ಗುರುವಾರ , ಆಗಸ್ಟ್ 6, 2020
24 °C

ಪ್ರಗತಿಯ ಚಿತ್ರಣ ತೋರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಪ್ರತಿ ಸಭೆಯಲ್ಲೂ ಅದೇ ಉತ್ತರ ಕೊಡುವುದು ಬೇಡ. ಸಮಸ್ಯೆಗಳ ಬಗ್ಗೆ ಸದಸ್ಯರ ಗಮನಕ್ಕೆ ತಂದು ಪರಿಹರಿಸಿಕೊಳ್ಳಿ. ಪ್ರತಿಬಾರಿಯೂ ಸಮಸ್ಯೆಯನ್ನು ಹೇಳಿದರೆ ಆಗದು. ಪ್ರಗತಿ ಚಿತ್ರಣ ತೋರಿಸಿ ಎಂದು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ದೇವರಾಜ ನಾಯಕ ಅಧಿಕಾರಿಗಳಿಗೆ ತಾಕೀತು ಮಾಡಿದರು.ಮಂಗಳವಾರ ಇಲ್ಲಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು. ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಅಗತ್ಯ ಯೋಜನೆಗಳನ್ನು ಜಾರಿಗೊಳಿಸಲು ಅಧಿಕಾರಿಗಳು ಶ್ರಮಿಸಬೇಕು.ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಹಲವಾರು ಯೋಜನೆಗಳಿದ್ದು, ಅವುಗಳನ್ನು ಸಮರ್ಪಕವಾಗಿ ಸಮಾಜದ ಜನರಿಗೆ ತಲುಪಿಸಬೇಕು ಎಂದು ಹೇಳಿದರು.ಹಣಮಗೌಡ ಮರಕಲ್ ಮಾತನಾಡಿ, ಜಿಲ್ಲೆಯಲ್ಲಿ ಅಂಗನವಾಡಿ ಕಟ್ಟಡಗಳ ಬಗ್ಗೆ ಮಾಹಿತಿ ಕೇಳಿದರು. ಶಹಾಪುರ ತಾಲ್ಲೂಕಿನಲ್ಲಿ ಅತಿವೃಷ್ಟಿಯಿಂದಾಗಿ ಏಳು ಅಂಗನವಾಡಿ ಕಟ್ಟಡಗಳು ಹಾಳಾಗಿದ್ದು, ಅವುಗಳ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದರು.ಇದಕ್ಕೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಾಧವ, ಜಿಲ್ಲೆಯಲ್ಲಿ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲು ನಿವೇಶನದ ಸಮಸ್ಯೆ ಎದುರಾಗಿದೆ. ಜಿಲ್ಲೆಯಲ್ಲಿ ಸುಮಾರು 10-12 ಕಡೆಗಳಲ್ಲಿ ನಿವೇಶನ ಸಿಕ್ಕಿಲ್ಲ. ಸರ್ಕಾರದ ಆದೇಶದ ಪ್ರಕಾರ ಶಾಲೆಗಳ ಆವರಣದಲ್ಲಿಯೇ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಬೇಕಾಗಿದ್ದು, ಶಾಲಾಭಿವೃದ್ಧಿ ಸಮಿತಿಯವರು ನಿವೇಶನ ನೀಡಲು ಒಪ್ಪುತ್ತಿಲ್ಲ ಎಂದು ತಿಳಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ವಿ. ಭೋಸಲೆ, ಜಿಲ್ಲೆಯಲ್ಲಿ ನಿವೇಶನದ ಸಮಸ್ಯೆ ಇರುವ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಕರೆದುಕೊಂಡು ಹೋಗಿ. ಕುಳಿತು ಚರ್ಚೆ ಮಾಡಿ. ನಿವೇಶನದ ಸಮಸ್ಯೆ ಬಗೆಹರಿಸಿ, ಕೂಡಲೇ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಿ ಎಂದು ಸಲಹೆ ಮಾಡಿದರು.ಜಿಲ್ಲೆಯಲ್ಲಿ ಕಳೆದ ವರ್ಷದ 66 ಸೇರಿದಂತೆ ಒಟ್ಟು 138 ಅಂಗನವಾಡಿ ಕಟ್ಟಡಗಳ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಜಾಧವ ಸಭೆಗೆ ಮಾಹಿತಿ ನೀಡಿದರು. ಅಂಗನವಾಡಿ ಕಟ್ಟಡಗಳನ್ನು ಕಟ್ಟಲು ಭೂಸೇನಾ ನಿಗಮವು ತಯಾರಿಸಿರುವ ಅಂದಾಜು ವೆಚ್ಚ ಹೆಚ್ಚಾಗಿದೆ ಎಂಬ ಆಕ್ಷೇಪ ಸಭೆಯಲ್ಲಿ ವ್ಯಕ್ತವಾಯಿತು.ಭೂಸೇನಾ ನಿಗಮದವರು ಒಂದು ಅಂಗನವಾಡಿ ಕಟ್ಟಡಕ್ಕೆ ರೂ. 3.55 ಲಕ್ಷ ಅಂದಾಜುತಯಾರಿಸುತ್ತಿದ್ದಾರೆ. ಇದು ಹೆಚ್ಚಾಗಿದೆ. ಪಂಚಾಯತ್ ರಾಜ್ ಎಂಜಿನಿಯರಿಂಗ್‌ಗೆ ನೀಡಿ. ಕಡಿಮೆ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಿದ್ದಾರೆ ಎಂದು ದೇವರಾಜ ನಾಯಕ ಸಲಹೆ ಮಾಡಿದರು.ಕಳೆದ ವರ್ಷ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಏಜೆನ್ಸಿಯನ್ನು ಗುರುತಿಸಿ, ಕಾಮಗಾರಿ ನೀಡಲಾಗಿದೆ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಕೈಗೊಳ್ಳುವ ನಿರ್ಧಾರದಂತೆ ಈ ಬಾರಿಯ ಕಟ್ಟಡಗಳ ನಿರ್ಮಾಣಕ್ಕೆ ಏಜೆನ್ಸಿಗಳನ್ನು ಗುರುತಿಸಲಾಗುವುದು ಎಂದು ಜಾಧವ ಸ್ಪಷ್ಟಪಡಿಸಿದರು.ಸದಸ್ಯರಾದ ಬಸವಲಿಂಗಮ್ಮ ಮೇಟಿ, ಶಂಕರಗೌಡ ಪಾಟೀಲ, ಭೀಮಮ್ಮ ಕೃಷ್ಣಪ್ಪ, ರಾಣಿ ಸೋಮೇಶ್ವರಿ ದೇವಿ, ಬಸವರಾಜ ಖಂಡ್ರೆ ವೇದಿಕೆಯಲ್ಲಿದ್ದರು.ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.