ಶುಕ್ರವಾರ, ಫೆಬ್ರವರಿ 26, 2021
22 °C
ಜೀವನ ದುಸ್ತರ; ಮುಂದುವರಿದ ಸ್ಥಳಾಂತರ ಕಾರ್ಯ

ಪ್ರವಾಹದ ಅನುಭವ ನಮಗೈತಿ: ಜನರ ನಿರಾತಂಕ

ಸುಧಾಕರ ತಳವಾರ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರವಾಹದ ಅನುಭವ ನಮಗೈತಿ: ಜನರ ನಿರಾತಂಕ

ಚಿಕ್ಕೋಡಿ: `ಹಿರಿಹೊಳಿ ನಮ್ಮ ಅವ್ವ ಇದ್ದಾಂಗ. ಆಕೀ ಮಡಿಲಿನ್ಯಾಗ ಹುಟ್ಟಿ ಬೆಳೆದ್ ನಮಗ್ ಪ್ರವಾಹದ ಬಗ್ಗೆ ಸಾಕಷ್ಟು ಅನುಭವ ಇದಾವು. ಎಲ್ಲಿಗೀ ನೀರ್ ಬಂದ್ರ ನಮ್ಮ ಮನಿಹೊಲಾ ಮುಳುಗತಾವ್ ಅನ್ನೋದ್ ನಮಗ್ ಗೊತ್ತೈತ್ತಿ. ಈಗಿರುವಷ್ಟ್ ನೀರ್ ಇದ್ರೂ ಜನ-ಜಾನುವಾರುಗಳಿಗಿ ಏನೂ ತೊಂದ್ರಿ ಆಗಾಗಿಲ್ಲಾ. ಆದ್ರೂ, ನಿಸರ್ಗ ಅನ್ನೊದ್ ಯಾರ್ ಕೈಯಾಗ್ ಇಲ್ಲಲ್ಲರ್ರೀ, ಅದಕ್ಕ ಸುರಕ್ಷಿತ ಸ್ಥಳಕ್ಕ ಸ್ಥಳಾಂತರ ಆಗಾಕತೇವಿ...!'ತಾಲ್ಲೂಕಿನ ಇಂಗಳಿ ಗ್ರಾಮದ ಸಂತ್ರಸ್ತ ಅಪ್ಪಾಸಾಹೇಬ ಜತ್ರಾಟೆ ಅವರು ಸದ್ಯ ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ಉಂಟಾಗಿರುವ ಹೆಚ್ಚಳ ಕುರಿತು ನೀಡುವ ಪ್ರತಿಕ್ರಿಯೆ ಇದು.  ಕೃಷ್ಣಾ ಮತ್ತು ಉಪನದಿಗಳ ದಡದಲ್ಲಿ ವಾಸಿಸುವ ಬಹುತೇಕ ಕೃಷಿಕರ ಅಭಿಪ್ರಾಯವೂ ಇದೇ ಆಗಿದೆ. ದಿನದಿನವೂ ನದಿ ನೀರಿನ ಮಟ್ಟದಲ್ಲಿ ನಿಧಾನಗತಿಯ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಆತಂಕಗೊಂಡಿರುವ ಆಡಳಿತ ವರ್ಗ ನದಿದಡದ ತೋಟಪಟ್ಟಿಗಳಿಂದ ಜನ-ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಕರೆ ತರಲು ಅಧಿಕಾರಿಗಳು ಹರಸಾಹಸ ಮಾಡುತ್ತಿದ್ದರೆ, ಅಲ್ಲಿನ ಜನರು ಮಾತ್ರ ಸದ್ಯದ ನೀರಿನ ಮಟ್ಟದ ಕುರಿತು ನಿರಾಂತಕವಾಗಿದ್ದಾರೆ. ಆದರೆ, ಕಳೆದೊಂದು ವಾರದಿಂದ ನದಿಗಳ ನೀರಿನ ಮಟ್ಟದಲ್ಲಿ ನಿರಂತರ ಏರಿಕೆ ಇರುವುದರಿಂದ ಜನಜೀವನ ಮಾತ್ರ ಅಸ್ತವ್ಯಸ್ತವಾಗಿದೆ.ದೆವ್ವಹೊಳೆಯ ಅನುಭವ..!: ಗ್ರಾಮದ ಮಳಿಭಾಗ ಜನವಸತಿ ಪ್ರದೇಶದಲ್ಲಿದ್ದ ಅವರು 25ಕ್ಕೂ ಹೆಚ್ಚು ದನಕರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿರುವ ಅವರು, ಈಗಿರುವ ನೀರಿನ ಪ್ರಮಾಣದಲ್ಲಿ ಹೆಚ್ಚಳ ಉಂಟಾಗದಿದ್ದರೆ ಗ್ರಾಮಸ್ಥರಿಗೆ ಯಾವುದೇ ರೀತಿಯ ತೊಂದರೆ ಆಗದು ಎನ್ನುತ್ತಾರೆ. `1950ರಲ್ಲಿ ಹಿರಿಹೊಳೆ `ದೆವ್ವಹೊಳೆ'ಯಾಗಿ ಹರಿದು ತನ್ನ ಮಡಿಲ ಮಕ್ಕಳ ಬಾಳ ಹಂದರವನ್ನೇ ಹರಿದು ಹಾಕಿದ ಅನುಭವ ನಮ್ಮ ಹಿರಿಯರಿಗಿದೆ.1961ರಲ್ಲಿ ಮತ್ತೊಮ್ಮೆ ಮಹಾಪೂರ ಬಂದು ಜನರ ಬದುಕನ್ನು ಬರಡು ಮಾಡಿದ್ದನ್ನು ನಾವು ಚಿಕ್ಕವರಿದ್ದಾಗ ಕಂಡಿದ್ದೇವೆ. 2005 ಮತ್ತು 06ರಲ್ಲಿ ಸಂಭವಿಸಿದ ಜಲಪ್ರಳಯದಿಂದಲೂ ಪಾರಾಗಿದ್ದೇವೆ. ಅಂತಹ ಪ್ರವಾಹಗಳ ಮುಂದೆ ಈ ವರ್ಷ ಬಂದಿರುವ ನೀರು ಏನೂ ಅಲ್ಲ. ಇದು ಪ್ರತಿವರ್ಷ ಬರುವಷ್ಟೇ ನೀರು. ಇನ್ನೂ ನೀರು ಹೆಚ್ಚಾದರೆ ಮಾತ್ರ ತೊಂದರೆಯಾಗುತ್ತದೆ. ' ಎಂಬುದು ಜತ್ರಾಟೆ ಅವರ ಅಂಬೋಣ.ನಾಲ್ಕು ದಿನಗಳ ಹಿಂದೆಯೇ ನದಿ ನೀರಿನ ಮಟ್ಟದಲ್ಲಿ ಹೆಚ್ಚಳ ಉಂಟಾದ ಹಿನ್ನೆಲೆಯಲ್ಲಿ ಮಳಿಭಾಗ ಪ್ರದೇಶದಿಂದ ದನಕರುಗಳನ್ನು ನಾವು ಸುರಕ್ಷಿತ ಸ್ಥಳಕ್ಕೆ ತಂದಿದ್ದೇವೆ. ಆ ಪ್ರಕ್ರಿಯೆಗೆ ಪ್ರಚಾರ ದೊರೆತ ಹಿನ್ನೆಲೆಯಲ್ಲಿ ಅಧಿಕಾರಿಗಳೂ ಗ್ರಾಮದ ಮಳಿಭಾಗಕ್ಕೆ ದೌಡಾಯಿಸಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಮನವಿ ಮಾಡಿಕೊಂಡಿದ್ದಾರೆ.ಅವರ ಕಾಳಜಿಗೆ ನಾವು ಋಣಿಯಾಗಿದ್ದೇವೆ. ಆದರೆ, ಕೆಲವು ರೈತರಿಗೆ ಗ್ರಾಮದಲ್ಲಿ ದನಕರುಗಳನ್ನು ಕಟ್ಟಲು ಜಾಗವಿಲ್ಲ. ಹೀಗಾಗಿ ಇನ್ನೂ ಅವರ ದನಕರುಗಳು ಮಳಿಭಾಗದಲ್ಲೇ ಇವೆ. ಪ್ರವಾಹದಲ್ಲಿ ಹೆಚ್ಚಳ ಉಂಟಾದರೆ ಸಹಜವಾಗಿ ಅವರೂ ಸುರಕ್ಷಿತ ಸ್ಥಳಕ್ಕೆ ದನಕರುಗಳನ್ನು ತೆಗೆದುಕೊಂಡು ಬರುತ್ತಾರೆ' ಎಂದು ಅಪ್ಪಾಸಾಬ ಜತ್ರಾಟೆ ಹೇಳುತ್ತಾರೆ.ಪ್ರವಾಹ ಬದಲು ಪಡಿತರ ಸಮಸ್ಯೆ...!:  ಕೃಷ್ಣಾ ಮತ್ತು ಉಪನದಿಗಳ ನೀರಿನ ಮಟ್ಟದಲ್ಲಿ ಉಂಟಾಗಿರುವ ಹೆಚ್ಚಳದಿಂದಾದ ಪರಿಸ್ಥಿತಿಯ ಅವಲೋಕನ ನಡೆಸಲು ನದಿತೀರದ ಗ್ರಾಮಗಳಿಗೆ ಬರುತ್ತಿರುವ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಎದುರು ಪ್ರವಾಹದ ಸಮಸ್ಯೆಗಳಿಗಿಂತ ಹೆಚ್ಚಾಗಿ ಪಡಿತರ ವಿತರಣೆ ಕುರಿತು ದೂರುಗಳ ಮಹಾಪೂರವೇ ಹರಿದು ಬರುತ್ತಿದೆ. ಪಡಿತರ ಚೀಟಿ ವಿತರಣೆಯಲ್ಲಿ ಉಂಟಾಗಿರುವ ದೋಷದಿಂದಾಗಿ ಅನ್ನಭಾಗ್ಯ ಯೋಜನೆಯಿಂದ ಅರ್ಹ ಫಲಾನುಭವಿಗಳು ವಂಚಿತರಾಗುತ್ತಿದ್ದಾರೆ. ಎಪಿಎಲ್ ಕಾರ್ಡುದಾರರಿಗೂ ಅಗ್ಗದರದ ಅಕ್ಕಿ ನೀಡಬೇಕು ಮೊದಲಾದ ಬೇಡಿಕೆಗಳನ್ನು ಸಾರ್ವಜನಿಕರು ಮಂಡಿಸುತ್ತಿದ್ದಾರೆ.ಮನೆ ನಿರ್ಮಾಣಕ್ಕೆ ಅನುಮತಿ ನೀಡಬೇಡಿ!: `ಪ್ರವಾಹಕ್ಕೂ ನದಿತೀರದ ಜನರಿಗೂ ಬಿಡದ ನಂಟು. ಪ್ರತಿ ವರ್ಷ ಇಷ್ಟು ನೀರು ಬರಲೇ ಬೇಕು. ನೀರು ಇದ್ರೆ ಮಾತ್ರವೇ ಜನರ ಬದುಕು. ಆದರೆ, ಪ್ರತಿ ವರ್ಷದ ತೋಟಪಟ್ಟಿಯಿಂದ ಜನ-ಜಾನುವಾರುಗಳನ್ನು ಸ್ಥಳಾಂತರಿಸುವ ಜಂಜಾಟದಿಂದ ಮುಕ್ತಿ ಪಡೆಯಲು ಸರ್ಕಾರ ಸೂಕ್ತ ಕ್ರಮ                  ಕೈಗೊಳ್ಳಬೇಕು.ಈಗಿರುವ ನೀರಿನ ಮಟ್ಟದ ಸಮೀಕ್ಷೆ ನಡೆಸಿ, ಈಗ ಮಳುಗಡೆಯಾಗಿರುವ ಹೊಲಗದ್ದೆಗಳಲ್ಲಿ ಹೊಸ ಮನೆ ಅಥವಾ ಜಾನುವಾರುಗಳಿಗೆ ಕೊಟ್ಟಿಗೆಗಳನ್ನು ಕಟ್ಟಲು ಅನುಮತಿ ನೀಡಬಾರದು. ಅವರಿಗೆ ಬೇರೆ ಕಡೆಗೆ ಪುನರ್ವಸತಿ                 ಕಲ್ಪಿಸಿದರೆ ಈ ಗೋಳು ಮುಂದುವರಿಯಲಾರದು' ಎನ್ನುತ್ತಾರೆ ಕಾರದಗಾ ಗ್ರಾಮದ ಅಪ್ಪಾಸಾಬ ಸಾವಂತ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.