ಮಂಗಳವಾರ, ಮೇ 18, 2021
28 °C

ಪ್ರಾಣಿಗಳಿಗೆ ಮಕ್ಕಳ ಮಮತೆ

-ಜಯಪ್ರಕಾಶ ತಲವಾಟ . Updated:

ಅಕ್ಷರ ಗಾತ್ರ : | |

ಹೆತ್ತ ಅಪ್ಪ-ಅಮ್ಮಂದಿರನ್ನೇ ಕಡೆಗಣಿಸುವ ಮನೋಭಾವ ಇಂದಿನದ್ದು. ಇಂಥವರ ನಡುವೆ ಮೂಕ ಪ್ರಾಣಿಗಳ ಸಂಕಟಕ್ಕೂ ಸ್ಪಂದಿಸುವವರು ಇದ್ದಾರೆ. ಈ ರೀತಿ ಮಾನವೀಯ ಗುಣ ಬೆಳೆಸಿಕೊಂಡು ಪ್ರಾಣಿಗಳನ್ನು ತಮ್ಮ ಮಕ್ಕಳಂತೆ ಕಾಣುತ್ತಿದ್ದಾರೆ ಶಿವಮೊಗ್ಗ ಜಿಲ್ಲೆ ಸಾಗರದ ಕೆ.ಆರ್. ಗಂಗಾಧರ.ಸ್ವಾರ್ಥ ಮನೋಭಾವವೇ ಎಲ್ಲೆಡೆ ಹೆಚ್ಚಾಗುತ್ತಿದೆ ಎಂಬ ಮಾತುಗಳ ಮಧ್ಯೆ ನಿಸ್ವಾರ್ಥ ಮನೋಭಾವದಿಂದ ದುಡಿಯುತ್ತಿದ್ದಾರೆ ನಿವೃತ್ತ ಸೈನಿಕ ಗಂಗಾಧರ. ಸುಡು ಬಿಸಿಲಿನಲ್ಲಿ ಜಾನುವಾರುಗಳು ಬಾಯಾರಿಕೆಯಿಂದ ಬಳಲುವುದನ್ನು ಕಂಡು, ಚರಂಡಿ ನೀರನ್ನು ಕುಡಿಯುತ್ತಿರುವುದನ್ನು ಕಂಡ ಗಂಗಾಧರ ಅವರು ಅವುಗಳಿಗಾಗಿ ನೀರಿನ ತೊಟ್ಟಿ ನಿರ್ಮಿಸಿದ್ದಾರೆ.

ಇವರಿಂದಾಗಿ ಸಾಗರ ಪಟ್ಟಣದ ವಿವಿಧ ಬಡಾವಣೆಗಳಲ್ಲಿ 120ಕ್ಕೂ ಹೆಚ್ಚು ನೀರಿನ ತೊಟ್ಟಿಗಳನ್ನು ಕಾಣಬಹುದು. ಈ ತೊಟ್ಟಿಗಳಿಗೆ ನೀರು ತುಂಬುವಂತೆ ಜನರಿಗೆ ಮನವಿ ಮಾಡುವ ಕೆಲಸವೂ ಇವರದ್ದೇ. ತೊಟ್ಟಿಗಳು ಸುರಕ್ಷಿತವಾಗಿ ಇವೆಯೇ ಎಂಬ ಬಗ್ಗೆ ಖಚಿತ ಪಡಿಸಿಕೊಳ್ಳಲು ದಿನಕ್ಕೆರೆಡು ಮೂರು ಬಾರಿ ನಗರ ಸುತ್ತುವ ಕಾಯಕವನ್ನೂ ಮಾಡುತ್ತಿದ್ದಾರೆ.ಗಂಗಾಧರಗಂಗಾಧರ ಅವರು, ಭಾರತೀಯ ಭೂ ಸೇನೆಯಲ್ಲಿ ಸುಮಾರು ಒಂದೂವರೆ ದಶಕಗಳ ಕಾಲ ಸೇವೆ ಸಲ್ಲಿಸಿದವರು. ಕಾರ್ಗಿಲ್ ಯುದ್ಧದಲ್ಲಿ ವಿಜಯ ಪತಾಕೆ ಹಾರಿಸಿದವರು. ಸೇನೆಯಲ್ಲಿ ನಿವೃತ್ತಿ ಹೊಂದಿದ ನಂತರ 2007ರಿಂದ ಸಾಗರದ ಅಗ್ನಿಶಾಮಕ ಠಾಣೆಯಲ್ಲಿ  ಕಾರ್ಯನಿರ್ವಹಿಸುತ್ತಿದ್ದಾರೆ. ಆರಂಭದಲ್ಲಿ ಸ್ವಂತ ಖರ್ಚಿನಲ್ಲಿ ಪ್ರತಿ ತೊಟ್ಟಿಗೆ 250 ರೂಪಾಯಿ ಹಣ ವಿನಿಯೋಗಿಸಿ ಸುಮಾರು 30 ತೊಟ್ಟಿಗಳನ್ನು ಕಟ್ಟಿಸಿದರು.

ನಂತರ ಜನರು ಒಂದೆರೆಡು ತೊಟ್ಟಿಗಳನ್ನು ದಾನವಾಗಿ ನೀಡಿದರು. ರೋಟರಿ ಸಂಸ್ಥೆಯವರು, ನಗರ ಸಭೆ, ಜೋಷಿ ಫೌಂಡೇಷನ್, ವರದಹಳ್ಳಿಯ ಶ್ರೀಧರ ಆಶ್ರಮ ಮತ್ತು ಬಸವರಾಜ ಎಂಬುವವರು ತಲಾ ಹತ್ತು ತೊಟ್ಟಿಗಳಿರಿಸಲು ಆರ್ಥಿಕ ನೆರವು ನೀಡಿದ್ದಾರೆ. ತೊಟ್ಟಿಗಳನ್ನು ಇರಿಸಲು ಗಂಗಾಧರ ಅವರಿಗೆ ಆಟೊ ಚಾಲಕ ನಾಗರಾಜ ಅವರಿಂದ ಹೆಚ್ಚಿನ ಸಹಕಾರ ಸಿಗುತ್ತಿದೆ. ಈ ಕಾರ್ಯ ಆರಂಭಿಸುವಾಗ ಮೊದಲು ಇವರು ಮೂದಲಿಕೆ ಮಾತನ್ನೂ ಕೇಳಬೇಕಾಗಿ ಬಂತು. ಗಂಗಾಧರ ಅವರು ಅದಕ್ಕೆ ತಲೆಕೆಡಿಸಿಕೊಳ್ಳದೇ ಈ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಸಫಲರಾದರು. `ಪ್ರಾರಂಭದಲ್ಲಿ ನೀರಿನ ತೊಟ್ಟಿ ಖಾಲಿ ಬಿಡದೆ ನೀರು ತುಂಬುತ್ತಾ ಇರಿ ಎಂದು ಹೇಳಬೇಕಾಗಿತ್ತು.

ಆದರೆ ಇಂದು ಜನರೇ ಸ್ವಯಂ ಪ್ರೇರಿತರಾಗಿ ಈ ಕೆಲಸ ಮಾಡುತ್ತಿದ್ದಾರೆ. ಬಹಳ ಜನ ತಮ್ಮ ಮನೆಯ ಮುಂದೆ ನೀರಿನ ತೊಟ್ಟಿ ಇಡಲು ಮುಂದಾಗಿದ್ದಾರೆ' ಎನ್ನುತ್ತಾರೆ ಗಂಗಾಧರ.ಸಂಪರ್ಕಕ್ಕೆ 7829022497.

-ಜಯಪ್ರಕಾಶ ತಲವಾಟ .

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.