ಮಂಗಳವಾರ, ಜೂನ್ 22, 2021
29 °C

ಪ್ರಾದೇಶಿಕ ಪಕ್ಷಕ್ಕೆ ಮಾತ್ರ ಭವಿಷ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ರಾಷ್ಟ್ರದಲ್ಲಿ ಇನ್ನು ಪ್ರಾದೇಶಿಕ ಪಕ್ಷಗಳಿಗೆ ಮಾತ್ರ ಭವಿಷ್ಯ. ಜನತೆ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿ ಸುತ್ತಿದ್ದಾರೆ. ಉತ್ತರ ಪ್ರದೇಶದ ಚುನಾವಣೆಯಲ್ಲಿ ಇದನ್ನು ಮತದಾರರು ಸಾಬೀತು ಪಡಿಸಿದ್ದಾರೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದರು.ನಗರದಲ್ಲಿ ಗುರುವಾರ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ರಾಷ್ಟ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸಿರುವ ಕಾಂಗ್ರೆಸ್ ಮತ್ತು ಬಿಜೆಪಿ ಜನಹಿತ ಕಾಪಾಡಲು ಸಂಪೂರ್ಣ ವಿಫಲವಾಗಿವೆ ಎಂದು ಕಿಡಿಕಾರಿದರು.ಈ ಉಪ ಚುನಾವಣೆಯಲ್ಲಿ ವ್ಯಕ್ತಿಗತವಾಗಿ ಯಾರ ಬಗ್ಗೆಯೂ ಚರ್ಚಿಸಲು ಇಷ್ಟಪಡುವುದಿಲ್ಲ. ಆದರೆ, ಕಾಂಗ್ರೆಸಿಗರು ತಮ್ಮ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ. ಅವರಿಗೆ ನಮ್ಮ ಬಗ್ಗೆ ಮಾತನಾಡಲು ಯಾವ ಯೋಗ್ಯತೆ ಇದೆ? ಗಾಂಧಿ ಹೆಸರು ಹೇಳುವ ಇವರು ಗಾಂಧಿ ತತ್ವಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ.ಜಾತಿ, ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆಯುವ ಕೆಲಸಗಳನ್ನು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಂದ ನಡೆಯುತ್ತಿದೆ. ರಾಜ್ಯದಲ್ಲಿಯೂ ಒಂದೆರಡು ಜಾತಿಯ ಕೈಯಲ್ಲಿ ಅಧಿಕಾರ ಕೇಂದ್ರಿತವಾಗಿದೆ. ಮತದಾರರು ಇದಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.ಜೆಡಿಎಸ್ ರಾಜ್ಯ ಘಟಕ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಗುಲ್ಬರ್ಗ ಉಪ ಚುನಾವಣೆಯಲ್ಲಿ ಆದಂತೆ ಈ ಬಾರಿ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ನೀಡಲಿದ್ದಾರೆ. ಯುವಕರು, ಮುಸ್ಲಿಮರು ಪ್ರವಾಹದ ರೀತಿಯಲ್ಲಿ ಸ್ಪಪ್ರೇರಣೆಯಿಂದ ಸೇರಿದ್ದಾರೆ ಎಂದರು.ದೇವೇಗೌಡರು ಮುಖ್ಯಮಂತ್ರಿ ಮತ್ತು ಪ್ರಧಾನಿಯಾಗಿದ್ದಾಗಲು ಮುಸ್ಲಿಂ ಸಮುದಾಯದ ಏಳಿಗೆಗೆ ಸಾಕಷ್ಟು ಶ್ರಮಿಸಿದ್ದಾರೆ. ಸಿ.ಎಂ.ಇಬ್ರಾಹಿಂಗೆ ರಾಜಕೀಯ ಜೀವನ ನೀಡಿದ್ದೇ ದೇವೇಗೌಡರು. ಆದರೆ, ಇಂದು ಅದೆಲ್ಲವನ್ನೂ ಮರೆತು ಟೀಕಿಸುವ ಮೂಲಕ ಉಪಕಾರ ಮರೆತು ವರ್ತಿಸುತ್ತಿದ್ದಾರೆ ಎಂದು ಶಾಸಕ ಜಮೀರ್ ಅಹಮ್ಮದ್ ಆಕ್ರೋಶ ವ್ಯಕ್ತಪಡಿಸಿದರು.ಜೆಡಿಎಸ್ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಬಸವನಗೌಡ ಪಾಟೀಲ ಯತ್ನಾಳ್, ಜೆಡಿಎಸ್ ರಾಜ್ಯ ಘಟಕ ಕಾರ್ಯಾಧ್ಯಕ್ಷ ಪಿ.ಜಿ.ಆರ್. ಸಿಂಧ್ಯಾ, ಸಂಸದ ಚೆಲುವರಾಯಸ್ವಾಮಿ,  ಮಾಜಿ ಶಾಸಕ ಎಸ್.ಎಲ್.ಧರ್ಮೇಗೌಡ, ಪಕ್ಷದ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ, ಪಕ್ಷದ ಜಿಲ್ಲಾ ಅಧ್ಯಕ್ಷ ಎಚ್.ಎಚ್. ದೇವರಾಜ್ ಇನ್ನಿತರರು ಇದ್ದರು.

ಪಕ್ಷದ ಶಕ್ತಿ ಪ್ರದರ್ಶನ: ಕಾರ್ಯಕ್ರಮಕ್ಕೂ ಮೊದಲು ಎಚ್.ಡಿ.ಕುಮಾರಸ್ವಾಮಿ ನಗರದ ಎಂ.ಜಿ.ರಸ್ತೆ, ಐ.ಜಿ. ರಸ್ತೆ, ರತ್ನಗಿರಿ ರಸ್ತೆಯಲ್ಲಿ ರೋಡ್ ಶೋ ನಡೆಸಿ, ಅಭ್ಯರ್ಥಿ ಎಸ್.ಎಲ್.ಭೋಜೇಗೌಡ ಪರ ಮತಯಾಚಿಸಿದರು.ಪಕ್ಷದ ಶಕ್ತಿ ಪ್ರದರ್ಶನಕ್ಕಾಗಿ ಭಾರಿ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ್ದರು. ಎಂ.ಜಿ.ರಸ್ತೆ ಮತ್ತು ಐ.ಜಿ.ರಸ್ತೆಯಲ್ಲಿ ಮೆರವಣಿಗೆ ಸಾಗುತ್ತಿದ್ದಾಗ ಕಿಕ್ಕಿರಿದು ಸೇರಿದ್ದ ಕಾರ್ಯಕರ್ತರಿಂದಾಗಿ ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.