ಸೋಮವಾರ, ಜನವರಿ 27, 2020
15 °C

ಪ್ರಶ್ನೆ-ಉತ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೇಜಸ್

ನಾನು ದ್ವಿತೀಯ ಪಿ.ಯು.ಸಿ. ಓದುತ್ತ್ದ್ದಿದು, ಒಂದು ವಿಷಯದಲ್ಲಿ ಹಿಂದುಳಿದಿದ್ದೇನೆ. ನನಗೆ ಇಂಗ್ಲಿಷ್‌ನಲ್ಲಿ ಮಾತನಾಡುವುದಕ್ಕೆ ಮತ್ತು ಸ್ವಂತ ವಾಕ್ಯ ಮಾಡುವುದಕ್ಕೆ ಬರುವುದಿಲ್ಲ. ಇಂಗ್ಲಿಷ್ ಕಲಿಯಬೇಕು ಅಂತ ಬಹಳ ಆಸಕ್ತಿ ಇದೆ. ದಯಮಾಡಿ ಮಾರ್ಗದರ್ಶನ ಕೊಡಿ. ನಾನು ಐ.ಎ.ಎಸ್. ಮಾಡಬೇಕು ಎಂದುಕೊಂಡಿದ್ದೇನೆ. ಅದಕ್ಕೂ ಮಾರ್ಗದರ್ಶನ ನೀಡಿ.

ನೀವು ಈಗ ಪಿ.ಯು. ನಲ್ಲಿ ಉಳಿಸಿಕೊಂಡಿರುವ ವಿಷಯದಲ್ಲಿ ತೇರ್ಗಡೆಯಾಗುವ ಪ್ರಯತ್ನವನ್ನು ಮಾಡಿ. ಐ.ಎ.ಎಸ್. ಮಾಡಲು ನೀವು ಕನಿಷ್ಠ ಸ್ನಾತಕ ಪದವಿಯನ್ನು ಪಡೆದಿರಬೇಕು. ಬಿ.ಎ., ಬಿ.ಎಸ್ಸಿ., ಎಂ.ಬಿ.ಬಿ.ಎಸ್, ಬಿ.ಇ. ಹೀಗೆ ಯಾವ ಕ್ಷೇತ್ರದಲ್ಲಾದರೂ ಸರಿ. ಎಂ.ಎ. ಅಥವಾ ಎಂ.ಎಸ್ಸಿ. ತರಹದ ಸ್ನಾತಕೋತ್ತರ ಪದವಿಯನ್ನು ಹೊಂದಿರುವುದು ಅಗತ್ಯವಿಲ್ಲವಾದರೂ ಅಪೇಕ್ಷಣೀಯ. ಹೀಗಾಗಿ ಇನ್ನೂ ಐದು ವರ್ಷಗಳ ನಂತರ ನೀವು ಐ.ಎ.ಎಸ್ ಪರೀಕ್ಷೆ ತೆಗೆದುಕೊಳ್ಳುವುದು. ಆದರೆ ಈಗಿನಿಂದಲೇ ಈ ಗುರಿಯನ್ನು ಸಾಧಿಸಲು ನೀವು ಪ್ರಯತ್ನಶೀಲರಾಗಬಹುದು. ನೀವು ಅಧ್ಯಯನ ಮಾಡುವ ವಿಚಾರಗಳಲ್ಲದೇ, ಕಲೆ, ವಿಜ್ಞಾನ, ಕ್ರೀಡೆ ಮುಂತಾದ ಎಲ್ಲ ಕ್ಷೇತ್ರಗಳಲ್ಲೂ ನೀವು ಆಸಕ್ತಿಯನ್ನು ಮೂಡಿಸಿಕೊಳ್ಳಬೇಕು. ಎಲ್ಲ ಜಾಗತಿಕ ವಿದ್ಯಮಾನಗಳನ್ನೂ ಕುತೂಹಲದಿಂದ ತಿಳಿದುಕೊಳ್ಳುತ್ತಿರಬೇಕು. ಇನ್ನು ಇಂಗ್ಲಿಷ್ ಕಲಿಯುವ ಕಷ್ಟದ ಬಗ್ಗೆ ಹೇಳಿದ್ದೀರಿ; ಮಾತೃಭಾಷೆಯಲ್ಲದ ಬೇರಾವ ಭಾಷೆಗಳನ್ನೂ ಕಲಿಯುವುದು ಕಷ್ಟವೆಂದು ತೋರುತ್ತದೆ. ಇಂಗ್ಲಿಷ್ ಸಹ ಹಾಗೆಯೇ. ಹೆಚ್ಚು ಹೆಚ್ಚು ಇಂಗ್ಲಿಷ್ ವರ್ತಮಾನ ಪತ್ರಿಕೆಗಳನ್ನು ಓದಿ. ಇಂಗ್ಲಿಷ್ ಕಾದಂಬರಿಗಳನ್ನು ಓದಿ. ಆಯ್ದ ಸ್ನೇಹಿತರೊಂದಿಗೆ ಇಂಗ್ಲಿಷ್‌ನಲ್ಲಿ ಮಾತನಾಡಲು ಪ್ರಾರಂಭಿಸಿ. ದೂರದರ್ಶನ/ಆಕಾಶವಾಣಿಯಲ್ಲಿ ಪ್ರಸಾರವಾಗುವ ಇಂಗ್ಲಿಷ್ ವಾರ್ತೆ/ಪ್ರದೇಶಸಮಾಚಾರಗಳನ್ನು ಆಲಿಸಿ. ಅರ್ಥವಾಗದ, ತಿಳಿಯದ ಅಥವಾ ಹೊಸ ಪದಗಳ ಅರ್ಥವನ್ನು ಇಂಗ್ಲಿಷ್-ಕನ್ನಡ ಶಬ್ದಕೋಶದ ಮುಖಾಂತರ ತಿಳಿದುಕೊಳ್ಳಿ. ಇಂಗ್ಲಿಷ್ ಭಾಷೆ ನಿಮಗೆ ಕರಗತವಾಗುವುದು.

ಸುಬ್ರಹ್ಮಣ್ಯ

ನಾನು ದ್ವಿತೀಯ ಪಿ.ಯು.ಸಿ.ಯನ್ನು ವಿಜ್ಞಾನ ವಿಷಯದಲ್ಲಿ ಮುಗಿಸಿಕೊಂಡಿದ್ದೇನೆ. ಸರ್ಕಾರಿ ಉದ್ಯಮವೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ಪದವಿ ಪಡೆಯಲು ಹಲವಾರು ಬಾರಿ ಪ್ರಯತ್ನಿಸಿದೆ. ಆದರೆ ಕೆಲಸದ ಒತ್ತಡದಿಂದಾಗಿ ಅದು ಸಾಧ್ಯವಾಗಿಲ್ಲ. ಆಂಧ್ರಪ್ರದೇಶದ ಕೆಲವು ವಿಶ್ವವಿದ್ಯಾಲಯಗಳು 3 ವರ್ಷದ ಪದವಿಯನ್ನು ಒಂದೇ ವರ್ಷದಲ್ಲಿ ನೀಡುತ್ತಾರೆ ಎಂದು ಹೇಳುತ್ತಾರೆ. ಇದು ಸಾಧ್ಯವೇ? ಹಾಗಿದ್ದಲ್ಲಿ ಅದಕ್ಕೆ ಅನುಸರಿಸಬೇಕಾಗಿರುವ ಮಾರ್ಗಗಳನ್ನು ಮತ್ತು ವಿಶ್ವವಿದ್ಯಾಲಯಗಳ ಮಾಹಿತಿಯನ್ನು ತಿಳಿಸಿ ಮಾರ್ಗದರ್ಶನ ಕೊಡಿ.

ಒಂದೇ ವರ್ಷದಲ್ಲಿ ಡಿಗ್ರಿ ನೀಡುವ ಯಾವ ವಿಶ್ವವಿದ್ಯಾಲಯವೂ ಇದ್ದಂತಿಲ್ಲ. ಒಂದು ವೇಳೆ ಇದ್ದರೂ ಅದು ಅಪೇಕ್ಷಣೀಯವೂ ಅಲ್ಲ. ಯಶಸ್ಸಿಗೆ ಅಡ್ಡದಾರಿಗಳಿಲ್ಲ!. ಆದ್ದರಿಂದ ನೀವು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ, ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯ, ಕುವೆಂಪು ವಿಶ್ವವಿದ್ಯಾಲಯ ಅಥವಾ ಬೆಂಗಳೂರು ವಿಶ್ವವಿದ್ಯಾಲಯ ನೀಡುವ ಅಂಚೆ ಶಿಕ್ಷಣದ ಮೂಲಕ ಮೂರು ವರ್ಷದ ಪದವಿ ಶಿಕ್ಷಣವನ್ನೇ ಪಡೆಯುವುದು ಒಳ್ಳೆಯದು. ಪದವಿ ಪ್ರಮಾಣ ಪತ್ರ ಪಡೆಯುವ ಜೊತೆಯಲ್ಲಿಯೇ ಜ್ಞಾನಾರ್ಜನೆಯೂ ಮುಖ್ಯ ಎಂಬ ಸಂಗತಿಯನ್ನು ನೀವು ಮರೆಯಬಾರದು.

ಆಶಾರಾಣಿ

ನಾನು ಎಸ್.ಎಸ್.ಎಲ್.ಸಿ.ಯಲ್ಲಿ 56% ಮತ್ತು ಪಿ.ಯು.ನಲ್ಲಿ 70%ನೊಂದಿಗೆ ತೇರ್ಗಡೆಯಾಗಿದ್ದೇನೆ. ನನಗೆ ಶಿಕ್ಷಕಿಯಾಗಿ ಕೆಲಸ ಮಾಡಲು ಬಹಳ ಇಷ್ಟವಿದೆ. ನಾನು ಈಗ ದೂರ ಶಿಕ್ಷಣದಲ್ಲಿ ಬಿ.ಎ. ಮಾಡುತ್ತಿದ್ದೇನೆ. ಕನ್ನಡ ಮಾಧ್ಯಮದ ವಿದ್ಯಾರ್ಥಿಯಾದ್ದರಿಂದ ಇಂಗ್ಲಿಷ್‌ನಲ್ಲಿ ಹೆಚ್ಚು ಮಾತನಾಡಲು ಬರುವುದಿಲ್ಲ. ನನಗೆ ಏನು ಮಾಡಬೇಕೆಂದು ತೋಚುತ್ತಿಲ್ಲ. ನಾನು ಮುಂದೆ ಬಿ.ಎ. ನಂತರ ಎಂ.ಎ. ಮಾಡಿದರೆ ಒಳ್ಳೆಯದೇ? ದಯಮಾಡಿ ಮಾರ್ಗದರ್ಶನ ಕೊಡಿ.

ಪಿ.ಯು. ನಲ್ಲಿ ನೀವು ಉತ್ತಮ ಅಂಕ ಗಳಿಸಿರುವಿರಿ. ಶಿಕ್ಷಕಿಯಾಗಬೇಕೆಂಬ ನಿಮ್ಮ ಕನಸಿಗಾಗಿ ಧನ್ಯವಾದಗಳು. ಒಳ್ಳೆಯ ಶಿಕ್ಷಕರ ಅಭಾವವಿರುವ ಈ ಕಾಲದಲ್ಲಿ, ಆಸಕ್ತಿಯಿಂದ ಶಿಕ್ಷಕರಾಗ ಬಯಸುವ ನಿಮ್ಮಂತಹವರಿಗೆ ತುಂಬಾ ಬೇಡಿಕೆ ಇದೆ. ನೀವು ಕನ್ನಡ ಮಾಧ್ಯಮದಲ್ಲಿ ಓದಿರುವ ಬಗ್ಗೆ ಕೀಳರಿಮೆ ಬೇಕಿಲ್ಲ. ಜೊತೆಗೆ ಈ ಕಾಲದಲ್ಲಿ ಇಂಗ್ಲಿಷ್ ಭಾಷೆಯನ್ನೂ ಕಲಿತಿರಬೇಕು. ಮಾತೃ ಭಾಷೆಯನ್ನು ಹೊರತುಪಡಿಸಿ ಇತರ ಭಾಷೆಗಳು ಷ್ಟವೆನ್ನಿಸುವುದು ಸಹಜ. ಇಂಗ್ಲಿಷ್ ಕಾದಂಬರಿ/ ವರ್ತಮಾನ ಪತ್ರಿಕೆಗಳನ್ನು ಓದಿ. ಆಯ್ದ ಸ್ನೇಹಿತರೊಂದಿಗೆ ಇಂಗ್ಲಿಷ್‌ನಲ್ಲಿ ಮಾತನಾಡಲು ಪ್ರಾರಂಭಿಸಿ. ದೂರದರ್ಶನ/ ಆಕಾಶವಾಣಿಯಲ್ಲಿ ಪ್ರಸಾರವಾಗುವ ಇಂಗ್ಲಿಷ್ ನ್ಯೂಸ್ ಆಲಿಸಿ. ಅರ್ಥವಾಗದ, ತಿಳಿಯದ ಅಥವಾ ಹೊಸ ಪದಗಳ ಅರ್ಥವನ್ನು ಇಂಗ್ಲಿಷ್-ಕನ್ನಡ ಶಬ್ದಕೋಶದ ಮುಖಾಂತರ ತಿಳಿದುಕೊಳ್ಳಿ. ಇಂಗ್ಲಿಷ್ ಭಾಷೆ ಸುಲಭವೆನಿಸುತ್ತಾ ಹೋಗಿ ನಿಮಗೆ ಕರಗತವಾಗುವುದು.

ಧೀರಜ್ ಎಚ್.ಆರ್

ನಾನು ಈಗ ಬಿ.ಬಿ.ಎಂ. ಅಂತಿಮ ವರ್ಷದಲ್ಲಿ ಓದುತ್ತಿದ್ದೇನೆ. ಮುಂದೆ ಏವಿಯೇಷನ್ ವಿಷಯದಲ್ಲಿ ಎಂ.ಬಿ.ಎ. ಮಾಡಬೇಕೆಂದಿದ್ದೇನೆ. ದಯಮಾಡಿ ಈ ವಿಚಾರದ ಕುರಿತು ಮಾಹಿತಿ ನೀಡಿ ಸಲಹೆ ಕೊಡಿ.

ಏವಿಯೇಷನ್‌ನಲ್ಲಿ ಎಂ.ಬಿ.ಎ. ಮಾಡಬೇಕೆಂಬ ನಿಮ್ಮ ಬಯಕೆ ಉತ್ತಮವಾದದ್ದು. ವಿಮಾನಗಳ ಹಾರಾಟ ವ್ಯವಸ್ಥೆ, ವಿಮಾನಯಾತ್ರಿಕರಿಗೆ ಸೂಕ್ತ ಅನುಕೂಲ ಕಲ್ಪಿಸುವುದು ಮತ್ತು ವಿಮಾನಗಳ ಮೂಲಕ ಸಾಮಾನು ಸರಂಜಾಮುಗಳ ಸಾಗಾಣಿಕೆ-ಇವುಗಳ ನಿರ್ವಹಣೆಯನ್ನು ಕುರಿತದ್ದು. ಏವಿಯೇಷನ್ ಎಂ.ಬಿ.ಎ. APTECH ಸಂಸ್ಥೆ KSOU ಸಹಯೋಗದೊಂದಿಗೆ 2 ವರ್ಷಗಳ ಈ ಕೋರ್ಸನ್ನು ನೀಡುತ್ತಿದೆ. ಬೆಂಗಳೂರಿನ ಮಡಿವಾಳದಲ್ಲಿರುವ ಅಖಅಇ ಸಂಸ್ಥೆಯೂ ಏವಿಯೇಷನ್‌ನಲ್ಲಿಎಂ.ಬಿ.ಎ ಕೋರ್ಸನ್ನು ನೀಡುತ್ತದೆ. ಇನ್ನೂ ಹೆಚ್ಚು ಮಾಹಿತಿ ಬೇಕಾದಲ್ಲಿ ಅಂತರ್ಜಾಲದಲ್ಲಿ ಹುಡುಕಾಡಿದರೆ ಹಲವಾರು ವಿಚಾರಗಳು ದೊರಕುತ್ತವೆ. ಇನ್ನಿತರ ಕಾಲೇಜುಗಳ ಮಾಹಿತಿಯೂ ಲಭ್ಯ.

ದಯಾನಂದ ಒಡೆಯ

ನಾನು ಕಂಪ್ಯೂರ್ ಸೈನ್ಸ್ ಡಿಪ್ಲೊಮಾ  ಓದುತ್ತಿದ್ದೇನೆ. 4ನೇ ಸೆಮೆಸ್ಟರ್‌ನ ಎಲ್ಲ ವಿಷಯಗಳಲ್ಲಿ ಫೇಲ್ ಆಗಿ ನಂತರ ಪಾಸು ಮಾಡಿಕೊಂಡಿದ್ದೇನೆ. ಮುಂದೆ ಎಂಜಿನಿಯರಿಂಗ್ ಮಾಡಬೇಕೆಂದಿದ್ದೇನೆ. ಇದರಿಂದ ಅದಕ್ಕೆ ತೊಂದರೆ ಆಗಬಹುದೇ? ದಯಮಾಡಿ ಸಲಹೆ ಕೊಡಿ.

ಮುಂದೆ ಎಂಜಿನಿಯರಿಂಗ್ ಮಾಡಲು ಡಿಪ್ಲೊಮಾ  ಮುಗಿಸಿದ್ದರಾಯಿತು. ಯಾವ ವಿಷಯಗಳಲ್ಲೂ ಅನುತ್ತೀರ್ಣರಾಗದೇ ಮುಗಿಸಬೇಕೆಂಬ ನಿಬಂಧನೆಯೇನೂ ಇಲ್ಲ. ಹಿಂದೆ ನೀವು ಏಕೆ ಅನುತ್ತೀರ್ಣರಾದಿರಿ ಎಂದು ವಿಶ್ಲೇಷಿಸಿ ಮುಂದೆ ಹಾಗಾಗದೆ ಹಾಗೆ ನೋಡಿಕೊಂಡರೆ ಅದೇ ಒಂದು ಜೀವನ ಪಾಠ. ಡಿಪ್ಲೊಮಾ  ಮುಗಿಸಿದ ನಂತರ ನೀವು ಪುನಃ ಸಿ.ಇ.ಟಿ. ಪರೀಕ್ಷೆ ಬರೆದು ಬಿ.ಇ. ಎರಡನೇ ವರ್ಷಕ್ಕೆ ಸೇರಿಕೊಳ್ಳಬಹುದು ಅಥವಾ ಉದ್ಯೋಗಕ್ಕೆ ಸೇರಿ ಒಂದು ವರ್ಷದ ಅನುಭವ ಪಡೆದು ಸಂಜೆ ಇಂಜನಿಯರಿಂಗ್ ಕಾಲೇಜಿನಲ್ಲಾದರೂ ಬಿ.ಇ. ಮಾಡಬಹುದು.

ಮನೋಹರ್

ನಾನು 2009ರಲ್ಲಿ ಪಿ.ಯು. ವಿಜ್ಞಾನದಲ್ಲಿ ಅನುತ್ತೀರ್ಣನಾದೆ. ನಂತರ ಡಿಪ್ಲೊಮಾ ಗೆ ಸೇರಿ ಈಗ ಅಂತಿಮ ವರ್ಷದಲ್ಲಿ ಓದುತ್ತಿದ್ದೇನೆ. ಪ್ರಥಮ ಮತ್ತು ದ್ವಿತೀಯ ವರ್ಷಗಳಲ್ಲಿ65% ಪಡೆದಿದ್ದೆನೆ. ಈಗ ಪಿ.ಯು. ನಲ್ಲಿಅನುತ್ತೀರ್ಣನಾಗಿರುವ ಎರಡು ವಿಷಯಗಳನ್ನು ಈಗ ಕಟ್ಟಿ ಪಾಸು ಮಾಡಿಕೊಳ್ಳುವುದರಿಂದ ಉಪಯೋಗವೇ? ದಯಮಾಡಿ ಮಾರ್ಗದರ್ಶನ ಕೊಡಿ.

ಪಿ.ಯು.ನಲ್ಲಿ ಅನುತ್ತೀರ್ಣರಾದರೂ ಡಿಪ್ಲೊಮಾದಲ್ಲಿ ನೀವು ಉತ್ತಮ ಅಂಕಗಳನ್ನು ಪಡೆದು ಪಾಸಾಗುತ್ತಿರುವುದು ಸಂತೋಷದ ವಿಚಾರ. ಡಿಪ್ಲೊಮಾ  ಮೂರನೆಯ ವರ್ಷದಲ್ಲೂ ಅತ್ಯುತ್ತಮ ಅಂಕಗಳನ್ನು ಪಡೆಯುವ ಪ್ರಯತ್ನಮಾಡಿ. ಡಿಪ್ಲೊಮಾ  ನಂತರ ಪುನಃ ಪಿ.ಯು. ಪರೀಕ್ಷೆ ಪಾಸುಮಾಡುವ ಅಗತ್ಯವಿಲ್ಲ. ಡಿಪ್ಲೊಮಾ  ನಂತರ ನೀವು ಉದ್ಯೋಗಕ್ಕೆ ಸೇರಬಹುದು ಅಥವಾ ಸಿ.ಇ.ಟಿ. ಪರೀಕ್ಷೆ ಬರೆದು ಬಿ.ಇ. ಗೆ ಸೇರಬಹುದು.

ನಾನು ಬಿ.ಇ. ಮೆಕ್ಯಾನಿಕಲ್ ಮಾಡಿಕೊಂಡಿದ್ದೇನೆ. ನಾನು ಈಗ ಎಂ.ಟೆಕ್ ಮಾಡಬೇಕೆಂದಿದ್ದೇನೆ. ಎಂ.ಟೆಕ್ ಒಳ್ಳೆಯದೋ ಅಥವಾ ಎಂ.ಬಿ.ಎ. ಒಳ್ಳೆಯದೋ ಗೊಂದಲ ಕಾಡುತ್ತಿದೆ. ಜೊತೆಜೊತೆಗೆ ಉದ್ಯೋಗವನ್ನೂ ಹುಡುಕುತ್ತಿದ್ದೇನೆ. ಎಮ್.ಎನ್.ಸಿ. ಕಂಪನಿಗಳಲ್ಲಿ ಉದ್ಯೋಗಮಾಡಲು ಯಾವುದಾದರೂ ಕೋರ್ಸ್ ನ ಅಗತ್ಯತೆ ಇದೆಯೇ? ದಯಮಾಡಿ ಸಲಹೆ ಕೊಡಿ.

ಬಿ.ಇ. ನಂತರ ಎಂ.ಟೆಕ್. ಮಾಡಬೇಕೋ ಅಥವಾ ಎಂ.ಬಿ.ಎ. ಮಾಡಬೇಕೋ ಎಂಬುದು ನಿಮ್ಮ ಅಭಿರುಚಿಯನ್ನು ಅವಲಂಬಿಸಿದೆ. ನೀವು ತಾಂತ್ರಿಕ ಕ್ಷೇತ್ರದಲ್ಲೆ ಮುಂದುವರಿಯುವ ಬಯಕೆ ಉಳ್ಳವರಾಗಿದ್ದರೆ ಎಂ.ಟೆಕ್. ಮಾಡಬಹುದು ಅಥವಾ ನೀವು ತಂತ್ರಜ್ಞಾನ ನಿರ್ವಹಣೆಯ ಕ್ಷೇತ್ರಕ್ಕೆ, ಆಡಳಿತ ಕ್ಷೇತ್ರಕ್ಕೆ ಪ್ರವೇಶಿಸುವ ಇಚ್ಛೆಯುಳ್ಳವರಾಗಿದ್ದರೆ ಎಂ.ಬಿ.ಎ. ಮಾಡಬಹುದು. ಆಯ್ಕೆ ನಿಮ್ಮದು.

ಪ್ರಶ್ನೆ ಕಳಿಸಬೇಕಾದ ವಿಳಾಸ: ಸಂಪಾದಕರು, ಶಿಕ್ಷಣ ವಿಭಾಗ, ಪ್ರಜಾವಾಣಿ, 75 ಎಂಜಿ ರಸ್ತೆ,ಬೆಂಗಳೂರು 560001

ಪ್ರಶ್ನೆಗಳನ್ನು ಇಮೇಲ್‌ನಲ್ಲೂ ಕಳಿಸಬಹುದು: shikshanapv@gmail.com

ಪ್ರತಿಕ್ರಿಯಿಸಿ (+)