ಶುಕ್ರವಾರ, ಫೆಬ್ರವರಿ 26, 2021
30 °C
ತಹಶೀಲ್ದಾರ್‌ ಕುಂಞಮ್ಮ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳಿಂದ ತೆರವು ಕಾರ್ಯಾಚರಣೆ

ಪ್ರತಿಭಟನೆಗೆ ಮಣಿದ ಜಿಲ್ಲಾಡಳಿತ; ಮನೆ ತೆರವು ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರತಿಭಟನೆಗೆ ಮಣಿದ ಜಿಲ್ಲಾಡಳಿತ; ಮನೆ ತೆರವು ಸ್ಥಗಿತ

ಮಡಿಕೇರಿ: ನಗರದ ಹೊರವಲಯ ದಲ್ಲಿರುವ ಕೆ. ಬಾಡಗ ಗ್ರಾಮದ ಕೊಟ್ಟೆಮೊಟ್ಟೆ ಪೈಸಾರಿ ಜಾಗದಲ್ಲಿ ನೆಲೆಕಂಡಿದ್ದ ಕುಟುಂಬಗಳನ್ನು ಶುಕ್ರವಾರ ತೆರವುಗೊಳಿಸಲು ಮುಂದಾದ ಜಿಲ್ಲಾಡಳಿತವು ಶಾಸಕರ ಒತ್ತಡ ಹಾಗೂ ಸ್ಥಳೀಯರ ವಿರೋಧದಿಂದ ಸ್ಥಗಿತಗೊಳಿಸಿತು.ಭಾರಿ ಪೊಲೀಸ್‌ ಬಂದೋಬಸ್ತ್‌ನಲ್ಲಿ ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ನಂಜುಂಡೇಗೌಡ, ತಹಶೀಲ್ದಾರ್‌ ಕುಂಞಮ್ಮ ನೇತೃತ್ವದ ಕಂದಾಯ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಿದರು.  ಬೆಳಿಗ್ಗೆ 6 ರಿಂದಲೇ ತೆರವು ಕಾರ್ಯಾಚರಣೆ ಆರಂಭವಾಗಿ ಮಧ್ಯಾಹ್ನ 11.30ರವರೆಗೆ ಅಂದಾಜು 5– 6 ಮನೆಗಳನ್ನು ಜೆಸಿಬಿ ಸಹಾಯದಿಂದ ನೆಲಸಮಗೊಳಿಸಲಾಯಿತು.ವಿಷಯ ತಿಳಿದ ಶಾಸಕ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್‌ ಹಾಗೂ ವಿಧಾನ ಪರಿಷತ್‌ ಸದಸ್ಯ ಸುನೀಲ್‌ ಸುಬ್ರಮಣಿ ಅವರು ಸ್ಥಳಕ್ಕೆ ಬಂದರು. ವಿಧವೆಯರು, ಕ್ಯಾನ್ಸರ್‌ ರೋಗ ಪೀಡಿತರು ಸೇರಿದಂತೆ ಸುಮಾರು 14 ಕುಟುಂಬಗಳು ಈ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಈ ಜಾಗವನ್ನು ಸಕ್ರಮಗೊಳಿಸುವಂತೆ ತಹಶೀಲ್ದಾರ್‌ರಿಗೆ ಫಾರ್ಮ್‌ ನಂ 94(ಸಿ) ಕೂಡ ಸಲ್ಲಿಸಿದ್ದಾರೆ.ಅಕ್ರಮ– ಸಕ್ರಮ ಯೋಜನೆಯ ತೀರ್ಮಾನ ಆಗುವವರೆಗೆ ಅರ್ಜಿ ಸಲ್ಲಿಸಿದವರ ಮನೆಯನ್ನು ತೆರವುಗೊಳಿಸಬಾರದೆಂದು ಸರ್ಕಾರ ತೀರ್ಮಾನ ಕೈಗೊಂಡಿದೆ. ತಕ್ಷಣ ತೆರವು ಕಾರ್ಯಾಚರಣೆಯನ್ನು ನಿಲ್ಲಿಸಬೇಕೆಂದು ಶಾಸಕರು ಜಿಲ್ಲಾಧಿಕಾರಿ ಮೀರ್‌ ಅನಿಸ್‌ ಅಹಮದ್‌ ಅವರಿಗೆ ಕೋರಿದರು.‘ತಮ್ಮ ಜತೆ ಚರ್ಚಿಸದೇ ಜಿಲ್ಲಾಡಳಿತ ಸ್ಥಳೀಯರನ್ನು ತೆರವುಗೊಳಿಸುತ್ತಿ ರುವುದು ಸರಿಯಲ್ಲ. ಸ್ಥಳೀಯರಿಗೆ ಪರ್ಯಾಯ ವ್ಯವಸ್ಥೆ ಮಾಡದೇ ತೆರವುಗೊಳಿಸುವುದು ಅಮಾನವೀಯ. ಹಿಂದಿನ ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಹಾಗೂ ಉಪವಿಭಾಗಾಧಿಕಾರಿ ಅಭಿರಾಮ್‌ ಶಂಕರ್‌ ಅವರು ಜಾಗ ತೆರವುಗೊಳಿಸುವುದಿಲ್ಲ ಎಂದು ಭರವಸೆ ನೀಡಿದ್ದರು’ ಎಂದು ಶಾಸಕರು ಗಮನಕ್ಕೆ ತಂದರು.ಜಿ.ಪಂ ಕಟ್ಟಡಕ್ಕೆ ಮೀಸಲು: ‘ಸುಮಾರು 5 ಎಕರೆ ಜಾಗವಿರುವ ಈ ಪ್ರದೇಶವನ್ನು ಜಿಲ್ಲಾ ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ಮೀಸಲು ಇರಿಸಲಾಗಿದೆ. ಈ ಜಾಗದಲ್ಲಿ ಸುಮಾರು 14 ಕುಟುಂಬಗಳು ಒತ್ತುವರಿ ಮಾಡಿ ಮನೆ ಕಟ್ಟಿಕೊಂಡಿವೆ. ಹೈಕೋರ್ಟ್‌ ಆದೇಶದಿಂದ ಒತ್ತುವರಿ ದಾರರನ್ನು ತೆರವುಗೊಳಿಸಲಾಗುತ್ತಿದೆ. ಮಳೆಗಾಲ ಆರಂಭವಾಗುವುದರೊಳಗೆ ಜಿಲ್ಲಾ ಪಂಚಾಯಿತಿ ಕಟ್ಟಡ ನಿರ್ಮಾಣ ಕೆಲಸ ಆರಂಭಿಸಬೇಕಾಗಿದೆ’ ಎಂದು ಜಿಲ್ಲಾಧಿಕಾರಿ ಮೀರ್‌ ಅನಿಸ್‌ ಅಹಮದ್‌ ಸುದ್ದಿಗಾರರಿಗೆ ಹೇಳಿದರು.‘ಒತ್ತುವರಿ ಮಾಡಿಕೊಂಡಿರುವವರು ಸಲ್ಲಿಸಿದ್ದ ಅಕ್ರಮ– ಸಕ್ರಮ ಅರ್ಜಿಗಳನ್ನು ತಹಶೀಲ್ದಾರರು ತಿರಸ್ಕರಿಸಿದ್ದಾರೆ. ಇವರಿಗೆ ಅಕ್ಕಪಕ್ಕದ ಗ್ರಾಮಗಳಲ್ಲಿ ಸ್ವಂತ ಜಾಗವಿದೆ ಎಂದು ತಹಶೀಲ್ದಾರ್‌ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ತೆರವುಗೊಳಿಸಿರುವ ಕುಟುಂಬಗಳಿಗೆ ಪರಿಹಾರ ಅಥವಾ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಕಾನೂನಿನಲ್ಲಿ ಅವಕಾಶ ಇಲ್ಲ’ ಎಂದು ತಿಳಿಸಿದರು.ಗೊಂದಲದ ಹೇಳಿಕೆ: ಪ್ರತಿಭಟನಾ ಕಾರರು ಹಾಗೂ ಶಾಸಕರ ಒತ್ತಾಯದ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್‌ ಕುಂಞಮ್ಮ ಗೊಂದಲಮಯ ಹೇಳಿಕೆ ನೀಡಿದರು. ಈ ಜಾಗ ‘ಸಿ ಆ್ಯಂಡ್‌ ಡಿ’ಗೆ ಸೇರಿದೆ. ಲ್ಯಾಂಡ್‌ ಬ್ಯಾಂಕ್‌ಗೆ ಸೇರಿದೆ ಎಂದೆಲ್ಲ ಹೇಳಿಕೆ ನೀಡಿ ಗೊಂದಲ ಮೂಡಿಸಿದರು.ಈ ಜಾಗ ‘ಸಿ ಆ್ಯಂಡ್‌ ಡಿ’ಗೆ ಸೇರಿದ್ದರೆ ಜಿಲ್ಲಾ ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ಗುರುತುಪಡಿಸಲು ಸಾಧ್ಯವಿತ್ತೇ? ಎಂದು ಶಾಸಕ ಕೆ.ಜಿ. ಬೋಪಯ್ಯ ಪ್ರಶ್ನಿಸಿದರು. ‘ಸಿ ಆ್ಯಂಡ್‌ ಡಿ’ ಭೂಮಿಯನ್ನು ಅರಣ್ಯ ಇಲಾಖೆಯಿಂದ ವಾಪಸ್‌ ಪಡೆಯುವ ಅಧಿಕಾರ ಜಿಲ್ಲಾಧಿಕಾರಿಗೆ ಇಲ್ಲ, ಅದು ಸರ್ಕಾರದ ತೀರ್ಮಾನಕ್ಕೆ ಬಿಟ್ಟಿದ್ದು’ ಎಂದು ವಾದಿಸಿದರು.ಕ್ಯಾನ್ಸರ್‌ ಪೀಡಿತೆ: ಕ್ಯಾನ್ಸರ್‌ ರೋಗದಿಂದ ಬಳಲುತ್ತಿರುವ ಹಾಗೂ ವಿಧವೆಯಾಗಿರುವ ಚೋಂದಮ್ಮ ಅವರ ಮನೆಯನ್ನು ಅಧಿಕಾರಿಗಳು ಯಾವುದೇ ಕನಿಕರ ಇಲ್ಲದೇ ಒಡೆದುಹಾಕಿದ್ದಾರೆ. ಜೆಸಿಬಿ ಹತ್ತಿಸಿದ್ದಾರೆ. ಇವರು ಈಗ ಎಲ್ಲಿಗೆ ಹೋಗಬೇಕು? ಎಂದು ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಅವರನ್ನು ಪ್ರಶ್ನಿಸಿದರು.ಕಾಂಗ್ರೆಸ್‌ಗೆ ಧಿಕ್ಕಾರ: ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಬಡಜನರಿಗೆ ಒಂದಿಲ್ಲೊಂದು ತೊಂದರೆ ಕೊಡುತ್ತಿದೆ. ಅಕ್ರಮ– ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿ ಹಲವು ವರ್ಷಗಳು ಕಳೆದಿವೆ. ಆದರೂ, ನಮಗೆ ಸರ್ಕಾರ ಜಾಗ ಮಂಜೂರು ಮಾಡುತ್ತಿಲ್ಲ. ಬಡಜನರು ಏಲ್ಲಿಗೆ ಹೋಗಬೇಕು? ಎಂದು ಮನೆ ಕಳೆದುಕೊಂಡ ಸಂತ್ರಸ್ತರು ಪರಿತಪಿಸಿದರು. ಮಡಿಕೇರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆ.ಎಂ. ಗಣೇಶ್‌ ಅವರು ಆರಂಭದ ಕೆಲಹೊತ್ತು ಕಾಣಿಸಿಕೊಂಡಿದ್ದು ಬಿಟ್ಟರೆ, ಬೇರಾವುದೇ ಕಾಂಗ್ರೆಸ್‌ ನಾಯಕರು ಅತ್ತ ಸುಳಿಯಲಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.