ಶುಕ್ರವಾರ, ಮೇ 7, 2021
20 °C

ಪ್ರಧಾನಿ - ಚಿದಂಬರಂ ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫ್ರಾಂಕ್‌ಫರ್ಟ್ (ಪಿಟಿಐ): 2 ಜಿ ತರಂಗಾಂತರ ಹಂಚಿಕೆ ಸಂಬಂಧ ಹಣಕಾಸು ಇಲಾಖೆಯು ಪ್ರಧಾನಿ ಕಚೇರಿಗೆ ಕಳುಹಿಸಿದ್ದ ಟಿಪ್ಪಣಿಯು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಸಹೋದ್ಯೋಗಿ ಪಿ.ಚಿದಂಬರಂ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.ಬುಧವಾರ ರಾತ್ರಿ ಇಲ್ಲಿ ತಂಗಿದ್ದ ಅವರು ಚಿದಂಬರಂ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ 20 ನಿಮಿಷ ಕಾಲ ಚರ್ಚಿಸಿದರು ಎಂದು ಮೂಲಗಳು ಸ್ಪಷ್ಟಪಡಿಸಿವೆ. ತರಂಗಾಂತರ ಹಂಚಿಕೆಯು ಹರಾಜು ಮೂಲಕವೇ ಆಗಬೇಕೆಂದು ಆಗ ಚಿದಂಬರಂ ಒತ್ತಾಯಿಸಿದ್ದರೆ ಹಗರಣ ಎಸಗಲು ಆಸ್ಪದವೇ ಆಗುತ್ತಿರಲಿಲ್ಲ ಎಂಬ ಟೀಕೆಗಳು ಇದೀಗ ಕೇಳಿಬಂದಿವೆ.ಹಗರಣದಲ್ಲಿ ಚಿದಂಬರಂ ಪಾತ್ರದ ಬಗ್ಗೆ ಶಂಕೆಗಳು ಮೂಡಿದ್ದರೂ ಅವರ ಪ್ರಾಮಾಣಿಕತೆ ಬಗ್ಗೆ ಮನಮೋಹನ್ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಬಹಿರಂಗ ಹೇಳಿಕೆ ನೀಡಲು ಕೂಡ ತಾವು ಸಿದ್ಧ ಎಂಬುದನ್ನು ಮಾತುಕತೆ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ. ಆದರೆ, ತಾವು ಸ್ವದೇಶಕ್ಕೆ ವಾಪಸಾಗುವ ತನಕ, ಅಂದರೆ ಸೆ.27ರವರೆಗೆ ತಾಳ್ಮೆಯಿಂದ ಇರುವಂತೆ ಚಿದಂಬರಂಗೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.ಇದೇ ವೇಳೆ ಚಿದಂಬರಂ ಪಾತ್ರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಈಗ ನ್ಯೂಯಾರ್ಕ್‌ನಲ್ಲಿರುವ ಹಾಲಿ ಹಣಕಾಸು ಸಚಿವ ಪ್ರಣವ್ ಮುಖರ್ಜಿ ನಿರಾಕರಿಸಿದ್ದಾರೆ. ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿರುವುದರಿಂದ ಏನು ಹೇಳಿಕೆ ನೀಡಿದರೂ ಅದು ಸಬ್‌ಜುಡಿಸ್ ಆಗುತ್ತದೆ ಎಂದು ಅವರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.