ಶುಕ್ರವಾರ, ಮೇ 14, 2021
21 °C

ಪ್ರವಾಹಕ್ಕೆ ತತ್ತರಿಸಿದ ಬದುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರವಾಹಕ್ಕೆ ತತ್ತರಿಸಿದ ಬದುಕು

ಬಾಗಲಕೋಟೆ: ಬೆಳಗಾವಿ ಜಿಲ್ಲೆಯ ನವಿಲುತೀರ್ಥ ಜಲಾಶಯದಿಂದ 10 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಟ್ಟಿರುವ ಪರಿಣಾಮ ಎರಡನೇ ದಿನವಾದ ಶುಕ್ರವಾರ ಮಲಪ್ರಭಾ ನದಿ ವ್ಯಾಪ್ತಿಯಲ್ಲಿ ಪ್ರವಾಹ ಏರುಗತಿಯಲ್ಲಿಯೇ ಸಾಗಿದೆ.ನದಿಯ ಪ್ರವಾಹದಿಂದ ಬಾದಾಮಿ ತಾಲ್ಲೂಕಿನ ಗೋವನಕೊಪ್ಪ ಸೇತುವೆ ಮೇಲೆ ಮೂರರಿಂದ ನಾಲ್ಕು ಅಡಿ ನೀರು ರಭಸವಾಗಿ ಹರಿಯುತ್ತಿದ್ದು, ಇದರಿಂದಾಗಿ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 218ರ ಸಂಚಾರ ಎರಡನೇ ದಿನವೂ ಸ್ಥಗಿತಗೊಂಡಿದ್ದು, ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ.ಈ ಮಾರ್ಗವಾಗಿ ಹೊರ ರಾಜ್ಯ ಮತ್ತು ಜಿಲ್ಲೆಗೆ ತೆರಳಬೇಕಾಗಿದ್ದ ಗೂಡ್ಸ್ ಲಾರಿಗಳು ಕೆರೂರು ಮತ್ತು ಕುಳಗೇರಿ ಕ್ರಾಸ್‌ನಲ್ಲಿ ಮತ್ತು ನದಿ ಸಮೀಪದಲ್ಲಿ ಎರಡು ದಿನಗಳಿಂದ ರಸ್ತೆ ಪಕ್ಕದಲ್ಲೇ ಸಾಲುಗಟ್ಟಿ ನಿಂತಿದ್ದು, ನಿಗದಿತ ಸ್ಥಳಕ್ಕೆ ತಲುಪಲಾಗದೇ ಚಾಲಕರು ಮತ್ತು ನಿರ್ವಾಹಕರು ಪರದಾಡುತ್ತಿದ್ದಾರೆ. ಬಸ್ ಮತ್ತು ಇತರೆ ವಾಹನಗಳು ಹೆದ್ದಾರಿಯನ್ನು ಬಿಟ್ಟು ಸುತ್ತುಬಳಸಿಕೊಂಡು ಸಾಗುತ್ತಿವೆ. ಪರಿಣಾಮ ರಾಷ್ಟ್ರೀಯ ಹೆದ್ದಾರಿ ವಾಹನಗಳಿಲ್ಲದೇ ಬಿಕೋ ಎನ್ನುತ್ತಿದೆ.ಗ್ರಾಮಗಳಿಗೆ ಪ್ರವೇಶಿಸಿದ ಪ್ರವಾಹ: ತಾಲ್ಲೂಕಿನ ಹಾಗನೂರು ಮತ್ತು ಆಲೂರು ಎಸ್.ಕೆ. ಗ್ರಾಮಗಳ ಹತ್ತಾರು ಮನೆಗಳ ಒಳಗೆ ನೀರು ಪ್ರವೇಶಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರವಾಹ ಏರಿಕೆಯಾಗುವ ಭೀತಿಯಿಂದ ಜನತೆ ನಿದ್ದೆ ಇಲ್ಲದೇ ರಾತ್ರಿ ಕಳೆದಿದ್ದಾರೆ. ಹಾಗನೂರು ಗ್ರಾಮವನ್ನು ಪ್ರವಾಹ ಸುತ್ತುವರಿದಿರುವುದರಿಂದ ಜನತೆ ನೀರಿನಲ್ಲೇ ನಡೆದುಕೊಂಡು ಗ್ರಾಮಕ್ಕೆ ಹೋಗಿಬರುತ್ತಿದ್ದಾರೆ. ಅಂಗನವಾಡಿ ಮತ್ತು ಪ್ರಾಥಮಿಕ ಶಾಲೆಯವರೆಗೂ ಪ್ರವಾಹ ಏರಿಕೆಯಾಗಿದೆ ಸಾವಿರಾರು ಎಕರೆ ಬೆಳೆ ನೀರಿನಲ್ಲಿ ಮುಳುಗಿದೆ.ಪ್ರವಾಹದಿಂದ ಆತಂಕಗೊಂಡ ಜನತೆ ಮನೆಯ ಸರಕು- ಸರಂಜಾಮುಗಳನ್ನು ಎತ್ತಿನಗಾಡಿ, ಟ್ಯಾಕ್ಟರ್ ಮತ್ತು ತಲೆಯ ಮೇಲೆ ಹೊತ್ತುಕೊಂಡು ಈಗಾಗಲೇ ವ್ಯವಸ್ಥೆಗೊಳಿಸಲಾಗಿರುವ ಶೆಡ್‌ಗಳಿಗೆ ತೆರಳ ತೊಡಗಿದ್ದಾರೆ. ಪ್ರವಾಹದ ನಡುವೆಯೇ ಹಾಗನೂರ ಗ್ರಾಮದ ಜನತೆ ಶುಕ್ರವಾರ ಪಾಂಡುರಂಗ ದಿಂಡಿ ಉತ್ಸವ ಮತ್ತು ಭುಜಂಗೇಶ್ವರ ಪುಣ್ಯ ತಿಥಿಯನ್ನು ಸಾಮೂಹಿಕವಾಗಿ ಆಚರಿಸಿದರು.ನವಿಲುತೀರ್ಥ ಜಲಾಶಯದಿಂದ ಕಡಿಮೆ ಪ್ರಮಾಣ ದಲ್ಲಿ ನೀರನ್ನು ಬಿಡುತ್ತಿರುವುದರಿಂದ ಶನಿವಾರ ಪ್ರವಾಹ ಇಳಿಮುಖವಾಗುವ ಸಾಧ್ಯತೆ ಇದೆ ಎಂದು ತಹಸೀಲ್ದಾರ್ ಮಹೇಶ ಕರ್ಜಗಿ ತಿಳಿಸಿದರು.ಆಸರೆ ಮನೆಗೆ ಹೋಗುವುದಿಲ್ಲ: ಹಲವು ವರ್ಷಗಳಿಂದ ಪ್ರವಾಹಕ್ಕೆ ತುತ್ತಾಗುತ್ತಿರುವ ಹಾಗನೂರ ಮತ್ತು ಆಲೂರು ಎಸ್.ಕೆ. ಗ್ರಾಮದ ಸಂತ್ರಸ್ಥರಿಗೆ ಒಂದು ವಾರದ ಹಿಂದೆ 189  `ಆಸರೆ~ ಮನೆಗಳ ಹಕ್ಕುಪತ್ರ ನೀಡಲಾಗಿದೆ. ಆದರೆ ಆಸರೆ ಮನೆಗಳಿಗೆ ಇನ್ನೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ ಮತ್ತು ಸರಿಯಾದ ರಸ್ತೆ ವ್ಯವಸ್ಥೆ ಕೂಡ ಮಾಡಿಲ್ಲದ ಕಾರಣ ಜನರು ಆಸರೆ ಮನೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.ಸ್ಥಳಕ್ಕೆ ಭೇಟಿ ನೀಡಿದ ~ಪ್ರಜಾವಾಣಿ~ ಯೊಂದಿಗೆ ಮಾತನಾಡಿದ ಕಾಕನೂರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಿದ್ದಪ್ಪ ಅಯ್ಯಪ್ಪ ಕುಲಕರ್ಣಿ, ಆಸರೆ ಮನೆಗಳ ಕಾಮಗಾರಿ ಕಳಪೆಯಾಗಿದೆ, ಸಂತ್ರಸ್ಥರೆಲ್ಲರಿಗೂ ಮನೆಗಳನ್ನು ನೀಡಲಾಗಿಲ್ಲ, ಆಸರೆ ಮನೆ ಹಂಚಿಕೆಯಲ್ಲಿ ರಾಜಕೀಯ ಪ್ರವೇಶಿಸಿದೆ. ಗ್ರಾಮದಲ್ಲಿ ಇಲ್ಲದೇ ಪಟ್ಟಣದಲ್ಲಿ ಇರುವವರಿಗೂ ಮನೆಗಳನ್ನು ಹಂಚಲಾಗಿದೆ, ಅರ್ಹ ಸಂತ್ರಸ್ಥನ್ನು ಕೈಬಿಡಲಾಗಿದೆ ಎಂದು ಆರೋಪಿಸಿದರು.ಸಂಗನಗೌಡ ಶಿವನಗೌಡರ ಪತ್ರಿಕೆಯೊಂದಿಗೆ ಮಾತನಾಡಿ, ಪ್ರವಾಹದಿಂದಾಗಿ ರಾತ್ರಿ ನಿದ್ದೆಯಿಲ್ಲದೇ ಇಲ್ಲಿಯ ಸಮುದಾಯ ಭವನದಲ್ಲಿ ಕುಳಿತು ಕಾಲಕಳೆದಿದ್ದೇವೆ, ಯಾವೊಬ್ಬ ಅಧಿಕಾರಿಯೂ ನಮ್ಮ ಕಷ್ಟ ಕೇಳುತ್ತಿಲ್ಲ, ಜೋಳ, ಈರುಳ್ಳಿ ಮೆಣಸು ನೀರಿನಲ್ಲಿ ಮುಳುಗಿ ಹಾನಿಯಾಗಿದೆ ಎಂದು ತಿಳಿಸಿದರು.ಹಾಗನೂರ ನೆರೆಸಂತ್ರಸ್ಥರ ಹಟಮಾರಿತನ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ  ಆಸರೆ ಮನೆಗಳ `ಗೃಹಪ್ರವೇಶ~ ಇದುವರೆಗೂ ಆಗಿಲ್ಲ.ಇಳಿಮುಖ: ಇತ್ತಕಡೆ ಕೃಷ್ಣಾ ಮತ್ತು ಘಟಪ್ರಭಾ ನದಿಗಳಲ್ಲಿ ಪ್ರವಾಹ ಇಳಿಮುಖವಾಗಿದೆ. ಮುಧೋಳ-ಯಾದವಾಡ ರಸ್ತೆ ಸಂಚಾರ ಪುನರ್ ಆರಂಭಗೊಂಡಿದೆ. ದ್ವೀಪದಂತಾಗಿದ್ದ ನಂದಗಾಂವ ಸಹಜಸ್ಥಿತಿಗೆ ಮರಳಿದೆ. ಪ್ರವಾಹ ಸಂಪೂರ್ಣ ಇಳಿಮುಖವಾಗಿರುವುದರಿಂದ ಗಂಜಿ ಕೇಂದ್ರದಲ್ಲಿದ್ದ ಮಿರ್ಜಿ ಮತ್ತು ಢವಳೇಶ್ವರ ಗ್ರಾಮಸ್ಥರು ಪುನಃ ಗ್ರಾಮಕ್ಕೆ ತೆರಳಿ ನೀರಿನಿಂದ ಅಸ್ತವ್ಯಸ್ತಗೊಂಡಿರುವ ಮನೆಗಳನ್ನು ಸ್ವಚ್ಛಗೊಳಿಸಿಕೊಳ್ಳುತ್ತಿದ್ದಾರೆ. ಪ್ರವಾಹದಿಂದ ಉಂಟಾಗಿರುವ ಕಬ್ಬು, ಈರುಳ್ಳಿ ಮತ್ತಿತರ ಬೆಳೆ ಹಾನಿಯಾಗಿರುವುದರಿಂದ  ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.