ಗುರುವಾರ , ಏಪ್ರಿಲ್ 15, 2021
31 °C

ಪ್ರೀತಿ ನಿರಾಕರಣೆ: ಯುವಕ ನೇಣಿಗೆ ಶರಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಜೀವನದಲ್ಲಿ ಜಿಗುಪ್ಸೆಗೊಂಡ ಯುವಕನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜಪೇಟೆಯಲ್ಲಿ ಗುರುವಾರ ನಡೆದಿದೆ. ಚಾಮರಾಜಪೇಟೆ ಆರನೇ ಅಡ್ಡರಸ್ತೆ ನಿವಾಸಿ ಬಿ.ಆರ್.ಬಾಲಕೃಷ್ಣ ಎಂಬುವರ ಪುತ್ರ ಬಿ.ಬಿ.ಮಂಜುನಾಥ್ (23) ಆತ್ಮಹತ್ಯೆ ಮಾಡಿಕೊಂಡವನು. ಐಟಿಐ ಓದಿದ್ದ ಆತ ಬಿಎಂಟಿಸಿ ಶಾಂತಿನಗರ ಘಟಕದಲ್ಲಿ ತರಬೇತಿ ಪಡೆಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.‘ಮಂಜುನಾಥ್ ಕೋಲಾರದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಆ ಯುವತಿ ಆತನ ಪ್ರೀತಿಯನ್ನು ನಿರಾಕರಿಸಿದ್ದಳು. ಇದರಿಂದ ಮನನೊಂದು ಆತ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ’ ಎಂದು ಪೊಲೀಸರು ಹೇಳಿದ್ದಾರೆ. ಕುಟುಂಬ ಸದಸ್ಯರೆಲ್ಲಾ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಆತ ಮನೆಯಲ್ಲೇ ನೇಣು ಹಾಕಿಕೊಂಡಿದ್ದಾನೆ. ಬಾಲಕೃಷ್ಣ ಅವರು ಕುಮಾರಕೃಪಾ ಅತಿಥಿ ಗೃಹದಲ್ಲಿ ನೌಕರರಾಗಿದ್ದಾರೆ. ಆತನ ತಾಯಿ ಮತ್ತು ಸಹೋದರಿಯೂ ಸರ್ಕಾರಿ ಉದ್ಯೋಗದಲ್ಲಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಚಾಮರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನೀರಲ್ಲಿ ಮುಳುಗಿ ಸಾವು: ಕ್ವಾರಿಯಲ್ಲಿ ಸಂಗ್ರಹವಾಗಿದ್ದ ನೀರಿನಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಯುವಕನೊಬ್ಬ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಎಂ.ಎಸ್.ಪಾಳ್ಯದಲ್ಲಿ ನಡೆದಿದೆ. ವಿದ್ಯಾರಣ್ಯಪುರ ಬಳಿಯ ಎಂ.ಎಸ್.ಪಾಳ್ಯ ನಿವಾಸಿ ತನ್ವೀರ್ (22) ಮೃತಪಟ್ಟವನು. ಮನೆಯ ಸಮೀಪವೇ ಇರುವ ಕ್ವಾರಿಯಲ್ಲಿ ಬುಧವಾರ (ಮಾ.2) ಬಟ್ಟೆ ತೊಳೆಯಲು ಹೋಗಿದ್ದ ಆತ ಕಾಲು ಜಾರಿ ನೀರಿನಲ್ಲಿ ಬಿದ್ದು ಸಾವನ್ನಪ್ಪಿದ್ದ.ಶುಕ್ರವಾರ ಮಧ್ಯಾಹ್ನ ಆತನ ಶವ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಕ್ವಾರಿ ಗುಂಡಿಯು 15ರಿಂದ 20 ಅಡಿ ಆಳವಿತ್ತು.  ಆತನಿಗೆ ಈಜು ಬರದ ಕಾರಣ ನೀರಿನಲ್ಲಿ ಮುಳುಗಿ  ಮೃತಪಟ್ಟಿದ್ದಾನೆ ಎನ್ನಲಾಗಿದೆ.  ವಿದ್ಯಾರಣ್ಯಪುರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.ಸರಗಳವು: ಮಹಿಳೆಯೊಬ್ಬರ ಚಿನ್ನದ ಸರವನ್ನು ದುಷ್ಕರ್ಮಿಗಳು ಕಿತ್ತುಕೊಂಡು ಹೋದ ಘಟನೆ ಬಸವೇಶ್ವರನಗರದ ಸತ್ಯನಾರಾಯಣ ಲೇಔಟ್‌ನಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ರೂಪಾ ಸರ ಕಳೆದುಕೊಂಡವರು. ಅವರು ಮನೆಯ ಸಮೀಪವೇ ಹಾಲು ಮಾರುತ್ತಿದ್ದ ವೇಳೆ ಹಾಲು ಕೊಳ್ಳುವ ನೆಪದಲ್ಲಿ ಬಂದ ಕಿಡಿಗೇಡಿಯೊಬ್ಬ ಸುಮಾರು 1.40 ಲಕ್ಷ ರೂಪಾಯಿ ಮೌಲ್ಯದ ಸರ ಕಿತ್ತುಕೊಂಡು ತನ್ನ ಸಹಚರನೊಂದಿಗೆ ಬೈಕ್‌ನಲ್ಲಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಸವೇಶ್ವರನಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.ಬಂಧನ: ಸಾರ್ವಜನಿಕರಿಗೆ ಸಾಲ ನೀಡಿ ದುಬಾರಿ ಬಡ್ಡಿ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ದೊಡ್ಡಮಾವಳ್ಳಿಯ ಪಾಪಯ್ಯ ಸ್ಟ್ರೀಟ್‌ನ ವಿ.ಮಂಜುನಾಥ್ (44) ಎಂಬುವರನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.ಬಂಧಿತನಿಂದ 30 ಸಾವಿರ ನಗದು, ದ್ವಿಚಕ್ರ ವಾಹನ, ಮೊಬೈಲ್ ಫೋನ್ ಮತ್ತು ಹಲವು ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಆತ ಸಣ್ಣ ಉದ್ಯಮಿಗಳಿಗೆ, ಉದ್ಯೋಗಿಗಳಿಗೆ, ಜನರಿಗೆ ಸಾಲ ನೀಡಿ ಹೆಚ್ಚು ಬಡ್ಡಿ ವಸೂಲಿ ಮಾಡುತ್ತಿದ್ದ. ಸಾಲ ವಾಪಸ್ ನೀಡಲು ವಿಳಂಬ ಮಾಡಿದವರಿಗೆ ಗೂಂಡಾಗಳಿಂದ ಬೆದರಿಕೆ ಹಾಕಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಆತನ ಮನೆಯ ಮೇಲೆ ದಾಳಿ ನಡೆಸಿ ವಿವಿಧ ಬ್ಯಾಂಕ್‌ಗಳ ಖಾಲಿ ಚೆಕ್‌ಗಳು, ಛಾಪಾ ಕಾಗದಗಳು, ದ್ವಿಚಕ್ರ ವಾಹನಗಳ ದಾಖಲೆಗಳು, ಒಪ್ಪಂದ ಕರಾರು ಪತ್ರಗಳು ಮತ್ತಿತರ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.