ಪ್ರವಾಹ ಬಂದೀತೇ: ಕರಡಿಗೋಡು ಗ್ರಾಮಸ್ಥರ ಚಿಂತೆ

ಶುಕ್ರವಾರ, ಜೂಲೈ 19, 2019
24 °C

ಪ್ರವಾಹ ಬಂದೀತೇ: ಕರಡಿಗೋಡು ಗ್ರಾಮಸ್ಥರ ಚಿಂತೆ

Published:
Updated:

ಸಿದ್ದಾಪುರ: ಜೂನ್ ತಿಂಗಳು ಕಳೆದರೂ ಮಳೆಗಾಲದ ಆರ್ಭಟವಿಲ್ಲ. ತುಂಬಿ ಭೋರ್ಗರೆದು ಹರಿಯುತ್ತಿದ್ದ ಕಾವೇರಿ ನದಿ ಇನ್ನೂ ಒಡಲ ಬಣ್ಣ ಬದಲಾಯಿಸದೇ ಹಸಿರಾಗಿಯೇ ಹರಿಯುತ್ತಿರುವುದು ಕೃಷಿಕರಿಗೆ ಬೇಸರ ಮೂಡಿಸಿದೆ. ಆದರೆ ಇಲ್ಲಿಗೆ ಸಮೀಪದ ಕರಡಿಗೋಡು ಗ್ರಾಮದ ಹೊಳೆಕರೆ ಪೈಸಾರಿ ನಿವಾಸಿಗಳಿಗೆ ಮುಂಗಾರು ಮುನಿಸಿಕೊಂಡಿರುವುದೇ ಸಮಾಧಾನ ತಂದಿದೆ!ಕಾರಣ ದಿಢೀರನೆ ಭಾರಿ ಮಳೆ ಸುರಿದರೆ ಈ ಭಾಗದಲ್ಲಿ ಪ್ರವಾಹ ಉಂಟಾಗುವುದು ಎಂಬ ಭಯದಲ್ಲೇ ಸ್ಥಳೀಯರು ಬದುಕು ಸಾಗಿಸುವ ಪರಿಸ್ಥಿತಿಯಿದೆ. ಕರಡಿಗೋಡು ಗ್ರಾಮದಲ್ಲಿ ಕಾವೇರಿ ನದಿ ದಡದಲ್ಲಿ ಸುಮಾರು 80ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ.ನಗರ ವ್ಯಾಪ್ತಿಯಲ್ಲಿ ಮನೆ ನಿರ್ಮಿಸುವುದು, ನಿವೇಶನ ಕೊಂಡುಕೊಳ್ಳುವುದು ಬಡ ಕಾರ್ಮಿಕರ ಪಾಲಿಗೆ ಗಗನ ಕುಸುಮವಾದ ಕಾರಣ ಸೂರಿಗಾಗಿ ಕಾವೇರಿ ನದಿ ದಡವನ್ನೇ ಆಶ್ರಯಿಸಬೇಕಾದ ಪರಿಸ್ಥಿತಿ ಇಲ್ಲಿಯವರದು. ಕಳೆದ ವರ್ಷ ನೀರು ಹರಿಯುವ ರಭಸಕ್ಕೆ ಇಲ್ಲಿಯ ಬಹುತೇಕ ಮನೆಗಳ ಅಡಿಪಾಯವು ಕೊರೆತಕ್ಕೆ ಬಲಿಯಾಗಿ ಕೊಚ್ಚಿ ಹೋಗಿವೆ. ಇಲ್ಲಿಯ ನಿವಾಸಿಗಳಿಗೆ ಶಾಶ್ವತ ಸೂರಿನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಹಲವು ಪ್ರಯತ್ನಗಳು ನಡೆಯಿತಾದರೂ ಬೇಡಿಕೆ ಕನಸಾಗಿಯೇ ಉಳಿದಿದೆ.ಸ್ಥಳೀಯವಾಗಿ ದೊರಕುವ ದಿನಗೂಲಿ ಕೆಲಸ, ಸಂಚಾರ ವ್ಯವಸ್ಥೆ, ವಿದ್ಯುತ್, ಕುಡಿಯುವ ನೀರು, ಶಾಲೆ, ಸರ್ಕಾರ ಕಲ್ಪಿಸಿದ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಹಾಗೂ ಹಲವು ದಶಕಗಳಿಂದ ಸಂಪಾದಿಸಿದ ಆತ್ಮೀಯತೆಯಿಂದಾಗಿ ಈ ಪ್ರದೇಶದಲ್ಲೇ ನೆಲೆ ನಿಂತಿದ್ದಾರೆ. ಪಟ್ಟಣ ವ್ಯಾಪ್ತಿಯಿಂದ ದೂರದ ಊರಿನಲ್ಲಿ ಕಲ್ಪಿಸಲಾಗುವ ಸ್ಥಳಾಂತರಕ್ಕೆ ಇಲ್ಲಿಯ ನಿವಾಸಿಗಳು ಒಪ್ಪದಿರುವುದೂ ಸಮಸ್ಯೆ ಹಾಗೇ ಉಳಿಯಲು ಕಾರಣವಾಗಿದೆ.ಪ್ರವಾಹ ಎದುರಿಸಲು ಸಿದ್ಧತೆ: ಪ್ರವಾಹದ ಮುನ್ನೆಚ್ಚರಿಕೆಗಾಗಿ ತಹಶೀಲ್ದಾರ ನೇತೃತ್ವದ ಕಂದಾಯ ಅಧಿಕಾರಿಗಳು ಕರಡಿಗೋಡು ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ ಪ್ರವಾಹ ಸಂತ್ರಸ್ತರಿಗಾಗಿ ಈ ವರ್ಷವೂ ಗಂಜಿ ಕೇಂದ್ರ ಆರಂಭಕ್ಕೆ ಸಿದ್ಧತೆ ಮಾಡಿದ್ದಾರೆ. ಸ್ಥಳೀಯ ನ್ಯಾಯಬೆಲೆ ಅಂಗಡಿಗಳಲ್ಲಿ ಕಂದಾಯ ಅಧಿಕಾರಿಗಳ ನಿರ್ದೇಶನದಂತೆ ನಿರಾಶ್ರಿತರಿಗಾಗಿ ಅಕ್ಕಿ ಹಾಗೂ ಸೀಮೆಎಣ್ಣೆ ದಾಸ್ತಾನು ಇಡಲಾಗಿದೆ.

 

ಹಿಂದಿನ ವರ್ಷಗಳಲ್ಲಿ ಪ್ರವಾಹ ಎದುರಾಗುವುದಕ್ಕೂ ಮುನ್ನ ಗ್ರಾಮ ಪಂಚಾಯಿತಿ ವತಿಯಿಂದ ಡೀಸೆಲ್ ಬೋಟ್‌ಗಳನ್ನು ತರಿಸಲಾಗುತ್ತಿತ್ತು. ಇವುಗಳಲ್ಲಿ ಪ್ರವಾಹ ಪೀಡಿತರು, ವೃದ್ಧರು ಸೇರಿದಂತೆ ರೋಗಿಗಳನ್ನು ಗಂಜಿ ಕೇಂದ್ರಕ್ಕೆ ಸಾಗಿಸಲಾಗುತ್ತಿತ್ತು. ಈ ವರ್ಷ ಮುಂಗಾರು ಕ್ಷೀಣವಾಗಿರುವುದರಿಂದ ಬೋಟ್‌ಗಳ ಅವಶ್ಯಕತೆ ಇರುವುದಿಲ್ಲ ಎಂಬುವುದು ಗ್ರಾಮ ಪಂಚಾಯಿತಿ ಸದಸ್ಯರ ಅಭಿಮತ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry