ಮಂಗಳವಾರ, ಜೂನ್ 15, 2021
26 °C

ಪ್ರತಿಮಾ ಪ್ರೀತಿಯೂ ಕಾಶಿಯ ಚಿತ್ರಣವೂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖ್ಯಾತ ಕಲಾವಿದರಾದ ಬದ್ರಿ ನಾರಾಯಣ್, ಯಶವಂತ್ ಶಿರ್ವಾಡ್ಕರ್ ಮತ್ತು ಸ್ವೀಡನ್‌ನ ಅಲೆಕ್ಸಾಂಡ್ರಾ ಅವರ ಅಪರೂಪದ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ಮಾರ್ಚ್ 23ರವರೆಗೆ ನಡೆಯಲಿದೆ.ಪ್ರತಿಯೊಬ್ಬರ ಮನದೊಳಗೆ ಹಲವಾರು ಭಾವಗಳು ಬೂದಿ ಮುಚ್ಚಿದ ಕೆಂಡದಂತೆ ಇರುತ್ತವೆ. ಮನುಷ್ಯ ನಿರಂತರವಾಗಿ ಆತ್ಮಶೋಧನೆ ಮಾಡಿಕೊಳ್ಳುತ್ತಿರಬೇಕು. ನಮ್ಮಳಗಿನ ಕನಸುಗಳಿಗೆ ರೆಕ್ಕೆ ಕಟ್ಟುತ್ತಿರಬೇಕು.ಆಗ ಮಾತ್ರ ಆತ ಅಗಾಧವನ್ನು ಸಾಧಿಸುವುದು ಸಾಧ್ಯ. ಕಲಾವಿದ ಬದ್ರಿ ನಾರಾಯಣ್ ಅವರ `ಕ್ವೀನ್ಸ್ ಕೇಂಶಾಸ್ ಡ್ರೀಮ್ ಆಫ್ ಹಂಸ~ ಹಾಗೂ `ಮೀಟಿಂಗ್ ಅಟ್ ಮಿಡ್‌ಸ್ಟ್ರೀಮ್~ ಕಲಾಕೃತಿಗಳು ಆತ್ಮಶೋಧನೆಯ ಸಂಕೇತದಂತೆ ಗೋಚರಿಸುತ್ತವೆ. ಇವರ ಎಲ್ಲ ಕಲಾಕೃತಿಗಳು ಇದೇ ಜಾಡಿನಲ್ಲಿ ಸಾಗುತ್ತವೆ.`ಕಲಾವಿದ ತನ್ನ ಮನಸ್ಸಿನೊಳಗಿರುವ ಭಾವವನ್ನು ಅಭಿವ್ಯಕ್ತಿಗೊಳಿಸುವಾಗ ಅದರಲ್ಲಿ ಸಹಜತೆ ಇರಬೇಕು. ಮನಸ್ಸಿನ ಅಭಿವ್ಯಕ್ತಿಗೆ ಕನ್ನಡಿ ಹಿಡಿಯಲು ನಾನು ಕುಂಚ ಬಳಸಿದೆ. ಬಾಲ್ಯದಿಂದಲೂ ಮನಸ್ಸಿನ ಮಾತು ಹೇಳಲು ನಾನು ಇದೇ ಮಾರ್ಗ ಆರಿಸಿಕೊಂಡೆ. ಸಹಜತೆ ಮೇಲೆ ನನಗೆ ಕಟ್ಟಕ್ಕರೆ~ ಎನ್ನುತ್ತಾರೆ ಬದ್ರಿ ನಾರಾಯಣ್.ಬದ್ರಿ ಆತ್ಮಶೋಧನೆ ಜತೆಜತೆಗೆ ಭಾರತೀಯ ಸಂಸ್ಕೃತಿಯತ್ತಲೂ ಮುಖಮಾಡಿದ್ದಾರೆ. ವಿಘ್ನ ನಿವಾರಕ ಗಣೇಶ ಇವರ ಕುಂಚದಲ್ಲಿ ನವಿರಾಗಿ ಮೂಡಿಬಂದಿದ್ದಾನೆ. ಪ್ರತಿಮಾಶಿಲ್ಪಗಳ ಬಗ್ಗೆ ಇವರಿಗೆ ವಿಪರೀತ ಮೋಹ. ಅದನ್ನು ಸಹಜವಾಗಿ ನಿರೂಪಿಸುವುದು ಮತ್ತಷ್ಟು ಇಷ್ಟವಂತೆ.ಹಾಗಾಗಿ ಇವರ ಕಲಾಕೃತಿಗಳಲ್ಲಿ ಪುರಾಣದಲ್ಲಿ ಮೂಡಿರುವ ಪ್ರತಿಮೆಗಳೇ ಢಾಳಾಗಿ ಕಾಣುತ್ತವೆ. ಸೆರಾಮಿಕ್ ಹಾಗೂ ವುಡ್‌ಕಟ್‌ನಲ್ಲೂ ಬದ್ರಿ ತಮ್ಮ ಕಲೆಯನ್ನು ಬಿಂಬಿಸಿದ್ದಾರೆ. ಇವರು ಟೋಕಿಯೊ, ಬೆಲ್ಜಿಯಂ, ಇಂಗ್ಲೆಂಡ್, ಜರ್ಮನಿ, ಅಮೆರಿಕ ಮೊದಲಾದ ದೇಶಗಳಲ್ಲಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಏರ್ಪಡಿಸಿ ಮೆಚ್ಚುಗೆ ಪಡೆದಿದ್ದಾರೆ. ಕಲಾವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ.ಮುಂಬೈನ ಕಲಾವಿದ ಯಶವಂತ್ ಶಿರ್ವಾಡ್ಕರ್ ಅವರಿಗೆ ಲ್ಯಾಂಡ್‌ಸ್ಕೇಪ್ ಬಗ್ಗೆ ವಿಪರೀತ ಒಲವು. ಹಾಗೆಯೇ ಧಾರ್ಮಿಕ ಕ್ಷೇತ್ರಗಳ ಚಿತ್ರಣದ ಬಗೆಗೂ ಪ್ರೀತಿ ಇದೆ. ಹಿಂದೂಗಳ ಪವಿತ್ರ ಸ್ಥಳ ವಾರಣಾಸಿಯನ್ನು ಇವರು ತಮ್ಮ ಕಲೆಯಲ್ಲಿ ಸೊಗಸಾಗಿ ಚಿತ್ರಿಸಿದ್ದಾರೆ.ಗಂಗಾನದಿ ತಟದಲ್ಲಿ ಕಾಶಿಯ ಚಿತ್ರಣ ಕಟ್ಟಿಕೊಡುವ ಇವರ ಹೆಸರಿಲ್ಲದ ಕಲಾಕೃತಿಯೊಂದು ಮನಸೆಳೆಯುತ್ತದೆ. ಈ ಕಲಾಕೃತಿಯಲ್ಲಿ ಕಾಶಿಯ ಓಣಿಗಳು, ದೇವಸ್ಥಾನಗಳು ಎಲ್ಲವುಗಳ ಸೂಕ್ಷ್ಮ ಚಿತ್ರಣವಿದೆ.ಅಲೆಕ್ಸಾಂಡ್ರಾ ಸ್ವೀಡನ್‌ನ ಸ್ಟಾಕ್‌ಹೋಂನವರು. ಫೋಟೋಗ್ರಾಫರ್ ಹಾಗೂ ಡಿಜಿಟಲ್ ಕಲಾವಿದೆಯಾಗಿ ಹೆಸರು ಮಾಡಿದವರು. ವಿಶ್ವದಾದ್ಯಂತ ಪ್ರವಾಸ ಮಾಡುವುದು ಹಾಗೂ ಕ್ಯಾಮೆರಾ ಕೈಯಲ್ಲಿ ಹಿಡಿದು ನೆರಳು ಬೆಳಕಿನ ಆಟವನ್ನು ಸೆರೆಹಿಡಿಯುವುದೆಂದರೆ ಇವರಿಗೆ ಬಹಳ ಇಷ್ಟವಂತೆ. ಈಕೆ ಡಿಜಿಟಲ್ ಕಲೆಯ ಮೂಲಕ ಹೆಣ್ಣಿನ ಮನೋತುಮುಲಗಳನ್ನು ಅದ್ಭುತವಾಗಿ ಬಿಂಬಿಸಿದ್ದಾರೆ.ಸ್ಥಳ: ರಿನೈಸೆನ್ಸ್ ಗ್ಯಾಲರಿ, 104, ವೆಸ್ಟ್ ಮಿನಿಸ್ಟರ್ 13, ಕನ್ನಿಂಗ್‌ಹ್ಯಾಂ ರಸ್ತೆ. ಮಾಹಿತಿಗೆ: 2220 2232.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.