ಬುಧವಾರ, ಜುಲೈ 28, 2021
23 °C

ಪ್ರತಿಧ್ವನಿಸಿದ ಪ್ರತ್ಯೇಕ ತೆಲಂಗಾಣ ರಾಜ್ಯ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗಾಗಿ ಆ ಪ್ರದೇಶದ ಕಾಂಗ್ರೆಸ್ ಸಂಸದರು ಮತ್ತು ಶಾಸಕರು ಪಕ್ಷದ 83ನೇ ಮಹಾಧಿವೇಶನದಲ್ಲಿ ಒತ್ತಾಯಿಸಿದರು.

ಆಂಧ್ರಪ್ರದೇಶದ ಸಂಸದರಾದ ಪೊನ್ನಮ್ಮ ಪ್ರಭಾಕರ ಅವರು ಸೋಮವಾರ ಮಾತನಾಡಲು ಎದ್ದು ನಿಂತಾಗ ತೆಲಂಗಾಣ ಪ್ರದೇಶದ ಕಾಂಗ್ರೆಸ್ ಸಂಸದರು ಮತ್ತು ಶಾಸಕರು ಘೋಷಣೆ ಕೂಗಿದರು. ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯಾಗಬೇಕು ಎಂದು ಆಗ್ರಹಿಸಿದರು. ಇದರಿಂದ ಅಧಿವೇಶನದ ಕಲಾಪಗಳು ಕೆಲ ನಿಮಿಷ ಸ್ಥಗಿತಗೊಂಡವು.ಈ ಘಟನೆ ನಡೆದಾಗ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ವೇದಿಕೆಯಲ್ಲಿ ಇರಲಿಲ್ಲ. ಈ ಘೋಷಣೆಗಳಿಗೆ ಪ್ರಧಾನಿ ಮನಮೋಹನ ಸಿಂಗ್ ಸಾಕ್ಷಿಯಾದರು.

ಚಿತ್ರಗಳ ಮಾರಾಟದ ಭರಾಟೆ: ಇಂದಿರಾ ಗಾಂಧಿ ಕುಟುಂಬದ ಛಾಯಾಚಿತ್ರಗಳ ಮಾರಾಟ ಭರಾಟೆಯಿಂದ ಸಾಗಿತ್ತು. ಇವುಗಳನ್ನು ಕೊಳ್ಳಲು ಕಾರ್ಯಕರ್ತರು ಮುಗಿಬಿದ್ದಿದ್ದರು.ರಾಹುಲ್ ಗಾಂಧಿ ಛಾಯಾಚಿತ್ರಗಳಿಗಂತೂ ಭಾರಿ ಬೇಡಿಕೆ ಇತ್ತು ಎಂದು ಮಾರಾಟಗಾರ ರಮೇಶ್ ಸಿಂಘಾಲ್ ಹೇಳಿದರು.ಚಂದಾದಾರರ ನೇಮಕ: ಪಕ್ಷದ ಮುಖವಾಣಿ “ಸಂದೇಶ” ಸಹ ಮಹಾಧಿವೇಶನದಲ್ಲಿ ಮಿಂಚಿತು. ಪ್ರಸಾರ ಸಂಖ್ಯೆ ಹೆಚ್ಚಿಸಿಕೊಳ್ಳಲು ಇದೇ ಸುಸಮಯ ಎಂದು ಭಾವಿಸಿದ್ದ ‘ಸಂದೇಶ’ದ ಸಿಬ್ಬಂದಿ ಹೊಸ ಚಂದಾದಾರರನ್ನು ಹುರುಪಿನಿಂದ ನೋಂದಾಯಿಸುತಿದ್ದರು.ಮಹಾಧಿವೇಶನದಲ್ಲಿ ಪಾಲ್ಗೊಳ್ಳಲು ವಿಶೇಷ ಆಹ್ವಾನಿತರಿಗೆ 325 ರೂಪಾಯಿ ಶುಲ್ಕ ವಿಧಿಸಲಾಗಿದೆ. ಇದರಲ್ಲಿ 100 ರೂಪಾಯಿ ಅಧಿವೇಶನದ ವೆಚ್ಚಕ್ಕೆ ಹಾಗೂ ಉಳಿದ 225ರೂಪಾಯಿಗಳನ್ನು ಸಂದೇಶದ ಚಂದಾ ಹಣವೆಂದೇ ಸ್ವೀಕರಿಸಲಾಯಿತು. ಸುಮಾರು ಎರಡು ಲಕ್ಷ ಕಾರ್ಯಕರ್ತರು ಪಾಲ್ಗೊಂಡಿದ್ದರು.ಗೊಂದಲ: ಪ್ರಧಾನಿ ಮನಮೋಹನ ಸಿಂಗ್ ಅವರು ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವಾಗ, ಬಿಹಾರ, ಉತ್ತರ ಪ್ರದೇಶದ ನಾಯಕರು ತಮ್ಮ ರಾಜ್ಯಗಳ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಘೋಷಣೆ ಕೂಗಿ ಗಮನ ಸೆಳೆದರು.ಪೊಲೀಸರು ಈ ಘೋಷಣೆ ಕೂಗುತ್ತಿದ್ದವರನ್ನು ತಹಬಂದಿಗೆ ತರಲು ಶ್ರಮಿಸಿದರಾದರೂ ಸುಮಾರು 10 ನಿಮಿಷಕ್ಕೂ ಹೆಚ್ಚು ಕಾಲ ಇವರಿಂದ ಕಾರ್ಯಕ್ರಮಕ್ಕೆ ಅಡ್ಡಿಯಾಯಿತು.

ಮೊನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಹಾರದ ಉಸ್ತುವಾರಿ ಹೊತ್ತ ಪಕ್ಷದ ನಾಯಕ ಹಾಗೂ ಸಚಿವ ಮುಕುಲ್ ವಾಸ್ನಿಕ್ ಅವರು ಟಿಕೆಟ್‌ಗಳನ್ನು ಮಾರಾಟ ಮಾಡಿದ್ದಾರೆ ಎಂದು ಘೋಷಣೆ ಕೂಗಿದರು. ಭಾನುವಾರವೂ ವಾಸ್ನಿಕ್ ಅವರ ಭಾಷಣದ ವೇಳೆ ಇದೇ ರೀತಿಯ ಘೋಷಣೆ ಕೂಗಿ ಅಡ್ಡಿಪಡಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.