ಗುರುವಾರ , ಜೂನ್ 24, 2021
27 °C

ಪ್ರಶ್ನೆ- ಉತ್ತರ

ಡಾ.ಎಚ್.ಎಸ್.ಸುಬ್ರಹ್ಮಣ್ಯಂ Updated:

ಅಕ್ಷರ ಗಾತ್ರ : | |

ಪುಷ್ಪಲತಾ, ಇಟಗಿ

ನನ್ನ ಸಹೋದರಿ 2009 ರಲ್ಲಿ ಇ  ಸಿ ವಿಷಯದಲ್ಲಿ ಬಿಇ ಮುಗಿಸಿ ಕ್ಯಾಂಪಸ್ ಸಂದರ್ಶನದ ಮೂಲಕ ಇನ್ಫೋಸಿಸ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಳು. ಏಪ್ರಿಲ್ 2010ರ ವರೆಗೂ ಅಲ್ಲೇ ಕೆಲಸ ಮಾಡಿದಳು. ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಟೋಫೆಲ್ ಪರೀಕ್ಷೆ ಬರೆದು ಬ್ರಿಟನ್‌ನ ವಿಶ್ವವಿದ್ಯಾಲಯವೊಂದರಲ್ಲಿ ಪ್ರವೇಶಕ್ಕೂ ಅರ್ಹತೆ ಪಡೆದಳು. ಆದರೆ ಆರ್ಥಿಕ ಪರಿಸ್ಥಿತಿ ಮತ್ತು ಮನೆಯವರ ಒತ್ತಾಯದ ಮೇರೆಗೆ ಈ ಅವಕಾಶವನ್ನು ಕೈ ಬಿಡಬೇಕಾಯಿತು. ಹಾಗಾದ ಮೇಲೆ 2011ರಲ್ಲಿ ಎಚ್‌ಪಿ ಕಂಪೆನಿಗೆ ಆಯ್ಕೆಯಾದಳು. ಆದರೆ ಈಗ ಅವರು `ನಮ್ಮಲ್ಲಿ ಈಗ ಯಾವುದೇ ಪ್ರಾಜೆಕ್ಟ್‌ಗಳು ಇಲ್ಲದಿರುವುದರಿಂದ ಯಾರನ್ನೂ ತೆಗೆದುಕೊಳ್ಳುವುದಿಲ್ಲ~ ಎನ್ನುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದಾಗಿ ನನ್ನ ತಂಗಿ ಕುಗ್ಗಿಹೋಗಿದ್ದಾಳೆ. ಭವಿಷ್ಯವೇ ಇಲ್ಲವೆಂದು ಚಿಂತಿಸುತ್ತಿರುತ್ತಾಳೆ. ನಾವೆಲ್ಲಾ ಅವಳಿಗೆ ಎಂ.ಟೆಕ್ ಅಥವಾ ಎಂಬಿಎ ಮಾಡು ಎಂದು ಹೇಳುತ್ತಿದ್ದೇವೆ. ಆದರೆ ಅವಳು ಮನಸ್ಸು ಮಾಡುತ್ತಿಲ್ಲ.

ನಿಮ್ಮ ತಂಗಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್‌ನಲ್ಲಿ ಬಿಇ ಮುಗಿಸಿ, ಇನ್ಫೋಸಿಸ್‌ನಲ್ಲಿ ಸೂಕ್ತ ತರಬೇತಿಯನ್ನು ಪಡೆದಿರುವುದು ಆಶಾದಾಯಕವಾಗಿದೆ. ಬೇರೆ ಕಂಪನಿಗಳಲ್ಲಿ ಆಕೆಗೆ ಉದ್ಯೋಗ ಸಿಕ್ಕೇ ಸಿಗುತ್ತದೆ. ಭರವಸೆ ಕಳೆದುಕೊಳ್ಳದೆ ಬೇರೆ ಬೇರೆ ಕಂಪನಿಗಳಿಗೆ ಅವರು ಸಿವಿ (ರೆಸ್ಯೂಮ್) ಕಳುಹಿಸಿ ಕೆಲಸಕ್ಕಾಗಿ ಪ್ರಯತ್ನಿಸಲಿ. ಇದಕ್ಕೆಂದೇ ಇರುವ ಅಂತರ್ಜಾಲ ತಾಣಗಳಲ್ಲೂ ಹೆಸರು ನೋಂದಾಯಿಸಲಿ. ಮುಂದೆ ಓದುವ ಆಸೆ ಇದ್ದರೆ ಮಾತ್ರ ಎಂಟೆಕ್ ಮಾಡಬಹುದು. ಪ್ರಯತ್ನವೇ ಪರಮಾತ್ಮ ಎಂದೆಣಿಸಿ ಕಾರ್ಯಪ್ರವೃತ್ತರಾಗಲಿ. ಗೆಲುವು ಖಂಡಿತಾ ಅವರದಾಗುತ್ತದೆ.

ಬಸವಲಿಂಗ

ನಾನು ಬೆಂಗಳೂರು ವಿವಿಯಿಂದ ಪದವಿ ಪಡೆದು ಈಗ ಕರ್ನಾಟಕ ಮುಕ್ತ ವಿವಿಯಲ್ಲಿ ಎಂಬಿಎ ಗೆ ಸೇರುತ್ತಿದ್ದೇನೆ. ಇದು ದೂರಶಿಕ್ಷಣ ಮಾಧ್ಯಮವಾದ್ದರಿಂದ ನನಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಿ ಕೆಲಸಗಳು ಸಿಗುತ್ತವೆಯೇ? ಕರ್ನಾಟಕ ಮುಕ್ತ ವಿವಿಯು ನವದೆಹಲಿಯ ದೂರಶಿಕ್ಷಣ ಪ್ರಾಧಿಕಾರದಿಂದ ಮಾನ್ಯತೆ ಪಡೆದಿದೆಯೇ? ಅದು ದೆಹಲಿಯ ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಸದಸ್ಯತ್ವ ಹೊಂದಿದೆಯೇ? ದಯಮಾಡಿ ಮಾಹಿತಿ ನೀಡಿ ಮಾರ್ಗದರ್ಶನ ಕೊಡಿ.

ಕರ್ನಾಟಕ ಮುಕ್ತ ವಿವಿಯಿಂದ ಮಾಡಿದ ಎಂಬಿಎಗೆ ಬೇರೆ ಕಡೆ ಮಾಡಿದ ಎಂಬಿಎಯಷ್ಟೇ ಮಾನ್ಯತೆ ಇದೆ. ಆದರೆ ಖಾಸಗಿ ಕಂಪೆನಿಗಳಲ್ಲಿ ಉದ್ಯೋಗ ನೀಡುವಾಗ ಪದವಿಗಿಂತ ನಿಮ್ಮ ಜ್ಞಾನ ಮತ್ತು ಕೌಶಲ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ ಎಂಬುದನ್ನು ನೆನಪಿನಲ್ಲಿಡಿ. ಸರ್ಕಾರಿ ಕೆಲಸಗಳಿಗಿಂತ ಖಾಸಗಿ ಕೆಲಸಗಳೇ ಹೆಚ್ಚು ಲಭ್ಯವಾಗಿರುವ ಈ ದಿನಗಳಲ್ಲಿ ಪದವಿಗಿಂತ ಜ್ಞಾನ ಸಂಪಾದನೆಗೆ ನೀವು ಹೆಚ್ಚಿನ ಮಹತ್ವ ನೀಡಬೇಕು.

ನಾಗರಾಜ್ ಬಿ, ಬಳ್ಳಾರಿ

ನಾನು ಮಾಹಿತಿ ವಿಜ್ಞಾನದ ವಿಷಯದಲ್ಲಿ ಬಿಇ ಮಾಡಿದ್ದೇನೆ. ಡಿಪ್ಲೊಮಾದಲ್ಲಿ (ಕಂಪ್ಯೂಟರ್ ಸೈನ್ಸ್) ಶೇ 60 ಅಂಕ ತೆಗೆದ ನನಗೆ ಬಿಇಯಲ್ಲಿ ಶೇ 56 ಅಂಕ ಗಳಿಸಲಷ್ಟೇ ಸಾಧ್ಯವಾಯಿತು. ಹೀಗಿರುವಾಗ ನಾನು ಒಳ್ಳೆ ಕಡೆ ಕೆಲಸ ಪಡೆಯಬಹುದೇ? ಅದಕ್ಕಾಗಿ ಡಿಬಿಎ ಅಥವಾ ಎಸ್‌ಎಪಿ (ಸ್ಯಾಪ್) ಕೋರ್ಸುಗಳ ಅವಶ್ಯಕತೆ ಇದೆಯೇ?

ಗಣಕ ವಿಜ್ಞಾನದಲ್ಲಿ ಡಿಪ್ಲೊಮಾ ಮಾಡಿ, ಮಾಹಿತಿ ವಿಜ್ಞಾನದಲ್ಲಿ ಬಿಇ ಮಾಡಿರುವ ನಿಮಗೆ ಇನ್ನೂ ಹೆಚ್ಚಿನ ಕೋರ್ಸುಗಳ ಅಗತ್ಯವಿಲ್ಲ ಎನಿಸುತ್ತದೆ. ನೀವು ಈಗಾಗಲೇ ಪಡೆದುಕೊಂಡಿರುವ ಕಂಪ್ಯೂಟರ್ ಜ್ಞಾನದ ಮೇಲೆ ಒಂದಲ್ಲ ಒಂದು ಕಂಪೆನಿಯಲ್ಲಿ ಕೆಲಸವನ್ನು ಪಡೆಯಬಹುದು. ಆ ಮೇಲೆ ಬೇಕೆನಿಸಿದರೆ ಅದಕ್ಕೆ ಸೂಕ್ತವಾದ ಕೋರ್ಸನ್ನು ಆರಿಸಿಕೊಂಡು ಅಭ್ಯಾಸ ಮಾಡಬಹುದು.

ಅರುಣ್ ಸಜ್ಜನ್

ನಾನು ವಿಜ್ಞಾನ ವಿಷಯದಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದೇನೆ. ನನ್ನ ಓದಿಗೆ ಅನುಕೂಲವಾಗುವ ಸಿ ಡಿ (ಕಾಂಪ್ಯಾಕ್ಟ್ ಡಿಸ್ಕ್) ಕುರಿತಾಗಿ ಮಾಹಿತಿ ಕೊಡಿ.

ಸಿ ಡಿ ಅಥವಾ ತಂತ್ರಾಂಶಗಳನ್ನು ಉಪಯೋಗಿಸಿ ದ್ವಿತೀಯ ಪಿಯು ವಿಜ್ಞಾನ ಕಲಿಕೆ ಕಷ್ಟವೇ ಸರಿ. ನೀವು ತರಗತಿಗಳಲ್ಲಿ ಶ್ರದ್ಧೆಯಿಂದ ಅಧ್ಯಾಪಕರ ಪಾಠಗಳನ್ನು ಕೇಳಿ ವಿಜ್ಞಾನ ವಿಷಯಗಳನ್ನು ಕಲಿಯಬೇಕು. ಅನಂತರ ಪಠ್ಯಪುಸ್ತಕಗಳನ್ನು ಓದಿ ನೀವು ಅರ್ಥಮಾಡಿಕೊಂಡಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಉತ್ತರಿಸಿ ನಿಮ್ಮ ನೈಪುಣ್ಯತೆಗಳನ್ನು ಹೆಚ್ಚಿಸಿಕೊಳ್ಳಬೇಕು. ಇದೆಲ್ಲಾ ಮಾಡಿದ ನಂತರ ಸಮಯ ಮಿಕ್ಕರೆ ನೀವು ಸಿ ಡಿ ಮೊರೆ ಹೋಗಬಹುದು.

ಪ್ರಶ್ನೆ ಕಳಿಸಬೇಕಾದ ವಿಳಾಸ: ಸಂಪಾದಕರು, ಶಿಕ್ಷಣ ವಿಭಾಗ, ಪ್ರಜಾವಾಣಿ, 75 ಎಂಜಿ ರಸ್ತೆ,ಬೆಂಗಳೂರು 560001

ಪ್ರಶ್ನೆಗಳನ್ನು ಇಮೇಲ್‌ನಲ್ಲೂ ಕಳಿಸಬಹುದು: shikshana@prajavani.co.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.