರೂಪಿಸಲಾಗಿದೆ.

ಚಿತ್ರದ ಕೆಳಗೆ, ನದಿಯಲ್ಲಿ ಬೋಟಿನಲ್ಲಿ ಪಯಣಿಸುತ್ತಿರುವವರನ್ನು ಅತ್ಯಂತ ಚಿಕ್ಕ ಪ್ರಮಾಣದಲ್ಲಿ ಪ್ರಾಮುಖ್ಯವಲ್ಲವೇನೋ ಎಂಬಂತೆ ಚಿತ್ರಿಸಲಾಗಿದೆ. ಗಾಢ ಕಂದು, ಕಪ್ಪು ವರ್ಣಗಳಲ್ಲಿ ಕಾಣುವ ಬಿಡ್ಜ್, ಪ್ರಖರ ತೆಳು ಹಳದಿ ವರ್ಣದ ಹಲವು ಛಾಯೆಗಳೊಂದಿಗೆ ಕಾಣಿಸುತ್ತಾ, ಪ್ರಕೃತಿ ಮತ್ತು ಮನುಷ್ಯ ಪ್ರಯತ್ನಗಳನ್ನು ಮುಖಾಮುಖಿಯಾಗಿಸುವ ಕಲಾವಿದನ ಉದ್ದೇಶವನ್ನು ಸಾಕಾರಗೊಳಿಸುತ್ತದೆ.

ಈ ಚಿತ್ರವು ತೈಲ ವರ್ಣದಲ್ಲಿದ್ದು, ಟರ್ನರನ ಜಲವರ್ಣದ ಕುಶಲತೆಯನ್ನು ತೈಲವರ್ಣದಲ್ಲಿಯೂ ಸಾಧ್ಯಮಾಡಿರುವ ಬಗೆ, ಅತ್ಯುತ್ಕೃಷ್ಟ ತಾಂತ್ರಿಕ ನೈಪುಣ್ಯತೆಗೆ ಸಾಕ್ಷಿಯಾಗಿದೆ. ಚಿತ್ರದಲ್ಲಿ ನಮ್ಮ ಕಣ್ಣುಗಳನ್ನು ಕೇಂದ್ರಕ್ಕೆ ಎಳೆದುಕೊಂಡು ಹೋಗುವಂತಹ, ಯಥಾದರ್ಶನದ (ಪರ್ಸ್ಪೆಕ್ಟೀವ್) ತಂತ್ರ ಮೆಚ್ಚಬೇಕಾದ ಅಂಶ.

ಚಿತ್ರದ ಮೇಲ್ಮೈಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ವರ್ಣಗಳ ಲೇಪನದ ಮೂಲಕ ರೂಪು ತಳೆಯುವ ಮೈವಳಿಕೆಯೂ ಅಷ್ಟೇ ಮುಖ್ಯವಾಗಿ ಇಲ್ಲಿ ಕಾಣಿಸುತ್ತದೆ.ಟರ್ನರ್ ಹಣಕಾಸಿನ ಯಶಸ್ಸಿನಿಂದಾಗಿ, ತನಗೆ ಸರಿ ಕಂಡ ದಾರಿಯಲ್ಲಿ ಪ್ರಯೋಗಗಳನ್ನು ಮಾಡುತ್ತ ಮುಂದಿನ ತಲೆಮಾರಿನ ಹಲವು ಪ್ರಕಾರದ ಕಲೆಗಳಿಗೆ ಬುನಾದಿ ಹಾಕಿದನೆಂದೇ ನಾವು ಭಾವಿಸಬಹುದು. `ಇಂಪ್ರೆಷನಿಸ್ಟ್~ ಕಲಾವಿದ ಮೋನೆ ಇವನಿಂದ ಪ್ರಭಾವಿತನಾದನೆಂದರೆ ಟರ್ನರನ ಪ್ರಾಮುಖ್ಯತೆಯನ್ನು ನಾವು ಚರಿತ್ರೆಯಲ್ಲಿ ಗಮನಿಸಬಹುದು.

ಸನ್ನಿವೇಶದಲ್ಲಿ ಕಲಾವಿದ ಸೃಷ್ಟಿಸುವ ಅಲೌಕಿಕ ಅನುಭವವನ್ನು ಶಬ್ದಗಳಲ್ಲಿ ಹಿಡಿದಿಡುವುದು ದುಸ್ಸಾಹಸವೇ ಸರಿ. ಆದರೆ, ಟರ್ನರ್ ತನ್ನ ಚಿತ್ರದಲ್ಲಿ ಲೌಕಿಕ ವಿವರಣೆಗಳಿಗೆ ಅತ್ಯಂತ ಕಡಿಮೆ ಮಹತ್ವ ಕೊಟ್ಟು, ಪ್ರಕೃತಿಯ ಅಮೂರ್ತ ರೂಪವನ್ನು ಬೆಳಕಿನ ನಾಟಕೀಯತೆಯ ಮೂಲಕ ನಮ್ಮ ಕಣ್ಣುಗಳಿಗೆ ಕಟ್ಟಿಕೊಡುವ ಮಾಂತ್ರಿಕ ಕೆಲಸವನ್ನು ಮಾಡಿದ. ಈ ಜಾದೂವನ್ನು ಮುಂದಿನ ಹಲವಾರು ತಲೆಮಾರುಗಳವರೆಗೆ ಕಲಾ ಪ್ರೇಮಿಗಳು ಮರೆಯುವುದಿಲ್ಲವೆಂದು ನಾನು ಭಾವಿಸುತ್ತೇನೆ.
ಲೇಖಕರು ಪ್ರಸಿದ್ಧ ಕಲಾವಿದರು, ಕಲಾ ವಿಮರ್ಶಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.