ಭಾನುವಾರ, ಮಾರ್ಚ್ 7, 2021
32 °C
ಹುರಿಯತ್ ಕಾನ್ಫರೆನ್ಸ್‌ ನಾಯಕ ಮಿರ್ವಾಯಿಜ್ ಪೊಲೀಸರ ವಶಕ್ಕೆ

ಪ್ರತ್ಯೇಕತಾವಾದಿಗಳ ಜಾಥಾ ವಿಫಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರತ್ಯೇಕತಾವಾದಿಗಳ ಜಾಥಾ ವಿಫಲ

ಶ್ರೀನಗರ (ಪಿಟಿಐ): ಗೃಹ ಬಂಧನದಲ್ಲಿರುವ ಕಾಶ್ಮೀರ ಪ್ರತ್ಯೇಕತಾವಾದಿಗಳಾದ ಮಿರ್ವಾಯಿಜ್ ಉಮರ್ ಫಾರೂಕ್‌ ಮತ್ತು ಸೈಯದ್ ಅಲಿ ಷಾ ಗಿಲಾನಿ ಅವರು ನಡೆಸಲು ಉದ್ದೇಶಿಸಿದ್ದ ಜಾಥಾವನ್ನು ಪೊಲೀಸರು ಶನಿವಾರ ವಿಫಲಗೊಳಿಸಿದರು.ಹುರಿಯತ್ ಕಾನ್ಫರೆನ್ಸ್‌ ನಾಯಕ ಮಿರ್ವಾಯಿಜ್ ಅವರು ಶ್ರೀನಗರದ ಹೊರವಲಯದಲ್ಲಿರುವ ತಮ್ಮ ನಿವಾಸದಿಂದ ಹೊರ ಬರಲು ಶನಿವಾರ ಮಧ್ಯಾಹ್ನ ಯತ್ನಿಸಿದರು. ತಕ್ಷಣ ಅವರನ್ನು ವಶಕ್ಕೆ ಪಡೆದ ಪೊಲೀಸರು, ಠಾಣೆಗೆ ಕರೆದೊಯ್ದರು.ಹೈದರ್ಪೊರ ಪ್ರದೇಶದಲ್ಲಿರುವ ತಮ್ಮ ನಿವಾಸದಿಂದ ಗಿಲಾನಿ ಹೊರಬರುತ್ತಿದ್ದಂತೆ, ಪೊಲೀಸರು ಅವರನ್ನು ತಡೆದರು. ಆಗ ಗಿಲಾನಿ ತಮ್ಮ ಬೆಂಬಲಿಗರ ಜೊತೆ ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲೇ ಧರಣಿ ನಡೆಸಿದರು.ಹುರಿಯತ್ ಕಾನ್ಫರೆನ್ಸ್‌ ಮತ್ತು ಜಮ್ಮು ಕಾಶ್ಮೀರ ಲಿಬರೇಷನ್ ಫ್ರಂಟ್ ಸಂಘಟನೆಗಳು ಲಾಲ್‌ ಚೌಕ ಜಾಥಾಕ್ಕೆ ಕರೆ ನೀಡಿದ್ದವು.

ಕಾಶ್ಮೀರದ ವಾಸ್ತವ ಸ್ಥಿತಿಯನ್ನು ಮುಚ್ಚಿಟ್ಟು ಕೇಂದ್ರ ಸರ್ಕಾರವು ದೇಶದ ಜನ ಮತ್ತು ಅಂತರರಾಷ್ಟ್ರೀಯ ಸಮುದಾಯವನ್ನು ವಂಚಿಸಲು ಯತ್ನಿಸುತ್ತಿದೆ ಎಂದು ಮಿರ್ವಾಯಿಜ್ ಅವರು ಬಂಧನಕ್ಕೂ ಮೊದಲು ಆರೋಪಿಸಿದರು.‘ಕಾಶ್ಮೀರದ ಕೆಲವರು ದಾರಿತಪ್ಪಿದ್ದಾರೆ ಎಂದು ಕೇಂದ್ರ ಹೇಳುತ್ತಿದೆ. ಈಗ ಕಾಶ್ಮೀರದ ಜನರ ಆಲೋಚನೆ ಹೇಗಿದೆ ಎಂಬುದನ್ನು ತಿಳಿದುಕೊಳ್ಳಲು ಜನಮತ ಗಣನೆ ನಡೆಸುವ ದೊಡ್ಡ ಅವಕಾಶ ಕೇಂದ್ರಕ್ಕೆ ಇದೆ’ ಎಂದು ಅವರು ಹೇಳಿದರು.

‘ಕಾಶ್ಮೀರದ ಜನ ಉದ್ಯೋಗ, ಗುತ್ತಿಗೆ ಅಥವಾ ಸಬ್ಸಿಡಿ ಕೇಳುತ್ತಿಲ್ಲ. ಅವರು ಸ್ವಾತಂತ್ರ್ಯ ಮತ್ತು ತಮ್ಮ ಹಕ್ಕುಗಳನ್ನು ಕೇಳುತ್ತಿದ್ದಾರೆ.  ಕೇಂದ್ರ  ಸರ್ಕಾರ ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.‘ಕಾಶ್ಮೀರದಲ್ಲಿ ನಡೆಯುತ್ತಿರುವ ಘಟನೆಗಳು ಯಾರದ್ದೋ ಚಿತಾವಣೆಯಿಂದ ಆಗುತ್ತಿವೆ ಎಂದು ಹೇಳಲಾಗುತ್ತಿದೆ. ಆದರೆ ಇದು ಕಾಶ್ಮೀರದ ಜನರ ಚಳವಳಿ. ಇದು ಇಂದು ಅಥವಾ 1947ರಲ್ಲಿ ಆರಂಭವಾಗಿದ್ದಲ್ಲ. ಇದು 1931ರಿಂದಲೂ ನಡೆದು ಬಂದಿದೆ’ ಎಂದು ಹೇಳಿದರು.ಕಾಶ್ಮೀರಿಗಳೂ ನಮ್ಮವರು ಬಿಜೆಪಿ (ನವದೆಹಲಿ ವರದಿ):  ‘ಕಾಶ್ಮೀರ ನಮ್ಮದು ಎನ್ನುವ ಮಾತಿನಲ್ಲಿ, ಕಾಶ್ಮೀರಿಗಳು ನಮ್ಮವರು ಎಂಬ ಅರ್ಥವೂ ಇದೆ. ಅಲ್ಲಿನ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಇದು ಸಕಾಲ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದ್ದಾರೆ.

ಕಾಶ್ಮೀರದಲ್ಲಿ ನಡೆಯುತ್ತಿರುವ ಘಟನೆಗಳು ಅಲ್ಲಿನ ಜನರಿಗೆ ಸಂಕಷ್ಟ ತಂದಿವೆ. ಅಲ್ಲಿನ ಜನರ ನೋವಿಗೆ ಇಡೀ ದೇಶ ಮಿಡಿಯುತ್ತದೆ ಎಂದು ಮಾಧವ್ ಅವರು ಕಾಶ್ಮೀರ ಸಮಸ್ಯೆ ಕುರಿತ ಸರ್ವಪಕ್ಷ ಸಭೆಗಾಗಿ ಸಿದ್ಧಪಡಿಸಿದ್ದ ಟಿಪ್ಪಣಿಯಲ್ಲಿ ಹೇಳಿದ್ದಾರೆ.

ಶ್ರೀನಗರ:  ಕರ್ಫ್ಯೂ ಮುಂದುವರಿಕೆ

ಶ್ರೀನಗರ (ಪಿಟಿಐ): ಪ್ರತ್ಯೇಕತಾವಾದಿಗಳ ಧರಣಿ ವಿಫಲಗೊಳಿಸುವ ಉದ್ದೇಶದಿಂದ ಶ್ರೀನಗರ ಜಿಲ್ಲೆ ಮತ್ತು ಅನಂತನಾಗ್ ಪಟ್ಟಣದಲ್ಲಿ ಕರ್ಫ್ಯೂ ಮುಂದುವರಿಸಲಾಗಿದೆ.ಇದೇ ವೇಳೆ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 56ಕ್ಕೆ ಏರಿದೆ. ಹಿಂಸಾಚಾರದ ವೇಳೆ ಪೊಲೀಸ್ ಗುಂಡಿಗೆ ತುತ್ತಾಗಿದ್ದ ಯುವಕನೊಬ್ಬ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.ಜನಮತಗಣನೆ ಪರವಾಗಿ ಶ್ರೀನಗರದ ಲಾಲ್‌ ಚೌಕ್‌ನಲ್ಲಿ ಶನಿವಾರ ಮತ್ತು ಭಾನುವಾರ ಜಾಥಾ ನಡೆಸಬೇಕು ಎಂದು ಪ್ರತ್ಯೇಕತಾವಾದಿಗಳಾದ ಸೈಯದ್ ಅಲಿ ಷಾ ಗಿಲಾನಿ ಮತ್ತಿತರರು ಕರೆ ನೀಡಿದ್ದರು.ಶನಿವಾರ ಕೂಡ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಶಾಲೆ, ಕಾಲೇಜು, ವಾಣಿಜ್ಯ ಸಂಕೀರ್ಣ, ಪೆಟ್ರೋಲ್‌ ಬಂಕ್‌ಗಳು ಮತ್ತು ಖಾಸಗಿ ಕಚೇರಿಗಳು ಮುಚ್ಚಿದ್ದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.