ಮಂಗಳವಾರ, ಆಗಸ್ಟ್ 11, 2020
27 °C

ಪ್ರಧಾನಿ ಆರ್ಥಿಕ ವಾಸ್ತುಶಿಲ್ಪಿ: ರತನ್ ಟಾಟಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಧಾನಿ ಆರ್ಥಿಕ ವಾಸ್ತುಶಿಲ್ಪಿ: ರತನ್ ಟಾಟಾ

ನವದೆಹಲಿ (ಪಿಟಿಐ): `ಭರವಸೆ ನೀಡಿದ್ದ ಎಲ್ಲ ಆರ್ಥಿಕ ಸುಧಾರಣೆಗಳನ್ನು ಜಾರಿಗೊಳಿಸುವ ಮೂಲಕ ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರದ ವಿಶ್ವಾಸಾರ್ಹತೆ   ಉಳಿಸಿಕೊಳ್ಳಬೇಕು ಮತ್ತು ದೇಶವನ್ನು ಮತ್ತೊಮ್ಮೆ ಪ್ರಗತಿ ಪಥದಲ್ಲಿ  ಮುನ್ನಡೆಸಬೇಕು~ ಎಂದು ಟಾಟಾ ಸಮೂಹ ಸಂಸ್ಥೆಗಳ ಅಧ್ಯಕ್ಷ ರತನ್ ಟಾಟಾ ಹೇಳಿದ್ದಾರೆ.ಕಳೆದ ಕೆಲವು ತಿಂಗಳುಗಳಿಂದ ವಿರೋಧ ಪಕ್ಷ, ಕೆಲವು ಖಾಸಗಿ ವ್ಯಕ್ತಿಗಳು ಮತ್ತು ಆಡಳಿತ ಪಕ್ಷದ ಕೆಲವು ಸದಸ್ಯರು ಪ್ರಧಾನಿ ವಿರುದ್ಧ ಮಾಡುತ್ತಿರುವ ಟೀಕೆ ಮತ್ತು ಮಾಧ್ಯಮಗಳಲ್ಲಿ ಬರುತ್ತಿರುವ ವರದಿ ನಿರ್ದಯೆಯಿಂದ ಕೂಡಿವೆ.  ದೇಶದ ಆರ್ಥಿಕ ಸಮೃದ್ಧಿ ಮತ್ತು ಅಂತರರಾಷ್ಟ್ರೀಯ ಮನ್ನಣೆಗಾಗಿ ಮಹತ್ವದ ಸುಧಾರಣೆಗಳನ್ನು ಜಾರಿಗೆ ತಂದ `ಆರ್ಥಿಕ ವಾಸ್ತುಶಿಲ್ಪಿ~ ನಮ್ಮ ಪ್ರಧಾನಿ. ಅವರ ವಿರುದ್ಧ ಇಂತಹ ಟೀಕೆಗಳು ತರವಲ್ಲ ಎಂದು ಟಾಟಾ ಹೇಳಿದ್ದಾರೆ.ಆರ್ಥಿಕ ವೃದ್ಧಿ ದರ (ಜಿಡಿಪಿ) ಕುಸಿಯುತ್ತಿರುವುದು, ಹಣದುಬ್ಬರ ಹೆಚ್ಚುತ್ತಿರುವುದು ಮತ್ತು ಹೊಸ ಹೂಡಿಕೆಗಳು ನೆನೆಗುದಿಗೆ ಬಿದ್ದಿರುವುದಕ್ಕೆ ಪ್ರಧಾನಿಯವರನ್ನೇ ಗುರಿಯಾಗಿಟ್ಟುಕೊಂಡು ನಡೆಸುತ್ತಿರುವ ಟೀಕೆಗಳು `ಸಂಪೂರ್ಣವಾಗಿ ದಾರಿತಪ್ಪಿಸುವ ಸಂಗತಿ~. 1991ರ ಆರ್ಥಿಕ ಸುಧಾರಣೆಗಳ ಮೂಲಕ ದೇಶಕ್ಕೆ ಆರ್ಥಿಕ ಸಮೃದ್ಧಿ ಮತ್ತು ಅಂತರರಾಷ್ಟ್ರೀಯ ಮನ್ನಣೆಯನ್ನು ಅವರು ತಂದುಕೊಟ್ಟಿದ್ದಾರೆ. ಆದರೆ, ಈಗ ಅವರ ವಿರುದ್ಧ ಕೇಳಿಬರುತ್ತಿರುವ ಟೀಕೆಗಳು ಅನಿರೀಕ್ಷಿತ ಮತ್ತು ಬೇಸರದ ಸಂಗತಿ~ ಎಂದು ಅವರು ತಮ್ಮ `ಟ್ವಿಟ್ಟರ್~ನಲ್ಲಿ  ಬರೆದುಕೊಂಡಿದ್ದಾರೆ.ಇದೇ ವೇಳೆ `ಪ್ರಧಾನಿ ತಮ್ಮ ಸಂಪ್ರದಾಯ ಮುರಿಯಲು ಇದು ಸಕಾಲ. ಆರ್ಥಿಕ ಪ್ರಗತಿ ಕುಂಠಿತಗೊಂಡಿರುವ ಸದ್ಯದ ಪರಿಸ್ಥಿತಿಯಲ್ಲಿ ಅವರು ಭರವಸೆ ನೀಡಿದ್ದ ಆರ್ಥಿಕ ನೀತಿಗಳನ್ನು ಜಾರಿಗೊಳಿಸಬೇಕು. ಈ ಮೂಲಕ ಸರ್ಕಾರದ ವಿಶ್ವಾಸಾರ್ಹತೆ ಉಳಿಸಿಕೊಳ್ಳಬೇಕು~ ಎಂದೂ ಟಾಟಾ ಸಲಹೆ ಮಾಡಿದ್ದಾರೆ.`ಪ್ರಧಾನಿ ಬದಲಿಗೆ ಬೇರೊಬ್ಬರು ಸರ್ಕಾರ ನಡೆಸುತ್ತಿದ್ದಾರೆ. ಆರ್ಥಿಕ ಸುಧಾರಣೆಗಳನ್ನು ಕೈಗೆತ್ತಿಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ~ ಎನ್ನುವ ಟೀಕೆಗಳು ಇತ್ತೀಚೆಗೆ ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿತ್ತು.ಅಮೆರಿಕ ಮೂಲಕ `ಟೈಮ್~ ಪಾಕ್ಷಿಕ ಇತ್ತೀಚೆಗೆ ಪ್ರಧಾನಿ ಅವರನ್ನು `ವಿಫಲ ನಾಯಕ~ ಎಂದು ಟೀಕಿಸಿತ್ತು.  ಇಂಗ್ಲೆಂಡ್‌ನ ಇಂಡಿಪೆಂಡೆಂಟ್ ಪತ್ರಿಕೆ ಪ್ರಧಾನಿ ಅವರಿಗೆ ತಮ್ಮ ಸಚಿವ ಸಂಪುಟದ ಮೇಲೆ ಯಾವುದೇ ಪ್ರಭಾವ  ಇಲ್ಲ ಎಂದು ಹೇಳಿತ್ತು.ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ, ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಸೇರಿದಂತೆ ಪ್ರಮುಖ ಉದ್ಯಮ ಮುಖಂಡರು ಇತ್ತೀಚೆಗೆ ಕೇಂದ್ರದ ಆರ್ಥಿಕ ವೈಫಲ್ಯಗಳ ಕುರಿತು ಟೀಕಿಸಿದ್ದನ್ನು ಇಲ್ಲಿ ಸ್ಮರಿಸಬಹುದು.`ಉದ್ಯಮದ ಮೇಲೆ ಪರಿಣಾಮ ಇಲ್ಲ~

ಮಾರುತಿ ಸುಜುಕಿ ಮಾನೇಸರ ಘಟಕದಲ್ಲಿ ನಡೆಯುತ್ತಿರುವ ಗಲಭೆಯು  ದೇಶದ ಉದ್ಯಮ ರಂಗದ ಪ್ರಗತಿಯ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದು ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಹೇಳಿದೆ.ಇದೊಂದು ಅನಿರೀಕ್ಷಿತ ಮತ್ತು ಅಹಿತಕರ ಘಟನೆ. ಇಂತಹ ಘಟನೆಗಳು ಭಾರತದಲ್ಲಿ ಮಾತ್ರವಲ್ಲ ಪ್ರಪಂಚದ ಉಳಿದೆಡೆಯೂ ನಡೆಯುತ್ತವೆ. ಆದರೆ, ಇದು ಉದ್ಯಮ ವಾತಾವರಣದ ಮೇಲೆ ಯಾವುದೇ ಧೀರ್ಘಾವಧಿ ಪರಿಣಾಮ ಬೀರುವುದಿಲ್ಲ ಎಂದು `ಸಿಐಐ~ನ ಉತ್ತರ ವಲಯದ ಅಧ್ಯಕ್ಷ ಜಯಂತ್ ದೇವರ್‌ಅಭಿಪ್ರಾಯಪಟ್ಟಿದ್ದಾರೆ.ವಾಣಿಜ್ಯ ಮತ್ತುಕೈಗಾರಿಕಾ ಸಚಿವ ಆನಂದ ಶರ್ಮಾ ಕೂಡ ಇದೇ  ಅಭಿಪ್ರಾಯ ವ್ಯಕ್ತಪಡಿಸಿದ್ದು, ಉದ್ಯಮದ ವಿಶ್ವಾಸಾರ್ಹತೆ ಮೇಲೆ ಈ ಘಟನೆ ಪ್ರತಿಕೂಲ ಪರಿಣಾಮ ಬೀರುವುದಿಲ್ಲ. ರಾಜ್ಯ ಸರ್ಕಾರ ಬುಧವಾರವೇ ಎಚ್ಚೆತ್ತುಕೊಂಡಿದ್ದರೆ  ಹೆಚ್ಚಿನ ಅನಾಹುತ ತಪ್ಪಿಸಬಹುದಿತ್ತು ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.