ಮಂಗಳವಾರ, ಮೇ 17, 2022
23 °C

ಪ್ಲಾಸ್ಟಿಕ್ ಚೀಲ ನೀಡುವ ಅಂಗಡಿೆ ವಿದ್ಯುತ್ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ನಿಯಂತ್ರಿಸಲು ಸಜ್ಜಾಗಿರುವ ಸರ್ಕಾರವು, ಗ್ರಾಹಕರಿಗೆ ಉಚಿತವಾಗಿ ಪ್ಲಾಸ್ಟಿಕ್ ಚೀಲಗಳನ್ನು ನೀಡುವ ಅಂಗಡಿಕಾರರಿಗೆ ವಿದ್ಯುತ್ ಹಾಗೂ ನೀರು ಪೂರೈಕೆಯನ್ನು ನಿರ್ಬಂಧಿಸಲು ಮುಂದಾಗಿದೆ. ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಪ್ಲಾಸ್ಟಿಕ್ ನೀತಿಯಲ್ಲಿ ಇದಕ್ಕೆ ಅವಕಾಶ ಕಲ್ಪಿಸಲಾಗಿದೆ.‘ಚಿಲ್ಲರೆ ಮಾರಾಟಗಾರರು ಪ್ಲಾಸ್ಟಿಕ್ ಚೀಲಗಳನ್ನು ಉಚಿತವಾಗಿ ಗ್ರಾಹಕರಿಗೆ ನೀಡುತ್ತಿರುವುದರಿಂದ ಇವುಗಳ ಬಳಕೆ ಅವ್ಯಾಹತವಾಗಿ  ನಡೆಯುತ್ತಿದೆ.ಇದರ ಮೇಲೆ ನಿಯಂತ್ರಣ ಹೇರುವ ಉದ್ದೇಶದಿಂದ ಕನಿಷ್ಠ ಬೆಲೆಯನ್ನು ನಿಗದಿಪಡಿಸಲು ನಿರ್ಧರಿಸಲಾಗಿದೆ’ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಎ.ಎಸ್.ಸದಾಶಿವಯ್ಯ ಹೇಳಿದರು.ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ನೀತಿಯ ಬಗ್ಗೆ ಪ್ಲಾಸ್ಟಿಕ್ ವಸ್ತು  ಗಳ ತಯಾರಕರು, ಮಾರಾಟಗಾರರಿಗೆ ವಿವರಣೆ ನೀಡಲು ಮಂಡಳಿಯು ಶನಿ ವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.  ‘ಪ್ಲಾಸ್ಟಿಕ್ ನೀತಿಯ ನಿಯಮಾವಳಿಗಳನ್ನು ಅನುಷ್ಠಾನಗೊಳಿಸುವ ಹೊಣೆಯನ್ನು ಪೌರಾಡಳಿತ ಸಂಸ್ಥೆಗಳಿಗೆ ವಹಿಸಿಕೊಡಲಾಗಿದೆ. ಅಳತೆ, ಗಾತ್ರ ಹಾಗೂ ಗುಣಮಟ್ಟದ ಆಧಾರದ ಮೇಲೆ ಪ್ಲಾಸ್ಟಿಕ್ ಚೀಲದ ದರ ನಿಗದಿಪಡಿಸುವ ಅಧಿಕಾರವನ್ನೂ ಈ ಸಂಸ್ಥೆಗಳಿಗೆ ನೀಡಲಾಗಿದೆ’ ಎಂದು ಅವರು ತಿಳಿಸಿದರು.ನಿಯಮಗಳನ್ನು ಉಲ್ಲಂಘಿಸುವ ಮಾರಾಟಗಾರರಿಗೆ ಹಾಗೂ ತಯಾರಿಕರಿಗೆ ಆರಂಭದಲ್ಲಿ ಗಂಭೀರ ಎಚ್ಚರಿಕೆ ನೀಡಿ, ನಂತರ ಅವರಿಗೆ ವಿದ್ಯುತ್ ಹಾಗೂ ನೀರು ಪೂರೈಸದಂತೆ ಕ್ರಮಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.ಪ್ರತಿಯೊಂದು ಪ್ಲಾಸ್ಟಿಕ್ ಚೀಲಗಳ ಮೇಲೆ ಅದರ ತಯಾರಿಕಾ ಕಂಪೆನಿಯ ಲಾಂಛನ ಹಾಗೂ ಕಂಪೆನಿಯ ಎಲ್ಲ ವಿವರಗಳು ಇರಬೇಕು ಎನ್ನುವ ಸೂಚನೆ ಹೊಸ ನೀತಿಯಲ್ಲಿದೆ. ಇದಲ್ಲದೇ, ಪ್ಲಾಸ್ಟಿಕ್ ಕಂಟೇನರ್‌ಗಳ ಬಳಕೆಯನ್ನು ಸಂಪೂರ್ಣವಾಗಿ ಇದು ನಿಷೇಧಿಸಿದೆ.ಗುಟ್ಕಾ, ತಂಬಾಕು ಹಾಗೂ ಪಾನ್ ಮಸಾಲ ಪ್ಯಾಕ್ ಮಾಡಲು ಬಳಸುವ ಚಿಕ್ಕ ಪ್ಲಾಸ್ಟಿಕ್ ಪೊಟ್ಟಣಗಳ (ಸ್ಯಾಚೆಟ್ಸ್) ಬಳಕೆಯನ್ನು ಹೊಸ ನೀತಿಯಡಿ ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ಅಳತೆಯು ಕನಿಷ್ಠ 40 ಮೈಕ್ರಾನ್ ದಪ್ಪವಾಗಿರಬೇಕು ಎನ್ನುವ ಷರತ್ತನ್ನು ನೀತಿಯಲ್ಲಿ ಇದರಲ್ಲಿ ಸೇರಿಸಲಾಗಿದೆ. ಮರುಸಂಸ್ಕರಣ ಪ್ರಕ್ರಿಯೆಯಲ್ಲಿ ತೆಳುವಾದ ಪ್ಲಾಸ್ಟಿಕ್ ಅನ್ನು ಬೇರ್ಪಡಿಸುವುದು ಕಷ್ಟವಾಗುತ್ತದೆ ಎಂದು ಅದರ ಬಳಕೆಯನ್ನು ನಿಷೇಧಿಸಲಾಗಿದೆ.ಮಾ.15ರ ಗಡುವು: ತಕ್ಷಣದಿಂದಲೇ ಈ ಎಲ್ಲ ನಿಯಮಗಳನ್ನು ಪಾಲಿಸುವುದು ಕಷ್ಟಸಾಧ್ಯವಾಗುತ್ತದೆ ಎಂದು ಪ್ಲಾಸ್ಟಿಕ್ ವಸ್ತುಗಳ ತಯಾರಕರು ಪ್ರತಿಭಟನೆ ತೋರಿದಾಗ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾರ್ಚ್ 15ರ ಗಡುವು ನೀಡಿದೆ. ಕೇಂದ್ರ ಸರ್ಕಾರವು ಫೆ.4ರಂದು ಪ್ಲಾಸ್ಟಿಕ್ಸ್ (ತಯಾರಿಕೆ, ಬಳಕೆ ಹಾಗೂ ತ್ಯಾಜ್ಯ ನಿರ್ವಹಣೆ)ನಿಯಮಾವಳಿಗಳನ್ನು ಜಾರಿಗೊಳಿಸಿದ್ದನ್ನು ಸ್ಮರಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.