ಶನಿವಾರ, ಮೇ 8, 2021
19 °C

ಪ್ರತ್ಯೇಕ ಪ್ರಕರಣ: ಮೂವರ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾಗಡಿ ರಸ್ತೆ ಹಾಗೂ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಯಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಪತ್ನಿ ಕೆಲಸಕ್ಕೆ ಹೋಗುತ್ತಿದ್ದರಿಂದ ಬೇಸರಗೊಂಡ ಪತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾಗಡಿ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.ರಾಜಾಜಿನಗರದ ಆರನೇ ಬ್ಲಾಕ್ ನಿವಾಸಿ ಮಂಜುನಾಥ್(35) ಆತ್ಮಹತ್ಯೆ ಮಾಡಿಕೊಂಡವರು. ಅವರ ಪತ್ನಿ ಮೀನಾಬಾಯಿ ನ್ಯಾಯಾಂಗ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದರು. ಆದರೆ, ಮಂಜುನಾಥ್ ಅವರಿಗೆ ಉದ್ಯೋಗವಿರಲಿಲ್ಲ. ಇದರಿಂದ ಬೇಸರಗೊಂಡ ಅವರು, ಕೆಲಸಕ್ಕೆ ಹೋಗಬೇಡ ಎಂದು ಪತ್ನಿಯೊಂದಿಗೆ ನಿರಂತರವಾಗಿ ಜಗಳವಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದರು.ಬುಧವಾರ ಬೆಳಿಗ್ಗೆ ಕೂಡ ಇಬ್ಬರ ನಡುವೆ ಜಗಳ ನಡೆದಿದೆ. ಪತ್ನಿ ಕೆಲಸಕ್ಕೆ ಹೋದ ನಂತರ ಮಂಜುನಾಥ್ ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೀನಾಬಾಯಿ ಅವರು ಕೆಲಸ ಮುಗಿಸಿ ಮಧ್ಯಾಹ್ನ ಮನೆಗೆ ಬಂದಾಗ ಪ್ರಕರಣ ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು. ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಯುವಕನ ಆತ್ಮಹತ್ಯೆ

ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಮಾಕ್ಷಿಪಾಳ್ಯ ಸಮೀಪದ ಸುಂಕದಕಟ್ಟೆಯಲ್ಲಿ ನಡೆದಿದೆ. ಮೂಲತಃ ರಾಯಚೂರು ಜಿಲ್ಲೆಯವರಾದ ಅಮರ್ (25) ಆತ್ಮಹತ್ಯೆ ಮಾಡಿಕೊಂಡವರು. ಟೈಲರ್ ಕೆಲಸ ಮಾಡುತ್ತಿದ್ದ ಅವರು, ಸುಂಕದಕಟ್ಟೆ ಮುಖ್ಯ ರಸ್ತೆಯಲ್ಲಿ ವಾಸವಿದ್ದರು. `ನನ್ನ ಸಾವಿಗೆ ನಾನೇ ಕಾರಣ~ ಎಂದು ಪತ್ರ ಬರೆದಿಟ್ಟು ಸೋಮವಾರ ರಾತ್ರಿ ಮನೆಯಲ್ಲಿಯೇ ನೇಣು ಹಾಕಿಕೊಂಡಿದ್ದಾರೆ. ಬೆಳಿಗ್ಗೆ ಪ್ರಕರಣ ಗೊತ್ತಾಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದರು.ಮತ್ತೊಂದು ಪ್ರಕರಣ: ಸುಂಕದಕಟ್ಟೆ ಸಮೀಪದ ಪೈಪ್‌ಲೆನ್ ರಸ್ತೆಯಲ್ಲಿರುವ ಮರವೊಂದಕ್ಕೆ ನೇಣು ಹಾಕಿಕೊಂಡು ಶಂಕರ್ (32) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂಲತಃ ಮಂಡ್ಯದವರಾದ ಶಂಕರ್ ಶೌಚಾಲಯ ಶುಚಿಗೊಳಿಸುವ ಕೆಲಸ ಮಾಡುತ್ತಿದ್ದರು.ಹನ್ನೆರಡು ವರ್ಷಗಳ ಹಿಂದೆ ವಿವಾಹವಾಗಿದ್ದ ಅವರು, ಪತ್ನಿಯಿಂದ ದೂರ ಉಳಿದಿದ್ದರು. ಮದ್ಯವ್ಯಸನಿಯಾಗಿದ್ದ ಶಂಕರ್, ಮಂಗಳವಾರ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಿಗ್ಗೆ ಶವವನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಈ ಎರಡು ಪ್ರಕರಣ  ದಾಖಲಾಗಿವೆ.ತೊಟ್ಟಿಗೆ ಬಿದ್ದು ಸಾವು

ಕುಡಿದ ಮತ್ತಿನಲ್ಲಿ ನೀರಿನ ತೊಟ್ಟಿಗೆ ಬಿದ್ದು ಮಹದೇವ್ (40) ಎಂಬುವರು ಸಾವನ್ನಪ್ಪಿರುವ ಘಟನೆ ಕಾಮಾಕ್ಷಿಪಾಳ್ಯ ಸಮೀಪದ ಶ್ರೀನಿವಾಸಪುರದಲ್ಲಿ ಮಂಗಳವಾರ ನಡೆದಿದೆ. ಮೂಲತಃ ಮಂಡ್ಯದವರಾದ ಮಹದೇವ್ ಕಾರು ಚಾಲಕರಾಗಿ ಕೆಲಸ ಮಾಡುತಿದ್ದರು.ಅವರ ಪತ್ನಿ ತ್ರಿವೇಣಿ ಹಾಗೂ ಇಬ್ಬರು ಮಕ್ಕಳು ಹಬ್ಬಕ್ಕೆಂದು ಊರಿಗೆ ಹೋಗಿದ್ದರು. ಮನೆಯಲ್ಲಿ ಒಬ್ಬರೆ ಇದ್ದ ಮಹದೇವ್ ರಾತ್ರಿ ವಿಪರೀತ ಕುಡಿದು ಮನೆ ಆವರಣದಲ್ಲಿರುವ ತೊಟ್ಟಿಯಲ್ಲಿ ನೀರು ತುಂಬಲು ಹೋದಾಗ ನಿಯಂತ್ರಣ ಕಳೆದುಕೊಂಡು ತೊಟ್ಟಿಗೆ ಬಿದ್ದಿದ್ದಾರೆ.ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ತೊಟ್ಟಿಯಲ್ಲಿ ಸುಮಾರು ಹತ್ತು ಅಡಿ ನೀರಿತ್ತು ಎಂದು ಪೊಲೀಸರು ಮಾಹಿತಿ ನೀಡಿದರು. ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಅವರ ಕುಟುಂಬಕ್ಕೆ ಒಪ್ಪಿಸಲಾಯಿತು ಎಂದು ಪೊಲೀಸರು ಹೇಳಿದರು. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಳವು ಯತ್ನ: ಬಂಧನ

ಬ್ರಿಗೇಡ್ ರಸ್ತೆಯಲ್ಲಿರುವ ಸೌತ್ ಇಂಡಿಯನ್ ಬ್ಯಾಂಕ್‌ನ ಎಟಿಎಂ ಘಟಕದಲ್ಲಿ ಕಳವು ಮಾಡಲು ಯತ್ನಿಸಿದ್ದ ಆರೋಪಿಯನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ನಿವಾಸಿ ಲಾಲು (26) ಬಂಧಿತ ಆರೋಪಿ. ಕಾಲ್‌ಸೆಂಟರ್ ಉದ್ಯೋಗಿಯಾಗಿದ್ದ ಲಾಲು, ಸೆಂಟ್‌ಫಿಲೋಮಿನಾ ರಸ್ತೆಯಲ್ಲಿರುವ ಪೇಯಿಂಗ್‌ಗೆಸ್ಟ್‌ನಲ್ಲಿ ವಾಸಿಸುತ್ತಿದ್ದ.ಕಳೆದ ಗುರುವಾರ(ಏ.12) ರಾತ್ರಿ ಎಂ.ಜಿ ರಸ್ತೆಯ ಬಾರ್‌ನಲ್ಲಿ ಮದ್ಯಪಾನ ಮಾಡಿದ್ದನು. ಬಿಲ್ ಪಾವತಿ ಮಾಡಲು ಆತನ ಬಳಿ ಹಣ ಇಲ್ಲದಿದ್ದ ಕಾರಣ ಎಟಿಎಂಗೆ ಹೋಗಿ ಹಣ ತರುವುದಾಗಿ ಬಾರ್ ಮಾಲೀಕರಿಗೆ ಹೇಳಿ ಹೋಗಿದ್ದ ಎಂದು ಪೊಲೀಸರು ತಿಳಿಸಿದರು. ಎಟಿಎಂ ಘಟಕದ ಒಳಗೆ ಹೋಗಿ ಸಿಸಿಟಿವಿ ಕ್ಯಾಮೆರಾಗಳನ್ನು ಜಖಂಗೊಳಿಸಿದ ಆರೋಪಿ, ಎಟಿಎಂ ಯಂತ್ರವನ್ನು ಒಡೆಯುವ ಪ್ರಯತ್ನ ನಡೆಸಿ ವಿಫಲನಾಗಿದ್ದ ಎಂದು ಪೊಲೀಸರು ತಿಳಿಸಿದರು.

 

ಸರ ಕಳವು

ಕೋಣೆಯ ಕಿಟಕಿ ಬಾಗಿಲು ತೆಗೆದು ಮಲಗಿದ್ದ ಮಹಿಳೆಯಿಂದ ದುಷ್ಕರ್ಮಿಯೊಬ್ಬ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ನಸುಕಿನಲ್ಲಿ ನಡೆದಿದೆ.

ಹೊಸಕೆರೆಹಳ್ಳಿ ಸಮೀಪದ ದ್ವಾರಕಾನಗರ ನಿವಾಸಿಯಾದ ಹೋಮಲೇಗೌಡ ಅವರ ಪತ್ನಿ ಹೇಮಲತಾ ಸರ ಕಳೆದು ಕೊಂಡವರು. ಗಾಳಿ ಬರಲಿ ಎಂದು ಕೋಣೆಯ ಬಾಗಿಲು ತೆರೆದು ಮಲಗಿದ್ದ ವೇಳೆ ಪಕ್ಕದ ಅಪಾರ್ಟ್‌ಮೆಂಟ್ ಕಡೆಯಿಂದ ಬಂದ ದುಷ್ಕರ್ಮಿಯೊಬ್ಬ ಹೇಮಲತಾ ಅವರ ಕುತ್ತಿಗೆಯಲ್ಲಿದ್ದ 65 ಗ್ರಾಂ ತೂಕದ ಚಿನ್ನದ ಸರ ದೋಚಿದ್ದಾನೆ. ಅದರ ಮೌಲ್ಯ 1.5 ಲಕ್ಷ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.