ಗುರುವಾರ , ಜೂನ್ 17, 2021
21 °C

ಪ್ರಶ್ನೆ–ಉತ್ತರ

ಡಾ.ಎಚ್‌.ಎನ್‌.ಸುಬ್ರಹ್ಮಣಂ,ಪ್ರೊಫೆಸರ್‌. ‘ಬೇಸ್‌’ ಎಜುಕೇಷನಲ್‌ ಸರ್ವೀಸ್ ಸಂಸ್ಥೆ Updated:

ಅಕ್ಷರ ಗಾತ್ರ : | |

-ಶ್ರೀಜ, ಬೆಂಗಳೂರು

*ನಾನು ಬಿ.ಇ. 2ನೇ ವರ್ಷದಲ್ಲಿ ಇ ಮತ್ತು ಸಿ ಓದುತ್ತಿದ್ದೇನೆ. ಇದರ ಜೊತೆ ಜೊತೆಗೆ ಎಂ.ಬಿ.ಎ ಮಾಡಬಹುದೇ?


– ಬಿ.ಇ ಓದುತ್ತಿರುವಾಗಲೇ ಎಂ.ಬಿ.ಎ ಮಾಡಲು ಸಾಧ್ಯವಾಗುವುದಿಲ್ಲ. ಎಂ.ಬಿ.ಎ ಮಾಡುವ ಮೊದಲು ಯಾವುದಾದರೂ ವಿಭಾಗದಲ್ಲಿ ಪದವಿಯನ್ನು ಪಡೆದಿರಬೇಕಾಗುತ್ತದೆ. ಬಿ.ಎ, ಬಿ.ಎಸ್ಸಿ, ಬಿ.ಕಾಂ, ಬಿ.ಇ  ಈ ತರಹ ಯಾವುದೇ ಪದವಿ ಪರೀಕ್ಷೆ ಮುಗಿಸಿರುವವರು ಎಂ.ಬಿ.ಎ ಮಾಡಬಹುದು. ಆದ್ದರಿಂದ ನೀವು ಮೊದಲು ಬಿ.ಇ ಮುಗಿಸಿ.  ಒಳ್ಳೆಯ ಅಂಕ ಮತ್ತು ಜ್ಞಾನದೊಂದಿಗೆ ಬಿ.ಇ ಮುಗಿಸಲು ಪರಿಶ್ರಮ ಪಡಬೇಕಾಗುತ್ತದೆ.  

ಸೀಮಾ ಎಂ ಪಾಟೀಲ್

*ನಾನು 2013ರಲ್ಲಿ ಬಿ.ಇ. ಟೆಲಿಕಮುನಿಕೇಷನ್ ಎಂಜಿನಿಯರಿಂಗ್ ಮುಗಿಸಿದೆ. ಉದ್ಯೋಗ ಹುಡುಕುತ್ತಿದ್ದೇನೆ. ಜೊತೆಗೆ ಎಂ.ಬಿ.ಎ. ಮಾಡುವ ಹಂಬಲ ಇದೆ. ಆದರೆ ನನ್ನ ಆಪ್ತರು ಮತ್ತು ಬಂಧುಗಳು ಎಂ.ಟೆಕ್ ಮಾಡು ಎನ್ನುತ್ತಿದ್ದಾರೆ. ಏನು ಮಾಡುವುದೋ ತಿಳಿಯುತ್ತಿಲ್ಲ. 


–ಎಂ.ಬಿ.ಎ ಮಾಡುವುದೋ ಅಥವಾ ಎಂ.ಟೆಕ್ ಮಾಡುವುದೋ ಎಂಬುದು ನಿಮ್ಮ ಅಭಿರುಚಿಯನ್ನು ಅವಲಂಬಿಸಿದೆ. ಎಂ.ಬಿ.ಎ ಆಡಳಿತ, ಉದ್ಯಮ- ಇವುಗಳ ನಿರ್ವಹಣೆಯನ್ನು ಕುರಿತಿರುವಂತದ್ದು. ಎಂ.ಟೆಕ್ ನೀವು ಈಗಾಗಲೇ ಓದಿರುವ ಟೆಲಿಕಮ್ಯುನಿಕೇಷನ್ ಎಂಜಿನಿಯರಿಂಗ್‌ನ ಮುಂದುವರೆದ, ಆಳವಾದ ಅಭ್ಯಾಸ. ನಿಮ್ಮ ಒಲವು ಎತ್ತ  ಇದೆ ಎಂಬುದನ್ನು ಯೋಚಿಸಿ ಮುಂದುವರೆಯಿರಿ. ಉದ್ಯೋಗಾವಕಾಶಗಳು ಎರಡರಲ್ಲೂ ಇವೆ. ಆದರೆ ಇದಕ್ಕೆ ನೀವು ಅತ್ಯುತ್ತಮ ಪರಿಣತಿ ಪಡೆದಿರಬೇಕು. ನೀವು ನಿಮ್ಮ ಅಭಿರುಚಿಯ ಹಾದಿಯಲ್ಲಿ ಸಾಗಿದರೆ ಮಾತ್ರ ಪರಿಣತಿಯನ್ನು ಪಡೆಯಲು ಸಾಧ್ಯ.

-ಭರತೇಶ್ ಗೌಡ

*ಗಣಕ ವಿಜ್ಞಾನದಲ್ಲಿ ೬೨.೧೨% ನೊಂದಿಗೆ ಬಿ.ಇ ಮುಗಿಸಿದ್ದೇನೆ. ನನಗೆ ಎಂ.ಟೆಕ್ ಮಾಡಿ ಡಿಗ್ರಿ ತರಗತಿಗೆ ಉಪನ್ಯಾಸಕನಾಗಲು ಆಸಕ್ತಿ ಇಲ್ಲ. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನವನ್ನು ಬೋಧಿಸುವ ಆಸಕ್ತಿ ಇದೆ. ಇದು ಸಾಧ್ಯವೇ? ಇದಕ್ಕೆ ನಾನೇನು ಮಾಡಬೇಕು? 


– ನಿಮ್ಮ ಆಸಕ್ತಿ ಮೆಚ್ಚುಗೆಗೆ ಅರ್ಹವಾಗಿದೆ. ಗಣಕ ವಿಜ್ಞಾನದಲ್ಲಿ ಬಿ.ಇ ಮಾಡಿರುವವರಲ್ಲಿ ಬಹುತೇಕರು ಸಾಫ್ಟ್‌ವೇರ್ ಕಂಪನಿಗಳಲ್ಲಿ ಹೆಚ್ಚಿನ ಸಂಬಳದ ಉದ್ಯೋಗಕ್ಕೆ ಹಾತೊರೆಯುತ್ತಿರುವಾಗ, ನೀವು ಪ್ರೌಢಶಾಲಾ ಮಟ್ಟದಲ್ಲಿ ಮೂಲ ವಿಜ್ಞಾನದ ಶಿಕ್ಷಕನಾಗಲು ಬಯುಸುತ್ತಿರುವಿರಿ. ಪ್ರೌಢಶಾಲಾ ಶಿಕ್ಷಕರಾಗಲು ನೀವು ಬಿ.ಎಡ್ ತರಬೇತಿ ಶಿಕ್ಷಣವನ್ನು ಪಡೆಯಬೇಕು. ಬಿ.ಎಡ್ ತರಬೇತಿ ಇಲ್ಲದೇ ಖಾಸಗೀ ಪ್ರೌಢಾಶಾಲೆಗಳಲ್ಲಿ ಅಥವಾ ಪದವಿ ಪೂರ್ವ ಕಾಲೇಜುಗಳಲ್ಲಿ ನೀವು ಅಧ್ಯಾಪಕರಾಗಿ ಕೆಲಸ ಮಾಡಬಹುದು.

-ಚೈತ್ರಾ ಕೃಷ್ಣಮೂರ್ತಿ, ಬೆಂಗಳೂರು

*ದ್ವಿತೀಯ ಪಿ.ಯು ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದೇನೆ. ನನಗೆ ಏರೋನಾಟಿಕ್ಸ್ ಓದಬೇಕೆಂಬ ಹಂಬಲವಿದೆ. ಇದಕ್ಕೆ ನಾನೇನು ಮಾಡಬೇಕು? ಮುಖ್ಯ ಪರೀಕ್ಷೆಯಲ್ಲಿ ಎಷ್ಟು ಅಂಕ ಗಳಿಸಬೇಕು? ಪ್ರವೇಶ ಪರೀಕ್ಷೆಗೆ ತಯಾರಿ ಹೇಗೆ? 


– ನೀವು ಈಗ ಪ್ರಾರಂಭವಾಗಿರುವ ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಬೇಕು. ಅನಂತರ ನಡೆಯುವ ಸಿ.ಇ.ಟಿ. ಪರೀಕ್ಷೆಯಲ್ಲಿ ಚೆನ್ನಾಗಿ ಉತ್ತರಿಸಿ ಉತ್ತಮ ರ್‌್ಯಾಂಕ್ ಪಡೆಯಬೇಕು. ಈ ರ್‌್ಯಾಂಕ್‌ ಆಧಾರದ ಮೇಲೆ ನೀವು ಏರೋನ್ಯಾಟಿಕಲ್ ಎಂಜಿನಿಯರಿಂಗ್ ವಿಷಯವನ್ನು ಬಿ.ಇ. ಗೆ ಆರಿಸಿಕೊಳ್ಳಬಹುದು. ಒಂದು ವೇಳೆ ಬಿ.ಇ ಹಂತದಲ್ಲಿ ಏರೋನ್ಯಾಟಿಕಲ್ ಎಂಜಿನಿಯರಿಂಗ್‌ಗೆ ಅವಕಾಶ ದೊರೆಯದಿದ್ದರೂ, ಮೆಕಾನಿಕಲ್ ಎಂಜಿನಿಯರಿಂಗ್‌  ಮಾಡಿ, ಅನಂತರ ಎಂ.ಟೆಕ್ ಮಾಡುವಾಗ ಏರೋನಾಟಿಕಲ್ ಎಂಜಿನಿಯರಿಂಗ್‌ ಆರಿಸಿಕೊಳ್ಳಬಹುದು.

-ಧರಣಿ, ಬಳ್ಳಾರಿ

*ನಾನು ಎಂಜಿನಿಯರಿಂಗ್‌ ಮಾಡುತ್ತಿದ್ದು, ಮೊದಲ ವರ್ಷದ ಎರಡು ವಿಷಯಗಳಲ್ಲಿ ಅನುತ್ತೀರ್ಣನಾದ ಕಾರಣ ಮೂರನೇ ವರ್ಷಕ್ಕೆ ಮುಂದುವರೆಯಲು ಸಾಧ್ಯವಾಗಿಲ್ಲ. ಯಾಕೋ ಇದನ್ನು ಮುಗಿಸುವುದು ಕಷ್ಟವೆನಿಸುತ್ತಿದೆ. ಆದ್ದರಿಂದ ಈಗ ಬಿ.ಇ ಬಿಟ್ಟು ಬೇರೆ ಕೋರ್ಸಿಗೆ ಸೇರಲು ಸಾಧ್ಯವೇ? ಬ್ಯಾಂಕಿಂಗ್ ಪರೀಕ್ಷೆಗಳನ್ನು ಬರೆಯಲು ಅವಕಾಶವಿದೆಯೇ?


– ಎಂಜಿನಿಯರಿಂಗ್‌ ಮುಗಿಸಲು ಏಕೆ ಕಷ್ಟವಾಗುತ್ತದೆ ಎಂಬುದನ್ನು ಚೆನ್ನಾಗಿ ವಿಶ್ಲೇಷಿಸಿ. ತಾಂತ್ರಿಕ ವಿಜ್ಞಾನ ವಿಷಯದಲ್ಲಿ ಆಸಕ್ತಿ ಇಲ್ಲವೋ ಅಥವಾ ನೀವು ಈ ಕೋರ್ಸಿಗೆ ಅಗತ್ಯವಿರುವಷ್ಟು ಸಮಯ ಮತ್ತು ಶಕ್ತಿಯನ್ನು ನೀಡುತ್ತಿಲ್ಲವೋ ಯೋಚಿಸಿ. ನಿಮಗೆ ತಾಂತ್ರಿಕ ವಿಜ್ಞಾನದ ವಿಷಯಗಳಲ್ಲಿ ಆಸಕ್ತಿಯೇ ಇಲ್ಲದಿದ್ದರೆ, ಇಷ್ಟವಿಲ್ಲದ ವಿಚಾರದೊಂದಿಗೆ ಜೀವಮಾನವೆಲ್ಲಾ ಏಗುವ ಬದಲು, ಈ ಮಾರ್ಗವನ್ನೇ ಕೈ ಬಿಟ್ಟು ನಿಮಗೆ ಆಸಕ್ತಿ ಇರುವ ಬೇರೆ ದಾರಿ ಹಿಡಿಯುವುದು ಒಳ್ಳೆಯದು. ಪಿ.ಯು ಅಂಕಗಳ ಆಧಾರದ ಮೇಲೆ ಬಿ.ಎಸ್ಸಿ ಅಥವಾ ಬಿ.ಕಾಂ ಮಾಡಿ ಆನಂತರ ಬ್ಯಾಂಕ್ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು.

ಅನಿಲ್, ಬೆಂಗಳೂರು ಗ್ರಾಮಾಂತರ ಜಿಲ್ಲೆ.

*ಎಂಜಿನಿಯರಿಂಗ್‌ / ಮೆಡಿಕಲ್ ಸಿ.ಇ.ಟಿ ರ್‌್ಯಾಂಕಿಂಗ್‌ ನೀಡುವಾಗ ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳೂ ಅವಶ್ಯಕವೇ? 


-– ಸಿ.ಇ.ಟಿ ಯಲ್ಲಿ ಎಂಜಿನಿಯರಿಂಗ್‌ ರ್‌್ಯಾಂಕ್‌ ನೀಡುವಾಗ ಪಿ.ಯು ಮುಖ್ಯ ಪರೀಕ್ಷೆಗಳ ಅಂಕಗಳಿಗೂ ಸಮಾನವಾದ ಆದ್ಯತೆ ಇರುತ್ತದೆ. ಆಯ್ಕೆ ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆ- ಇವೆರಡರ ಒಟ್ಟು ಅಂಕಗಳ ಆಧಾರದ ಮೇಲೆ ರ್‌್ಯಾಂಕ್ ನಿರ್ಧಾರಿತವಾಗುತ್ತದೆ. ಆದರೆ ಮೆಡಿಕಲ್ ರ್‌್ಯಾಂಕ್ ನಿರ್ಧರಿಸುವಾಗ ಪಿ.ಯು ಪರೀಕ್ಷೆಗಳ ಅಂಕಗಳನ್ನು ಪರಿಗಣಿಸುವುದಿಲ್ಲ.

-ಹರ್ಷ

*ನಾನು ಮೆಕ್ಯಾಟ್ರಾನಿಕ್ಸ್ ಡಿಪ್ಲೊಮಾ ಮಾಡುತ್ತಿದ್ದೇನೆ. ನನಗೆ ಎಂ.ಟೆಕ್ ಮಾಡುವ ಹಂಬಲ ಇದೆ. ಕೆಲವರು ಬಿ.ಟೆಕ್ ಇಲ್ಲದೆ ನೇರವಾಗಿ ಎಂ.ಟೆಕ್ ಮಾಡಬಹುದು ಎನ್ನುತ್ತಿದ್ದಾರೆ. ಇದು ಸಾಧ್ಯವೆ?


– ಎಂ.ಟೆಕ್ ಮಾಡಲು ಬಿ.ಇ ಅಥವಾ ಬಿ.ಟೆಕ್ ಮಾಡುವುದು ಅವಶ್ಯ. ನೀವು ಡಿಪ್ಲೊಮಾ ಮುಗಿದ ನಂತರ, ಮೆಕ್ಯಾನಿಕಲ್ ಎಂಜಿನಿಯರಿಂಗ್‌ ವಿಭಾಗದಲ್ಲಿ ಬಿ.ಇ ಮುಗಿಸಿ ಆನಂತರ ಎಂ.ಟೆಕ್ ಮಾಡಬಹುದು.

-ಪ್ರತಾಪ್ ರೆಡ್ಡಿ

*ಇಸ್ರೋದಲ್ಲಿ ಕೆಲಸ ಪಡೆಯಲು ಏನು ಓದಬೇಕು? ಬಿ.ಇ ಮಾಡಿದ್ದರೆ ಆಗುತ್ತದೆಯೇ?


– ಇಸ್ರೋದಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡುವ ಬಯಕೆ ನಿಮಗಿರುವುದು ಸಂತೋಷಕರ. ಈ ಬೃಹತ್ ಸಂಸ್ಥೆಯಲ್ಲಿ ಕೆಲಸಮಾಡಲು ಬೇರೆ ಬೇರೆ ಕೌಶಲ್ಯಗಳನ್ನುಳ್ಳ ಹಲವಾರು ಬಗೆಯ ಜನಗಳು ಬೇಕಾಗುತ್ತಾರೆ. ವಿಜ್ಞಾನಿಗಳು, ತಂತ್ರಜ್ಞಾನ ನಿಪುಣರು, ತಂತ್ರಜ್ಞಾನ ಸಹಾಯಕರು, ಆಡಳಿತಾತ್ಮಕ ಕೆಲಸಗಾರರು, ನಿರ್ವಹಣಾ ತಜ್ಞರು, ಆರ್ಥಿಕ ನಿರ್ವಹಣಾ ತಜ್ಞರು. ನೀವು ಯಾವ ಬಗೆಯ ಕೌಶಲ್ಯವನ್ನು ಹೊಂದಿರುವಿರಿ ಮತ್ತು ನೀವು ಯಾವ ವಿಭಾಗದಲ್ಲಿ ಕೆಲಸಮಾಡಲು ಇಚ್ಛಿಸುತ್ತೀರಿ ಎಂಬುದು ಮುಖ್ಯ. ತಂತ್ರಜ್ಞಾನಿಯಾಗಿ ಕೆಲಸ ಮಾಡುವ ಇಚ್ಛೆ ಇದ್ದರೆ, ನೀವು ಬಿ.ಇ ಮುಗಿಸಿ ಆನಂತರ ಎಂ.ಟೆಕ್ ಮಾಡಿಕೊಳ್ಳಬೇಕು.

-ನವೀನ್, ಶಿರಸಿ

*ನಾನು ಮೆಕ್ಯಾನಿಕಲ್ ಡಿಪ್ಲೊಮಾ ಎರಡನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದೇನೆ. ಬಿ.ಎ/ ಬಿ.ಕಾಂ ಅಥವಾ ಬಿ.ಬಿ.ಎ ರೀತಿ ಪದವಿಗೆ ಡಿಪ್ಲೊಮಾ ಸಮಾನವೇ? ಮುಂದೆ ಉದ್ಯೋಗದಲ್ಲಿದ್ದುಕೊಂಡೇ ಬಿ.ಇ ಮಾಡಬಹುದೇ? ಕೆಲಸ ಮಾಡುವ ಸಂಸ್ಥೆಗೆ ಸಮೀಪವಿರುವ ಕಾಲೇಜು ಆಯ್ಕೆ ಮಾಡಿಕೊಳ್ಳಬಹುದೇ? ಅಥವಾ ಪ್ರವೇಶ ಪ್ರಕ್ರಿಯೆಯಲ್ಲಿ ಸಿಕ್ಕಿದ ಕಾಲೇಜಿಗೇ ಸೇರಬೇಕೆ? 


– ಡಿಪ್ಲೊಮಾ ಯಾವುದೇ ಪದವಿ ವಿದ್ಯಾಭ್ಯಾಸಕ್ಕೆ ಸಮಾನವಲ್ಲ. ಡಿಪ್ಲೊಮಾ ನಂತರ ನೀವು ಎಂ.ಎಸ್ಸಿ, ಎಂ.ಟೆಕ್, ಎಂ.ಬಿ.ಎ ಮೊದಲಾದ ಸ್ನಾತಕೋತ್ತರ ವಿಭಾಗದಲ್ಲಿ ಅಧ್ಯಯನ ಮಾಡಲಾಗುವುದಿಲ್ಲ. ಡಿಪ್ಲೊಮಾ ನಂತರ ನೀವು ಉದ್ಯೋಗದಲ್ಲಿದ್ದುಕೊಂಡೇ ಸಂಜೆ ಕಾಲೇಜಿನಲ್ಲಿ ಬಿ.ಇ ಮಾಡಬಹುದು. ಪರ್ಯಾಯ ಆಯ್ಕೆ ಪರೀಕ್ಷೆಯಲ್ಲಿ ನೀವು ಹೆಚ್ಚಿನ ರ್‌್ಯಾಂಕ್‌ ಗಳಿಸಿದರೆ, ನಿಮಗೆ ಅನುಕೂಲವಾದ ಕಾಲೇಜಿನಲ್ಲಿಯೇ ವಿದ್ಯಾಭ್ಯಾಸ ಮಾಡಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.