ಶುಕ್ರವಾರ, ಮೇ 14, 2021
29 °C

ಪ್ರಧಾನಿ ಹುದ್ದೆ ಆಕಾಂಕ್ಷಿ ನಾನಲ್ಲ - ಎಲ್.ಕೆ. ಅಡ್ವಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಗ್ಪುರ, (ಪಿಟಿಐ): ತಾವು ಪ್ರಧಾನಿ ಹುದ್ದೆಯ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿರುವ ಬಿಜೆಪಿಯ ಹಿರಿಯ ಧುರೀಣ ಎಲ್.ಕೆ.ಅಡ್ವಾಣಿ, ಸಂಘ ಪರಿವಾರ ಮತ್ತು ಪಕ್ಷದ ಕಾರ್ಯಕರ್ತರು ತಮಗೆ ಈ ಹುದ್ದೆಗಿಂತಲೂ ಹೆಚ್ಚಿನ ಗೌರವ ನೀಡಿದ್ದಾರೆ ಎಂದು ಹೇಳಿದ್ದಾರೆ.ಬಹಳಷ್ಟು ಕಾಲದಿಂದಲೂ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯೆಂದೇ ಪರಿಗಣಿತವಾಗಿದ್ದ ಅಡ್ವಾಣಿ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಬುಧವಾರ ಇಲ್ಲಿ ಭೇಟಿ ಮಾಡಿದ ಬಳಿಕ ಈ ಅಚ್ಚರಿಯ ಹಾಗೂ ಮಹತ್ವದ ಹೇಳಿಕೆ ನೀಡಿದ್ದಾರೆ.ಮುಂದಿನ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗುವ ಸಲುವಾಗಿಯೇ ಅಡ್ವಾಣಿ ನಡೆಸುತ್ತಿದ್ದಾರೆ  ಎನ್ನಲಾದ `ಭ್ರಷ್ಟಾಚಾರ ವಿರುದ್ಧದ ಯಾತ್ರೆ~ಯ ಬಗ್ಗೆ ಆರ್‌ಎಸ್‌ಎಸ್ ಅಸಂತುಷ್ಟವಾಗಿದೆ ಎಂಬ ವರದಿಗಳ ನಡುವೆಯೇ ಈ ಇಬ್ಬರು ಮುಖಂಡರ ಭೇಟಿ ನಡೆದಿದೆ.`ಮೊದಲಿಗೆ ಸ್ವಯಂ ಸೇವಕನಾದೆ, ನಂತರ ಜನಸಂಘದ ಕಾರ್ಯಕರ್ತನಾಗಿ ಬಿಜೆಪಿಯಲ್ಲಿ ನಾಯಕತ್ವ ಪಡೆದೆ. ಇವೆಲ್ಲವೂ ಜತೆಯಲ್ಲಿ ಕೆಲಸ ಮಾಡಿದ ಕಾರ್ಯಕರ್ತರ ಸಹಕಾರದಿಂದ ಸಾಧ್ಯವಾಯಿತು. ಈ ದೇಶ ನನಗೆ ಪ್ರಧಾನಿ ಹುದ್ದೆಗಿಂತಲೂ ಮಿಗಿಲಾದುದನ್ನು ನೀಡಿದೆ~ ಎಂದು ಅವರು ಯಾತ್ರೆಯು ಪ್ರಧಾನಿ ಪಟ್ಟಕ್ಕೆ ಏರುವ ಉದ್ದೇಶದ್ದೇ ಎಂಬ ಸುದ್ದಿಗಾರರ ಪ್ರಶ್ನೆಗೆ ಸ್ಪಷ್ಟನೆ ನೀಡಿದರು.`ಯಾತ್ರೆಗೆ ಭಾಗವತ್ ಅವರ ಆಶೀರ್ವಾದ ಪಡೆಯಲು ನಾಗ್ಪುರಕ್ಕೆ ಬಂದಿದ್ದೇನೆ. ಅವರು ಆಶೀರ್ವದಿಸಿದ್ದಾರೆ ಹಾಗೂ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ~ ಎಂದು ತಿಳಿಸಿದರು. ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ ಈ ತಿಂಗಳ 24ಕ್ಕೆ ದೆಹಲಿಗೆ ವಾಪಸಾಗಿ ಯಾತ್ರೆಯ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ, ನಂತರ ಅದರ ಕಾರ್ಯಕ್ರಮಗಳನ್ನು ನಿರ್ಧರಿಸಲಾಗುವುದು ಎಂದು ತಿಳಿಸಿದರು.ಬಿಹಾರದಿಂದ ಆರಂಭ: ಅಕ್ಟೋಬರ್ 11 ಖ್ಯಾತ ಸಮಾಜವಾದಿ ಜಯಪ್ರಕಾಶ್ ನಾರಾಯಣ್ ಅವರ ಜನ್ಮದಿನ ಆಗಿರುವುದರಿಂದ ಅಂದೇ ಯಾತ್ರೆಯನ್ನು ಅವರ ಹುಟ್ಟೂರಾದ ಬಿಹಾರದ ಸಿತಾಬ್ದಿಯಾರ್‌ನಿಂದ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಅಡ್ವಾಣಿ ತಿಳಿಸಿದರು. ಯಾತ್ರೆಯ ಯಶಸ್ಸಿಗೆ ಯಾರೆಲ್ಲ ಸಹಕರಿಸುವರೋ ಅವರೆಲ್ಲರನ್ನೂ ಭೇಟಿ ಮಾಡುತ್ತೇನೆ ಎಂದು ಅವರು ಭಾಗವತ್ ಭೇಟಿಯನ್ನು ಸಮರ್ಥಿಸಿಕೊಂಡರು. ವೋಟಿಗಾಗಿ ನೋಟು ಮತ್ತು 2ಜಿ ಹಗರಣಗಳಿಂದ 2010ರ ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಭ್ರಷ್ಟಾಚಾರದ ವಿರುದ್ಧ ಯಾತ್ರೆ ನಡೆಸಲು ತಾವು ತೀರ್ಮಾನ ಮಾಡಬೇಕಾಯಿತು ಎಂದು ಹೇಳಿದರು. ಮಾರಾಟಕ್ಕೆ ಇರುವ ಸಂಸದರು ಮತ್ತು ಅವರನ್ನು ಖರೀದಿಸಲು ಸಿದ್ಧವಿರುವ ಸರ್ಕಾರ ಎರಡೂ ಪ್ರಜಾಪ್ರಭುತ್ವಕ್ಕೆ ದೊಡ್ಡ ಆಘಾತ ಎಂದು ಟೀಕಿಸಿದರು.ಪ್ರಧಾನಿ ಹುದ್ದೆಯ ಆಕಾಂಕ್ಷಿ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದರೆ ಮಾತ್ರ ಯಾತ್ರೆಗೆ ಆರ್‌ಎಸ್‌ಎಸ್ ಬೆಂಬಲ ನೀಡುತ್ತದೆ ಎಂಬ ಸ್ಪಷ್ಟ ಸಂದೇಶ ಭಾಗವತ್ ಅವರಿಂದ ದೊರೆತಿದ್ದರಿಂದಲೇ ಅಡ್ವಾಣಿ ಒಲ್ಲದ ಮನಸ್ಸಿನಿಂದ ಇಂತಹ ಹೇಳಿಕೆ ನೀಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.ಕಾಂಗ್ರೆಸ್ ಲೇವಡಿ: ತಮ್ಮ ಆಕಾಂಕ್ಷೆಯನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸದಂತೆ ಆರ್‌ಎಸ್‌ಎಸ್ ಅಡ್ವಾಣಿ ಅವರಿಗೆ ಸೂಚನೆ ನೀಡಿರಬಹುದು ಎಂದು ಬಿಜೆಪಿ ಹಿರಿಯ ನಾಯಕನ ಹೇಳಿಕೆಗೆ ಕಾಂಗ್ರೆಸ್ ಲೇವಡಿ ಮಾಡಿದೆ.`ಪ್ರಧಾನಿ ಅಭ್ಯರ್ಥಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಆಂತರಿಕ ಕೋಲಾಹಲವೇ ನಡೆದಿದೆ. ಈ ಸ್ಥಾನಕ್ಕಾಗಿ ಆ ಪಕ್ಷದಲ್ಲಿ ಐದರಿಂದ ಏಳು ಮಂದಿ ಸ್ಪರ್ಧಿಗಳಿದ್ದಾರೆ. ಆದರೆ ಕಾಂಗ್ರೆಸ್‌ನಲ್ಲಿ ಆ ಹುದ್ದೆ ಖಾಲಿ ಇಲ್ಲ~ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಹೇಳಿದ್ದಾರೆ. 2014ರ ಚುನಾವಣೆಗೆ ಕಾಂಗ್ರೆಸ್‌ನ ಪ್ರಧಾನಿ ಅಭ್ಯರ್ಥಿ ಯಾರು ಎಂಬ ಸುದ್ದಿಗಾರರ ಪ್ರಶ್ನೆಗೆ, ಪ್ರಧಾನಿ ಮನಮೋಹನ್ ಸಿಂಗ್ ಯುಪಿಎ ಮಿತ್ರಕೂಟವನ್ನು ಮುನ್ನಡೆಸುತ್ತಿದ್ದಾರೆ. ಸದ್ಯಕ್ಕಂತೂ ಆ ಸ್ಥಾನ ಖಾಲಿ ಇಲ್ಲ ಎಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.