ಬುಧವಾರ, ಮೇ 18, 2022
24 °C

ಫ್ರೆಂಚ್ ಓಪನ್ ಟೆನಿಸ್: ಭೂಪತಿ-ಸಾನಿಯಾ ಚಾಂಪಿಯನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ಯಾರಿಸ್ (ರಾಯಿಟರ್ಸ್): ಭಾರತದ ಸಾನಿಯಾ ಮಿರ್ಜಾ ಹಾಗೂ ಮಹೇಶ್ ಭೂಪತಿ ಅವರು ಇಲ್ಲಿ ನಡೆದ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದಲ್ಲಿ ಚಾಂಪಿಯನ್ ಆದರು. ಭಾರತದ ಜೋಡಿಗೆ ಈ ಟೂರ್ನಿಯಲ್ಲಿ ಒಲಿದ ಚೊಚ್ಚಲ ಪ್ರಶಸ್ತಿ ಇದಾಗಿದೆ.ಗುರುವಾರ ತಡರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಭಾರತದ ಜೋಡಿ 7-6, 6-1ರಲ್ಲಿ ಪೋಲೆಂಡ್‌ನ ಕ್ಲೌಡಿಯಾ ಜ್ಯಾನ್ಸ್ ಐನಾಸಿಕ್ ಹಾಗೂ ಮೆಕ್ಸಿಕೊದ ಸಾಂಟಿಯಾಗೊ ಗೊನ್ಸಾಲೆಸ್ ಎದುರು ಗೆಲುವು ಸಾಧಿಸಿತು. 2009ರ ಆಸ್ಟ್ರೇಲಿಯಾ ಓಪನ್‌ನಲ್ಲಿ ಪ್ರಶಸ್ತಿ ಜಯಿಸಿದ್ದ ಈ ಜೋಡಿ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಇಲ್ಲಿ ಸಾಬೀತು ಮಾಡಿತು. ಒಂದು ಗಂಟೆ 13 ನಿಮಿಷ ಹೋರಾಟ ನಡೆಸಿ ಭಾರತದ ಜೋಡಿ ಗೆಲುವು ಪಡೆಯಿತು.ಫೈನಲ್‌ನಲ್ಲಿ ಶರ್ಪೋವಾ-ಎರ‌್ರಾನಿ ಮುಖಾಮಖಿ: ರಷ್ಯದ ಮರಿಯಾ ಶರ್ಪೋವಾ ಹಾಗೂ ಇಟಲಿಯ ಸಾರಾ ಎರ‌್ರಾನಿ ಅವರು ಮಹಿಳಾ ವಿಭಾಗದ ಸಿಂಗಲ್ಸ್‌ನ ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ.ಬೆಳಿಗ್ಗೆಯಿಂದಲೇ ಮಳೆಯ ಆರ್ಭಟ. ಆದ್ದರಿಂದ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಗುರುವಾರದ ಪಂದ್ಯಗಳು ಸುಸೂತ್ರವಾಗಿ ಸಾಗಲಿಲ್ಲ. ತಡವಾಗಿ ಆರಂಭವಾದ ಪಂದ್ಯದಲ್ಲಿ ಸಾರಾ 7-5, 1-6, 6-3ರಲ್ಲಿ ನೀಲಿ ಕಂಗಳ ಚೆಲುವೆ ಸಮಂತಾ ಅವರನ್ನು ಸೋಲಿಸಿ, ಫೈನಲ್‌ಗೆ ರಹದಾರಿ ಪಡೆದುಕೊಂಡರು. ಆರನೇ ಶ್ರೇಯಾಂಕ ಹೊಂದಿರುವ ಸಮಂತಾಗೆ ಇದು ಆಘಾತಕಾರಿ ಫಲಿತಾಂಶ ಎನಿಸಿತು.ಮೊದಲ ಸೆಟ್ ಅನ್ನು ಸಾರಾ 7-5ರಲ್ಲಿ ತಮ್ಮದಾಗಿಸಿಕೊಂಡರು. ಆದರೆ ಪುಟಿದೆದ್ದು ತಿರುಗೇಟು ನೀಡಿದ ಸಮಂತಾ ನಂತರದ ಸೆಟ್ ಅನ್ನು 6-1ರಲ್ಲಿ ಗೆದ್ದರು. ಆದರೆ ನಿರ್ಣಾಯಕ ಸೆಟ್‌ನಲ್ಲಿ ಸಾರಾ ಪ್ರಾಬಲ್ಯ ಮೆರೆದರು.

ಮಳೆ ಅಡ್ಡಿ: ಸುಮಾರು ಎರಡು ತಾಸು ತಡವಾಗಿ ಆರಂಭವಾದ ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್ ಪಂದ್ಯಕ್ಕೂ ಮಳೆಯ ಅಡ್ಡಿ. ಆನಂತರ ಮತ್ತೆ ಫಿಲಿಪ್ ಚಾಟ್ರಿಯರ್  ಕೋರ್ಟ್‌ನಲ್ಲಿ ಕಾಣಿಸಿಕೊಂಡರು ಆಸ್ಟ್ರೇಲಿಯಾದ ಸಮಂತಾ ಸ್ಟೊಸರ್ ಹಾಗೂ ಇಟಲಿಯ ಸಾರಾ ಎರ‌್ರಾನಿ ಸಮಬಲದ ಹೋರಾಟ ನಡೆಸಿದರು.ಇನ್ನೊಂದು ನಾಲ್ಕರ ಘಟ್ಟದ ಪಂದ್ಯದಲ್ಲಿ ಶರ್ಪೋವಾ 6-3, 6-3ರಲ್ಲಿ ನಾಲ್ಕನೇ ಶ್ರೇಯಾಂಕದ ಪೆಟ್ರಾ ಕ್ವಿಟೊವಾ ಎದುರು ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದರು. ಪುರುಷರ ಡಬಲ್ಸ್‌ನಲ್ಲಿ ಮ್ಯಾಕ್ಸ್ ಮಿರ್ನಿ ಹಾಗೂ ಡೇನಿಯಲ್ ನೆಸ್ಟರ್ 6-3, 6-4ರಲ್ಲಿ ಡೇನಿಯಲ್ ಬ್ರಾಸಿಯೆಲಾ-ಪೊಟಿಟೊ ಸ್ಟರೆಸ್ ಮೇಲೂ, ಮೈಕ್ ಹಾಗೂ ಬಾಬ್ ಬ್ರಯಾನ್ 6-3, 7-6ರಲ್ಲಿ ಐಸಾಮ್ ಉಲ್ ಹಕ್ ಖುರೇಷಿ ಮತ್ತು ಜುವಾನ್ ಜುಲೈನ್ ರೋಜರ್ ಎದುರು ಗೆಲುವು ಪಡೆದು ಫೈನಲ್‌ಗೆ ಲಗ್ಗೆ ಇಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.