ಬುಧವಾರ, ಮೇ 18, 2022
24 °C

ಪ್ರತಿ ಯೂನಿಟ್ ವಿದ್ಯುತ್‌ಗೆ ರೂ 1 ಸಬ್ಸಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿನ ನೂಲಿನ ಗಿರಣಿಗಳಿಗೆ ಬಳಕೆಯಾಗುವ ಪ್ರತಿ ಯೂನಿಟ್ ವಿದ್ಯುತ್‌ಗೆ ಒಂದು ರೂಪಾಯಿ ಸಬ್ಸಿಡಿ ನೀಡಲು ಸರ್ಕಾರ ಚಿಂತನೆ ನಡೆಸಿದೆ. ಸದ್ಯದಲ್ಲೇ ಈ ಸಂಬಂಧ ಆದೇಶ ಹೊರಡಿಸಲಾಗುವುದು ಎಂದು ಜವಳಿ ಸಚಿವ ವರ್ತೂರು ಪ್ರಕಾಶ್ ಸೋಮವಾರ ಇಲ್ಲಿ ತಿಳಿಸಿದರು.ಹೊರ ರಾಜ್ಯಗಳಲ್ಲಿ ನೂಲಿನ ಗಿರಣಿಗಳಿಗೆ ಯೂನಿಟ್‌ಗೆ ನಾಲ್ಕು ರೂಪಾಯಿ ದರದಲ್ಲಿ ವಿದ್ಯುತ್ ಪೂರೈಸಲಾಗುತ್ತಿದೆ. ಆದರೆ ರಾಜ್ಯದಲ್ಲಿ ಯೂನಿಟ್‌ಗೆ ಆರು ರೂಪಾಯಿ ದರ ವಿಧಿಸಲಾಗುತ್ತಿದೆ. ಇದು ದುಬಾರಿ ಆಗಿರುವುದರಿಂದ ಯೂನಿಟ್‌ಗೆ ಒಂದು ರೂಪಾಯಿ ಸಬ್ಸಿಡಿ ನೀಡುವಂತೆ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರಿಗೆ ಮನವಿ ಮಾಡಲಾಗಿದೆ ಎಂದರು.ರಾಜ್ಯದಲ್ಲಿ 12 ಖಾಸಗಿ ಮತ್ತು ಏಳು ಸಹಕಾರಿ ವಲಯದ ನೂಲಿನ ಗಿರಣಿಗಳಿವೆ. ಅವುಗಳು ಬಳಸುವ ವಿದ್ಯುತ್‌ಗೆ ಸಬ್ಸಿಡಿ ನೀಡುವುದರಿಂದ ಸರ್ಕಾರಕ್ಕೆ ವಾರ್ಷಿಕ 12 ಕೋಟಿ ರೂಪಾಯಿ ಹೊರೆ ಬೀಳಲಿದೆ ಎಂದು ಅವರು ತಿಳಿಸಿದರು.ಈಚೆಗೆ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಿಂದ ಜವಳಿ ಕ್ಷೇತ್ರಕ್ಕೆ 3,700 ಕೋಟಿ ರೂಪಾಯಿ ಬಂಡವಾಳ ಹರಿದು ಬಂದಿದೆ. ಈ ಕ್ಷೇತ್ರದಲ್ಲಿ ಏಳು ಯೋಜನೆಗಳು ಅನುಷ್ಠಾನಗೊಳ್ಳಲಿವೆ. 40 ಕೋಟಿ ರೂಪಾಯಿ ವೆಚ್ಚದಲ್ಲಿ ಈ ವರ್ಷ ಗುಲ್ಬರ್ಗದಲ್ಲಿ ಜವಳಿ ಪಾರ್ಕ್ ಆರಂಭಿಸಲಾಗುವುದು ಎಂದರು.ನೇಕಾರರಿಗೆ ಮನೆ ನಿರ್ಮಿಸಿಕೊಡಲು ನೀಡುತ್ತಿದ್ದ ಸಬ್ಸಿಡಿ ಮೊತ್ತವನ್ನು ಒಂದು ಲಕ್ಷ ರೂಪಾಯಿಗೆ ಏರಿಸಲಾಗಿದೆ. ಈ ವರ್ಷದ ಬಜೆಟ್‌ನಲ್ಲಿ 500 ಮನೆಗಳನ್ನು ನಿರ್ಮಿಸಿಕೊಡಲಾಗುವುದು ಎಂದು ಪ್ರಕಟಿಸಲಾಗಿತ್ತು. ಆದರೆ ಬೇಡಿಕೆ ಹೆಚ್ಚಾಗಿರುವುದರಿಂದ ಐದು ಸಾವಿರ ಮನೆಗಳನ್ನು ನಿರ್ಮಿಸಲು ಮುಂದಾಗುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.ಹೊಲಿಗೆ ಕ್ಷೇತ್ರದಲ್ಲಿ ಆಸಕ್ತಿ ಉಳ್ಳವರಿಗೆ ತರಬೇತಿ ನೀಡುವುದಕ್ಕಾಗಿ ರಾಜ್ಯದ ವಿವಿಧೆಡೆ ತಲಾ 30 ಲಕ್ಷ ರೂಪಾಯಿ ವೆಚ್ಚದಲ್ಲಿ 36 ಕೇಂದ್ರಗಳನ್ನು ತೆರೆಯಲಾಗಿದೆ. ಪ್ರತಿ ಕೇಂದ್ರದಲ್ಲಿ 25 ಜನರಿಗೆ ಒಂದು ತಿಂಗಳ ಕಾಲ ತರಬೇತಿ ನೀಡಲಾಗುತ್ತದೆ ಎಂದರು.ರಾಜ್ಯದಲ್ಲಿ 55 ಸಾವಿರ ಕೈಮಗ್ಗಗಳಿವೆ. ಬೇಡಿಕೆಯನ್ನು ಆಧರಿಸಿ ಕೈಮಗ್ಗಗಳನ್ನು ಹೊಂದಿರುವ ನೇಕಾರರಿಗೆ ವಿದ್ಯುತ್ ಮಗ್ಗಗಳನ್ನು ನೀಡಲಾಗುವುದು. ಇದಕ್ಕಾಗಿ ಬಜೆಟ್‌ನಲ್ಲಿ ಎಂಟು ಕೋಟಿ ರೂಪಾಯಿ ತೆಗೆದಿರಿಸಲಾಗಿದೆ ಎಂದು ಅವರು ತಿಳಿಸಿದರು.

ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ

ಬೆಂಗಳೂರು: `ನಗರದ ಅರಮನೆ ಮೈದಾನದಲ್ಲಿ ದೊಡ್ಡ ಸಮಾವೇಶ ಆಯೋಜಿಸಿ, ಅಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರಲು ನಿರ್ಧರಿಸಿದ್ದೇನೆ~ ಎಂದು ಪಕ್ಷೇತರರಾಗಿ ಆಯ್ಕೆಯಾಗಿರುವ ಜವಳಿ ಸಚಿವ ವರ್ತೂರು ಪ್ರಕಾಶ್ ಸೋಮವಾರ ಇಲ್ಲಿ ತಿಳಿಸಿದರು.`ಸಮಾವೇಶದ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಪಡೆದು 2-3 ತಿಂಗಳಲ್ಲಿ ಸಮಾವೇಶ ಏರ್ಪಡಿಸುತ್ತೇನೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕೋಲಾರ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ~ ಎಂದು ಸುದ್ದಿಗಾರರಿಗೆ ಅವರು ತಿಳಿಸಿದರು.ಅಡ್ಡಮತದಾನ: ವಿಧಾನ ಸಭೆಯಿಂದ ವಿಧಾನ ಪರಿಷತ್ತಿಗೆ ಈಚೆಗೆ ನಡೆದ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದವರು ಯಾರು ಎಂಬುದು ಬಿಜೆಪಿಗೆ ಗೊತ್ತಿದ್ದರೂ ಅಂತಹವರ ವಿರುದ್ಧ ಸದ್ಯಕ್ಕೆ ಕ್ರಮ ಕೈಗೊಳ್ಳುವುದಿಲ್ಲ. ಸರ್ಕಾರಕ್ಕೆ ಸಂಖ್ಯಾಬಲದ ಕೊರತೆ ಎದುರಾಗುವ ಅಪಾಯ ಇರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿದರು.  ಆದರೆ ಅಡ್ಡ ಮತದಾನ ಮಾಡಿದವರ ವಿರುದ್ಧ ಚುನಾವಣೆ ಸಂದರ್ಭದಲ್ಲಿ ಪಕ್ಷವು ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.