ಶುಕ್ರವಾರ, ಮೇ 7, 2021
27 °C

ಪ್ರತ್ಯೇಕ ತಂಡ ಅಗತ್ಯ:ಸಿವಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭ್ರಷ್ಟಾಚಾರದ ಪ್ರಮುಖ ಪ್ರಕರಣಗಳ ಬಗ್ಗೆ ತನಿಖೆ ನಡೆಸಲೆಂದೇ ಪ್ರತ್ಯೇಕವಾದ ತನಿಖಾ ತಂಡ ಬೇಕು ಮತ್ತು ಭ್ರಷ್ಟರ ವಿರುದ್ಧ ಕ್ರಮಕ್ಕೆ ಸರ್ಕಾರದ ಹಸ್ತಕ್ಷೇಪ ಇಲ್ಲದಂತೆ ಅಧಿಕಾರ ಚಲಾಯಿಸಲು ಆಯೋಗಕ್ಕೆ ಸ್ವಾಯತ್ತತೆ ನೀಡಬೇಕು ಎಂದು ಕೇಂದ್ರೀಯ ಜಾಗೃತ ಆಯುಕ್ತ ಪ್ರದೀಪ್‌ಕುಮಾರ್ ಭಾನುವಾರ ಸರ್ಕಾರವನ್ನು ಕೋರಿದರು.ಕೇಂದ್ರೀಯ ಜಾಗೃತ ಆಯೋಗದಲ್ಲಿ (ಸಿವಿಸಿ) ಸಿಬ್ಬಂದಿ ಕೊರತೆ ಇರುವ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದರು.`ಕೆಲವು ಪ್ರಮುಖ ಪ್ರಕರಣಗಳನ್ನು ಆಯೋಗದಿಂದಲೇ ನೇರವಾಗಿ ತನಿಖೆ ನಡೆಸುವ ಕಾರಣ ಇದಕ್ಕೆಂದೇ ಮೀಸಲಾದ ಪ್ರತ್ಯೇಕ ತನಿಖಾ ತಂಡ ಅಗತ್ಯ~ ಎಂದು ಅವರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದರು.`ಇಡೀ ಜಾಗೃತ ವ್ಯವಸ್ಥೆಯ ಆಡಳಿತದ ಬಗ್ಗೆ ಮೇಲ್ವಿಚಾರಣೆ ನಡೆಸಲು ಕಾಯಿದೆ ಪ್ರಕಾರ ಸಿವಿಸಿಗೆ ಅಧಿಕಾರ ಇದೆ. ಆದರೆ ಸಿವಿಸಿ ಈ ಕಾರ್ಯವನ್ನು ಸರ್ಕಾರದ ನಿರ್ದೇಶನಕ್ಕೆ ಅನುಗುಣವಾಗಿ ಮಾಡಬೇಕೆಂದು ಕಾಯಿದೆ ಹೇಳಿದ್ದು ಇದು ಆಯೋಗದ  ಸ್ವಾತಂತ್ರ್ಯವನ್ನು ಮೊಟಕುಗೊಳಿಸಿದೆ~ ಎಂದು ಕುಮಾರ್ ಅಭಿಪ್ರಾಯ ಪಟ್ಟರು.2ಜಿ ಹಗರಣಕ್ಕೆ ಸಂಬಂಧಿಸಿದಂತೆ ಅವ್ಯವಹಾರ ನಡೆದಿದೆ ಎಂಬ ಆರೋಪದ ಕುರಿತ ಆಯೋಗದ ವರದಿಯನ್ನು ಮತ್ತಷ್ಟು ತನಿಖೆಗಾಗಿ ಸಿಬಿಐಗೆ ಸಲ್ಲಿಸಲಾಗಿದೆ ಎಂದರು.`2ಜಿ ತರಂಗಾಂತರ ಹಂಚಿಕೆಯಲ್ಲಿನ ಭ್ರಷ್ಟಾಚಾರ ಆರೋಪಗಳ ಬಗ್ಗೆ ಸಿವಿಸಿ ತನಿಖೆ ನಡೆಸಿದೆ. 2009ರ ಸೆಪ್ಟೆಂಬರ್‌ನಲ್ಲಿ ವರದಿ ಸಿದ್ಧವಾಗಿತ್ತು. 2ಜಿ ಪರವಾನಗಿಗಳ ಹಂಚಿಕೆ ಪ್ರಕ್ರಿಯೆಯಲ್ಲಿ ಕೆಲವು ದೋಷಗಳಿರುವ ಬಗ್ಗೆ ವರದಿಯಲ್ಲಿ ಸೂಚಿಸಿದ್ದು ಮುಂದಿನ ತನಿಖೆಗೆ ಸಿಬಿಐಗೆ ಒಪ್ಪಿಸಲಾಗಿದೆ. ಈಗ ಸಿಬಿಐ ತನಿಖೆ ನಡೆಸುತ್ತಿದೆ~ ಎಂದು ಕುಮಾರ್ ಹೇಳಿದರು.`3ಜಿ ಹಂಚಿಕೆ ಕುರಿತು ನಾವು ಯಾವುದೇ ತನಿಖೆ ನಡೆಸುತ್ತಿಲ್ಲ~ ಎಂದರು.ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಸಂಬಂಧಿಸಿದ ಯೋಜನೆಗಳ ತನಿಖೆ ಬಗ್ಗೆ ಅವರು, ಸುಮಾರು ರೂ 3,300 ಕೋಟಿ ಮೊತ್ತದ ಅವ್ಯವಹಾರವನ್ನು ಆಯೋಗ ಪತ್ತೆ ಹಚ್ಚಿದೆ ಎಂದು ತಿಳಿಸಿದರು.`ಆಯೋಗವು ತನಿಖೆಗಾಗಿ ಐದು ಕಾಮಗಾರಿಗಳನ್ನು ಸಿಬಿಐಗೆ ಹಸ್ತಾಂತರಿಸಿದ್ದು ಆರು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸಲಹೆ ನೀಡಿದೆ. ಒಂದು ಕಾಮಗಾರಿಯಲ್ಲಿ ಸಿವಿಸಿಯಿಂದಲೇ ನೇರ ತನಿಖೆ ನಡೆಯುತ್ತಿದೆ~ ಎಂದು ವಿವರಿಸಿದರು.`ಈ ಪ್ರಕರಣಗಳಲ್ಲಿ ಕಾಮಗಾರಿಗಳನ್ನು ಗುತ್ತಿಗೆ ನೀಡುವಲ್ಲಿ  ಗುತ್ತಿಗೆದಾರರಿಗೆ ಅನಾವಶ್ಯಕವಾಗಿ ಲಾಭ ಮಾಡಿಕೊಡಲಾಗಿದೆ, ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿ ಆ ಮೂಲಕ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂಬುದು ನಮ್ಮ ಪ್ರಮುಖ ಅಭಿಪ್ರಾಯ~ ಎಂದರು.ಕೇಂದ್ರೀಯ ಜಾಗೃತ ಆಯೋಗಕ್ಕೆ ಅಗತ್ಯ ಸಿಬ್ಬಂದಿ ಮತ್ತು ಸಂಪನ್ಮೂಲಗಳನ್ನು ಒದಗಿಸಬೇಕು ಎಂದು ಸರ್ಕಾರವನ್ನು ಕೋರಿದರು.`ಆಯೋಗದಲ್ಲಿ ಕೆಲಸದ ಪ್ರಮಾಣ ಹೆಚ್ಚುತ್ತಿದ್ದು ಸಿಬ್ಬಂದಿ ಸಾಕಾಗುತ್ತಿಲ್ಲ. ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಅಧಿಕಾರವನ್ನು ಸಿವಿಸಿಗೆ ಕಾಯಿದೆ ನೀಡಿಲ್ಲದ ಕಾರಣ ನಾವು ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ~ ಎಂದು ಆಯುಕ್ತರು ಹೇಳಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.