ಶುಕ್ರವಾರ, ಮೇ 29, 2020
27 °C

ಬಂಗಾರದ ಬೀಡಲ್ಲಿ ಕೊನರಿದ ಕನಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಗಾರದ ಬೀಡಲ್ಲಿ ಕೊನರಿದ ಕನಸು

ಕೆ.ಜಿ.ಎಫ್:  ಕೋಲಾರದ ಚಿನ್ನದ ನೆಲದಲ್ಲಿ ಕ್ಷೀಣಿಸಿದ್ದ ಕನಸೊಂದು ಪುನಃ ರೆಕ್ಕೆ ಪಡೆದಿದೆ. `ಕಾರ್ಯಸಾಧುವಲ್ಲ~ ಎಂಬ ಕಾರಣದಿಂದ ದಶಕದ ಹಿಂದೆ ಮುಚ್ಚಿಕೊಂಡಿದ್ದ ಬಂಗಾರದ ಗಣಿಯ ಬಾಗಿಲು ಮತ್ತೆ ತೆರೆದುಕೊಳ್ಳಬಹುದೆಂಬ ವಿಶ್ವಾಸ ನೌಕರ ವಲಯದಲ್ಲಿ ಕೊನರಿದೆ.ಚಿನ್ನದ ದರದಲ್ಲಿ ನಿರೀಕ್ಷೆಗೂ ಮೀರಿದ ಜಿಗಿತ, ಕೋರ್ಟ್ ಮೆಟ್ಟಿಲೇರಿದ್ದ ಗಣಿ ಪುನಶ್ಚೇತನಕ್ಕೆ ಸಂಬಂಧಿಸಿದ ವ್ಯಾಜ್ಯ ನಿರ್ಣಾಯಕ ಹಂತ ಮುಟ್ಟಿರುವುದು ಬಂಗಾರದ ನೆಲದಲ್ಲಿ ಹೊಸ ಭರವಸೆಗಳನ್ನು ಬಿತ್ತಿದೆ. ಈ ಹಿನ್ನೆಲೆಯಲ್ಲಿ ಭವ್ಯ ಇತಿಹಾಸದ ಗಣಿಯ ಭವಿಷ್ಯ ಮಹತ್ವದ ತಿರುವಿನತ್ತ ಮುಖ ಮಾಡಿದೆ.ಕೇಂದ್ರ ಸರ್ಕಾರಿ ಸ್ವಾಮ್ಯದ `ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್~ (ಬಿಜಿಎಂಎಲ್) ಆಸ್ತಿಯ ನೈಜ ಮಾರುಕಟ್ಟೆ ಮೌಲ್ಯ ಖಾತರಿ ಉದ್ದೇಶದ ಜಾಗತಿಕ ಟೆಂಡರ್ ಬಗೆಗಿನ ಸುಪ್ರೀಂಕೋರ್ಟ್ ತೀರ್ಪು ತಿಂಗಳೊಪ್ಪತ್ತಿನಲ್ಲಿ ಹೊರಬೀಳುವ ಸಾಧ್ಯತೆ ಇದೆ. ಅದರ ಆಧಾರದಲ್ಲಿ ಚಿನ್ನದ ಗಣಿ ಪುನರಾರಂಭಕ್ಕೆ ಹೊಸ ಹಾದಿ ತೆರೆದುಕೊಳ್ಳಲಿದೆ ಎನ್ನುತ್ತಾರೆ ಗಣಿಯೊಂದಿಗೆ ಕರುಳಬಳ್ಳಿ ಸಂಬಂಧ ಉಳಿಸಿಕೊಳ್ಳಲು ಶತಪ್ರಯತ್ನ ನಡೆಸಿರುವ ಕಾರ್ಮಿಕ ಮುಖಂಡರು.ಬಿಜಿಎಂಎಲ್ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಹೊಯ್ದಾಟದಲ್ಲಿದ್ದ ಕೇಂದ್ರ ಸರ್ಕಾರ ಅಂತಿಮವಾಗಿ ಆಗುವುದಿಲ್ಲ ಎಂಬ ನಿಲುವಿಗೇ ಅಂಟಿಕೊಂಡಿದೆ. ಆದರೆ, ಈ ಚಿನ್ನದ ಗಣಿಯಲ್ಲಿ ದುಡಿದ ನೌಕರರು ಸಂಘ ರಚಿಸಿಕೊಂಡು ಅದರ ಮೂಲಕ ಪುನಶ್ಚೇತನಕ್ಕೆ ಮುಂದಾದರೆ ಸಂಘಕ್ಕೆ ಗಣಿ ವಹಿಸಿಕೊಡಲು ತಾತ್ವಿಕ ಒಪ್ಪಿಗೆ ಸೂಚಿಸಿದೆ. ಆದರೆ, ಅದು ಕೆಲವೊಂದು ಷರತ್ತುಗಳಿಗೆ ಒಳಪಟ್ಟಿದೆ.ಟೆಂಡರ್‌ನಲ್ಲಿ ಬಿಡ್ ಮಾಡಿದ ಗರಿಷ್ಠ ಮೊತ್ತದಷ್ಟು ಹಣ ಪಾವತಿಸಿ ಗಣಿ ಮತ್ತು ಅದರ ಆಸ್ತಿ ಮೇಲೆ ಸಂಘವು ಸ್ವಾಮ್ಯ ಸಾಧಿಸಬಹುದು. ಆದರೆ, ತಾಂತ್ರಿಕ ನೆರವು ಮತ್ತು ಬಂಡವಾಳಕ್ಕೆ ಸಂಘಕ್ಕೆ ಹೊರಗಿನ ಸಹಭಾಗಿತ್ವ ಅಗತ್ಯ. ನೌಕರರ ಸಂಘ ನಿರಾಕರಿಸಿದರಷ್ಟೇ ಚಿನ್ನದ ಗಣಿಗಾರಿಕೆಯಲ್ಲಿ ಅನುಭವ ಇರುವ ಹೊರಗಿನ ಅರ್ಹ ಉದ್ಯಮಿಗಳಿಗೆ ಅವಕಾಶ. ಈ ನಿಟ್ಟಿನಲ್ಲಿ ವ್ಯೆಹಾತ್ಮಕ ಪ್ರಯತ್ನಗಳು ಸಾಗಿವೆ. ಇದರೊಂದಿಗೆ ಬಿಜಿಎಂಎಲ್ ನಷ್ಟ ಮನ್ನಾ, ಕಾರ್ಮಿಕರಿಗೆ ಬಾಕಿ ಪಾವತಿ ಮೊದಲಾದ ಅಂಶಗಳೂ ತಳುಕು ಹಾಕಿಕೊಂಡಿವೆ. ಇಲ್ಲಿ ಗಣಿಗಾರಿಕೆಯನ್ನು ಪುನಃ ಆರಂಭಿಸಲು ವಿದೇಶಿ ಕಂಪೆನಿಗಳು ಉತ್ಸಾಹ ತೋರಿವೆ. ಅದರಲ್ಲಿ `ಕೋಲಾರ ಗೋಲ್ಡ್~ ಕಂಪೆನಿ ಕೂಡ ಸೇರಿದೆ. ಚಿನ್ನ ಶೋಧ ಮತ್ತು ಗಣಿಗಾರಿಕೆ ಅಭಿವೃದ್ಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಈ ಕಂಪೆನಿಯ ರಿಚರ್ಡ್ ಜಾನ್ಸನ್ ಪ್ರಕಾರ `ಕೋಲಾರ ಚಿನ್ನದ ಗಣಿ ಲಾಭದಾಯಕವಾಗಲಿದೆ~. ಇಲ್ಲಿ ಗಣಿಗಾರಿಕೆ ಪುನರಾರಂಭಿಸಬೇಕು ಎಂಬುದು ತಮ್ಮ ಬದುಕಿನ ಬಹುದೊಡ್ಡ ಕನಸು ಎಂದು ಅವರು ಹೇಳಿಕೊಂಡಿದ್ದಾರೆ.ಕೆಜಿಎಫ್ ಆಸುಪಾಸಿನ ಶಿಲಾಪದರಗಳನ್ನು ಪರೀಕ್ಷಿಸಿ, ಚಿನ್ನದ ಲಭ್ಯತೆಯನ್ನು ಖಾತರಿಪಡಿಸಿಕೊಂಡೇ ಚಿನ್ನ ಉತ್ಪಾದನೆಗೆ ಅವಕಾಶ ಪಡೆಯಲು ಕಂಪೆನಿ ಮುಂದಾಗಿದೆ. ನೌಕರರ ಒಕ್ಕೂಟದ ಜತೆಗೂ ಸಂಪರ್ಕ ಸಾಧಿಸಿದೆ. ಒಕ್ಕೂಟದ ಪ್ರತಿನಿಧಿ ಜಿ. ಜಯಕುಮಾರ್ ಈ ಅಂಶವನ್ನು ದೃಢಪಡಿಸಿದರು. ಆದರೆ ಅದು ಸುಲಭದ ಮಾತಲ್ಲ. ಬಿಡ್ ಮೊತ್ತ, ನೌಕರರ ಒಕ್ಕೂಟದ ಒಲವು-ನಿಲುವು ಮೊದಲಾದ ಅಂಶಗಳನ್ನು ಅವಲಂಬಿಸಿದೆ.ಬಿಜಿಎಂಎಲ್ ಗಣಿಗಾರಿಕೆ ಸ್ಥಗಿತಗೊಳಿಸಿದ ಸಂದರ್ಭದಲ್ಲಿ 10 ಗ್ರಾಂ ಚಿನ್ನ ಪಡೆಯಲು ತಗುಲುತ್ತಿದ್ದ ವೆಚ್ಚ ಸುಮಾರು 20,000 ರೂಪಾಯಿ. ಆದರೆ, ಮಾರಾಟದ ಬೆಲೆ ಬರಿ 4,500 ರೂಪಾಯಿ ಆಗಿತ್ತು. ಈಗ ದೇಶಿ ಮಾರುಕಟ್ಟೆಯಲ್ಲಿ ಹತ್ತು ಗ್ರಾಂ ಬಂಗಾರದ ಬೆಲೆ 27,000 ರೂಪಾಯಿ ಗಡಿ ದಾಟಿದೆ. ಗಣಿ ಪುನರಾರಂಭಕ್ಕೆ ಇದಕ್ಕಿಂತ ಹೆಚ್ಚಿನ ಪ್ರೇರಣೆ ಇನ್ನೇನು ಬೇಕು?ಟನ್ ಅದಿರಿಗೆ ಸರಾಸರಿ 3.5 ರಿಂದ 4.5 ಗ್ರಾಂ ಚಿನ್ನ ದೊರೆಯುತ್ತಿದ್ದ ಗಣಿಯನ್ನು `ಕಾರ್ಯಸಾಧುವಲ್ಲ~ ಎಂದು 2001ರಲ್ಲಿ ಮುಚ್ಚಲಾಯಿತು. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕ ಮೊದಲಾದ ರಾಷ್ಟ್ರಗಳಲ್ಲಿ ಟನ್‌ಗೆ ಸರಾಸರಿ 1.5 ಗ್ರಾಂ ಚಿನ್ನ ಪಡೆಯುತ್ತಿರುವ ಗಣಿ ಕಂಪೆನಿಗಳು ಕೂಡ ಲಾಭದಲ್ಲಿವೆ ಎಂದು ಬಿಜಿಎಂಎಲ್‌ನಲ್ಲಿ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ ಕೆ.ಎಂ.ದಿವಾಕರನ್ ಹೇಳುತ್ತಾರೆ. ಬಿಜಿಎಂಎಲ್‌ನ ವಿವಿಧ ಕಾರ್ಮಿಕ ಸಂಘಗಳು ಸೇರಿ  ರಚಿಸಿಕೊಂಡಿರುವ ನೌಕರರ, ಸೂಪರ್‌ವೈಸರ್‌ಗಳ ಮತ್ತು ಅಧಿಕಾರಿಗಳ ಯುನೈಟೆಡ್ ಫೋರಂನ ಅಧ್ಯಕ್ಷರಾಗಿಯೂ ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ.ಜಗತ್ತಿನ ಅತ್ಯಂತ ಆಳದ ಗಣಿಗಳಲ್ಲಿ ಒಂದೆನಿಸಿದ ಇಲ್ಲಿನ ಆಳದ ಶಿಲಾಪದರಗಳಲ್ಲಿ ಚಿನ್ನ ಪಡೆಯುವುದಿರಲಿ, ಭೂತಲದಲ್ಲಿ ರಾಶಿ ಸುರಿದಿರುವ ಸಂಸ್ಕರಿತ ಅದಿರಿನ ಉಳಿಕೆಯಲ್ಲೂ ಬಂಗಾರವಿದೆ. ಇದನ್ನು ಸ್ಥಳಿಯವಾಗಿ `ಸಯನೈಡ್ ಡಂಪ್ಸ್~ ಅಂತ ಕರೆಯುತ್ತಾರೆ. ಕೆಜಿಎಫ್‌ನಲ್ಲಿ ಇಂತಹ 13 ದಿಬ್ಬಗಳಿವೆ. ಇದರ ಪ್ರತಿ ಟನ್ ಹುಡಿಯಲ್ಲಿ 0.5 ರಿಂದ 0.8 ಗ್ರಾಂ ಚಿನ್ನ ದೊರೆಯಲಿದೆ.ಈ ರಾಶಿಗಳಿಂದಲೇ ಒಟ್ಟು 20 ರಿಂದ 25 ಟನ್ ಚಿನ್ನ ಪಡೆಯಬಹುದು ಎಂದು ಅಂದಾಜಿಸಲಾಗಿದೆ. ಹಿಂದೆ ಇದರ ಸಂಸ್ಕರಣೆಗೆ ಬೇಕಾದ ತಾಂತ್ರಿಕತೆ ಇಲ್ಲದ ಕಾರಣ ಉಳಿಕೆಯನ್ನು ಗುಡ್ಡೆ ಹಾಕಲಾಗಿದೆ. `ಈ ದಿಬ್ಬಗಳಲ್ಲಿ ಸಿಗಬಹುದಾದ ಚಿನ್ನದ ನಿಖರ ಪ್ರಮಾಣ, ಸಂಸ್ಕರಣೆಗೆ ಬಳಸುವ ತಂತ್ರಜ್ಞಾನ ಅವಲಂಬಿಸಿದೆ~ ಎನ್ನುತ್ತಾರೆ ಬಿಜಿಎಂಎಲ್ ಮುಖ್ಯಸ್ಥ ಸಂಪತ್‌ಕುಮಾರ್.ಚಿನ್ನ ಖರೀದಿಯಲ್ಲಿ ದಾಖಲೆ: ಭಾರತದಲ್ಲಿ ಕಳೆದ ವರ್ಷ 958 ಟನ್ ಚಿನ್ನ ಖರೀದಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಅದು ಸಾವಿರ ಟನ್ ಗಡಿ ದಾಟಬಹುದು ಎಂದು ಮುಂಬೈ ಚಿನಿವಾರರ ಸಂಘದ ಅಧ್ಯಕ್ಷ ಪೃಥ್ವಿರಾಜ್ ಕೊಠಾರಿ ಹೇಳಿದ್ದಾರೆ. ಆದರೆ ದೇಶದಲ್ಲಿ ಉತ್ಪಾದನೆ ಆಗುತ್ತಿರುವುದು ವರ್ಷಕ್ಕೆ ಬರಿ ಮೂರು ಟನ್. ಅದು ಕೂಡ ಕರ್ನಾಟಕದ ಹಟ್ಟಿ ಚಿನ್ನದ ಗಣಿಯಿಂದ. ಈ ಕೊರತೆಯನ್ನು ಕೋಲಾರದ ಚಿನ್ನದ ಗಣಿ ತುಸುವಾದರೂ ತುಂಬಲಿದೆ.ಬಿಜಿಎಂಎಲ್ ಅಪಾರ ಆಸ್ತಿಯನ್ನೂ ಹೊಂದಿದೆ. 12,500 ಎಕರೆ ಜಮೀನು, ಯಂತ್ರೋಪಕರಣಗಳು, ಐದು ಸ್ಟೇಷನ್‌ಗಳನ್ನು ಒಳಗೊಂಡ ರೈಲ್ವೆ ಸಂಪರ್ಕ ಜಾಲ, 12 ಸಾವಿರದಷ್ಟು ಸಿಬ್ಬಂದಿ ವಸತಿಗೃಹ, ನಾಲ್ಕು ಮೆಗಾವಾಟ್ ಉತ್ಪಾದನಾ ಸಾಮರ್ಥದ ವಿದ್ಯುತ್ ಘಟಕ ಎಲ್ಲವೂ ಇದೆ. ಜತೆಗೆ 3000ಕ್ಕೂ ಹೆಚ್ಚು ನುರಿತ ಸಿಬ್ಬಂದಿ. ಅದರಲ್ಲಿ ಡ್ರಿಲ್ಲರ್ಸ್‌, ಬ್ಲಾಸ್ಟರ್ಸ್‌, ಎಲೆಕ್ಟ್ರಿಕಲ್-ಮೆಕ್ಯಾನಿಕಲ್ ಎಂಜಿನಿಯರುಗಳು ಎಲ್ಲರೂ ಒಳಗೊಳ್ಳುತ್ತಾರೆ. ಇವೆಲ್ಲ ಗಣಿ ಪುನರಾರಂಭಕ್ಕೆ ಅನುಕೂಲಕರವಾಗಿ ಒದಗಿಬರಲಿವೆ.ಗಣಿ ಬಾಗಿಲು ಮುಚ್ಚಿಕೊಂಡಾಗ ಹೆಚ್ಚಿನ ಕಾರ್ಮಿಕರಿಗೆ ಸಿಗುತ್ತಿದ್ದ ಸಂಬಳ ರೂ 4,000ದಿಂದ 5,000. ದಿಕ್ಕು ತೋಚದೆ ಅವರೆಲ್ಲ ತಡಬಡಾಯಿಸಿದ್ದರು. ಆ ಸಂದರ್ಭದಲ್ಲಿ ಅವರ ನೆರವಿಗೆ ಬಂದದ್ದೇ ಬ್ರಿಟಿಷರಿಂದ ಬಳುವಳಿಯಾಗಿ ಬಂದ ಇಂಗ್ಲಿಷ್. ಇದು ಕಾರ್ಮಿಕರ ಮಕ್ಕಳ ಕೈಹಿಡಿಯಿತು. ಬೆಂಗಳೂರು ಹಾಗೂ ಕೋಲಾರ ಜಿಲ್ಲೆಯ ವಿವಿಧೆಡೆ ಕೆಲಸ ಗಿಟ್ಟಿಸಿಕೊಳ್ಳಲು ನೆರವಾಯಿತು ಎಂದು ಇಲ್ಲಿನ ನೌಕರರ ಸ್ಥಿತಿಗತಿ ಬಲ್ಲ ಮುರುಗೇಶ್ ವಿಶ್ಲೇಷಿಸಿದರು.ಗಣಿಗಾರಿಕೆ ಸ್ಥಗಿತಗೊಳಿಸಿ ತುತ್ತು ಕಸಿದುಕೊಂಡ ಕೇಂದ್ರ ಸರ್ಕಾರವೇ ಸಹಾಯಹಸ್ತ ಚಾಚಿತ್ತು. 180 ರೂಪಾಯಿ ನೀಡಿದರೆ ತಿಂಗಳ ಪಾಸ್. ಸರಾಸರಿ ಮೂರೇ ರೂಪಾಯಿಗೆ ಬೆಂಗಳೂರು ತಲುಪುವ ಅವಕಾಶ! ಕೆಜಿಎಫ್- ಬೆಂಗಳೂರು ನಡುವೆ ಹತ್ತಾರು ರೈಲುಗಳು ಓಡುವುದರಿಂದ ಅನುಕೂಲವಾಯಿತು. ದಿನಾ ಏನಿಲ್ಲವೆಂದರೂ 10 ಸಾವಿರ ಮಂದಿ ಕೆಜಿಎಫ್‌ನಿಂದ ಬೆಂಗಳೂರಿಗೆ ಪಯಣಿಸುತ್ತಾರೆ ಎಂದರು.ಗಣಿ ಬಂದ್ ಆದಮೇಲೆ ಪೂಬಾಲನ್ ಎಂಬುವರು ಬಿಇಎಂಎಲ್‌ನಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಅವರಿಗೆ ಈಗ 55 ವರ್ಷ. `ಟೆಂಪರರಿ ಕೆಲಸ. ತಿಂಗಳಿಗೆ 3,900 ರೂ. ಸಂಬಳ. ಮೂವರು ಮಕ್ಕಳಿದ್ದಾರೆ. ಮಗ ಬೆಂಗಳೂರಿನಲ್ಲಿ ಕಾಲ್ ಸೆಂಟರ್‌ಗೆ ಹೋಗುತ್ತಾನೆ~ ಎಂದರು.ಬಿಜಿಎಂಎಲ್‌ನಲ್ಲಿ ಫಿಟ್ಟರ್ ಆಗಿ 35 ವರ್ಷ ಸೇವೆ ಸಲ್ಲಿಸಿದ ನಟರಾಜ್, ಕೆಜಿಎಫ್‌ನ `ಫೈವ್ ಲೈಟ್ಸ್~ ವೃತ್ತದ ರಸ್ತೆ ಬದಿ ಹಣ್ಣು ಕೊಯ್ದು ಮಾರುವ ಕೆಲಸದಲ್ಲಿ ತುತ್ತಿನ ಮೂಲ ಕಂಡುಕೊಂಡಿದ್ದಾರೆ. `ಗಣಿಯಲ್ಲಿ ಕೆಲಸ ಮಾಡಲು ಈಗಲೂ ರೆಡಿ~ ಎನ್ನುತ್ತಾರೆ ಜಿ.ಶೇಖರ್.ಬ್ರಿಟಿಷ್ ಶೈಲಿಯ ಕಟ್ಟಡಗಳಿಂದ ಕಂಗೊಳಿಸುತ್ತಿದ್ದ ಈ `ಲಿಟ್ಲ್ ಇಂಗ್ಲೆಂಡ್~, ಚಿನ್ನದ ಗಣಿ ಬಂದ್ ಆದಮೇಲೆ ತನ್ನ ಹಿಂದಿನ ಹೊಳಪು ಕಳೆದುಕೊಂಡಿದೆ. ಯಂತ್ರೋಪಕರಣ ತುಕ್ಕು ಹಿಡಿದಿವೆ. ಈ ಹತ್ತು ವರ್ಷಗಳಲ್ಲಿ ಕಾರ್ಮಿಕರ ಕನಸುಗಳು ಚದುರಿವೆ. ದುಡಿಮೆಯ ಮಾರ್ಗಗಳೂ ಬೇರೆ ಬೇರೆಯಾಗಿವೆ. ಅದರೊಂದಿಗೆ ಆರಂಭದ ವರ್ಷಗಳಲ್ಲಿ ಕಂಡುಂಡ ಕಷ್ಟನಷ್ಟಗಳೂ ಸ್ವಲ್ಪಮಟ್ಟಿಗೆ ಕರಗಿವೆ. ಆದರೆ ಬಂಗಾರದ ನೆಲದ ಜತೆಗಿನ ನಂಟು ಕಿಂಚಿತ್ತೂ ಸಡಿಲಗೊಂಡಿಲ್ಲ. ಸ್ವಯಂ ನಿವೃತ್ತಿ ಸೌಲಭ್ಯದ ಭಾಗವಾಗಿ ವಾಸದ ಮನೆ ಮೇಲಿನ ಹಕ್ಕನ್ನು ಕಾರ್ಮಿಕರಿಗೇ ಬಿಟ್ಟುಕೊಡಲಾಗಿದೆ. ಗಣಿಯಿಂದ ಕೆಲಸಕ್ಕೆ ಮತ್ತೆ ಕರೆ ಬರಬಹುದು ಎಂಬ ಶಬರಿಯ ನಿರೀಕ್ಷೆಯಲ್ಲಿ ನೌಕರರು ಇದ್ದಾರೆ.ಕುದುರೆಯ ಗೊರಸಿನಲ್ಲಿ ಚಿನ್ನ!

ಕೋಲಾರದ ನೆಲದಲ್ಲಿ ಚಿನ್ನ ಇರುವುದನ್ನು ಮೊದಲಿಗೆ ಗಮನಿಸಿದ್ದು ಟಿಪ್ಪು ಸುಲ್ತಾನ್ ಎಂಬ ಮಾತಿದೆ. ಕುದುರೆ ಸವಾರಿ ಮಾಡುವಾಗ ಇದು ಅವರ ಕಣ್ಣಿಗೆ ಬಿದ್ದಿದೆ. ಮುಂದೆ ಹೋಗುತ್ತಿದ್ದ ಸಹಚರನ ಕುದುರೆಯ ಗೊರಸು ಪಳಪಳ ಅಂತ ಹೊಳೆದದ್ದು ಕಂಡು ಪರಿವಾರದ ಎಲ್ಲರನ್ನೂ ನಿಲ್ಲಿಸಿದರಂತೆ. ಚಿನ್ನ ಇರುವುದು ಹೀಗೆ ಗೊರಸಿನಿಂದ ಗೊತ್ತಾಯಿತಂತೆ. ನಂತರ ಟಿಪ್ಪು, ಫ್ರೆಂಚ್ ಭೂವಿಜ್ಞಾನಿಗಳ ನೆರವಿನಿಂದ ಇಲ್ಲಿ ಚಿನ್ನ ಹೊರತೆಗೆದರೆಂಬ ವಿವರಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ.ಇಲ್ಲಿ ಚಿನ್ನದ ಗಣಿಗಾರಿಕೆ ವ್ಯವಸ್ಥಿತ ರೀತಿಯಲ್ಲಿ ಶುರುವಾದದ್ದು 1880ರಲ್ಲಾದರೂ ಈ ಕುರಿತು ಉಲ್ಲೇಖಗಳು ಶತಮಾನಗಳಷ್ಟು ಹಿಂದಕ್ಕೆ ಒಯ್ಯುತ್ತವೆ. ಚೋಳರು ಮತ್ತು ವಿಜಯನಗರ ಅರಸರ ಕಾಲದಲ್ಲಿಯೇ ಕೋಲಾರದ ಈ ನೆಲ ಚಿನ್ನದ ಕಾರಣಕ್ಕೆ ಮಹತ್ವ ಪಡೆದಿತ್ತು ಎಂದು ಹೇಳಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.