ಸೋಮವಾರ, ಮೇ 23, 2022
20 °C

ಪ್ರಾಚೀನ ವಸ್ತು ಸಂಗ್ರಹಕಾರ ರಾಮಕೃಷ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಗಮಂಗಲ: ಸೆಲ್ ಫೋನು ರಿಂಗಣಿಸುವ ಕಾಲ. ಹಾಡುಗಳನ್ನು ಕೇಳ ಬೇಕೆಂದರೆ ಮೆಮೊರಿ ಕಾರ್ಡ್ ಸಾಕು. ಇಂದು ವಿಜ್ಞಾನ, ತಂತ್ರಜ್ಞಾನ ಬೆಳೆದು ನಿಂತಿದೆ. ಇಂತಹ ಆಧುನಿಕ ಜಗತ್ತಿನಲ್ಲಿ ಪ್ರಾಚೀನ ವಸ್ತುಗಳನ್ನು ಜೋಪಾನ ಮಾಡಿ ಸಂಗ್ರಹಿಸುವ ಕಾರ್ಯದಲ್ಲಿ ತೊಡಗುವುದು ದುಸ್ತರ. ಇದರ ನಡುವೆಯೂ ನಾಗಮಂಗಲದ ಎನ್.ಜೆ.ರಾಮಕೃಷ್ಣ ಪ್ರಾಚೀನ ವಸ್ತುಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದು, ಇತಿಹಾಸದ ಸವಿಯನ್ನು ಮರುಕಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ.ಇಂದು ಯಾರಾದರು ರೇಡಿಯೋ ಕಾಣಬೇಕೆಂದರೆ ಅದೊಂದು ಸಾಹಸದ ಕೆಲಸ. ಆದರೆ ರಾಮಕೃಷ್ಣ ಅವರು ಗ್ರಾಮೋಫೋನುಗಳಿಂದ ಹಿಡಿದು ವಿವಿಧ ವಿದೇಶಿ ಕಂಪೆನಿಗಳ ರೇಡಿಯೋಗಳನ್ನು ಸಂಗ್ರಹಿಸಿದ್ದಾರೆ. ಹಿಂದಿನ ಕಾಲದ ಭರ್ಜಿ, ಕತ್ತಿ, ಖಡ್ಗ, ಬಾಕು, ಒನಕೆ, ಕುಂದಲಿಗೆ, ಸರಪಳಿ, ರಾಗಿ ಬೀಸುವ ಕಲ್ಲು ಗ್ರಾಮೀಣ ಜನಪದ ವಸ್ತುಗಳು, 1949ರ ವೃತ್ತ ಪತ್ರಿಕೆಗಳು. ನಾಲ್ಕು ತಲೆಮಾರು ಕಳೆದ ಅಂದರೆ ಸುಮಾರು 250 ವರ್ಷಗಳಷ್ಟು ಹಳೆಯದಾದ ಕಾಡುಕೋಣ ಹಾಗು ಜಿಂಕೆಯ ಕೊಂಬುಗಳು ಇವರ ಸಂಗ್ರಹದಲ್ಲಿದೆ.1377 ನೇ ಇಸವಿಯ ಮತ್ತು ವಿವಿಧ ಕಂಪೆನಿಗಳ ಹಲವಾರು ಮಾದರಿಯ ಲಾಂದ್ರಗಳು, ಬೇಟೆಗೆ ಬಳಸಲಾಗುತ್ತಿದ್ದ ವಿವಿಧ ಲೋಹದ ಉಪಕರಣಗಳು, ಪಾಳೇಗಾರರ ಕತ್ತಿಗಳು, ಬಳಪದ ಬೀಸುವ ಕಲ್ಲುಗಳು, ನೋಡುಗರನ್ನು ತನ್ನತ್ತ ಆಕರ್ಷಿಸುವ ಮರದ ತೊಟ್ಟಿಲುಗಳು, ಅಷ್ಟೇ ಅಲ್ಲದೇ ಕಳೆದ 50 ವರ್ಷಗಳಿಂದ ನಾಗಮಂಗಲ ಬೆಳೆದು ಬಂದ ಬದಲಾವಣೆಯನ್ನು ಅನೇಕ ಚಿತ್ರಗಳಲ್ಲಿ ಸಂಗ್ರಹಿಸಿದ್ದಾರೆ. ಹೀಗೆ ತನ್ನೂರಿನ ಇತಿಹಾಸವನ್ನು ಮುಂದಿನ ಪೀಳಿಗೆಗೆ ತೋರಲು ತಮ್ಮ ಕೈಲಾದ ಮಟ್ಟಿಗೆ ಅವಿರತವಾಗಿ ಶ್ರಮಿಸುತ್ತಿದ್ದಾರೆ.

ಮೈಸೂರಿನ ಅರಮನೆ ಧರ್ಮಸ್ಥಳದ ವಸ್ತು ಸಂಗ್ರಹಾಲಯವನ್ನು ನೋಡಿದ ಬಳಿಕ ನಾನು ಏಕೆ ಈ ರೀತಿ ವಸ್ತು ಸಂಗ್ರಹಿಸಬಾರದು ಎಂಬ ಆಸೆ ಚಿಗುರಿತು. ಈ ಅಭಿರುಚಿಯೇ ಅವರ ಸಂಗ್ರಹಕ್ಕೆ ಕಾರಣವಾಯಿತು ಎಂಬುದು ಅವರ ಮನದಾಳದ ಮಾತು.ನಂತರ ತಮ್ಮ ಮನೆಯ ಅಟ್ಟದಲ್ಲಿ ಇಟ್ಟಿದ್ದ ಕಬ್ಬಿಣದ ಪೆಟ್ಟಿಗೆಯಲ್ಲಿ ಕಂಡದ್ದು ಪಾಳೇಗಾರರು ಬಳಸಿದ್ದ ಖಡ್ಗಗಳು, ಗುರಾಣಿಗಳು, ಬಾಕುಗಳು. ಸ್ನೇಹಿತರು, ಹಿತೈಷಿಗಳು ಹಾಗು ಬಂಧುಗಳು ತಮ್ಮ ಮನೋಭಿಲಾಷೆ ಅರಿತು ಸಂಗ್ರಹ ಕಾರ್ಯದಲ್ಲಿ ಐತಿಹಾಸಿಕ ವಸ್ತುಗಳನ್ನು ನೀಡಿ ಸ್ಪಂದಿಸಿದ ಬಗೆಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ.

ಹೀಗೆ ಅವರ ಸಂಗ್ರಹ ಕಾರ್ಯವನ್ನು ಅವಲೋಕಿಸಿದರೆ ನಾಗಮಂಗಲ ಇತಿಹಾಸದ ಪರಿಚಯವು ಆಗುತ್ತದೆ.ಪುರಸಭೆ ರಚನೆ ಇತಿಹಾಸವನ್ನು ತಿಳಿಸುತ್ತದೆ. ಪುರಸಭೆ 1876ರಲ್ಲಿ ರಚನೆಯಾದರು 1953 ರವರೆಗೂ ಖಾಸಗಿ ಉಪಾಧ್ಯಕ್ಷರೇ ಇದರ ಆಡಳಿತ ನಡೆಸುತ್ತಿದ್ದರು. 1953-54 ರಲ್ಲಿ ಎನ್.ಆರ್.ರಂಗಸ್ವಾಮಿ ಅಧ್ಯಕ್ಷರಾಗಿಯೂ ಎಸ್.ಕೆ ಅಬ್ದುಲ್ ರೆಹಮಾನ್ ಸಾಹೇಬ ಉಪಾಧ್ಯಕ್ಷರಾಗಿಯೂ ನೇಮಕ ಗೊಂಡ ಮಾಹಿತಿ ಲಭ್ಯವಾಗುತ್ತದೆ.ಇವರಲ್ಲಿರುವ ದಾಖಲೆ ಪ್ರಕಾರ ನಾಗಮಂಗಲ ಪಟ್ಟಣ ಪಂಚಾಯಿತಿಗೆ ಈಗ ಬರೋಬ್ಬರಿ 135 ವರ್ಷ.

ಪಟ್ಟಣದಲ್ಲಿ ವಿವಿಧೆಡೆ ಇರುವ ಅಪರೂಪದ ವಸ್ತುಗಳನ್ನು ಒಂದೆಡೆ ಕಲೆ ಹಾಕಿದರೆ ಪಟ್ಟಣದಲ್ಲೊಂದು ಅದ್ಭುತ ವಸ್ತು ಸಂಗ್ರಹಾಲಯವೇ ನಿರ್ಮಾಣವಾಗಬಹುದು. ತಾಲ್ಲೂಕಿನ ಜಾನಪದ ಲೋಕದ ನಿರ್ಮಾತೃ ಎಚ್.ಎಲ್.ನಾಗೇಗೌಡರ ನಾಡಿನಲ್ಲಿ ಇದು ಅಸಾಧ್ಯವು ಅಲ್ಲ, ಆಸಕ್ತರು ಸ್ಪಂದಿಸಬೇಕಿದೆ.ವೃತ್ತಿಯಲ್ಲಿ ಕೃಷಿಕರಾದ ರಾಮಕೃಷ್ಣ ಅವರು ಅಪರೂಪದ ಪ್ರಾಚೀನ ವಸ್ತುಗಳನ್ನು ಸಂಗ್ರಹಿಸುವ ಪ್ರವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಈ ಸಾಧನೆ ಮುಂದಿನ ಪೀಳಿಗೆಗೆ ಮಾರ್ಗದರ್ಶಕ. ಏನೇ ಆಗಲಿ ಅವರ ಈ ಸಂಗ್ರಹ ಅಭಿಯಾನ ನಿರಂತರವಾಗಿ ಸಾಗಲಿ ಮುಂದಿನ ತಲೆಮಾರಿಗೆ ಇತಿಹಾಸದ ಬೆಳಕ ಚೆಲ್ಲಲಿ.

-ಎನ್.ಆರ್.ದೇವಾನಂದ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.